ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಹಲವು ಹಗರಣದ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸಲು ಸರಕಾರ ಆದೇಶಿಸಿದೆ.
ವರದಿ : ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣನ್ಯೂಸ್
ಮೈಸೂರು (ಮೇ.20): ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಗೆ (Rohini Sindhuri) ಮತ್ತೆ ಸಂಕಷ್ಟ ಎದುರಾಗಿದೆ. ಹಲವು ಹಗರಣದ ಆರೋಪಗಳು ರೋಹಿಣಿ ಸಿಂಧೂರಿ ವಿರುದ್ಧ ಇದ್ದು ತನಿಖೆಗೆ ರಾಜ್ಯ ಸರಕಾರ ಆದೇಶಿದೆ. ಮಾತ್ರವಲ್ಲ ತನಿಖೆ ನಡೆಸಲು ಅಧೀನ ಕಾರ್ಯದರ್ಶಿ ಜಯರಾಂ ಅವರನ್ನು ನೇಮಕ ಮಾಡಲಾಗಿದೆ. ನಾಲ್ಕು ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿ 30 ದಿನಗಳಲ್ಲಿ ವರದಿ ನೀಡುವಂತೆ ಸರಕಾರ ಆದೇಶಿಸಿದೆ.
ಪರಿಸರ ಸ್ನೇಹಿ ಬಟ್ಟೆ ಬ್ಯಾಗ್ ಖರೀದಿ ಹಗರಣ (Bag scam), ಜಿಲ್ಲಾಧಿಕಾರಿಗಳ ಸರ್ಕಾರಿ ನಿವಾಸದಲ್ಲಿ 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಸ್ವೀಮಿಂಗ್ ಪೂಲ್ ಹಾಗೂ ಜಿಮ್ ನಿಂದ ಪಾರಂಪರಿಕ ಕಟ್ಟಡಕ್ಕೆ ಹಾನಿ ಆರೋಪ, ಕರೋನಾ ಸೋಂಕಿನಿಂದ ಮೃತ ಪಟ್ಟವರ ಸಂಖ್ಯೆಯನ್ನ ಮುಚ್ಚಿಟ್ಟ ಆರೋಪ. ಚಾಮರಾಜನಗರ ಆಕ್ಸಿಜನ ದುರಂತ ಪ್ರಕರಣದ ಆರೋಪ ಸಿಂಧೂರಿ ಮೇಲಿದೆ.
SSLC Supplementary Exam 2022 ಜೂನ್ 27 ರಿಂದ ಪೂರಕ ಪರೀಕ್ಷೆ ಆರಂಭ
ಈ ನಾಲ್ಕು ಪ್ರಕರಣಗಳಲ್ಲಿ ಹಿಂದಿನ ಮೈಸೂರು ಜಿಲ್ಲಾಧಿಕಾರಿ ಮೇಲೆ ಹೊರಿಸಿರುವ ಆರೋಪಗಳ ಕುರಿತು ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಯಲು ಸರಕಾರ ಮುಂದಾಗಿದೆ. ಶಾಸಕ ಸಾ.ರಾ.ಮಹೇಶ್ ಅವರು ಆಗಿನ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ವಿರುದ್ಧ ಹೊರೆಸಿದ್ದರು. ಮಾತ್ರವಲ್ಲ ತನಿಖೆಗೆ ಒತ್ತಾಯಿಸಿದ್ದರು.
ಪ್ರಕರಣ ಒಂದು: ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿನ ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಮುಖಾಂತರ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು ಖರೀದಿಸುವ ಸಂಬಂಧ 09.04.2021 ರಲ್ಲಿ ಜಿಲ್ಲಾಧಿಕಾರಿಯವರ ಕಛೇರಿಯಿಂದ ಕಾರ್ಯಾದೇಶ ಹೊರಡಿಸಿದ್ದು, ಸದರಿ ಕಾರ್ಯಾದೇಶದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತ ಇವರಿಂದ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‌ಗಳನ್ನು ಮೈಸೂರು ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳಿಗೆ ಸರಬರಾಜು ಮಾಡುವ ಸಂಬಂಧ 4 (G) ವಿನಾಯಿತಿ ಅಡಿಯಲ್ಲಿ ದರಪಟ್ಟಿಗಳನ್ನು ಪಡೆದಿದ್ದರು. ಅದರಂತೆ 5 ಕೆ.ಜಿ. ಮತ್ತು 10 ಕೆ.ಜಿ. ಸಾಮರ್ಥ್ಯದ ಬಟ್ಟೆ, ಬ್ಯಾಗ್‌ಗಳಿಗೆ ರೂ. 52 (ಜಿ.ಎಸ್.ಟಿ. ಸೇರಿದಂತೆ) ನಿಗಧಿಪಡಿಸಿ ಒಟ್ಟು 14,71,458 ಬಟ್ಟೆ ಬ್ಯಾಗ್‌ಗಳನ್ನು ಖರೀದಿಸಲು ಅನುಮೋದನೆ ನೀಡಿರುತ್ತಾರೆ.
