
ಬೆಂಗಳೂರು (ಜು.28): ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 67 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಇದೇ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಬಿಡುಗಡೆ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕಳೆದ ಸಚಿವ ಸಂಪುಟ ಸಭೆಯಲ್ಲೂ 63 ಕೈದಿಗಳ ಬಿಡುಗಡೆಗೆ ಒಪ್ಪಿಗೆ ನೀಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದ್ದು, ಕೇಂದ್ರ ಸರ್ಕಾರ ಸ್ವಾತಂತ್ರ್ಯದ ಅಮೃತಮಹೋತ್ಸವ ಆಚರಣೆ ಅಡಿ ರೂಪಿಸಿರುವ ಮಾರ್ಗಸೂಚಿಯಂತೆ ಸನ್ನಡತೆ, ವಯೋವೃದ್ಧತೆ, ಶೇ.50ಕ್ಕಿಂತ ಹೆಚ್ಚು ಶಿಕ್ಷೆ ಅವಧಿ ಪೂರೈಸಿರುವುದು ಸೇರಿ ವಿವಿಧ ಮಾನದಂಡಗಳ ಅಡಿ 67 ಕೈದಿಗಳನ್ನು ಆಗಸ್ಟ್ 15ರಂದು ಬಿಡುಗಡೆ ಮಾಡಲು ಸಭೆ ಸಮ್ಮತಿಸಿದೆ.
ಗೃಹಲಕ್ಷ್ಮೀ ನೋಂದಣಿಗೆ ಲಾಗಿನ್ ದುರ್ಬಳಕೆ: ಇಬ್ಬರ ವಿರುದ್ಧ ದೂರು ದಾಖಲು
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಿಸಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಬೆಂಗಳೂರಿನ ಕೇಂದ್ರ ಕಾರಾಗೃಹದ 21 ಮಂದಿ, ಶಿವಮೊಗ್ಗ ಕೇಂದ್ರ ಕಾರಾಗೃಹದ 12, ಶಿವಮೊಗ್ಗ ಮಹಿಳಾ ಕಾರಾಗೃಹದ 8, ಮೈಸೂರು ಕಾರಾಗೃಹದ 8, ಬೆಳಗಾವಿಯ ಇಬ್ಬರು, ಕಲಬುರಗಿ 5, ಬಳ್ಳಾರಿ 8, ಧಾರವಾಡದ ಇಬ್ಬರು ಕೈದಿಗಳ ಬಿಡುಗಡೆಗೆ ಸಭೆಯು ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಉಪ ಸಮಿತಿ ರಚನೆ: ರಾಜ್ಯದ ರಾಷ್ಟ್ರೀಯ ಉದ್ಯಾನವನಗಳು ಮತ್ತು ರಾಷ್ಟ್ರೀಯ ವನ್ಯಜೀವಿಧಾಮಗಳ ಸುತ್ತಮುತ್ತಲ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಂಬಂಧ ಅಧ್ಯಯನಕ್ಕೆ ಸಂಪುಟ ಉಪ ಸಮಿತಿ ರಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವರು ಇದೇ ವೇಳೆ ಹೇಳಿದರು.
ಬಂಡವಾಳ ಆಕರ್ಷಣೆಗೆ ಪ್ರಾಧಿಕಾರ: ರಾಜ್ಯದಲ್ಲಿ ರಸ್ತೆ ಸುರಕ್ಷತೆ, ಅಭಿವೃದ್ಧಿಗೆ ಹೆಚ್ಚು ಖಾಸಗಿ ಬಂಡವಾಳ ಆಕರ್ಷಿಸಲು ‘ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ರಸ್ತೆ ಅಭಿವೃದ್ಧಿ ಪ್ರಾಧಿಕಾರ’ ರಚನೆಗೆ ಸಭೆ ತೀರ್ಮಾನಿಸಿದೆ ಎಂದು ಸಚಿವರು ತಿಳಿಸಿದರು. ಈಗಾಗಲೇ ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ನಿಗಮ ಇದ್ದರೂ ಮತ್ತೊಂದು ಪ್ರಾಧಿಕಾರದ ಅಗತ್ಯವಿದೆ ಎಂದು ಸಭೆ ತೀರ್ಮಾನಿಸಿದೆ.
