ಉಡುಪಿ ವಿಡಿಯೋ ಕೇಸ್‌ ತನಿಖೆಗೆ ಸಮಯ ಬೇಕು: ಖುಷ್ಬೂ

By Kannadaprabha News  |  First Published Jul 28, 2023, 3:40 AM IST

ಇಲ್ಲಿನ ಪ್ಯಾರಾ ಮೆಡಿಕಲ್‌ ಕಾಲೇಜು ಶೌಚಾಲಯದಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿನಿಯರಿಂದ ಹಿಂದೂ ವಿದ್ಯಾರ್ಥಿನಿಯೊಬ್ಬಳ ವಿಡಿಯೋ ಶೂಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್‌ ತನಿಖೆ ಆರಂಭಿಸಿದ್ದಾರೆ. 


ಉಡುಪಿ (ಜು.28): ಇಲ್ಲಿನ ಪ್ಯಾರಾ ಮೆಡಿಕಲ್‌ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಶೂಟಿಂಗ್‌ ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್‌ ತನಿಖೆ ಆರಂಭಿಸಿದ್ದಾರೆ. ತನಿಖೆ ಬಗ್ಗೆ ಈಗಲೇ ಏನೂ ಹೇಳುವುದಕ್ಕಾಗುವುದಿಲ್ಲ, ಇನ್ನಷ್ಟುಸಮಯಾವಕಾಶ ಬೇಕು ಎಂದು ಅವರು ಹೇಳಿದ್ದಾರೆ. ಗುರುವಾರ ಪ್ಯಾರಾ ಮೆಡಿಕಲ್‌ ಕಾಲೇಜಿಗೆ ಆಗಮಿಸಿದ ಖುಷ್ಬೂ ಸುಂದರ್‌, ಮಧ್ಯಾಹ್ನ ವರೆಗೆ ಕಾಲೇಜಿನ ಆಡಳಿತ ಮಂಡಳಿ, ವಿದ್ಯಾರ್ಥಿಗಳು, ಪ್ರಾಧ್ಯಾಪಕರನ್ನು ಸಿಬ್ಬಂದಿಯಿಂದ ಪ್ರಕರಣದ ಮಾಹಿತಿ ಸಂಗ್ರಹಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳಗಡೆ ಏನು ಚರ್ಚೆ ಆಯ್ತು ಎಂದು ಬಹಿರಂಗಪಡಿಸಲು ಸಾಧ್ಯವಿಲ್ಲ, ಈಗಷ್ಟೇ ತನಿಖೆ ಆರಂಭಿಸಿದ್ದೇವೆ, ಸಾಕ್ಷ್ಯ ಸಿಕ್ಕಿದೆಯಾ ಎನ್ನೋ ಬಗ್ಗೆ ಹೇಳಲು ಸಾಧ್ಯವಿಲ್ಲ. ಮಾಹಿತಿ ಸಂಗ್ರಹಕ್ಕೆ ನಮಗೆ ಇನ್ನೂ ಸ್ವಲ್ಪ ಸಮಯ ಬೇಕು ಎಂದರು. ಪ್ರಕರಣಕ್ಕೆ ಸಂಬಂಧಪಟ್ಟಮೊಬೈಲ್‌ ಫೋನ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ, ಇದಕ್ಕೆ ಹೊರತಾಗಿ ಯಾವುದೇ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರು.

Tap to resize

Latest Videos

undefined

ಲೋಕಸಭೆ: ರಾಜ್ಯದಲ್ಲಿ 15-20 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು​: ಜಗದೀಶ್‌ ಶೆಟ್ಟರ್‌

ಆರೋಪಗಳು ಅನೇಕ ಇರಬಹುದು, ಅದರ ಆಧಾರದಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ, ಇದು ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸಂಬಂಧಿಸಿದ ವಿಚಾರ, ಸಮಯ ಬೇಕಾಗುತ್ತದೆ, ಎರಡು ನಿಮಿಷದ ನೂಡಲ್ಸ್‌ ಅಲ್ಲ ಎಂದವರು ಹೇಳಿದರು. ಕಾಲೇಜಿನ ಟಾಯ್ಲೆಟ್‌ನಲ್ಲಿ ಹಿಡನ್‌ ಕ್ಯಾಮೆರಾ ಇರಿಸಲಾಗಿದೆ ಎನ್ನುವ ರೂಮರ್‌ ನಂಬಬೇಡಿ, ಇದೊಂದು ಶೈಕ್ಷಣಿಕ ಕೇಂದ್ರ. ಎಲ್ಲಿಯೂ ಹಿಡನ್‌ ಕ್ಯಾಮೆರಾ ಇರಲು ಸಾಧ್ಯವಿಲ್ಲ, ಪೊಲೀಸರ ಜೊತೆಗೆ ನಾವು ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ, ಪೊಲೀಸರ ಸಹಕಾರದೊಂದಿಗೆ ನಮ್ಮ ತನಿಖೆ ಮುಂದುವರಿಯಲಿದೆ ಎಂದರು.

