
ಜಿ.ದೇವರಾಜ ನಾಯ್ಡು
ಹನೂರು (ಮಾ.11): ವನ್ಯ ಮತ್ತು ವನ್ಯಜೀವಿ ಸಂರಕ್ಷಣೆ ಮಾಡುವ ದಿಸೆಯಲ್ಲಿ ಅರಣ್ಯ ಇಲಾಖೆ ಜೊತೆಗೆ ಸಾರ್ವಜನಿಕರ ಸಹಭಾಗಿತ್ವ ಅತಿ ಮುಖ್ಯವಾಗಿದೆ ಎಂದು ಖ್ಯಾತ ಚಲನಚಿತ್ರ ನಟ, ವನ್ಯಜೀವಿ ಸಂರಕ್ಷಣಾ ಅಭಿಯಾನದ ರಾಯಭಾರಿ ರಿಷಬ್ ಶೆಟ್ಟಿ ತಿಳಿಸಿದರು. ತಾಲೂಕಿನ ದಿನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರದಿಂಬ ಗ್ರಾಮದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಏರ್ಪಡಿಸಲಾಗಿದ್ದ ವನ್ಯಜೀವಿ ಸಂರಕ್ಷಣಾ ಅಭಿಯಾನ ಸೀಸನ್ 4 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಡು ಮತ್ತು ಕಾಡು ಪ್ರಾಣಿಗಳು ಕೇವಲ ಅರಣ್ಯ ಇಲಾಖೆಗೆ ಸೇರಿದ್ದು ಎಂಬ ಮನೋಭಾವನೆ ಹೋಗಬೇಕು. ಕಾಡಿದ್ದರೆ ಮಾತ್ರ ಮನುಷ್ಯರು ಉಳಿಯಲು ಸಾಧ್ಯ.ಮನುಷ್ಯರಿಗೆ ಯೋಗ್ಯ ಪರಿಸರ ಬೇಕಾದರೆ ಕನಿಷ್ಠ ಶೇ.33 ಕಾಡು ಇರಬೇಕು. ಆದರೆ ಶೇ.25 ಕಾಡು ಮಾತ್ರ ಇದೆ. ಅರಣ್ಯ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯಲು ತತ್ ತಕ್ಷಣದಲ್ಲಿ ಸಾಧ್ಯವಿಲ್ಲ. ನಿರಂತರ ಹೋರಾಟ ಅಗತ್ಯವಿದೆ. ಸ್ಥಳೀಯ ಜನಪ್ರತಿನಿಧಿಗಳು, ಮುಖ್ಯಮಂತ್ರಿಯವರೆಗೆ ಇಚ್ಛಾಶಕ್ತಿ ಇರಬೇಕಾಗಿದೆ. ವನ್ಯಜೀವಿ ಮತ್ತು ಮಾನವ ಪ್ರಾಣಿ ಸಂಘರ್ಷ ತಡೆಗಟ್ಟಲು ಅರಣ್ಯ ಇಲಾಖೆ ಜೊತೆಗೆ ಸಾರ್ವಜನಿಕರ ಸಹಕಾರ ಬೇಕು. ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರಿಗೆ ಕೊಂಡಿಯಾಗಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಚಾನೆಲ್ ವನ್ಯಜೀವಿ ಸಂರಕ್ಷಣಾ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸುವ ಉದ್ದೇಶ ಹೊಂದಿರುವುದು ಶ್ಲಾಘನೀಯ ವಿಚಾರ ಎಂದರು.