ಖಾಸಗಿ, ಸಾರ್ವಜನಿಕ ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ, ಸುರಕ್ಷತೆ ಮತ್ತು ನಿಯಂತ್ರಣ ವ್ಯವಸ್ಥೆಗೆ ಆದ್ಯತೆ ನೀಡುವುದು ಈ ಪ್ರಾಧಿಕಾರ ರಚನೆಯ ಉದ್ದೇಶವಾಗಿದೆ ಎಂದರು. ಆದರೆ, ನಿವೃತ್ತ ಐಎಎಸ್ ಅಧಿಕಾರಿಗೋಸ್ಕರ ಈ ಪ್ರಾಧಿಕಾರ ಮತ್ತು ಹುದ್ದೆ ಸೃಷ್ಟಿಸಲಾಗುತ್ತಿದೆ ಎಂಬ ಆರೋಪವಿದೆಯಲ್ಲಾ ಎಂಬ ಪ್ರಶ್ನೆಗೆ, ಲೋಕೋಪಯೋಗಿ ಸಚಿವರು ತಂದ ಪ್ರಸ್ತಾವನೆಯನ್ನೇ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಸಂಪುಟ ಒಪ್ಪಿಗೆ ನೀಡಿದ ಇತರೆ ವಿಷಯಗಳು
- ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಎಲ್ಲ ಹಾಲು ಒಕ್ಕೂಟಗಳ ಅಧ್ಯಕ್ಷರ ಸಭೆಯಲ್ಲಿ ಹಾಲಿನ ದರ 3 ರು. ಹೆಚ್ಚಿಸಲು ಕೈಗೊಂಡಿದ್ದ ತೀರ್ಮಾನಕ್ಕೆ ಸಂಪುಟ ಒಪ್ಪಿಗೆ
- ರಾಜ್ಯದ ಎಲ್ಲ ಎಪಿಎಂಸಿಗಳಿಗೆ ಸೂಕ್ತ ರಸ್ತೆ ಹಾಗೂ ಇತರೆ ಮೂಲಸೌಕರ್ಯ ಒದಗಿಸಲು 130.40 ಕೋಟಿ ರು.ಗಳ ನಬಾರ್ಡ್ ಯೋಜನೆ ಮಂಜೂರಾತಿಗೆ ನಿರ್ಣಯ
- ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿ ಪ್ರವರ್ಗ-3ರಲ್ಲಿರುವ ‘ಕೊಡಗರು’ ಎಂದಿರುವ ಪದವನ್ನು ಕೊಡವ/ಕೊಡವರು ಎಂದು ಬದಲಾಯಿಸಲು ಸಮ್ಮತಿ
- ಲೋಕಾಯುಕ್ತ ವಿಚಾರಣಾ ನಿಬಂಧಕರಾಗಿ ನಿವೃತ್ತ ನ್ಯಾ.ಸಿ.ರಾಜಶೇಖರ್ ನೇಮಕಕ್ಕೆ ಒಪ್ಪಿಗೆ
- ಬೆಂಗಳೂರಿನ ಶಿವಾಜಿನಗರದ ಅಟಲ್ ವೈದ್ಯಕೀಯ ಕಾಲೇಜಿನ ಆವರಣದಲ್ಲಿ 22.73 ಕೋಟಿ ರು. ವೆಚ್ಚದಲ್ಲಿ ಚರಕ ಆಸ್ಪತ್ರೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ
- ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನ ಸಮಾಪನ ಮಾಡಲು ರಾಜ್ಯಪಾಲರಿಗೆ ಶಿಫಾರಸುಗೊಳಿಸಲು ತೀರ್ಮಾನ
- ಬೆಂಗಳೂರಿನ ಯೂರಾಲಜಿ ಕೇಂದ್ರಲ್ಲಿ ಅನೆಕ್ಸ್ ಕಟ್ಟಡ ನಿರ್ಮಾಣಕ್ಕೆ 26 ಕೋಟಿ ರು.ಗಳ ಪರಿಷ್ಕೃತ ಅಂದಾಜಿಗೆ ಸಮ್ಮತಿ
ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣ ವಾಪಸ್ ಪಡೆಯಲ್ಲ: ಸಚಿವ ಎಂ.ಬಿ.ಪಾಟೀಲ್
- ಮೈತ್ರಿ ಎಂಬ ಗೆಜೆಟೆಡ್ ಪ್ರೊಬೆಷನರಿ ಅಧಿಕಾರಿಗೆ ನ್ಯಾಯಾಲಯ, ಅಧಿವೇಶನದಲ್ಲಿ ನಡೆದ ಚರ್ಚೆ ಆಧಾರದಲ್ಲಿ ಕೆಎಎಸ್ ಹುದ್ದೆಗೆ ಬಡ್ತಿ ನೀಡಲು ನಿರ್ಧಾರ
- ಸೂಪರ್ ನ್ಯೂಮರರಿ ಹುದ್ದೆ ಸೃಷ್ಟಿಗೆ ಒಪ್ಪಿಗೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