ಸದರಿ ಬಟ್ಟೆ ಬ್ಯಾಗ್‌ಗಳ ವಿತರಣೆ ಸಂಬಂಧ ಮೈಸೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಸೇರಿರುವ ಎಲ್ಲಾ ಗ್ರಾಮ ಪಂಚಾಯತಿಗಳ ಹಾಗೂ ಪುರಸಭೆಗಳ ಸಾಮಾನ್ಯ ಸಭೆಯಲ್ಲಿ ಯಾವುದೇ ವಿಧವಾದ ಅನುಮೋದನೆಯನ್ನು ಪಡೆದಿರುವುದಿಲ್ಲ. ನಗರ ಮತ್ತು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳು ಸ್ವಯಂ ಪರಿಪೂರ್ಣ ಸಂಸ್ಥೆಗಳಾಗಿದ್ದು, ಅವುಗಳಲ್ಲಿನ ಜನಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶದಿಂದ ಈ ರೀತಿ ಕಾರ್ಯಾದೇಶ ನೀಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದವರು ಸರಬರಾಜು ಮಾಡಿರುವ ಬಟ್ಟೆ ಬ್ಯಾಗ್‌ಗಳ ಗುಣಮಟ್ಟ ಮತ್ತು ಗಾತ್ರ ಹೊಂದಿರುವ ಬ್ಯಾಗ್‌ಗಳು ಮುಕ್ತ ಮಾರುಕಟ್ಟೆಯಲ್ಲಿ ಜಿ.ಎಸ್.ಟಿ. ಸೇರಿದಂತೆ 10 ರಿಂದ 13 ರೂ.ಗಳಲ್ಲಿ ಮಾರಾಟವಾಗುತ್ತಿರುತ್ತವೆ. 10 ರಿಂದ 13 ರೂಪಾಯಿಗಳಿಗೆ ಮುಕ್ತ ಮಾರುಕಟ್ಟೆಯ ಚಿಲ್ಲರೆ ಮಾರಾಟದಲ್ಲಿ ಮಾರಾಟವಾಗುವ ಬಟ್ಟೆ, ಬ್ಯಾಗ್‌ಗಳಿಗೆ ಸಗಟು ದರದಲ್ಲಿ ರೂ. 52 ಗಳನ್ನು ನಿಗದಿಪಡಿಸಿ, ಅನುಮೋದನೆ ನೀಡಿರುವುದು ಸಾರ್ವಜನಿಕ ಹಣದ ಅಪವ್ಯಯವಾಗಿರುತ್ತದೆ. ಹಾಗಾಗಿ, ಸದರಿ ಬಟ್ಟೆ, ಬ್ಯಾಗ್‌ಗಳ ಸರಬರಾಜಿಗೆ ಸಂಬಂಧಿಸಿದಂತೆ ನಡೆದಿರುವ ಸಂಪೂರ್ಣ ಪ್ರಕ್ರಿಯೆಯ ಕುರಿತು ತನಿಖೆ ನಡೆಸಿ, ಸದರಿ ಅವಧಿಯಲ್ಲಿ ಕಾರ್ಯಾದೇಶ ನೀಡಿರುವ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಶಾಸಕ ಸಾರಾ.ಮಹೇಶ್ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಜೂನ್ ಮೂರನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಪ್ರಕರಣ ಎರಡು: ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ರೋಹಿಣಿ ಸಿಂಧೂರಿ ರವರು ಜಿಲ್ಲಾಧಿಕಾರಿಗಳ ಅಧಿಕೃತ
