ಅತ್ಯಾಚಾರ ಕೇಸ್ : ರಮೇಶ್ ಜಾರಕಿಹೊಳಿ ವೈದ್ಯಕೀಯ ಪರೀಕ್ಷೆ
- ಮಾಜಿ ಸಚಿವ ರಮೇಶ್ ಜಾರಕಿಹೊಳಿ ವೈದ್ಯಕೀಯ ಪರೀಕ್ಷೆ
- ಅತ್ಯಾಚಾರ ಪ್ರಕರಣ ಸಂಬಂಧ ಎಸ್‌ಐಟಿ ತಂಡದಿಂದ ಪರೀಕ್ಷೆ
- ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗಲು ಸೂಚನೆ
ಬೆಂಗಳೂರು (ಮೇ.10): ಮಹತ್ವದ ಬೆಳವಣಿಗೆಯಲ್ಲಿ ಅತ್ಯಾಚಾರ ಪ್ರಕರಣದ ಸಂಬಂಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ.
ಎರಡು ದಿನಗಳ ಹಿಂದೆಯೇ ಬೌರಿಂಗ್ ಆಸ್ಪತ್ರೆಯಲ್ಲಿ ಮಾಜಿ ಸಚಿವರ ವೈದ್ಯಕೀಯ ಪರೀಕ್ಷೆ ನಡೆದಿದೆ. ಬಳಿಕ ಪ್ರಕರಣ ಸಂಬಂಧ ಸುದೀರ್ಘವಾಗಿ ಮಾಜಿ ಸಚಿವರನ್ನು ವಿಚಾರಣೆಗೊಳಪಡಿಸಿದ ಅಧಿಕಾರಿಗಳು, ಅಗತ್ಯವಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿ ಕಳುಹಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಎಸ್‌ಐಟಿ ವಿಚಾರಣೆ ಹಾಗೂ ವೈದ್ಯಕೀಯ ಪರೀಕ್ಷೆ ಎದುರಿಸಿದ ನಂತರವೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮ ಸ್ವಕ್ಷೇತ್ರ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ಕೊರೋನಾ ನಿಯಂತ್ರಣ ವಿಚಾರವಾಗಿ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಕೊರೋನಾ ಗುಣಮುಖ : ಮೊದಲ ಬಾರಿ ಹೊರಗೆ ಕಾಣಿಸಿಕೊಂಡ ರಮೇಶ್ ..
ನೋಟಿಸ್ ನೀಡಿದ ನಂತರ ಬೆಂಗಳೂರಿನ ಮಡಿವಾಳದ ಸಿಸಿಬಿ ತಾಂತ್ರಿಕ ಕೇಂದ್ರದಲ್ಲಿ ಎಸ್‌ಐಟಿ ಮುಂದೆ ಮಾಜಿ ಸಚಿವರು ಹಾಜರಾಗಿದ್ದರು. ಆಗ ಅವರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಂತರ ಪ್ರಕರಣ ಸಂಬಂಧ ರಮೇಶ್ ಜಾರಕಿಹೊಳಿ ಅವರನ್ನು ಐದು ತಾಸಿಗೂ ಹೆಚ್ಚಿನ ಹೊತ್ತು ಪ್ರಶ್ನಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ‘ನನಗೆ ಯುವತಿ ಪರಿಚಯವಿಲ್ಲ. ನಾನು ತಪ್ಪು ಮಾಡಿಲ್ಲ. ನನ್ನ ರಾಜಕೀಯ ನಾಶಗೊಳಿಸುವ ಸಲುವಾಗಿ ಕೆಲವು ಸಂಚು ರೂಪಿಸಿದ್ದಾರೆ. ನನ್ನ ತೇಜೋವಧೆ ಮಾಡಲಾಗಿದೆ’ ಎಂದು ರಮೇಶ್ ಜಾರಕಿಹೊಳಿ ಪುನರುಚ್ಚರಿಸಿದ್ದಾರೆ ಎನ್ನಲಾಗಿದೆ. ಈ ಹೇಳಿಕೆಗೆ ಪೂರಕವಾದ ಸಾಕ್ಷ್ಯ ಒದಗಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ಮಾತಿಗೆ ಮಾಜಿ ಸಚಿವರು ತಬ್ಬಿಬ್ಬಾಗಿದ್ದಾರೆ. ಕೊನೆಗೆ ಮತ್ತೆ ವಿಚಾರಣೆಗೆ ಅಗತ್ಯವಿದ್ದರೆ ಬರುವಂತೆ ತಾಕೀತು ಮಾಡಿ ಅವರನ್ನು ತನಿಖಾಧಿಕಾರಿಗಳು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.