
ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ (ಅ.3): ಮಲೆ ಮಹದೇಶ್ವರ ವನ್ಯಧಾಮದಲ್ಲಿ ವಿಷವಿಕ್ಕಿ 5 ಹುಲಿಗಳ ಹತ್ಯೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹುಲಿಯ ಹತ್ಯೆ ನಡೆದಿದೆ. ಈ ಬೆನ್ನಲ್ಲೇ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಹುಲಿಗಳ ರಕ್ಷಣೆ ಬಗ್ಗೆ ಸಾಕಷ್ಟು ಅನುಮಾನ ಮೂಡಿಸಿದೆ. ಮಲೆ ಮಹದೇಶ್ವರ ವನ್ಯಧಾಮ ಹುಲಿಗಳಿಗೆ ಸೇಫ್ ಅಲ್ವಾ? ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಶೇ. 52 ರಷ್ಟು ಅರಣ್ಯವನ್ನೆ ಹೊಂದಿರುವ ಹಾಗು ವನ್ಯಜೀವಿಗಳ ಆವಾಸ ಸ್ಥಾನ ಚಾಮರಾಜನಗರ ಜಿಲ್ಲೆ. ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದಲ್ಲಿ ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೆ ಒಂದು ಚಿರತೆಯ ಹತ್ಯೆಯಾಗಿ ಚಿರತೆ ಅರ್ಧ ದೇಹ ಮಾತ್ರ ಸಿಕ್ಕಿತ್ತು. ನಂತರ ಐದು ಹುಲಿಗಳಿಗೆ ವಿಷ ಹಾಕಿ ಸಾಯಿಸಿದ್ದ ಪ್ರಕರಣ ಮಾಸುವ ಮುನ್ನವೆ ಮತ್ತೊಂದು ಹುಲಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಹುಲಿ ಹತ್ಯೆಗೆ ಕಾರಣ ನಿಗೂಡ:
ಹುಲಿಯನ್ನು ಭೀಕರವಾಗಿ ಹತ್ಯೆಗೈಯ್ದಿರುವುದು ಭಾರೀ ಆತಂಕ ಸೃಷ್ಟಿಸಿದೆ. ಇಲ್ಲಿನ ಹನೂರು ವಲಯದ ಪಚ್ಚೆದೊಡ್ಡಿ ಗ್ರಾಮದ ಬಳಿ ಹುಲಿಯ ಅರ್ಧ ದೇಹ ಮಣ್ಣಿನಲ್ಲಿ ಹೂತಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನರ್ಧ ದೇಹಕ್ಕಾಗಿ ಅರಣ್ಯ ಸಿಬ್ಬಂದಿ ಶೋಧ ಕಾರ್ಯ ನಡೆಸಿದಾಗ ಅನತಿ ದೂರದಲ್ಲಿರುವ ಪೊಟರೆಯೊಂದರಲ್ಲಿ ಹುಲಿಯ ಇನ್ನರ್ಧ ದೇಹವನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ 12 ವರ್ಷ ವಯಸ್ಸಿನ 250 ಕೆಜಿಗು ಹೆಚ್ಚು ತೂಕದ ಭಾರೀ ಗಾತ್ರದ ಹುಲಿ ಇದಾಗಿದ್ದು ಇದರ ಹಲ್ಲು ಹಾಗು ಉಗುರುಗಳು ಸೇಫ್ ಆಗಿದ್ದು ಈ ಹುಲಿ ಹತ್ಯೆಗೆ ಕಾರಣ ನಿಗೂಢವಾಗಿದೆ.
ಇದನ್ನೂ ಓದಿ: ಬಂಡೀಪುರ- ಊಟಿ ಹೆದ್ದಾರಿಯಲ್ಲಿ ಹುಲಿ ದಾಳಿ; ಮರಿಯಾನೆ ಸಾವಿನಿಂದ ರಸ್ತೆಯಿಂದ ಕದಲದ ತಾಯಿ ಆನೆ
ಚಾಮರಾಜನಗರದ ಗಡಿ ತಮಿಳುನಾಡಿನಿಂದ ಬರುವ ಹಂತಕರು ಮಲೆ ಮಹದೇಶ್ವರ ವನ್ಯಧಾಮದಲ್ಲಿ ಆಗ್ಗಿಂದಾಗೆ ಜಿಂಕೆ, ಮೊಲ, ಇನ್ನಿತರ ಪ್ರಾಣಿಗಳ ಬೇಟೆ ನಿರಂತರವಾಗಿ ನಡೆಯುತ್ತಲೆ ಇರುತ್ತದೆ. ಯಾರೆ ಅಧಿಕಾರಿ ಬಂದರು ಸಹ ಕಾರ್ಯ ವೈಖರಿಯಲ್ಲಿ ಬದಲಾವಣೆ ಕಾಣುತ್ತಿಲ್ಲ..
