
ಬೆಂಗಳೂರು (ಮಾ.11): ಉತ್ಪಾದನೆಯಲ್ಲಿ ಕುಸಿತ, ಹೆಚ್ಚಿನ ಬೆಲೆಗೆ ಖಾಸಗಿ ಕಂಪನಿಗಳಿಗೆ ಮಾರಾಟ, ಹುಲ್ಲು, ಬೂಸಾ, ಹಿಂಡಿ ಬೆಲೆ ಏರಿಕೆ ಇತ್ಯಾದಿ ಕಾರಣಗಳಿಂದ ನಗರದಲ್ಲಿ ಹಾಲಿನ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಿದೆ. ರಾಜಧಾನಿ ಬೆಂಗಳೂರಿಗೆ ನಿತ್ಯ 15 ಲಕ್ಷ ಲೀಟರ್ ಹಾಲಿನ ಬೇಡಿಕೆ ಇದೆ. ಆದರೆ ಪ್ರಸ್ತುತ ಕೇವಲ 13 ಲಕ್ಷ ಲೀಟರ್ ಹಾಲು ಮಾತ್ರ ಪೂರೈಕೆಯಾಗುತ್ತಿದೆ. ಹೀಗಾಗಿ ಹಾಲಿನ ಕೊರತೆಯನ್ನು ನೀಗಿಸಲು ಹೆಚ್ಚಿನ ಹಾಲು ಒದಗಿಸುವಂತೆ ಬಮೂಲ್ ಕೆಎಂಎಫ್‌ಗೆ ಮನವಿ ಮಾಡಿದೆ.
ಈ ಹಿಂದೆ ಪ್ರತಿ ದಿನ 15ರಿಂದ 16 ಲಕ್ಷ ಲೀಟರ್ ಹಾಲು ಸಂಗ್ರಹ ಆಗುತ್ತಿತ್ತು. ಈ ಪೈಕಿ ಹಾಲಿನ ಪೌಡರ್ ಮತ್ತು ಚೀಸ್ ತಯಾರಿಸಲು ತಲಾ ಒಂದೊಂದು ಲಕ್ಷ ಲೀಟರ್ ಹಾಲು ಬಳಸಲಾಗುತ್ತಿತ್ತು. ಆದರೆ ಕಳೆದ 20 ದಿನಗಳಿಂದ ಹಾಲಿನ ಸಂಗ್ರಹ ಕಡಿಮೆಯಾಗಿದೆ. ಕೇವಲ 13 ಲಕ್ಷ ಲೀಟರ್ ಮಾತ್ರ ಹಾಲು ಸಂಗ್ರಹಯಾಗುತ್ತಿದೆ. ಈ ಕಾರಣದಿಂದ ಹಾಲಿನ ಪೌಡರ್ ಮತ್ತು ಚೀಸ್ ಉತ್ಪಾದನೆಯನ್ನು 15 ದಿನಗಳಿಂದ ಸ್ಥಗಿತಗೊಳಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಪ್ರಚಾರ ಸಮಿತಿಗೆ ಸಿಎಂ ಬೊಮ್ಮಾಯಿ ಅಧ್ಯಕ್ಷ, ಬಿಎಸ್‌ವೈ ಸದಸ್ಯ
ಬಮೂಲ್‌ಗೆ ಪೂರೈಕೆಯಾಗುವ ಹಾಲಿನಲ್ಲಿ 2.10 ಲಕ್ಷ ಲೀಟರ್ ಮೊಸರು ತಯಾರಿಸಲು ಬಳಸಲಾಗುತ್ತಿದೆ. 20 ಸಾವಿರ ಲೀಟರ್ ಪನ್ನೀರ್, ಪೇಡ ಸೇರಿದಂತೆ ವಿವಿಧ ಉತ್ಪನ್ನಗಳಿಗೆ ಬಳಸಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಜಾರಿಯಲ್ಲಿರುವ ಅಂಗನವಾಡಿ ಮಕ್ಕಳಿಗೆ ಹಾಲು ವಿತರಿಸುವ ವಿಜಯ ವಜ್ರ ಯೋಜನೆಗೆ 40 ಸಾವಿರ ಲೀಟರ್ ಪೂರೈಸಲಾಗುತ್ತಿದೆ. ರಾಜ್ಯದಲ್ಲಿನ ಶಾಲಾ ಮಕ್ಕಳಿಗೆ ಹಾಲು ವಿತರಿಸುವ ಕ್ಷೀರಭಾಗ್ಯ ಯೋಜನೆಗೆ ಕನಿಷ್ಠ 50 ಸಾವಿರ ಲೀಟರ್ ಅಗತ್ಯವಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರು ಗ್ರಾಹಕರಿಂದ ಒಟ್ಟಾರೆ 15 ಲಕ್ಷ ಲೀಟರ್ ಹಾಲಿಗೆ ಬೇಡಿಕೆ ಇದೆ. ಆದರೆ ಬಮೂಲ್‌ಗೆ ಇನ್ನೂ 2 ಲಕ್ಷ ಲೀಟರ್ ಹಾಲಿನ ಕೊರತೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಬೇಸಿಗೆ ಹೆಚ್ಚಲಿದ್ದು, ಮೇವಿನ ಕೊರತೆ ಸೇರಿದಂತೆ ಮತ್ತಿತರ ಕಾರಣದಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ಹಾಲಿನ ಕೊರತೆ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ನಷ್ಟದ ಕಾರಣಕ್ಕೆ ಹೈನುಗಾರಿಕೆ ಬಗ್ಗೆ ರೈತರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ .5 ಹೆಚ್ಚಿಸುವಂತೆ 16 ಹಾಲು ಒಕ್ಕೂಟಗಳು ಬೇಡಿಕೆ ಸಲ್ಲಿಸಿದ್ದವು. ಆದರೆ, ರಾಜ್ಯ ಸರ್ಕಾರ ಪ್ರತಿ ಬಾರಿಯೂ ಬೇಡಿಕೆಯನ್ನು ನಿರಾಕರಿಸುತ್ತಾ ಕೊನೆಗೆ ಕೇವಲ .2 ಮಾತ್ರ ಹೆಚ್ಚಿಸಿತ್ತು ಎಂದರು.
