
ಬೆಂಗಳೂರು (ಅ.03): ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಿನಿಮಾ ಟಿಕೆಟ್ ದರವನ್ನು ₹200ಕ್ಕೆ ನಿಗದಿಪಡಿಸುವ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯದ ಅಂತಿಮ ತೀರ್ಪು ಸರ್ಕಾರದ ಪರವಾಗಿ ಬಂದರೆ, ದುಬಾರಿ ಬೆಲೆಗೆ ಟಿಕೆಟ್ ಖರೀದಿಸಿದ ಗ್ರಾಹಕರಿಗೆ ಹಣ ವಾಪಸ್ ಆಗುವ ಸಾಧ್ಯತೆ ಇದೆ. ಗ್ರಾಹಕರ ಹಿತಾಸಕ್ತಿ ಕಾಪಾಡಲು ಮುಂದಾಗಿರುವ ಸರ್ಕಾರ, ಈ ಕುರಿತು ಸಾರ್ವಜನಿಕ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ಹೈಕೋರ್ಟ್ ಆದೇಶದಲ್ಲಿ ಹಣ ವಾಪಸಾತಿಯ ಸ್ಪಷ್ಟ ನಿರ್ದೇಶನ:
ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಇಂಡಿಯಾ ಸಲ್ಲಿಸಿದ್ದ ರಿಟ್ ಅಪೀಲು (ಸಂಖ್ಯೆ: 1623/2025) ಕುರಿತು ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಧಾನ ಪೀಠವು ದಿನಾಂಕ 30.09.2025ರಂದು ಮಹತ್ವದ ಆದೇಶ ನೀಡಿದೆ. ನ್ಯಾಯಾಲಯವು ಟಿಕೆಟ್ ದರಕ್ಕೆ ವಿಧಿಸಿದ್ದ ₹200 ಮಿತಿಯ ತಡೆಯಾಜ್ಞೆಯನ್ನು ಮುಂದುವರೆಸಿದೆ. ಆದರೆ, ಅಂತಿಮ ತೀರ್ಪು ಬರುವವರೆಗೆ ಗ್ರಾಹಕರಿಂದ ಸಂಗ್ರಹವಾಗುವ ಹೆಚ್ಚುವರಿ ಹಣವನ್ನು ನಿರ್ವಹಿಸುವ ಕುರಿತು ಮಲ್ಟಿಪ್ಲೆಕ್ಸ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇನ್ನು ರಾಜ್ಯದಲ್ಲಿ ಕಾಂತಾರ ಚಾಪ್ಟರ್ -1 ಸಿನಿಮಾಗೆ ಬೆಂಗಳೂರು ಮಲ್ಟಿಪ್ಲೆಕ್ಸ್‌ನಲ್ಲಿ ಕನಿಷ್ಠ 350 ರೂ.ನಿಂದ 1,200 ರೂ.ವರೆಗೆ ಟಿಕೆಟ್ ನಿಗದಿ ಮಾಡಲಾಗಿದೆ. ಕೋರ್ಟ್ ಆದೇಶ ಸರ್ಕಾರ ಪರವಾದರೆ ಬಾಕಿ ಹಣ ವಾಪಸ್ ವೀಕ್ಷಕರಿಗೆ ಬರಲಿದೆ.
ಹೈಕೋರ್ಟ್‌ನ ಈ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಗ್ರಾಹಕರ ಹಿತ ಕಾಯಲು ಗಟ್ಟಿ ನಿರ್ಧಾರಕ್ಕೆ ಮುಂದಾಗಿದೆ. ₹200 ಟಿಕೆಟ್ ದರ ನಿಗದಿಗೆ ಬದ್ಧವಾಗಿರುವ ಸರ್ಕಾರ, ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ಮಹತ್ವದ ಸೂಚನೆ ನೀಡಿದೆ. ಸಾರ್ವಜನಿಕರು ಮಾನ್ಯ ನ್ಯಾಯಾಲಯದ ತೀರ್ಪಿನನ್ವಯ, ಹಾಲಿ ಚಲನಚಿತ್ರ ಪ್ರದರ್ಶನಕ್ಕೆ ನೀಡಿರುವ ದರಕ್ಕೆ ಸಂಬಂಧಿಸಿದಂತೆ ಭೌತಿಕವಾಗಿ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪಡೆದ ಟಿಕೆಟ್‌ಗಳನ್ನು ಭದ್ರವಾಗಿ ಕಾಯ್ದಿರಿಸಿಕೊಳ್ಳಬೇಕು.
ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ಸಹ ಎಲ್ಲಾ ರೀತಿಯಾ ಸಿನಿಮಾ ಟಿಕೆಟ್‌ಗಳ ಮಾರಾಟದ ಸಂಪೂರ್ಣ ದಾಖಲೆಗಳನ್ನು ನಿರ್ವಹಿಸಬೇಕು ಎಂದು ಸರ್ಕಾರ ಸೂಚಿಸಿದೆ. ಒಂದು ವೇಳೆ ಅಂತಿಮ ತೀರ್ಪಿನಲ್ಲಿ ಮಲ್ಟಿಪ್ಲೆಕ್ಸ್‌ಗಳಿಗೆ ಹಿನ್ನಡೆಯಾದರೆ, ಗ್ರಾಹಕರಿಂದ ಸಂಗ್ರಹಿಸಿದ ಹೆಚ್ಚುವರಿ ಹಣವನ್ನು ಅವರಿಗೆ ಮರಳಿ ಪಾವತಿಸಲು ಅನುಕೂಲವಾಗುವಂತೆ ಈ ನಿರ್ದೇಶನಗಳನ್ನು ನೀಡಲಾಗಿದೆ. ಗ್ರಾಹಕರು ತಾವು ಹೆಚ್ಚುವರಿ ಹಣ ನೀಡಿ ಖರೀದಿಸಿದ ಟಿಕೆಟ್ ದಾಖಲೆಗಳನ್ನು ಇಟ್ಟುಕೊಂಡರೆ, ತೀರ್ಪಿನ ನಂತರ ಹಣ ಮರಳಿ ಪಡೆಯಲು ಸಾಧ್ಯವಾಗುತ್ತದೆ.
ಅಂತಿಮವಾಗಿ ತೀರ್ಪು ಸರ್ಕಾರದ ಪರವಾಗಿ ಬಂದಲ್ಲಿ, ಮಲ್ಟಿಪ್ಲೆಕ್ಸ್‌ಗಳು 45 ದಿನಗಳೊಳಗೆ ರಿಫಂಡ್ ಪ್ರಕ್ರಿಯೆ ಯೋಜನೆಯನ್ನು ಪರವಾನಗಿ ಪ್ರಾಧಿಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಬೇಕು ಮತ್ತು ಅದನ್ನು ಹೈಕೋರ್ಟ್‌ಗೆ ಮಂಡಿಸಬೇಕು ಎಂದೂ ನ್ಯಾಯಾಲಯವು ಆದೇಶಿಸಿದೆ. ಸರ್ಕಾರದ ಈ ಕ್ರಮದಿಂದಾಗಿ, ದುಬಾರಿ ಟಿಕೆಟ್ ದರದಿಂದ ಬೇಸತ್ತಿದ್ದ ಗ್ರಾಹಕರಿಗೆ ನ್ಯಾಯ ಸಿಗುವ ಭರವಸೆ ಮೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