ನಿವಾಸವಾದ ಪಾರಂಪರಿಕ ಕಟ್ಟಡದ ವ್ಯಾಪ್ತಿಯಲ್ಲಿ ಸುಮಾರು ರೂ. 50 ಲಕ್ಷಗಳ ಒಳಾಂಗಣ ಈಜುಕೊಳ ಮತ್ತು ಜಿಮ್ ನಿರ್ಮಾಣ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನು ಪಾರಂಪರಿಕ ಇಲಾಖೆಯ ಅನುಮತಿ ಇಲ್ಲದೆ ಜಲಸನ್ನಿಧಿ ಪಾರಂಪರಿಕ ಕಟ್ಟಡವನ್ನು ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿ ಇಲ್ಲದೆ ನವೀಕರಿಸಿ, ನೆಲಹಾಸಿಗೆ ವೆಟ್ರಿಫೈಡ್ ಟೈಲ್ಸ್ ಅಳವಡಿಸಿ, ಹೆರಿಟೇಜ್ ರೆಗ್ಯುಲೇಷನ್ ಉಲ್ಲಂಘನೆ ಮಾಡಿದ್ದು, ಸದರಿ ನವೀಕರಣ ಕಾರ್ಯಕ್ಕೆ ರೂ. 16.35 ಲಕ್ಷಗಳ ಹಣವನ್ನು ದುಂದು ವೆಚ್ಚ ಮಾಡಿರುವ ಕುರಿತು ವಿಚಾರಣೆ ನಡೆಸಿ, ಸದರಿ ನವೀಕರಣಕ್ಕೆ ವೆಚ್ಚ ಮಾಡಿರುವ ಸರ್ಕಾರದ ಹಣವನ್ನು ವಸೂಲಿ ಮಾಡಬೇಕೆಂದು ಕೋರಿದ್ದರು.
ಪ್ರಕರಣ ಮೂರು: 2021ರ ಮೇ ತಿಂಗಳಲ್ಲಿ ಮುಕ್ತಿದಾಮದ ಮಾಹಿತಿ ಪ್ರಕಾರ ಮೈಸೂರಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 969 ಇದ್ದು, ಶ್ರೀಮತಿ ರೋಹಿಣಿ ಸಿಂಧೂರಿ ರವರು ಸರ್ಕಾರಕ್ಕೆ ಹಾಗೂ ಜಿಲ್ಲೆಯ ಜನತೆಗೆ ಸೋಂಕಿನಿಂದ ಮೃತಪಟ್ಟವರು 238 ಎಂದು ತಪ್ಪಾಗಿ ಮಾಹಿತಿ ನೀಡಿದ್ದಾರೆ. ಇದನ್ನ ನೋಡಿದರೆ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿ ಇದೆ ಎಂದು ತೋರಿಸುವ ನಿಟ್ಟಿನಲ್ಲಿ ಸಾವಿನ ಲೆಕ್ಕ ಮುಚ್ಚಿಟ್ಟಿರುವ ಅನುಮಾನದ ಬಗ್ಗೆ ತಿನಿಖೆ ನಡೆಸುವಂತೆ ಕೇಳಿದ್ದರು.
ಪ್ರಕರಣ ನಾಲ್ಕು: ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಕೊರೊನ ಸೋಂಕಿತರ ಪ್ರಾಣ ಹೋಗಲು ರೋಹಿಣಿ ಸಿಂಧೂರು ಕಾರಣಕರ್ತರಾಗಿರುವುರಿಂದ ಅವರ ವಿರುದ್ಧ ಉನ್ನತ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸುವಂತೆ ಕೋರಿದ್ದರು ಶಾಸಕ ಸಾರಾ.ಮಹೇಶ್. ಈ ರಾಜ್ಯ ಸರ್ಕಾರ ಮೇಲ್ಕಂಡ ದೂರುಗಳ ಹಿನ್ನೆಲೆಯಲ್ಲಿ, ಶ್ರೀಮತಿ ರೋಹಿಣಿ ಸಿಂಧೂರಿ ಮೇಲೆ ಹೊರಿಸಿರುವ ಆರೋಪಗಳ ಕುರಿತು ಸತ್ಯಾಸತ್ಯತೆಯನ್ನು ತಿಳಿಯುವ ಸಲುವಾಗಿ ಪ್ರಾಥಮಿಕ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ ಆರೋಪಗಳ ಕುರಿತು ಪ್ರಾಥಮಿಕ ತನಿಖೆ ನಡೆಸಲು ಅಧೀನ ಕಾರ್ಯದರ್ಶಿ ಎನ್. ಜಯರಾಂ ನೇಮಿಸಿ 30 ದಿನಗಳಲ್ಲಿ ವರದಿ ಕೊಡುವಂತೆ ಕೇಳಿಕೆ.