ವಿದ್ಯಾರ್ಥಿನಿಯರ ಮೊಬೈಲಿನಲ್ಲಿ ವಿಡಿಯೋ ಸಿಕ್ಕಿಲ್ಲ: ಉಡುಪಿಯ ಪ್ಯಾರಾ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಘಟನೆಗೆ ಸಂಬಂಧಿಸಿದಂತೆ ಸದ್ಯ ಹರಿದಾಡುತ್ತಿರುವ ವಿಡಿಯೋಗಳೆಲ್ಲಾ ಫೇಕ್‌ ಆಗಿದ್ದು, ಇದುವರೆಗೆ ಆರೋಪಿತ ವಿದ್ಯಾರ್ಥಿನಿಯರು ಮಾಡಿರುವ ವಿಡಿಯೋದ ಬಗ್ಗೆ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್‌ ಹೇಳಿದ್ದಾರೆ. ಘಟನೆಯ ಬಗ್ಗೆ ತನಿಖೆಗೆ ಆಗಮಿಸಿರುವ ಅವರು ಬುಧವಾರ ಸಂಜೆ ಎಸ್ಪಿ ಅಕ್ಷಯ್‌ ಮಚ್ಚಿಂದ್ರ ಮತ್ತು ಡಿಸಿ ಡಾ.ವಿದ್ಯಾಕುಮಾರಿ ಅವರೊಂದಿಗೆ ಐಬಿಯಲ್ಲಿ ಮಾಹಿತಿ ಪಡೆದುಕೊಂಡು, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪೊಲೀಸರು ಆರೋಪಿತ ವಿದ್ಯಾರ್ಥಿನಿಯರ 3 ಮೊಬೈಲ್‌ ಗಳಿಂದ ಸುಮಾರು 40 ಗಂಟೆಗಳಷ್ಟು ಡಾಟಾವನ್ನು ರಿಕವರ್‌ ಮಾಡಿದ್ದಾರೆ, ಆದರೆ ಘಟನೆಗೆ ಸಂಬಂಧಿಸಿದ ವಿಡಿಯೋ ಫೋಟೋಗಳು ಸಿಕ್ಕಿಲ್ಲ. ಆದ್ದರಿಂದ ಈ ಮೊಬೈಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಸಾಕ್ಷ್ಯ ಲಭ್ಯವಾದರೆ ವಿಡಿಯೋ ಘಟನೆಗೆ ಬಗ್ಗೆ ಸ್ಷಷ್ಟತೆ ಸಿಗಬಹುದು ಎಂದವರು ಹೇಳಿದ್ದಾರೆ.

ಕಾಂಗ್ರೆಸ್ಸಿನಲ್ಲಿ ಯಾವುದೇ ಅಸಮಾಧಾನ ಇಲ್ಲ: ಸಚಿವ ಶಿವರಾಜ ತಂಗಡಗಿ

ಸಾಕ್ಷ್ಯ ಸಿಗದಿದ್ದರೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ, ಚಾರ್ಜ್‌ ಶೀಟ್‌ ಮಾಡಲು ಸಾಧ್ಯವಿಲ್ಲ, ಸದ್ಯ ಆ ವಿದ್ಯಾರ್ಥಿನಿಯರನ್ನು ನಾವು ಆರೋಪಿತರು ಎಂದು ಕರೆಯಬಹುದು ಅಷ್ಟೇ ಎಂದು ಖುಷ್ಬೂ ಹೇಳಿದ್ದಾರೆ. ಈ ಪ್ರಕರಣಕ್ಕೆ ಟೆರರ್‌ ಲಿಂಕ್‌ ಇದೆ ಎಂದು ವಾಟ್ಸಾಪ್‌ ಸಂದೇಶಗಳು ಹರಿದಾಡುತ್ತಿವೆ. ಘಟನೆಯ ಹಿಂದೆ ಬಿಗ್‌ ಥಿಯರಿ ಅಥವಾ ಬಿಗ್‌ ಸ್ಟೋರಿ ಇದೆ ಎಂದು ಸದ್ಯ ಭಾವಿಸುವುದು ಬೇಡ, ನಾವೇ ನ್ಯಾಯಾಧೀಶರಾಗಿ ತೀರ್ಪು ಕೊಡುವುದು ಬೇಡ ಎಂದವರು ಹೇಳಿದರು.

click me!