Karnataka Rains: ಕರ್ನಾಟಕದ 22 ಜಿಲ್ಲೆಗಳಲ್ಲಿ ಮಳೆಯಬ್ಬರ: 5 ಜಿಲ್ಲೆ ಶಾಲೆಗೆ ರಜೆ

By Girish Goudar  |  First Published May 20, 2022, 4:27 AM IST

*   ರಾಜ್ಯದ ಬಹುತೇಕ ಕಡೆ ಮುಂಗಾರು ಪೂರ್ವ ಮಳೆಯಿಂದ ಜನಜೀವನ ಅಸ್ತವ್ಯಸ್ತ, ಬೆಳೆಗಳಿಗೆ ಭಾರಿ ಹಾನಿ
*   ಮಳೆ ಸಂಬಂಧಿ ಅನಾಹುತಕ್ಕೆ 3 ಮಂದಿ ಬಲಿ
*   80ಕ್ಕೂ ಹೆಚ್ಚು ಮನೆ​ಗ​ಳಿಗೆ ಹಾನಿ 
 


ಬೆಂಗಳೂರು(ಮೇ.20): ಮುಂಗಾರು ಪ್ರವೇ​ಶಕ್ಕೆ ಮುನ್ನವೇ ರಾಜ್ಯ​ದ 22ಕ್ಕೂ ಹೆಚ್ಚು ಜಿಲ್ಲೆ​ಗ​ಳಲ್ಲಿ ಮಳೆ​ಯ​ಬ್ಬರ ಮುಂದು​ವ​ರೆದಿ​ದ್ದು, ಜನ​ಜೀ​ವನ ಸಂಪೂರ್ಣ ಅಸ್ತ​ವ್ಯ​ಸ್ತ​ಗೊಂಡಿದೆ. ಮೈಸೂರು, ದಕ್ಷಿಣ ಕನ್ನಡ ಸೇರಿ ನಾಲ್ಕು ಜಿಲ್ಲೆ​ಗ​ಳಲ್ಲಿ ಮುನ್ನೆ​ಚ್ಚ​ರಿಕಾ ಕ್ರಮ​ವಾಗಿ ಶಾಲೆ​ಗ​ಳಿಗೆ ಗುರು​ವಾರ ರಜೆ ಘೋಷಿ​ಸ​ಲಾ​ಗಿ​ದೆ. ಉಡುಪಿಯಲ್ಲಿ ಶುಕ್ರವಾರ ರಜೆ ಘೋಷಿಸಲಾಗಿದೆ. ಸಿಡಿಲು ಬಡಿದು ಇಬ್ಬರು ಸೇರಿದಂತೆ ಒಟ್ಟು ಮೂರು ಮಂದಿ ಮಳೆ ಸಂಬಂಧಿ ಘಟನೆಗಳಲ್ಲಿ ಮೃತ​ಪ​ಟ್ಟಿ​ದ್ದಾ​ರೆ.

