ವಿಚ್ಛೇದನ ಕೇಸ್‌ 1 ವರ್ಷದಲ್ಲಿ ಇತ್ಯರ್ಥಪಡಿಸಿ: ಹೈಕೋರ್ಟ್‌

By Kannadaprabha NewsFirst Published Jul 28, 2023, 3:00 AM IST
Highlights

ವೈವಾಹಿಕ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾದರೆ ಪತಿ-ಪತ್ನಿ ಇಬ್ಬರ ಮೇಲೂ ಕೆಟ್ಟಪರಿಣಾಮ ಉಂಟಾಗುವುದರಿಂದ ಕೌಟುಂಬಿಕ ವ್ಯಾಜ್ಯಗಳನ್ನು ಗರಿಷ್ಠ ಒಂದು ವರ್ಷದ ಮಿತಿಯಲ್ಲಿ ಇತ್ಯರ್ಥಪಡಿಸುವಂತೆ ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳಿಗೆ ಹೈಕೋರ್ಟ್‌ ನಿರ್ದೇಶಿಸಿದೆ. 

ಬೆಂಗಳೂರು (ಜು.28): ವೈವಾಹಿಕ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾದರೆ ಪತಿ-ಪತ್ನಿ ಇಬ್ಬರ ಮೇಲೂ ಕೆಟ್ಟಪರಿಣಾಮ ಉಂಟಾಗುವುದರಿಂದ ಕೌಟುಂಬಿಕ ವ್ಯಾಜ್ಯಗಳನ್ನು ಗರಿಷ್ಠ ಒಂದು ವರ್ಷದ ಮಿತಿಯಲ್ಲಿ ಇತ್ಯರ್ಥಪಡಿಸುವಂತೆ ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳಿಗೆ ಹೈಕೋರ್ಟ್‌ ನಿರ್ದೇಶಿಸಿದೆ. ವಿವಾಹ ವಿಚ್ಛೇದನ ಕೋರಿ ತಾನು ಸಲ್ಲಿಸಿರುವ ಅರ್ಜಿ ಕಳೆದ ಏಳು ವರ್ಷಗಳಿಂದ ಬಾಕಿಯಿರುವ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವಂತೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿ ಎನ್‌. ರಾಜೀವ್‌ ಎಂಬುವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಬ್ರಿಟಿಷ್‌ ಖ್ಯಾತ ಇತಿಹಾಸಕಾರ ಥಾಮಸ್‌ ಕಾರ್ಲೇಲೆ (1795-1881) ಅವರ ‘ಲೈಫ್‌ ಈಸ್‌ ಟೂ ಶಾರ್ಟ್‌ ಟು ಬಿ ಲಿಟ್ಲ್’ ಅವರ ಹೇಳಿಕೆಯನ್ನು ಆದೇಶದಲ್ಲಿ ಉಲ್ಲೇಖಿಸಿದ ನ್ಯಾಯಮೂರ್ತಿಗಳು, ಜೀವನ ತುಂಬಾ ಚಿಕ್ಕದು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮದುವೆಯ ವಿಸರ್ಜನೆ ಅಥವಾ ಅನೂರ್ಜಿತತೆ ಬಯಸುವ ವೈವಾಹಿಕ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಗರಿಷ್ಠ ಒಂದು ವರ್ಷದ ಮಿತಿಯೊಳಗೆ ವಿಲೇವಾರಿಗೊಳಿಸುವ ಎಲ್ಲ ಪ್ರಯತ್ನಗಳನ್ನು ಕೌಟುಂಬಿಕ ಅಥವಾ ವಿಚಾರಣಾ ನ್ಯಾಯಾಲಯಗಳು ಮಾಡಬೇಕು ಎಂದು ಆದೇಶಿಸಿದ್ದಾರೆ.

ಲೋಕಸಭೆ: ರಾಜ್ಯದಲ್ಲಿ 15-20 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲುವು​: ಜಗದೀಶ್‌ ಶೆಟ್ಟರ್‌

ವೈವಾಹಿಕ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾದರೆ ಇಬ್ಬರ (ಪತ್ನಿ-ಪತ್ನಿ)ಮೇಲೂ ಕೆಟ್ಟಪರಿಣಾಮ ಉಂಟಾಗುತ್ತದೆ. ವೈವಾಹಿಕ ಪ್ರಕರಣಗಳಲ್ಲಿ ತ್ವರಿತ ತೀರ್ಪು ನೀಡಿದಲ್ಲಿ ಇಬ್ಬರೂ ತಮ್ಮ ಜೀವನವನ್ನು ಪುನರ್‌ ರೂಪಿಸಿಕೊಳ್ಳಬಹುದು. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವೈವಾಹಿಕ ಪ್ರಕರಣಗಳ ವಿಲೇವಾರಿಯನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕಿದೆ ಎಂದ ಹೈಕೋರ್ಟ್‌, ಅರ್ಜಿದಾರ ರಾಜೀವ್‌ ಅವರ ಪ್ರಕರಣವನ್ನು ಮೂರು ತಿಂಗಳಲ್ಲಿ ಇತ್ಯರ್ಥಪಡಿಸುವಂತೆ ಬೆಂಗಳೂರಿನ 5ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯಕ್ಕೆ ಸೂಚಿಸಿದೆ.

ಅಲ್ಲದೆ, ಈ ಆದೇಶವನ್ನು ಸಂಬಂಧಪಟ್ಟವರೆಲ್ಲರಿಗೂ ರವಾನಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸೂಚಿಸಿರುವ ನ್ಯಾಯಪೀಠ, ಇದರಿಂದ ಇಂತಹದ್ದೇ ಪ್ರಕರಣಗಳನ್ನು ಎದುರಿಸುತ್ತಿರುವವರು ತಮ್ಮ ಅರ್ಜಿಗಳ ತ್ವರಿತ ವಿಲೇವಾರಿಗೆ ನಿರ್ದೇಶನ ನೀಡುವಂತೆ ಕೋರಿ ನ್ಯಾಯಾಲಯದ ಕದ ತಟ್ಟುವ ಪ್ರಮೇಯ ಉದ್ಭವಿಸಬಾರದು ಎಂದು ಹೇಳಿದೆ.

ಕಾಂಗ್ರೆಸ್ಸಿನಲ್ಲಿ ಯಾವುದೇ ಅಸಮಾಧಾನ ಇಲ್ಲ: ಸಚಿವ ಶಿವರಾಜ ತಂಗಡಗಿ

ತನ್ನ ವಿವಾಹವನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ 2016ರಲ್ಲಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ರಾಜೀವ್‌ ಸಲ್ಲಿಸಿದ್ದರು. ಆದರೆ, ಕಳೆದ ಏಳು ವರ್ಷಗಳಿಂದ ಅರ್ಜಿ ವಿಲೇವಾರಿಯಾಗಿಲ್ಲ. ಇದರಿಂದ ಹೈಕೋರ್ಟ್‌ ಮೆಟ್ಟಿಲೇರಿದ್ದ ರಾಜೀವ್‌, ತಮ್ಮ ಅರ್ಜಿಯನ್ನು ಮೂರು ತಿಂಗಳಲ್ಲಿ ಇತ್ಯರ್ಥಪಡಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿದ್ದರು.

click me!