Karnataka Rains: ಮಳೆ ಎದುರಿಸಲು ಕರ್ನಾಟಕಕ್ಕೆ 4 ಎನ್‌ಡಿಆರ್‌ಎಫ್‌ ತಂಡ: ಸಚಿವ ಅಶೋಕ್‌

By Girish GoudarFirst Published May 20, 2022, 6:08 AM IST
Highlights

*  ಇವನ್ನು ಬಳಸಿ ಸಂಭವನೀಯ ಹಾನಿ ತಡೆಯಿರಿ, ಜಿಲ್ಲಾಧಿಕಾರಿಗಳಿಗೆ ಕಂದಾಯ ಸಚಿವ ಅಶೋಕ್‌ ಸೂಚನೆ
*  ಭೂಕುಸಿತ ಸಂಭವ ಇದ್ದರೆ ಜನರ ಸ್ಥಳಾಂತರಿಸಲು ತಾಕೀತು
*  3-4 ತಿಂಗಳು ಎಚ್ಚರಿಕೆಯಿಂದ ಕೆಲಸ ಮಾಡಿ
 

ಬೆಂಗಳೂರು(ಮೇ.20): ರಾಜ್ಯದಲ್ಲಿ ತೀವ್ರ ಮಳೆ ಹಿನ್ನೆಲೆಯಲ್ಲಿ ರೆಡ್‌ ಅಲರ್ಚ್‌ ಘೋಷಣೆಯಾಗಿರುವ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ಕಂದಾಯ ಸಚಿವ ಆರ್‌. ಅಶೋಕ್‌ ಅವರು ಪೂರ್ವ ಸಿದ್ಧತೆಗಳ ಪರಿಶೀಲನಾ ಸಭೆ ನಡೆಸಿದ್ದು, ಮುಂದಿನ 3-4 ತಿಂಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ನೆರೆ ಉಂಟಾದ ಸ್ಥಳಗಳಿಗೆ ಖುದ್ದು ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸಂಪೂರ್ಣ ಮನೆ ಹಾನಿ ಹಾಗೂ ಪ್ರಾಣಹಾನಿ ಉಂಟಾದ ಪ್ರಕರಣಗಳಲ್ಲಿ 48 ಗಂಟೆಗಳಲ್ಲಿ ಪರಿಹಾರ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

ಇದೇ ವೇಳೆ ರಾಜ್ಯಕ್ಕೆ ಈಗಾಗಲೇ ನಾಲ್ಕು ಎನ್‌ಡಿಆರ್‌ಎಫ್‌ ತಂಡಗಳು ಆಗಮಿಸಿವೆ. ಇವುಗಳನ್ನು ಬಳಸಿಕೊಂಡು ಎಲ್ಲೇ ಸಮಸ್ಯೆಯಾದರೂ ತಕ್ಷಣ ಜನರ ನೆರವಿಗೆ ಧಾವಿಸಬೇಕು. ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಸಂಭವನೀಯ ಹಾನಿಗಳನ್ನು ತಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ಬೆಂಗ್ಳೂರು ಮಳೆ ಮುನ್ಸೂಚನೆ ಇದ್ದರೂ ಕ್ಯಾರೇ ಎನ್ನದ ಸರ್ಕಾರ: ಎಚ್‌ಡಿಕೆ

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಅವರು, ರೆಡ್‌ ಅಲರ್ಚ್‌ ಘೋಷಣೆಯಾಗಿರುವ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಿದರು. ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಬದಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಪರಿಶೀಲನಾ ಸಭೆ ನಡೆಸುವಂತೆ ಮನವಿ ಮಾಡುತ್ತೇನೆ. ಜತೆಗೆ ಎಲ್ಲೆಲ್ಲಿ ಭೂಕುಸಿತ ಸಾಧ್ಯತೆ ಇದೆಯೋ ಅಂತಹ ಕಡೆ ಸಾರ್ವಜನಿಕರ ಮನವೊಲಿಸಿ ಸ್ಥಳಾಂತರ ಮಾಡಬೇಕು. ಇನ್ನು 3-4 ತಿಂಗಳು ಮಳೆಯಿಂದ ಸಮಸ್ಯೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಎಚ್ಚರ ವಹಿಸಬೇಕು. ಎಲ್ಲೇ ಭೂಕುಸಿತ, ನೆರೆ ಉಂಟಾದರೂ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ತ್ವರಿತವಾಗಿ ಪರಿಹಾರ ಕಾರ್ಯ ಕೈಗೊಳ್ಳಲು ಸೂಚಿಸಬೇಕು. ಮನೆಹಾನಿ, ಪ್ರಾಣಹಾನಿ ಉಂಟಾದಾಗ 48 ಗಂಟೆಯಲ್ಲಿ ಪರಿಹಾರ ನೀಡಬೇಕು ಎಂದು ಸೂಚಿಸಿದ್ದೇನೆ ಎಂದರು.

ರಾಜ್ಯಕ್ಕೆ ಆಗಮಿಸಿರುವ ಎನ್‌ಡಿಆರ್‌ಎಫ್‌ ತಂಡಗಳ ವಿವರ:

1. ದಕ್ಷಿಣ ಕನ್ನಡ - ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಸುತ್ತಮುತ್ತಲಿನ ಪ್ರದೇಶ
2. ಕೊಡಗು - ಮೈಸೂರು, ಹಾಸನ, ಚಿಕ್ಕಮಗಳೂರು
3. ಬೆಳಗಾವಿ - ಬಾಗಲಕೋಟೆ, ವಿಜಯಪುರ ಹಾಗೂ ಸುತ್ತಮುತ್ತಲಿನ ಪ್ರದೇಶ
4. ರಾಯಚೂರು - ಯಾದಗಿರಿ, ಬಳ್ಳಾರಿ, ಕಲಬುರ್ಗಿ ಹಾಗೂ ಸುತ್ತಮುತ್ತಲಿನ ಪ್ರದೇಶ
ಬೆಂಗಳೂರಿನಲ್ಲಿ ಒಂದು ತಂಡ ಸದಾ ಕಾಲ ಕಾರ್ಯಾಚರಣೆಗೆ ಸಿದ್ಧವಾಗಿರುತ್ತದೆ
 

click me!