ಈ ಬೇಸಿಗೆಯಲ್ಲಿ ಮೂವಿಗಳ ಮೂಲಕ ಮಾಡಿ ವರ್ಚುಯಲ್ ಟ್ರಾವೆಲ್

By Suvarna NewsFirst Published Apr 10, 2020, 6:37 PM IST
Highlights
ಕೊರೋನಾ ವೈರಸ್ 2020ರ ಟ್ರಾವೆಲ್ ಪ್ಲ್ಯಾನನ್ನೆಲ್ಲ ಹಾಳು ಮಾಡಿಬಿಟ್ಟಿದೆಯಲ್ಲವೇ? ಚಿಂತೆ ಬೇಡ, ಮನೆಯಲ್ಲೇ ಕುಳಿತು ಮೂವಿಗಳ ಮುಖಾಂತರ ಮಾಡಿ ವರ್ಚುಯಲ್ ಟ್ರಾವೆಲ್. ಹೌದು, ಈ ಚಿತ್ರಗಳು ನಿಮ್ಮನ್ನು ದೇಶವಿದೇಶ ಸುತ್ತಿಸಿ ಕರೆ ತರುತ್ತವೆ. 
ಈ ವರ್ಷ ಆರಂಭವಾದಾಗ ರೆಸಲ್ಯೂಶನ್ ಪಟ್ಟಿಯಲ್ಲಿ ಏನಿಲ್ಲವೆಂದರೂ ಮೂರ್ನಾಲ್ಕು ಕಡೆ ಟ್ರಾವೆಲ್ ಮಾಡುವ ಕನಸಂತೂ ಇದ್ದಿರಲೇಬೇಕು. ಆದರೆ, ಅದಕ್ಕೆಲ್ಲ ತಣ್ಣೀರೆರಚುವಂತೆ ಕೋವಿಡ್ 19 ಮಾರಕ ರೋಗ ಕಾಲಿಟ್ಟಿದೆ. ಮನೆ ಹೊರಗೆ ಬರದಂತೆ ಕಟ್ಟಿ ಹಾಕಿದೆ. ಈ ಲಾಕ್‌ಡೌನ್ ಸಂದರ್ಭದಲ್ಲಿ ಮನೆ ಹೊರಗೆ ಹೋಗುವುದಂತೂ ಸಾಧ್ಯವಿಲ್ಲ. ಕನಿಷ್ಠ ಪಕ್ಷ ಮನೆಯೊಳಗೇ ಕುಳಿತು ವರ್ಚುಯಲ್ ಟ್ರಾವೆಲ್ ಮಾಡಿ ಆಸೆ ತಣಿಸಿಕೊಳ್ಳಬಹುದು. ಈ ಮೂಲಕ ಸಮಾಧಾನ ನೀಡುವಂಥ ಒಂದಿಷ್ಟು ಮೂವಿಗಳಿವೆ. ನಿಮ್ಮ ಫ್ರೀ ಟೈಂನಲ್ಲಿ ಈ ಮೂವಿಗಳನ್ನು ನೋಡುವ ಮೂಲಕ ಟ್ರಾವೆಲಿಂಗ್ ಅನುಭವ ಪಡೆಯಬಹುದು. 

ವಿಡಿಯೋ ಗೇಮ್ ಆಡಿದರೂ ಸರಿ, ಮನೆಯ ಹೊರಗೆ ಬರಬೇಡಿ!

ಜಿಂದಗಿ ನಾ ಮಿಲೇಗಿ ದುಬಾರಾ
ಸ್ವಲ್ಪ ಹಳೆಯದೇ ಮೂವಿ ನಿಜ. ನೀವೊಮ್ಮೆ ನೋಡಿರಲೂಬಹುದು. ಆದರೆ, ಈಗ ಇನ್ನೊಮ್ಮೆ ನೋಡಿದರೂ ಆ ಲೇಜಿ ರೋಡ್ ಟ್ರಿಪ್, ಡೀಪ್ ಸೀ ಡೈವಿಂಗ್, ಟೊಮ್ಯಾಟೀನಾ ಹಬ್ಬ, ಸ್ಕೈ ಫಾಲ್, ಬ್ಯಾಚುಲರ್ ಪಾರ್ಟಿ ಎಲ್ಲವೂ ಸೇರಿ ಸಾಹಸಿಮಯ ಟ್ರಾವೆಲಿಂಗ್ ಅನುಭವ ಸಿಗುವುದರಲ್ಲಿ ಡೌಟೇ ಇಲ್ಲ. 

