
ಬೆಂಗಳೂರು(ಏ.29): ಕರ್ನಾಟಕ ವಿಶ್ವವಿದ್ಯಾಲಯದ(Karnatak University) ಕುಲಸಚಿವ (ಮೌಲ್ಯಮಾಪನ) ಪ್ರೊ.ಕೆ.ನಾಗರಾಜ್(Pro K Nagaraj) ಅವರು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಗೂ ಮುನ್ನವೇ ತಮ್ಮ ಪಿಎಚ್‌ಡಿ ವಿದ್ಯಾರ್ಥಿನಿಯನ್ನು ಮೈಸೂರಿನ ಮನೆಗೆ ಕರೆಸಿಕೊಂಡು ಪ್ರಶ್ನೆ ಪತ್ರಿಕೆಯನ್ನು ಕೊಟ್ಟಿದ್ದರು ಎಂಬ ಮಹತ್ವದ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಪರೀಕ್ಷೆ ದಿನ ಪ್ರಶ್ನೆ ಪತ್ರಿಕೆಯ ಕೆಲವು ಪ್ರಶ್ನೆಗಳು ಮಾತ್ರ ಸೋರಿಕೆಯಾಗಿದ್ದವು ಎನ್ನಲಾಗಿತ್ತು. ಆದರೆ ಆರೋಪಿಗಳಾಗಿರುವ ನಾಗರಾಜ್ ಹಾಗೂ ಸೌಮ್ಯ, ಪರೀಕ್ಷೆ ಒಂದು ವಾರ ಮೊದಲು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು(Question Paper Leak) ಎಂದು ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿರುವುದಾಗಿ ವಿಶ್ವಸನೀಯ ಉನ್ನತ ಪೊಲೀಸ್(Police) ಮೂಲಗಳು ‘ಕನ್ನಡಪ್ರಭ’ಕ್ಕೆ(Kannada Prabha) ತಿಳಿಸಿವೆ.
Recruitment Scam ಪದೇ ಪದೇ ಅರ್ಜಿ ರಿಜೆಕ್ಟ್ ಆಗಿದ್ದಕ್ಕೆ ರೋಸಿ ಹೋಗಿದ್ದೆ: ಆರೋಪಿ ಸೌಮ್ಯ!
ಆರೋಪಿಗಳ(Accused) ಹೇಳಿಕೆಗೆ ಪುರಾವೆ ಎನ್ನುವಂತೆ ನಾಗರಾಜ್ ಅವರ ಮೈಸೂರಿನ ಮನೆಯಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ(Professor Recruitment) ಪರೀಕ್ಷೆಯ ಪ್ರಶ್ನೆಪತ್ರಿಕೆಯ ಪ್ರತಿ ಪತ್ತೆಯಾಗಿದೆ. ಈ ಪ್ರಕರಣ ಸಂಬಂಧ ಮೈಸೂರಿನಲ್ಲಿರುವ(Mysuru) ಸೌಮ್ಯ(Sowmya) ಹಾಗೂ ನಾಗರಾಜ್ ಅವರ ಮನೆಗಳಲ್ಲಿ ಮಂಗಳವಾರ ಪೊಲೀಸರು ತಪಾಸಣೆ ನಡೆಸಿದ್ದರು ಎಂದು ಮೂಲಗಳು ಹೇಳಿವೆ.
‘ನನ್ನ ಮಾರ್ಗದರ್ಶನದಲ್ಲಿ ಭೂಗೋಳ ಶಾಸ್ತ್ರದಲ್ಲಿ ಸೌಮ್ಯ ಸಂಶೋಧನಾ ಪ್ರಬಂಧ (PHD) ಮಂಡಿಸಿದ್ದಳು. ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿ ಪರೀಕ್ಷೆಗೆ ಆಕೆ ಸಿದ್ಧವಾಗುತ್ತಿದ್ದ ವಿಚಾರ ಗೊತ್ತಿತ್ತು. ನಾನು ಸಹಾಯಕ ಪ್ರಾಧ್ಯಾಪಕ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ರಚನಾ ಸಮಿತಿಯಲ್ಲಿ ಸದಸ್ಯನಾಗಿದ್ದೆ. ಹಾಗಾಗಿ ನಾನೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದರಿಂದ ನನ್ನ ಅಚ್ಚುಮೆಚ್ಚಿನ ವಿದ್ಯಾರ್ಥಿನಿ ಸೌಮ್ಯಳಿಗೆ ನೆರವಾಗಲು ನಿರ್ಧರಿಸಿದೆ. ಪರೀಕ್ಷೆಗೂ ಮುನ್ನ ಮೈಸೂರಿನ ನನ್ನ ಮನೆಗೆ ಕರೆಸಿಕೊಂಡು ಆಕೆಗೆ ಪ್ರಶ್ನೆ ಪತ್ರಿಕೆ ನೀಡಿದ್ದೆ. ಈ ಪತ್ರಿಕೆಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಸಹ ತಾಕೀತು ಮಾಡಿದ್ದೆ’ ಎಂದು ಪ್ರೊ.ನಾಗರಾಜ್ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ಮೂಲಗಳು ಖಚಿತಪಡಿಸಿವೆ. ಆದರೆ ಈ ಪ್ರಶ್ನೆ ಪತ್ರಿಕೆಯನ್ನು ನಾನು ಹಣಕ್ಕೆ ಮಾರಾಟ ಮಾಡಿಲ್ಲ. ಸೌಮ್ಯಳಿಗೆ ಹೊರತುಪಡಿಸಿ ಬೇರೆ ಯಾರಿಗೂ ನಾನು ಪತ್ರಿಕೆ ಕೊಟ್ಟಿಲ್ಲ. ನಾನು ತಿಳಿಯದೆ ತಪ್ಪು ಮಾಡಿದೆ ಎಂದು ನಾಗರಾಜ್ ಹೇಳಿದ್ದಾರೆ ಎನ್ನಲಾಗಿದೆ.