ರಿಷಬ್ ಮುಂದಿಟ್ಟ ಅರಣ್ಯ ಸಮಸ್ಯೆಗೆ ಶೀಘ್ರ ಪರಿಹಾರ: ಸಿಎಂ ಬೊಮ್ಮಾಯಿ
ಈ ಭಾಗದ ಜನತೆಯ ಕುಂದು ಕೊರತೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸುದ್ದಿ ವಾಹಿನಿ ಸಂಸ್ಥೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದೆ. ಕಾಡುಪ್ರಾಣಿಗಳಿಂದ ಬೆಳೆ ನಷ್ಟವಾದರೆ ಹೆಚ್ಚಿನ ಪರಿಹಾರ ಒದಗಿಸಲು ಒತ್ತಾಯಿಸಲಾಗಿದೆ. ಅರಣ್ಯ ಇಲಾಖೆಯವರು ಸಹ ಸಾರ್ವಜನಿಕ ಹಿತವನ್ನು ಕಾಪಾಡಬೇಕು. ಅರಣ್ಯ ಇಲಾಖೆ ಅಸ್ತಿತ್ವಕ್ಕೆ ಬರುವ ಮುನ್ನ ಹಾಡಿ ಹಳ್ಳಿಗಳಲ್ಲಿನ ಜನತೆ ಅರಣ್ಯವನ್ನು ರಕ್ಷಿಸಿದ್ದಾರೆ. ರೈತರ ಪಂಪ್‌ಸೆಟ್ ಜಮೀನುಗಳಿಗೆ ರಾತ್ರಿ ವೇಳೆ ವಿದ್ಯುತ್ ಒದಗಿಸುವ ಬದಲು ಬೆಳಿಗ್ಗೆ ವಿದ್ಯುತ್ ಪೂರೈಸಬೇಕು. ಇದರಿಂದ ರಾತ್ರಿ ವೇಳೆ ಕೃಷಿ ಚಟುವಟಿಕೆಯಲ್ಲಿ ತೊಡಗುವ ಪ್ರಮೇಯವೇ ಇರುವುದಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರೊಡನೆ ಉತ್ತಮ ಬಾಂಧವ್ಯ ಹೊಂದಿರಬೇಕೆಂದರು.
ಸರ್ಕಾರಿ ಶಾಲೆಗೆ ಮೆಚ್ಚುಗೆ: ವನ್ಯಜೀವಿ ಸಂರಕ್ಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಭಾಗವಹಿಸಿದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ರಿಷಭ್ ಶೆಟ್ಟಿ, ನಾನು ಕೂಡ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವುದು. ಅನೇಕ ಗಣ್ಯರು ಮಹನೀಯರು ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಬಹುತೇಕರು ಕನ್ನಡ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರಾಗಿದ್ದಾರೆ ಎಂದರು. ಇದೇ ವೇಳೆ ಅಭಿಮಾನಿಗಳ ಒತ್ತಾಯದ ಮೇರೆಗೆ ಕಾಂತರ ಸಿನಿಮಾದ ಡೈಲಾಗ್ ಹೊಡೆದು ನೆರೆದಿದ್ದವರನ್ನು ಮನರಂಜಿಸಿದರು.
ಎಲ್ಲರಲ್ಲೂ‘ನಮ್ಮ ಕಾಡು’ಎಂಬ ಭಾವನೆ ಮೂಡಲಿ: ರಿಷಬ್ ಶೆಟ್ಟಿ
ಕಾಡಂಚಿನ ಜನರು ಅರಣ್ಯ ರಕ್ಷಿಸುವ ಯೋಧರು: ಯೋಧರು ಗಡಿಯಲ್ಲಿ ದೇಶವನ್ನು ರಕ್ಷಿಸಿದರೆ, ಕಾಡಂಚಿನ ಗ್ರಾಮಗಳ ಜನತೆ ಅರಣ್ಯವನ್ನು ಸಂರಕ್ಷಿಸುವ ಮೂಲಕ ಯೋಧರಾಗಿದ್ದಾರೆ ಎಂದು ಸುವರ್ಣನ್ಯೂಸ್‌ನ ವಿಷಯ ವಿದ್ಯಮಾನ ವಿಭಾಗದ ಸಂಪಾದಕ ಜಯಪ್ರಕಾಶ್ ಶೆಟ್ಟಿ ತಿಳಿಸಿದರು. ತಾಲೂಕಿನ ದಿನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲರದಿಂಬ ಗ್ರಾಮದಲ್ಲಿ ಕನ್ನಡ ಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ವತಿಯಿಂದ ಏರ್ಪಡಿಸಲಾಗಿದ್ದ ವನ್ಯಜೀವಿ ಸಂರಕ್ಷಣಾ ಅಭಿಯಾನ ಸೀಸನ್ 4 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೈಡಾಕ್ಟರ್ ಕಂಪನಿಯ ಡಿ.ಎಸ್.ಗಿರಿಬಾಬು ಮಾತನಾಡಿ, ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಮಾಡುವ ದಿಸೆಯಲ್ಲಿ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಸುದ್ದಿ ಸಂಸ್ಥೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತಸವನ್ನು ತಂದಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