ಕ್ವೀನ್
ನೀವು ಮಹಿಳೆಯಾಗಿದ್ದು, ಸೋಲೋ ಟ್ರಾವೆಲಿಂಗ್ ನಿಮ್ಮ ಹವ್ಯಾಸವಾಗಿದ್ದಲ್ಲಿ ಹಿಂದಿಯ ಕ್ವೀನ್ ಚಿತ್ರವನ್ನು ನೀವು ನೋಡಲೇಬೇಕು. ಇಲ್ಲಿ ಟ್ರಾವೆಲಿಂಗ್ ಜೊತೆಗೆ, ಒಂದಿಷ್ಟು ಜೀವನ ಪಾಠಗಳು ಹಾಗೂ ಸ್ವಂತಿಕೆಯ ಬೆಲೆ ಅರಿಯುವ  ಕತೆ ಬೋನಸ್ ಆಗಿ  ಸಿಗುತ್ತದೆ. 

ಈಟ್ ಪ್ರೇ ಲವ್
ಜೂಲಿಯಾ ರಾಬರ್ಟ್ಸ್ ಅಭಿನಯದ ಈ ಚಿತ್ರ ಜಗತ್ತನ್ನು ಸುತ್ತುತ್ತಾ ತನ್ನನ್ನು ತಾನು ಅರಿಯುವ ಬಯಕೆ  ಇರುವವರೆಲ್ಲರೂ ನೋಡಲೇಬೇಕಾದ ಚಿತ್ರ. ಧೀರ್ಘಕಾಲದ ಟ್ರಾವೆಲಿಂಗನ್ನು ಪ್ರೋತ್ಸಾಹಿಸುವ ಯಾವುದಾದರೂ ಚಿತ್ರವನ್ನು ನೀವು ಹುಡುಕುತ್ತಿದ್ದರೆ ಇಲ್ಲಿಗೆ ನಿಮ್ಮ ಹುಡುಕಾಟ ಮುಗಿಯುತ್ತದೆ. ಎಲಿಜಬೆತ್ ಗಿಲ್ಬರ್ಟ್ ಬರೆದ ಈಟ್ ಪ್ರೇ ಲವ್ ಎಂಬ ಪುಸ್ತಕವನ್ನೇ ಚಿತ್ರ ಮಾಡಲಾಗಿದೆ. ಜಗತ್ತಿನ ಸೌಂದರ್ಯವನ್ನು ಮನೆಯೊಳಗಿಂದಲೇ ಸವಿಯಲು ಈ ಚಿತ್ರ ನೋಡಿ. 

ಬದುಕು ಇಷ್ಟೊಂದು ಸರಳವಾ? ಲಾಕ್‌ಡೌನ್‌ ಜ್ಞಾನೋದಯ

ದಿಲ್ ಧಡಕ್ನೇ ದೋ
ಝೋಯಾ ಅಕ್ತರ್ ನಿರ್ಮಾಣದ ಈ ಚಿತ್ರದಲ್ಲಿ ಸ್ಟಾರ್‌ಗಳ ದೊಡ್ಡ ಬಳಗವೇ ಇದೆ. ಪ್ರಿಯಾಂಕಾ ಛೋಪ್ರಾ, ಫರ್ಹಾನ್ ಅಕ್ತರ್, ರಣ್ವೀರ್ ಸಿಂಗ್, ಅನಿಲ್ ಕಪೂರ್ ಮುಂತಾದ ತಾರಾಗಣವನ್ನು ಹೊಂದಿರುವ ಚಿತ್ರದಲ್ಲಿ ಟರ್ಕಿ, ಸ್ಪೇನ್ ಹಾಗೂ ಟ್ಯುನೀಶಿಯಾದಲ್ಲಿ ಕ್ರೂಸ್ ಟ್ರಾವೆಲ್ ಮಾಡುವ ವರ್ಚುಯಲ್ ಅನುಭವವನ್ನು ನೋಡುಗ ಪಡೆಯಬಹುದು. 