Professor Recruitment Golmal: ಪ್ರತಿ ಪ್ರಾಧ್ಯಾಪಕ ಹುದ್ದೆಗೆ 80 ಲಕ್ಷ ರು. ಡೀಲ್..!
ನನಗೆ ಪತ್ರಿಕೆ ನಾಗರಾಜ್ ಕೊಟ್ಟಿದ್ದು- ಸೌಮ್ಯ:
ಇನ್ನೊಂದೆಡೆ ನಾಗರಾಜ್ ಅವರೇ ತನಗೆ ಪ್ರಶ್ನೆ ಪತ್ರಿಕೆ ಕೊಟ್ಟಿದ್ದು ಎಂದು ಆರೋಪಿ ಸೌಮ್ಯ ಕೂಡ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿರುವುದಾಗಿ ಮೂಲಗಳು ಹೇಳಿವೆ.‘ಮೈಸೂರು ವಿಶ್ವವಿದ್ಯಾಲಯದಲ್ಲಿ(Mysuru University) ಭೂಗೋಳ ಶಾಸ್ತ್ರದ ಸ್ನಾತಕೋತ್ತರ ಓದುವಾಗ ನಾಗರಾಜ್ ಸರ್ ಪರಿಚಯವಾಯಿತು. ನನಗೆ ಅವರು ಪ್ರಾಧ್ಯಾಪಕರಾಗಿದ್ದರು. ಎಂಎ ಮುಗಿಸಿದ ಬಳಿಕ ಅವರ ಮಾರ್ಗದರ್ಶನದಲ್ಲೇ ಪಿಎಚ್‌ಡಿ ಮಾಡಿದೆ. ನಾನು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ ವಿಚಾರವನ್ನು ನಾಗರಾಜ್ ಸರ್ ಅವರಿಗೆ ಹೇಳಿದೆ. ಅವರು ಆ ಪರೀಕ್ಷೆಯ ಪ್ರಶ್ನೆ ಪತ್ರಿಕೆ ರಚನಾ ಸಮಿತಿಯಲ್ಲಿದ್ದರು. ಪರೀಕ್ಷೆಗೂ ಮುನ್ನ ನನ್ನನ್ನು ತಮ್ಮ ಮೈಸೂರಿನ ಮನೆಗೆ ಕರೆಸಿಕೊಂಡು ಪತ್ರಿಕೆ ಕೊಟ್ಟಿದ್ದರು. ಆದರೆ ಪರೀಕ್ಷೆ ದಿನ ನನ್ನ ಆತ್ಮೀಯ ಸ್ನೇಹಿತೆಗೆ ಕೆಲವು ಪ್ರಶ್ನೆಗಳನ್ನು ನೀಡಿ ಇವು ಪರೀಕ್ಷೆಗೆ ಬರಬಹುದು ಎಂದು ಹೇಳಿದೆ. ಅದೇ ತಪ್ಪಾಯಿತು’ ಎಂದು ಸೌಮ್ಯ ಹೇಳಿರುವುದಾಗಿ ತಿಳಿದು ಬಂದಿದೆ.
ಪ್ರೊ.ನಾಗರಾಜ್ ಬಂಧನ: 10 ದಿನ ಪೊಲೀಸರ ವಶಕ್ಕೆ
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೂರು ದಿನಗಳ ಸತತ ವಿಚಾರಣೆ ಬಳಿಕ ಗುರುವಾರ ಪ್ರೊ.ನಾಗರಾಜ್ ಅವರನ್ನು ಬಂಧನಕ್ಕೊಳಪಡಿಸಿದ ಮಲ್ಲೇಶ್ವರ ಠಾಣೆ ಪೊಲೀಸರು, ಹೆಚ್ಚಿನ ತನಿಖೆ ಸಲುವಾಗಿ ಮೇ 7ರವರೆಗೆ ತಮ್ಮ ವಶಕ್ಕೆ ಪಡೆದಿದ್ದಾರೆ. ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗೆ ಸಲುವಾಗಿ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಿದರು. ಈ ಮನವಿಗೆ ಸ್ಪಂದಿಸಿದ ನ್ಯಾಯಾಲಯವು, ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