Hamsalekha: ಶೂದ್ರ ಪದವನ್ನು ಎಲ್ಲ ನಿಘಂಟುಗಳಿಂದ ತೆಗೆದು ಹಾಕಿ

By Govindaraj SFirst Published Apr 10, 2022, 3:55 PM IST
Highlights

ಶೂದ್ರ ಪದವನ್ನು ಎಲ್ಲ ನಿಘಂಟುಗಳಿಂದ ನಿವಾರಿಸುವಂತೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು. ಮಾನವ ಬಂಧುತ್ವ ವೇದಿಕೆಯಿಂದ ಇಲ್ಲಿನ ತರಾಸು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಬಂಧುತ್ವ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಚಿತ್ರದುರ್ಗ (ಏ.10): ಶೂದ್ರ (Shudra) ಪದವನ್ನು ಎಲ್ಲ ನಿಘಂಟುಗಳಿಂದ (Dictionary) ನಿವಾರಿಸುವಂತೆ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಹೇಳಿದರು. ಮಾನವ ಬಂಧುತ್ವ ವೇದಿಕೆಯಿಂದ ಇಲ್ಲಿನ ತರಾಸು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಬಂಧುತ್ವ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮಾನವ ಬಂಧುತ್ವ ವೇದಿಕೆ ಹೆಸರಿನಲ್ಲಿ ಇಷ್ಟೆಲ್ಲ ಜನ ಸೇರಿರುವುದನ್ನು ನೋಡಿದರೆ ನೀವೆಲ್ಲ ಸಮಾಜಕ್ಕೆ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ಭೂಮಿಗೆ ಗೊಬ್ಬರ ಕೊಡುವ ಕಾಮಧೇನುವಾಗಬೇಕು. ನೀವ್ಯಾರೂ ಅಶಿಕ್ಷಿತರಲ್ಲ. ಯುದ್ಧವೆಂದರೇನು ಎಂಬುದು ನಿಮ್ಮ ವಂಶಪಾರಂಪರ್ಯವಾಗಿ ಗೊತ್ತಿದೆ. 

ಯುದ್ಧದಲ್ಲಿ ನಾವು ಯಾವತ್ತೂ ಸೋತಿಲ್ಲ. ನಿಮ್ಮೆಲ್ಲರ ಮುಂದೆ ಮಾತಾಡಲು ನನಗೆ ಸಂತೋಷವಾಗಿದೆ. ನಾನು ತರಾಸು ರಂಗ ಮಂದಿರದಲ್ಲಿ ನಿಂತಿದ್ದೇನೆ. ರಂಗಭೂಮಿಯ ಮೇಲೆ ಕಲಾವಿದ ಸಾಯುತ್ತಾನೆಯೇ ಹೊರತು ಸುಳ್ಳು ಹೇಳಲ್ಲ ಎಂದರು. ಇಂದು ಯಾವ ಭಾರತೀಯನೂ ಏಕಾಂಗಿಯಲ್ಲ. ಎಲ್ಲರೂ ಸಾಲಗಾರರು. ಶಸ್ತ್ರಾಸ್ತ್ರಗಳ ಸಾಲದ ಭಾರ ಭಾರತೀಯರ ಮೇಲಿದೆ. ಇಂತಹ ವಿಷಯಗಳನ್ನು ಗಣ್ಯರು ಹೇಳಿದ್ದಾರೆ. ನಾಡು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಉಪಾಯಗಳನ್ನು ಕಂಡುಹಿಡಿಯಲು ಇದೊಂದು ಅವಕಾಶ. ನೀವೆಲ್ಲ ಎಚ್ಚರವಾಗಿರಬೇಕು. ನಮ್ಮನ್ನು ಯುದ್ಧಕ್ಕೆ ಕೆಣಕಿ ಅವರು ಬಲಿಹಾಕಲು ಯತ್ನಿಸುತ್ತಿದ್ದಾರೆ ಎಂದರು.

Latest Videos

Umashree Hamsalekha: ಅಣ್ಣನ ಕಾಲಿಗೆ ನಮಸ್ಕರಿಸಿ ಭಾವುಕರಾದ ನಟಿ ಉಮಾಶ್ರೀ!