ನೀಲಾಕಾಶಂ ಪಚಕಾದಲ್ ಚುವನ್ನ ಭೂಮಿ
ದುಲ್ಕರ್ ಸಲ್ಮಾನ್ ಅಭಿನಯದ ಈ ಚಿತ್ರ ಬೈಕರ್‌ಗಳಿಗೆ ಖಂಡಿತಾ ಇಷ್ಟವಾಗುತ್ತದೆ. ನೀವು ಬೈಕರ್‌ಗಳಾಗಿದ್ದು ಸಧ್ಯದ ಪರಿಸ್ಥಿತಿಯಲ್ಲಿ ಮನೆಯಲ್ಲೇ ಬಂಧಿಯಾಗಿ ಒದ್ದಾಡುತ್ತಿದ್ದರೆ ಈ ಚಿತ್ರ ನಿಮಗೊಂದು ರಿಲೀಫ್ ನೀಡಬಹುದು. ಇಬ್ಬರು ಗೆಳೆಯರು ಬೈಕ್ ಟ್ರಿಪ್ ಹೋಗುತ್ತಾರೆ. ಈ ಜರ್ನಿಯು ಅವರನ್ನು ಹೇಗೆ ಬದಲಾಯಿಸುತ್ತದೆ ಎಂಬುದು ಕತೆ. ಚಿತ್ರವು ರಾಜಕೀಯ, ಪ್ರೀತಿ, ಗೆಳೆತನ, ಕುಟುಂಬ, ಧರ್ಮ, ಕ್ರಾಂತಿ ಎಲ್ಲ ಟಾಪಿಕ್‌ಗಳನ್ನೂ ಮುಟ್ಟಿ ಬರುತ್ತದೆ. ಗುರಿಗಿಂತ ಹೋಗುವ ದಾರಿಯೇ ಮುಖ್ಯ ಎಂದು ನಂಬಿರುವವರು ನೋಡಲೇಬೇಕಾದ ಮೂವಿ ಇದು. 

ಇಂಟು ದ ವೈಲ್ಡ್
ಈ ಕ್ಲಾಸಿಕ್ ಚಿತ್ರ ಕ್ರಿಸ್ಟೋಫರ್ ಮ್ಯಾಕ್‌ಕ್ಯಾಂಡ್ಲೆಸ್ ಎಂಬವನ ನಿಜ ಜೀವನ ಕತೆಯೇ ಆಗಿದೆ. ಕುಟುಂಬದೊಂದಿಗೆ ಬೇಸತ್ತ ಆತ ತನ್ನನ್ನು ತಾನು ಕಂಡುಕೊಳ್ಳುವ ಸಲುವಾಗಿ ಉತ್ತರ ಅಮೇರಿಕಾವನ್ನು ಎಕ್ಸ್‌ಪ್ಲೋರ್ ಮಾಡುತ್ತಾ ಹೋಗುವ ಕತೆ ಇದೆ. 

ಅಪ್
ತಾತ ಹಾಗೂ ಪುಟ್ಟ ಹುಡುಗ ಅಪರಿಚಿತ ಜಾಗವೊಂದಕ್ಕೆ ಹೋಗುವ ಈ ಕತೆ ನಿಮ್ಮನ್ನು ಅಳಿಸುತ್ತದೆ, ನಗಿಸುತ್ತದೆ, ಪ್ರೀತಿಯಲ್ಲಿ ಬೀಳುವಂತೆಯೂ ಮಾಡುತ್ತದೆ. ನಿಮ್ಮ ಕನಸುಗಳು ಎಕ್ಸ್‌ಪೈರಿ ಡೇಟ್‌ನೊಂದಿಗೆ ಬರುವುದಿಲ್ಲ ಎಂದು ಅರ್ಥ ಮಾಡಿಸುತ್ತದೆ. 
click me!