ಸೀಡಿಯಲ್ಲಿದ್ದದ್ದು ನಾನೇ: ರೇಪ್‌ ಮಾಡಿಲ್ಲ, ಸಮ್ಮತಿಯ ಸೆಕ್ಸ್‌: ಜಾರಕಿಹೊಳಿ ಕೇಸಿಗೆ ಟ್ವಿಸ್ಟ್‌!

By Kannadaprabha News  |  First Published May 25, 2021, 7:32 AM IST

* ಸೀಡಿಯಲ್ಲಿದ್ದದ್ದು ನಾನೇ: ಜಾರಕಿಹೊಳಿ

* ಸೀಡಿ ಲೇಡಿ ನನಗೆ ಪರಿಚಯ: ರೇಪ್‌ ಮಾಡಿಲ್ಲ, ಸಮ್ಮತಿಯ ಸೆಕ್ಸ್‌

* ಎಸ್‌ಐಟಿ ಮುಂದೆ ಹೇಳಿಕೆ, ಮಾಜಿ ಸಚಿವರ ರಾಸಲೀಲೆ ಕೇಸಿಗೆ ಟ್ವಿಸ್ಟ್‌


ಬೆಂಗಳೂರು(ಮೇ.25): ‘ನನಗೆ ಆ ಯುವತಿಯ ಪರಿಚಯವಿದೆ. ಲೈಂಗಿಕ ವಿವಾದದ ವಿಡಿಯೋದಲ್ಲಿರುವ ಆ ವ್ಯಕ್ತಿ ನಾನೇ. ಆದರೆ, ನಾನು ಅತ್ಯಾಚಾರ ಮಾಡಿಲ್ಲ. ಪರಸ್ಪರ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆದಿದೆ..!’

ತಮ್ಮ ವಿರುದ್ಧ ಲೈಂಗಿಕ ಹಗರಣ ಕೇಳಿ ಬಂದ ದಿನದಿಂದಲೂ ಯುವತಿ ಪರಿಚಯವಿಲ್ಲ ಎನ್ನುತ್ತಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಈಗ ವಿಶೇಷ ತನಿಖಾ ದಳದ (ಎಸ್‌ಐಟಿ) ಮುಂದೆ ಯುವತಿ ಪರಿಚಯ ಇದ್ದಾಳೆ ಎಂದು ನೀಡಿದ್ದಾರೆ ಎನ್ನಲಾದ ಉಲ್ಟಾಹೇಳಿಕೆಯಿದು. ಇದರಿಂದಾಗಿ ಇಡೀ ಪ್ರಕರಣ ತಿರುವು ಪಡೆದಂತಾಗಿದೆ.

Latest Videos

undefined

ಈ ಹೇಳಿಕೆ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಚಿವರ ಬಂಧನವಾಗಲಿದೆಯೇ ಎಂಬ ಚರ್ಚೆ ಹುಟ್ಟಿಕೊಂಡಿದೆ. ಆದರೆ ಇದೇ ತಿಂಗಳ 31ರಂದು ಹೈಕೋರ್ಟ್‌ನಲ್ಲಿ ಪ್ರಕರಣದ ಸಂಬಂಧ ವಿಚಾರಣೆ ನಡೆಯಲಿದ್ದು, ನ್ಯಾಯಾಲಯದ ಆದೇಶದ ಬಳಿಕ ಎಸ್‌ಐಟಿ ಮುಂದಿನ ನಡೆ ಇಡಲಿದೆ ಎನ್ನಲಾಗಿದೆ.

ಅತ್ಯಾಚಾರ ಕೇಸ್ : ರಮೇಶ್‌ ಜಾರಕಿಹೊಳಿ ವೈದ್ಯಕೀಯ ಪರೀಕ್ಷೆ

ವಿಡಿಯೋ ಬಹಿರಂಗ ಹೇಗಾಯ್ತು ಎಂಬುದು ಗೊತ್ತಿಲ್ಲ. ವಿಡಿಯೋ ಮುಂದಿಟ್ಟು ಆಕೆ ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ನಾನು ಒಪ್ಪಲಿಲ್ಲ. ನನ್ನ ರಾಜಕೀಯ ವೈರಿಗಳ ಹುನ್ನಾರದಿಂದ ಸುಳ್ಳು ಆರೋಪ ಮಾಡಲಾಗಿದೆ ಎಂದು ಪರೋಕ್ಷವಾಗಿ ಹನಿಟ್ರ್ಯಾಪ್‌ ಬಲೆಗೆ ಬಿದ್ದಿರುವುದಾಗಿ ಜಾರಕಿಹೊಳಿ ಹೇಳಿದ್ದಾರೆ.