ಇಂಡಿ, ಬೂಸಾ, ಹಸಿರು ಮೇವು ಸೇರಿದಂತೆ ಎಲ್ಲಾ ಮಾದರಿಯ ಪಶು ಆಹಾರದ ದರವೂ ಹೆಚ್ಚಾಗಿದೆ. ಬೇರೆ ರಾಜ್ಯಗಳಲ್ಲಿ ರೈತರಿಗೆ ಪ್ರತಿ ಲೀಟರ್‌ಗೆ .40 ಸಿಗುತ್ತಿದೆ. ನಮ್ಮ ರಾಜ್ಯದಲ್ಲಿ .30 ಒಕ್ಕೂಟದಿಂದ ಮತ್ತು ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ .5 ಸೇರಿದಂತೆ .35 ಸಿಗುತ್ತಿದೆ. ಲಾಭ ಇಲ್ಲದ ಕಾರಣ ರೈತರು ಹೈನುಗಾರಿಕೆ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಹಾಲಿಗೆ ಹೆಚ್ಚಿನ ದರ ನೀಡಿ ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಸರ್ಕಾರಕ್ಕೆ ಕೋರಿದ್ದೇವೆ. ಆದರೆ, ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಹೇಶ್ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದರೆ ನಾನು ಚುನಾವಣೆಗೆ ಸ್ಪರ್ಧಿಸಲ್ಲ: ರಮೇಶ್ ಜಾರಕಿಹೊಳಿ
ಹೋಟೆಲ್‌ಗಳಿಗೂ ಹಾಲಿನ ಕೊರತೆ: ಹಾಲಿನ ಕೊರತೆ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್, ನಗರದ ಹೋಟೆಲ್‌ಗಳಿಗೆ ಪ್ರತಿನಿತ್ಯ ಸುಮಾರು 4.5 ಲಕ್ಷ ಲೀಟರ್ ಹಾಲು ಮತ್ತು 3 ಲಕ್ಷ ಲೀಟರ್ ಮೊಸರು ಮತ್ತು 1 ಲಕ್ಷ ಕೇಜಿ ತುಪ್ಪಕ್ಕೆ ಬೇಡಿಕೆ ಇದೆ. ಆದರೆ, ಕಳೆದೆರಡು ವಾರಗಳಿಂದ ಶೇ.25ರಷ್ಟುಹಾಲಿನ ಕೊರತೆ ಇದೆ. ತುಪ್ಪ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಹೋಟೆಲ್ ಉದ್ಯಮದಲ್ಲಿ ನಂದಿನಿಯನ್ನೇ ನಂಬಿಕೊಂಡಿರುವರು ಶೇ.90ಕ್ಕಿಂತ ಹೆಚ್ಚಿದ್ದಾರೆ. ನಂದಿನ ಹಾಲು ಗುಣಮಟ್ಟದಿಂದ ಕೂಡಿದ್ದು, ಹಾಲಿನ ಕೊರತೆಯಿಂದ ಸಕಾಲಕ್ಕೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ಖಾಸಗಿ ಕಂಪನಿಗಳ ಹಾಲಿಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಕೆಎಂಎಫ್ ಹೊರ ರಾಜ್ಯಗಳಿಗೆ ಕಳುಹಿಸುತ್ತಿರುವ ಹಾಲನ್ನು ನಿಲ್ಲಿಸಿ, ಸ್ಥಳೀಯವಾಗಿ ಇರುವ ಕೊರತೆಯನ್ನುನಿವಾರಿಸಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