ಸದೃಢವಾಗಿರುವ ಎಂದೂ ಸೋಲದ ಯೋಧರಿಗೆ ವಿಷಭರಿತ ಸೇಬುಗಳನ್ನು ಹಂಚಲಾಗುತ್ತಿದೆ. ನೀವು ಬುದ್ಧ ಆಗಬೇಡಿ, ಶುದ್ಧರಾಗಿ ಸಾಕು. ಬಂಧುತ್ವ ಎಂತಹ ಅಧ್ಬುತ ಮಾತು. ಬಂಧುಗಳೂ, ದಾಯಾದಿಗಳೂ ಮನುಷ್ಯರೇ. ಬಂಧುತ್ವದಲ್ಲಿ ಅದ್ಭುತವಾದ ಶಕ್ತಿ ಇದೆ. ನಾವು ಮಾಡುವ ಕೆಲಸದಲ್ಲಿ ಶುದ್ಧತೆ ಇರಬೇಕು ಎಂದರು. ಸಂವಿಧಾನ ಬಂತು ಯುದ್ಧ ನಿಂತಿತು. ಬೇಡರು ಸೇರಿ ಶೇ.74ರಷ್ಟುಜನ ಅಕ್ಷರ ಕಲಿತರು. ಸಂವಿಧಾನ ಯುದ್ಧ ಮಾಡುವುದನ್ನು ನಿಲ್ಲಿಸಿದೆ. ಭಾರತದ ಎಲ್ಲ ನಿಘಂಟುಗಳಿಂದ ಶೂದ್ರ ಪದನ್ನು ತೆಗೆದುಹಾಕಬೇಕು. ಶೂದ್ರ ಹೋಗಿ ಶುದ್ಧವಾಗಬೇಕು. ಇವತ್ತಿನಿಂದ ನಾವು ಶುದ್ಧ ಆಗೋಣ ಸಾಕು. ದೇಶದಲ್ಲಿ ನಾವು ಶುದ್ಧರೇ ಆಗಿದ್ದೇವೆ. ಇದನ್ನು ನಿಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಿ ಎಂದರು.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, ಭಾಷೆ ಇವತ್ತು ಪೊಳ್ಳಾಗಿದೆ. ಸುಳ್ಳು ಹೇಳುವ ಭಾಷೆ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಭಾಷೆ ಭ್ರಷ್ಟಗೊಂಡಿದೆ. ಸುಳ್ಳನ್ನು ಸತ್ಯವೆಂದು ಭ್ರಮಿಸಲಾಗುತ್ತಿದೆ. ಚರಿತ್ರೆಯನ್ನು ತಿರುಚಲಾಗುತ್ತಿದೆ. ಇದರಿಂದ ಸುಳ್ಳನ್ನೇ ಸತ್ಯವೆಂದು ಭ್ರಮಿಸಿ ಇಂದು ದೇಶ ದ್ವೇಷವಾಗಿ ಬದಲಾಗುತ್ತಿದೆ. ನಮ್ಮ ಮನಸು ಮಲಿನಗೊಂಡಿದೆ ಎಂದರು. ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡುತ್ತೇವೆ ಎಂದು ಸ್ವಾಮೀಜಿಯೊಬ್ಬ ಮಾತಾಡುತ್ತಾನೆ ಎಂದರೆ ನಾವು ಎಲ್ಲಿದ್ದೇವೆ? ಧರಿಸಿಕೊಂಡ ಕಾವಿಗೆ ಬೆಲೆ ಇಲ್ಲ. ಬಾಯಲ್ಲಿ ಏನು ಬರಬೇಕೋ ಅದರ ಬದಲು ಬೇರೆ ಬರುತ್ತಿದೆ. ಇಂತಹ ರೀತಿಯಲ್ಲಿ ಯುವಕರನ್ನು ಪ್ರಚೋದಿಸಲಾಗುತ್ತಿದೆ. ಸ್ಮಶಾನ ಕುರುಕ್ಷೇತ್ರದಲ್ಲಿ ದೆವ್ವಗಳು ನರ್ತಿಸುತ್ತ ಮಾತಾಡುತ್ತಿರುವಂತೆ ತೋರುತ್ತದೆ. ಇವರು ಮನುಷ್ಯರಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಸಿಎಂ ಆಗಿ, ಮತ್ತೆ ಡೆಮೋಕ್ರಸಿ ತರಲಿ: Hamsalekha

ಬಹುತ್ವದ ಅಸ್ಮಿತೆ ಭಾರತ ಅಸ್ತಿತ್ವ. ಇದಕ್ಕೆ ಬೆಂಕಿ ಇಡುವ ಕೆಲಸವನ್ನು ಮಾಡಲಾಗುತ್ತಿದೆ. ಇಂದು ದೇಶದಲ್ಲಿ ದ್ವೇಷವನ್ನು ಬೆಳೆಸಲಾಗುತ್ತಿದೆ. ಶಿಕ್ಷಣದಿಂದ ಜನರನ್ನು ದೂರ ಮಾಡಲಾಗುತ್ತಿದೆ. ಕೊರೊನಾ ಅವಧಿಯಲ್ಲಿ ಬಡವರ, ದಲಿತರ ಮಕ್ಕಳು ಶಿಕ್ಷಣದಿಂದ ವಂಚಿತರಾದರು ಎಂದರು.ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಮೂಢನಂಬಿಕೆ, ಕಂದಾಚಾರದ ವಿರುದ್ಧ ಹೋರಾಡುತ್ತ, ವೈಜ್ಞಾನಿಕ ತಳಹದಿಯ ಮೇಲೆ ಜೀವನ ನಡೆಸಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಕೊರೋನಾ ಸಮಯದಲ್ಲಿ ಎಲ್ಲ ದೇವಸ್ಥಾನಗಳು, ಮಸೀದಿಗಳು, ಚರ್ಚ ಗಳು ಮುಚ್ಚಿದವು. ಆಗ ಜೀವ ಉಳಿಸುವ ಕೆಲಸ ಮಾಡಿದ್ದು ಆಸ್ಪತ್ರೆಗಳು. ವೈಜ್ಞಾನಿಕ ಆಲೋಚನೆಗಳನ್ನು ಎಲ್ಲರೂ ರೂಪಿಸಿಕೊಳ್ಳಬೇಕು ಎಂದರು. ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್‌ ಚಂದ್ರಪ್ಪ, ಅಂಜಿನಪ್ಪ ಇದ್ದರು.

click me!