ಕೊಡಲಿಯಿಂದ ಹುಲಿ ಹತ್ಯೆ!
ಹುಲಿಯನ್ನು ಕೊಡಲಿಯಿಂದ ಮೂರು ತುಂಡುಗಳಾಗಿ ಮಾಡಿ ಭೀಕರವಾಗಿ ಕೊಲ್ಲಲಾಗಿದೆ. ಕೊಡಲಿಯಲ್ಲಿ ಕೊಚ್ಚುವ ಮುನ್ನ ಹುಲಿಗೆ ವಿಷಪ್ರಶಾನ ಮಾಡಲಾಗಿದೆಯೇ, ಉರುಳು ಹಾಕಿ ಅದು ಸಿಕ್ಕಿ ಬಿದ್ದ ನಂತರ ಕೊಡಲಿಯಿಂದ ಕೊಚ್ಚಲಾಗಿದೆಯೇ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬರಬೇಕಿದೆ.ಬಹುಲಿ ಹತ್ಯೆ ಮಾಹತಿ ತಿಳಿದ ಕೂಡಲೇ ಅರಣ್ಯ ಸಚಿವ ಈಶ್ವರ ಖಂಡ್ರೆ ತನಿಖೆ ನಡೆಸಲು ಪಿಸಿಸಿಎಫ್ ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದು ಎಂಟು ದಿನಗಳಲ್ಲಿ ತನಿಖಾ ವರದಿ ಸಲ್ಲಿಸಲು ಸೂಚಿಸಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿರುವ ಪ್ರಾಣಿಗಳ ಹತ್ಯೆ ಹಾಗು ಬೇಟೆ ಪ್ರಕರಣಗಳ ಬಗ್ಗೆ ವರದಿ ಸೇರಿದಂತೆ ಕಳ್ಳ ಬೇಟೆಗಾರರನ್ನು ಕೂಡಲೇ ಪತ್ತೆ ಹಚ್ಚುವುದಲ್ಲದೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವಂತೆ ಅವರು ಸೂಚಿಸಿದ್ದಾರೆ.
ಇದನ್ನೂ ಓದಿ: ಕೊಡಗಿನ ನರಭಕ್ಷಕ ಹುಲಿ ಕೊಲ್ಲಲು ಆದೇಶ : 150 ಸಿಬ್ಬಂದಿ
ಕೌದಳ್ಳಿ ಬಳಿ ಚಿರತೆ ಕಾಲು ಪತ್ತೆ!
ಮಹದೇಶ್ವರ ವನ್ಯಧಾಮದ ಕೌದಳ್ಳಿ ಬಳಿ ಚಿರತೆ ಕಾಲು ಪತ್ತೆ, ಹೂಗ್ಯಂ ವಲಯದಲ್ಲಿ ವಿಷಪ್ರಶಾನದಿಂದ 5 ಹುಲಿಗಳ ಹತ್ಯೆ ಬಂಡೀಪುರದ ಕಂದೇಗಾಲದ ಬಳಿ ವಿಷವಿಕ್ಕಿ 20 ಕ್ಕೂ ಹೆಚ್ಚು ಕೋತಿಗಳ ಮಾರಣ ಹೋಮ ಚಾಮರಾಜನಗರ ತಾಲೋಕಿನ ಕೊತ್ತಲವಾಡಿ ಬಳಿ ಚಿರತೆ ಹತ್ಯೆ ಸೇರಿದಂತೆ ಇತ್ತೀಚೆಗೆ ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ. ರಕ್ಷಿತಾರಣ್ಯಗಳಲ್ಲೇ ವನ್ಯಜೀವಿಗಳ ಹತ್ಯೆಯಾಗುತ್ತಿರುವುದನ್ನು ನೋಡಿದರೆ ವನ್ಯಜೀವಿಗಳ ರಕ್ಷಣೆಯಲ್ಲಿ ಅರಣ್ಯ ಇಲಾಖೆ ಎಡವುತ್ತಿದೆಯಾ ಎಂಬ ಪ್ರಶ್ನೆ ಸಹಜವಾಗಿಯೇ ಕೇಳಿ ಬರುತ್ತಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