ಲೋಕಾ ಬಳಿಕ ಮಾಡಾಳು, ಪುತ್ರಗೆ ಈಗ ಇ.ಡಿ. ಕಂಟಕ

Published : Mar 11, 2023, 04:38 AM IST
ಲೋಕಾ ಬಳಿಕ ಮಾಡಾಳು, ಪುತ್ರಗೆ ಈಗ ಇ.ಡಿ. ಕಂಟಕ

ಸಾರಾಂಶ

ಕಾರ್ಯಾಚರಣೆ ವೇಳೆ ಎಂಟು ಕೋಟಿ ರು.ಗಿಂತ ಹೆಚ್ಚು ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ತನಿಖೆ ಕೈಗೊಳ್ಳುವಂತೆ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದ ಲೋಕಾಯುಕ್ತ ಪೊಲೀಸರು. 

ಬೆಂಗಳೂರು(ಮಾ.11):  ತೀವ್ರ ಕುತೂಹಲ ಕೆರಳಿಸಿರುವ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಲಂಚ ಪ್ರಕರಣಕ್ಕೆ ಇದೀಗ ಜಾರಿ ನಿರ್ದೇಶನಾಲಯ (ಇ.ಡಿ.) ಪ್ರವೇಶಿಸುವುದು ಬಹುತೇಕ ಖಚಿತವಾಗಿದ್ದು, ವಿರೂಪಾಕ್ಷಪ್ಪ ಮತ್ತವರ ಪುತ್ರ ಪ್ರಶಾಂತ್‌ಗೆ ಇ.ಡಿ. ಉರುಳು ಸುತ್ತಿಕೊಳ್ಳುವುದು ಸ್ಪಷ್ಟವಾಗಿದೆ.

ಕಾರ್ಯಾಚರಣೆ ವೇಳೆ ಎಂಟು ಕೋಟಿ ರು.ಗಿಂತ ಹೆಚ್ಚು ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇರೆಗೆ ತನಿಖೆ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸರು ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವುದು ಗೊತ್ತಾಗಿದೆ.

ಲೋಕಾಯುಕ್ತ ವಿಚಾರಣೆಗೆ ಮಾಡಾಳು ಅಸಹಕಾರ: ಸಮರ್ಪಕ ಉತ್ತರ ನೀಡದ ಶಾಸಕ

ಅಕ್ರಮ ಹಣ ವರ್ಗಾವಣೆ ಮೂಲಕ ಹಣ ಸಂಪಾದನೆ ಮಾಡಿರುವ ಶಂಕೆ ಇದೆ. ಹಣದ ಮೂಲದ ಬಗ್ಗೆಯೂ ಆರೋಪಿಗಳು ಸ್ಪಷ್ಟವಾದ ಮಾಹಿತಿ ನೀಡಿಲ್ಲ. ಹೀಗಾಗಿ ಪತ್ತೆಯಾಗಿರುವ ಹಣದ ಬಗ್ಗೆ ತನಿಖೆ ನಡೆಸುವಂತೆ ಪತ್ರದಲ್ಲಿ ಕೋರಲಾಗಿದೆ ಎಂದು ಮೂಲಗಳು ಹೇಳಿವೆ.

ಬಿಜೆಪಿ ಶಾಸಕ ಮಾಡಾಳು ಜಾಮೀನು ಹಿಂದೆ ಸರ್ಕಾರ ಕೈವಾಡ: ರಾಮಲಿಂಗಾ ರೆಡ್ಡಿ

ಲೋಕಾಯುಕ್ತ ಪೊಲೀಸರು ನಡೆಸಿರುವ ತನಿಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ನಡೆದಿರುವ ಸಾಧ್ಯತೆ ಇದೆ. ಅಲ್ಲದೇ, ಅಡಕೆ ಮಂಡಿಯನ್ನೇ ಅಕ್ರಮ ಹಣ ವರ್ಗಾವಣೆಗೆ ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದೇ ಮೂಲದಿಂದ ಅಕ್ರಮ ಹಣ ವಹಿವಾಟು ನಡೆಸುತ್ತಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ತಮ್ಮ ಬಳಿ ಇರುವ ಅಕ್ರಮ ಹಣವನ್ನು ಅಡಕೆ ಮಂಡಿಯಲ್ಲಿ ಹೂಡಿ ಸಕ್ರಮ ಮಾಡಿಕೊಳ್ಳಲಾಗುತ್ತಿದೆ ಎಂಬ ಅಂಶವು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಕೆಎಸ್‌ಡಿಎಲ್‌ಗೆ ಕಚ್ಚಾವಸ್ತು ಪೂರೈಸುವ ಟೆಂಡರ್‌ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು 81 ಲಕ್ಷ ರು. ಲಂಚಕ್ಕೆ ಬೇಡಿಕೆ ಇಡಲಾಗಿದೆ. ಈ ಕುರಿತು ದೂರುದಾರ ಶ್ರೇಯಸ್‌ ಕಶ್ಯಪ್‌ ದೂರಿನ ಅನ್ವಯ ಮೇರೆಗೆ ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದಾಗ ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳು ಅವರನ್ನು ಬಂಧಿಸಲಾಗಿದೆ. ಅವರ ಜತೆಗೆ ಇನ್ನೂ ನಾಲ್ವರನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ. ನಗರದ ಕ್ರೆಸೆಂಟ್‌ ರಸ್ತೆಯಲ್ಲಿನ ಖಾಸಗಿ ಕಚೇರಿಯಲ್ಲಿ ಮಾ.2ರಂದು ಕಾರ್ಯಾಚರಣೆ ನಡೆಸಿದಾಗ ಲಂಚದ ಹಣ ಹೊರತುಪಡಿಸಿ ಎರಡು ಕೋಟಿ ರು. ನಗದು ಸಹ ಪತ್ತೆಯಾಗಿದೆ. ಇದಕ್ಕೆ ಯಾವುದೇ ದಾಖಲೆಗಳು ಇರಲಿಲ್ಲ ಎಂಬ ಅಂಶವನ್ನು ತಿಳಿಸಲಾಗಿದೆ.

ಹೆಚ್ಚಿನ ತನಿಖೆ ಕೈಗೊಂಡು ಪ್ರಶಾಂತ್‌ಗೆ ಸೇರಿದ ಸಂಜಯನಗರದಲ್ಲಿನ ನಿವಾಸದಲ್ಲಿ ಪರಿಶೀಲನೆ ನಡೆಸಿದಾಗ ಅನಧಿಕೃತ 6.1 ಕೋಟಿ ರು. ಪತ್ತೆಯಾಗಿದೆ. ಒಟ್ಟು ಎಂಟು ಕೋಟಿ ರು.ಗಿಂತ ಹೆಚ್ಚಿನ ನಗದನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಬಳಿ ಇನ್ನಷ್ಟುಅಕ್ರಮ ಸಂಪತ್ತು ಇರುವ ಸಾಧ್ಯತೆ ಇದೆ. ಹೀಗಾಗಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಬೇಕು ಎಂದಿದ್ದಾರೆ ಎಂದು ಹೇಳಲಾಗಿದೆ.
ಲೋಕಾಯುಕ್ತ ಪೊಲೀಸರ ಪತ್ರವನ್ನು ಇ.ಡಿ. ಅಧಿಕಾರಿಗಳು ಸ್ವೀಕರಿಸಿದ ನಂತರ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಮುಗಿಸಿ ತನಿಖೆಯನ್ನು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