ಕೊರೋನಾ ಸೋಂಕು ಕಾರಣಕ್ಕೆ ಅತ್ಯಾಚಾರ ಪ್ರಕರಣದ ವಿಚಾರಣೆಗೆ ಗೈರಾಗಿದ್ದ ರಮೇಶ್‌ ಜಾರಕಿಹೊಳಿ ಅವರು, ಸೋಂಕಿನಿಂದ ಗುಣಮುಖರಾದ ಬಳಿಕ ಎಸ್‌ಐಟಿ ಮುಂದೆ ಹಾಜರಾಗಿದ್ದರು. ಆ ವೇಳೆ ಅವರನ್ನು ಸುದೀರ್ಘವಾಗಿ ಪ್ರಶ್ನಿಸಿದ ತನಿಖಾಧಿಕಾರಿಗಳು, ಪ್ರಕರಣದ ಕುರಿತು ಜಾರಕಿಹೊಳಿ ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದಾದ ಬಳಿಕ ಅವರ ವೈದ್ಯಕೀಯ ಪರೀಕ್ಷೆಯನ್ನು ಸಹ ಅಧಿಕಾರಿಗಳು ನಡೆಸಿದ್ದಾರೆ.

ಜಾರಕಿಹೊಳಿ ಪುತ್ರನ ಸ್ನೇಹಿತನ ವಿರುದ್ಧ ಪೊಲೀಸರ ಮೊರೆ ಹೋದ ಸೀಡಿ ಲೇಡಿ

ಜಾರಕಿಹೊಳಿ ಹೇಳಿಕೆ ಪೂರ್ಣ ವಿವರ ಹೀಗಿದೆ:

-ನಾನು ಜಲಸಂಪನ್ಮೂಲ ಸಚಿವನಾದ ಬಳಿಕ ರಾಜ್ಯದ ಜಲಾಶಯಗಳಲ್ಲಿ ಸಾಕ್ಷ್ಯಚಿತ್ರ ನಿರ್ಮಾಣ ಸಲುವಾಗಿ ಯುವತಿ ಭೇಟಿಯಾಗಿದ್ದಳು. ಈ ಪ್ರಾಜೆಕ್ಟ್ ವಿಚಾರವಾಗಿ ಪದೇ ಪದೇ ನನ್ನ ಮನೆ ಹಾಗೂ ಕಚೇರಿಗೆ ಆಕೆ ಬರುತ್ತಿದ್ದಳು. ಆಗ ನಾನು ಇಲಾಖೆಯ ಅಧಿಕಾರಿಗಳ ಜತೆ ಮಾತನಾಡಿ ನಿಮಗೆ ಅನುಮತಿ ಕೊಡಿಸುತ್ತೇನೆ ಎಂದಿದ್ದೆ. ಆ ವೇಳೆ ಆಕೆಯೇ ನನ್ನ ಮೊಬೈಲ್‌ ನಂಬರ್‌ ಪಡೆದುಕೊಂಡು ಪ್ರಾಜೆಕ್ಟ್ ವಿಚಾರದ ನೆಪದಲ್ಲಿ ಕರೆ ಮಾಡುತ್ತಿದ್ದಳು. ದಿನ ಕಳೆದಂತೆ ತುಂಬಾ ಪರಿಚಿತರಂತೆ ಮಾತನಾಡಲಾರಂಭಿಸಿದ್ದಳು. ಕಾಲ ಕ್ರಮೇಣ ವಾಟ್ಸ್‌ಆ್ಯಪ್‌ನಲ್ಲಿ ಆಕೆಯ ಸಂದೇಶಗಳು ಬರುತ್ತಿದ್ದವು. ನಾನು ಸಹ ಆಕೆಯೊಂದಿಗೆ ವಿಶ್ವಾಸದಿಂದ ಮಾತನಾಡುತ್ತಿದ್ದೆ. ಖಾಸಗಿ ಬದುಕಿನ ಬಗ್ಗೆ ಅವಳೇ ಮಾತನಾಡುತ್ತಿದ್ದಳು. ನನ್ನ ರಾಜಕೀಯ ಜೀವನದ ಕುರಿತು ಕೇಳುತ್ತಿದ್ದಳು. ಹೀಗೆ ಸಲುಗೆ ಬೆಳೆದ ಬಳಿಕ ಆಕೆಯ ಒಪ್ಪಿಗೆ ಮೇರೆಗೆ ನಾನು ಲೈಂಗಿಕ ಕ್ರಿಯೆ ನಡೆಸಿದ್ದೇನೆ.

