
ಬೆಳಗಾವಿ(ಏ.10): ಕರ್ನಾಟಕದಲ್ಲಿ ಒಂದಾದ ಬಳಿಕ ಮತ್ತೊಂದರಂತೆ ಸದ್ದು ಮಾಡುತ್ತಿರುವ ಕೋಮು ಸೌಹಾರ್ದತೆ ಕದಡುವಂತಹ ವಿಚಾರಗಳು ಇಡೀ ದೇಶದಲ್ಲೇ ಸದ್ದು ಮಾಡುತ್ತಿವೆ. ಹೀಗಿರುವಾಗ ಸಮಾಜದಲ್ಲಿ ಗಣ್ಯ ಸ್ಥಾನದಲ್ಲಿರುವ ನಾಯಕರೂ ಬಾಲಿಶ ಹೇಳಿಕೆಗಳನ್ನು ನೀಡುತ್ತಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ. ಈ ಎಲ್ಲಾ ವಿಚಾರಗಳ ನಡುವೆಯೇ ವಿಧಾನಪರಿಷತ್ ವಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಕಿಡಿ ಕಾರಿದ್ದಾರೆ.
ಹೌದು ಬೆಳಗಾವಿಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಕಿಡಿ ಕಾರಿದ್ದಾರೆ. ಬಿಜೆಪಿ, ಆರ್‌ಎಸ್ಎಸ್‌ನವರು ಕರ್ನಾಟಕದ ಜನ ತಲೆತಗ್ಗಿಸುವಂತ ಕೆಲಸ ಮಾಡ್ತಿದ್ದಾರೆ ಎಂದಿರುವ ಅವರು, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ರಾಷ್ಟ್ರವನ್ನು ಸ್ಥಾಪನೆ ಮಾಡಿದವರಿಗೂ ಅಪಮಾನ ಮಾಡುವಂತ ಘಟನೆ ನಡೆಯುತ್ತಿದೆ. ಸ್ವಾತಂತ್ರ್ಯ ಹೋರಾಟ ಕೇವಲ ಒಂದು ಜಾತಿ, ಭಾಷೆ, ಪ್ರಾಂತ್ಯದ ವಿಚಾರ ಆಗಿರಲಿಲ್ಲ. ಲಕ್ಷಾಂತರ ಜನ ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ್ಯ ಪಡೆದಿರುವಂತಹದ್ದು ಎಂದಿದ್ದಾರೆ.
ಅಲ್ಲದೇ ಸಂವಿಧಾನ ವಿರುದ್ಧ ಬಿಜೆಪಿ, ಮಂತ್ರಿಗಳು, ಸಂಘಪರಿವಾರ ಸದಸ್ಯರು ಷಡ್ಯಂತ್ರ ಮಾಡೋದನ್ನ ನೋಡುತ್ತಿದ್ದೇವೆ. ಮೊಟ್ಟಮೊದಲಿನ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದ್ದು ಬಹದೂರ್ ಎಸ್ ಜಾಫರ್. ಇದನ್ನು ಯಾರೂ ಸಹ ಮರೆಯಕ್ಕಾಗೋದಿಲ್ಲ. ತದನಂತರ 1857ರಲ್ಲಿ ಝಾನ್ಸಿ ರಾಣಿ ಯಾವುದೇ ಧರ್ಮ, ಜಾತಿ, ಭಾಷೆ, ಪ್ರಾಂತ್ಯ ಲೆಕ್ಕಿಸದೇ ಸ್ವಾತಂತ್ರ್ಯ ಹೋರಾಟ ಮಾಡಿದ್ರು. ಏನೂ ನಿರೀಕ್ಷೆ ಇಲ್ಲದೇ ಈ ಭಾರತ ದೇಶವನ್ನ ನಮ್ಮ ಕೈಗೆ ಕೊಟ್ಟಿದ್ದಾರೆ. ಭಾರತ ದೇಶ ಉಳಿಸುವ ಕೆಲಸ ನಾವೆಲ್ಲ ಮಾಡಬೇಕಿದೆ. ಏನಾದರೂ ಒಳ್ಳೆಯ ಕೆಲಸ ಮಾಡೋಣ. ಮುಂದಿನ ಪೀಳಿಗೆಗೆ ಈ ಭಾರತ ದೇಶ ಸಂವಿಧಾನ ಕೊಟ್ಟು ಹೋಗಬೇಕು ಎಂದು ಟಾಂಗ್ ಕೊಟ್ಟಿದ್ದಾರೆ.
ಇನ್ನು ಮೀಸಲಾತಿ ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಧಾರವಾಡ, ರಾಯಚೂರು, ಕೋಲಾರದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಲ್ಲೆ ಬಹುದೊಡ್ಡ ಷಡ್ಯಂತ್ರ. ಮೊದಲು ದಲಿತರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ, ಬಳಿಕ ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಈ ಮೂಲಕ ಮೀಸಲಾತಿ ರದ್ದು ಮಾಡಿ ಅವಕಾಶ ತಪ್ಪಿಸುವಂತಹ ಕೆಲಸ ನಡೀತಿದೆ. ಈಗ ಅಲ್ಪಸಂಖ್ಯಾತರ ಮೇಲೆ ನೇರವಾಗಿ ದೌರ್ಜನ್ಯ ನಡೆಸಿ, ಬಹುಸಂಖ್ಯಾತರ ಭಾವನೆ ಕೆರಳಿಸಿ ಕೆಲವು ಸಮುದಾಯಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸಲು ಪ್ರಯತ್ನ ನಡೆಯುತ್ತಿದೆ. ಮನುಸ್ಮೃತಿ ಸಂವಿಧಾನ ಅಡಿಯಲ್ಲಿ ಪ್ರಬಲ ಜಾತಿ ಬಿಟ್ರೆ ಎಲ್ಲರೂ ಎರಡನೇ ದರ್ಜೆ ನಾಗರಿಕರು, ಅವರೆಲ್ಲ ಜೀತದಾಳರು, ಗುಲಾಮರು ಅನ್ನೋ ಭಾವನೆ ಮೂಡಿಸಲು ಬಿಜೆಪಿ,ಆರ್‌ಎಸ್ಎಸ್ ಪ್ರಯತ್ನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