-ನನ್ನ ಅಪಾರ್ಟ್‌ಮೆಂಟ್‌ಗೆ ಆಕೆಯೇ ಸ್ವಯಂ ಬಂದಿದ್ದಳು. ಈ ಸ್ನೇಹದಿಂದ ಆಕೆಗೆ ಹಲವು ಬಾರಿ ಉಡುಗೊರೆ ಕೊಟ್ಟಿದ್ದೇನೆ. ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯ ಹಾಗೂ ಹೊರ ರಾಜ್ಯದಲ್ಲಿದ್ದಾಗಲೂ ನನಗೆ ಆಕೆ ಕರೆ ಮಾಡಿ ಮಾತನಾಡುತ್ತಿದ್ದಳು. ಆತ್ಮೀಯ ಒಡನಾಟದಿಂದ ಅಶ್ಲೀಲ ಸಂಭಾಷಣೆ ಸಹ ನಡೆಯಿತು. ನಾನು ಬಲವಂತವಾಗಿ ಆಕೆ ಜತೆ ವರ್ತಿಸಿಲ್ಲ.

- ಯುವತಿ ಜತೆ ನಡೆದಿದ್ದ ಖಾಸಗಿ ಭೇಟಿ ಹಾಗೂ ಮಾತುಕತೆಗಳ ಆಡಿಯೋ ಮತ್ತು ವಿಡಿಯೋ ಯಾರು ಮಾಡಿಕೊಂಡರು ಎಂಬುದು ಗೊತ್ತಿಲ್ಲ. ಅವುಗಳು ಹೇಗೆ ಬಹಿರಂಗವಾದವು ಎಂಬುದು ಗೊತ್ತಾಗಬೇಕಿದೆ. ನಾನು ಆಕೆಯನ್ನು ಒತ್ತಾಯದಿಂದ ಲೈಂಗಿಕವಾಗಿ ಬಳಸಿಕೊಂಡಿಲ್ಲ. ನನ್ನ ವಿರುದ್ಧ ರಾಜಕೀಯ ಪಿತೂರಿ ಕಾರಣಕ್ಕೆ ಅತ್ಯಾಚಾರ ಆರೋಪ ಮಾಡಲಾಗಿದೆ. ನಮ್ಮಿಬ್ಬರದು ಪರಸ್ಪರ ಒಪ್ಪಿಗೆಯಿಂದ ನಡೆದಿರುವುದು ಸೆಕ್ಸ್‌ ಆಗಿದೆ. ನನ್ನ ಅಪಾರ್ಟ್‌ಮೆಂಟ್‌ಗೆ ಸಹ ಆಕೆ ಹಲವು ಬಾರಿ ಭೇಟಿ ನೀಡಿದ್ದಳು ಎಂದು ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ.

'SITಯಿಂದ ಫೋನ್‌ ಕದ್ದಾಲಿಕೆ, ಖಚಿತವಾದ್ರೆ ತನಿಖಾಧಿಕಾರಿಗಳ ಸಮವಸ್ತ್ರ ಬಿಚ್ಚಿಸದೇ ಬಿಡೋದಿಲ್ಲ'

ಹನಿಟ್ರ್ಯಾಪ್‌ ಎಂದ ಮಾಜಿ ಸಚಿವ?:

ಅಶ್ಲೀಲ ವಿಡಿಯೋ ಹಾಗೂ ಆಡಿಯೋ ಬಹಿರಂಗ ಹಿಂದೆ ನನ್ನ ರಾಜಕೀಯ ವಿರೋಧಿಗಳ ಷಡ್ಯಂತ್ರವಿದೆ. ಆ ವೈರಿಗಳ ಕುತಂತ್ರಕ್ಕೆ ಯುವತಿ ಸಿಲುಕಿದ್ದಾಳೆ. ವಿಡಿಯೋ ಮಾಡಿಕೊಂಡು ನನಗೆ ಬೆದರಿಕೆ ಹಾಕಲಾರಂಭಿಸಿದ್ದರು. ನಾನು ಬಗ್ಗದೆ ಹೋದಾಗ ಅಶ್ಲೀಲ ವಿಡಿಯೋಗಳು ಬಹಿರಂಗವಾಗಿವೆ. ನಾನು ಸರ್ಕಾರಿ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳಿ ಯುವತಿಯ ಸ್ನೇಹ ಮಾಡಿಲ್ಲ. ಲೈಂಗಿಕವಾಗಿ ಸಹ ಬಳಸಿಲ್ಲವೆಂದು ಜಾರಕಿಹೊಳಿ ಹೇಳಿದ್ದಾರೆ ಎನ್ನಲಾಗಿದೆ.

ನನ್ನ ವಿರುದ್ಧ ಸಂಚಿನ ವಿಚಾರ ಗೊತ್ತಾಗಿಯೇ ಸದಾಶಿವನಗರ ಠಾಣೆಯಲ್ಲಿ ಬ್ಲ್ಯಾಕ್‌ಮೇಲ್‌ ಬಗ್ಗೆ ದೂರು ದಾಖಲಿಸಿದ್ದೆ ಎಂದು ಪರೋಕ್ಷವಾಗಿ ತಾವು ಹನಿಟ್ರ್ಯಾಪ್‌ ಬಲೆ ಬಿದ್ದಿರುವುದಾಗಿ ತನಿಖಾಧಿಕಾರಿ ಮುಂದೆ ಮಾಜಿ ಸಚಿವರು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಾಜೆಕ್ಟ್ ವರ್ಕ್‌‌ಗೆ ಬಂದಳು, ಸಿಡಿ ಹೊರ ತಂದಳು; ಜಾರಕಿಹೊಳಿ ಹೇಳಿಕೆ ಅದಲು ಬದಲು!

ಮೇ 31ಕ್ಕೆ ಹೈಕೋರ್ಟ್‌ಗೆ ವರದಿ ಸಲ್ಲಿಕೆ

ಮಾಜಿ ಸಚಿವರ ಅತ್ಯಾಚಾರ ಪ್ರಕರಣದ ತನಿಖಾ ಪ್ರಗತಿ ಸಂಬಂಧ ಈ ತಿಂಗಳ 31ರಂದು ಹೈಕೋರ್ಟ್‌ಗೆ ಎಸ್‌ಐಟಿ ವರದಿ ಸಲ್ಲಿಸಲಿದೆ. ಇದರಲ್ಲಿ ಮಾಜಿ ಸಚಿವರ ಹೇಳಿಕೆ ಕೂಡ ಉಲ್ಲೇಖವಾಗಲಿದೆ ಎನ್ನಲಾಗಿದ್ದು, ನ್ಯಾಯಾಲಯದ ಆದೇಶದ ಬಳಿಕ ಮುಂದಿನ ಕ್ರಮ ಜರುಗಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜಾರಕಿಹೊಳಿ ಹೇಳಿದ್ದೇನು?

- ವಿಡಿಯೋ ಬಹಿರಂಗ ಹೇಗಾಯ್ತೋ ಗೊತ್ತಿಲ್ಲ. ಆಕೆ ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ನಾನು ಒಪ್ಪಲಿಲ್ಲ.

- ರಾಜಕೀಯ ವೈರಿಗಳ ಹುನ್ನಾರದಿಂದ ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ.

- ಸಾಕ್ಷ್ಯಚಿತ್ರ ಪ್ರಾಜೆಕ್ಟ್ ಬಗ್ಗೆ ಪದೇಪದೇ ಫೋನ್‌ ಮಾಡಿ ಖಾಸಗಿ ಬದುಕಿನ ಬಗ್ಗೆ ಮಾತಾಡುತ್ತಿದ್ದಳು.

- ಹೀಗೆ ಸಲುಗೆ ಬೆಳೆದ ಬಳಿಕ ಆಕೆಯ ಒಪ್ಪಿಗೆ ಮೇರೆಗೆ ನಾನು ಲೈಂಗಿಕ ಕ್ರಿಯೆ ನಡೆಸಿದ್ದೇನೆ.

click me!