ಚಿತ್ರ​ದುರ್ಗ, ಕೊಡಗು, ಶಿವ​ಮೊಗ್ಗ, ದಾವ​ಣ​ಗೆರೆ, ಮಂಡ್ಯ​ ಹಾಗೂ ಕರಾ​ವಳಿ ಜಿಲ್ಲೆ​ಗ​ಳಲ್ಲಿ ಬುಧ​ವಾರ ರಾತ್ರಿ​ಯಿಂದೀ​ಚೆಗೆ ಭರ್ಜರಿ ಮಳೆ​ಯಾ​ಗಿದ್ದು, ಈ ಜಿಲ್ಲೆ​ಗ​ಳಲ್ಲಿ 60ಕ್ಕೂ ಹೆಚ್ಚು ಮನೆ​ಗ​ಳಿಗೆ ಕೆರೆ ಹಾಗೂ ಚರಂಡಿ ನೀರು ನುಗ್ಗಿದೆ. ಕೊಪ್ಪ​ಳ​ದಲ್ಲಿ ಸಂಗ​ನಾ​ಳ-ಕರ​ಮುಡಿ ಗ್ರಾಮದ ನಡು​ವಿ​ನ ಸೇತುವೆ ಕೊಚ್ಚಿಹೋಗಿ 4 ಗ್ರಾಮ​ಗಳ ಸಂಪರ್ಕ ಕಡಿ​ತ​ಗೊಂಡಿ​ದೆ. ಬಳ್ಳಾ​ರಿಯ 37 ಮನೆ​ಗಳು ಸೇರಿ ರಾಜ್ಯ​ದಲ್ಲಿ 80ಕ್ಕೂ ಹೆಚ್ಚು ಮನೆ​ಗ​ಳಿಗೆ ಹಾನಿ​ಯಾ​ಗಿದೆ.
ಚಿಕ್ಕ​ಮ​ಗ​ಳೂರು, ಮೈಸೂರು, ಹಾಸ​ನ, ರಾಮ​ನ​ಗರ, ಬಳ್ಳಾರಿ, ಧಾರ​ವಾಡ, ಹಾವೇರಿ, ಬಳ್ಳಾರಿ, ವಿಜ​ಯ​ನ​ಗ​ರ, ಬೆಂಗ​ಳೂರು ಗ್ರಾಮಾಂತ​ರ, ಯಾದ​ಗಿರಿ, ಬೆಂಗ​ಳೂರು, ರಾಯ​ಚೂರು ಮತ್ತು ಕಲ​ಬು​ರ​ಗಿ​ಯಲ್ಲಿ ಮಳೆ​ಯ​ಬ್ಬರ ಕಡಿಮೆ ಇದ್ದರೂ ಇಡೀ ದಿನ ಜಡಿ ಮಳೆಯಿಂದ ಜನ​ಜೀ​ವನ ಅಸ್ತ​ವ್ಯ​ಸ್ತ​ವಾಗಿದೆ.

Tap to resize

Latest Videos

Bengaluru: ಭಾರೀ ಮಳೆಗೆ ಇಡೀ ನೆಲಮಂಗಲ ಜಲಾವೃತ: ಪ್ರವಾಹದ ಪರಿಸ್ಥಿತಿ ನಿರ್ಮಾಣ

ಮಂಡ್ಯದ ಜನತೆ ತತ್ತ​ರ:

ಮಂಡ್ಯ​ದಲ್ಲಿ ಕಳೆದ ಕೆಲ ದಿನ​ಗ​ಳಿಂದ ಸುರಿ​ಯು​ತ್ತಿ​ರುವ ಬೇಸಿಗೆ ಮಳೆ ಭಾರಿ ಅನಾ​ಹು​ತ​ವನ್ನೇ ಸೃಷ್ಟಿ​ಸಿ​ದೆ. ಹಲವು ಕೆರೆ​ಕ​ಟ್ಟೆ​ಗಳು ತುಂಬಿ​ ಹರಿ​ಯು​ತ್ತಿ​ರುವ ಹಿನ್ನೆ​ಲೆ​ಯಲ್ಲಿ ನಗ​ರದ ಹಲವು ಬಡಾ​ವ​ಣೆ​ಗ​ಳಿಗೆ ನೀರು ನುಗ್ಗಿ ಅವಾಂತರವಾಗಿದೆ. ಹಾಲ​ಹಳ್ಳಿ, ಶಂಕ​ರ​ಪು​ರದ ಹಲವು ಮನೆ​ಗ​ಳಿಗೆ ನೀರು ನುಗ್ಗಿ ಜನ ರಾತ್ರಿ​ಯಿಡೀ ಜಾಗ​ರಣೆ ಮಾಡಿದ್ದಾರೆ. ಮೇಲುಕೋಟೆ ರಸ್ತೆಯಲ್ಲಿರುವ ಎನ್‌.ಎಫ್‌. ಇಂಡಸ್ಟ್ರೀಸ್‌ಗೆ ನೀರು ನುಗ್ಗಿ ಅಪಾ​ರ ಪ್ರಮಾ​ಣದ ಖಾರದ ಪುಡಿ ನೀರು​ಪಾ​ಲಾ​ಗಿ​ದೆ.
ಮಂಡ್ಯದ ಇಂಡುವಾಳು ಬಳಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಯೊಂದು ಕೊಚ್ಚಿಹೋಗಿದ್ದು, ಕೆಲ​ಕಾಲ ಸಂಚಾರ ಅಸ್ತ​ವ್ಯ​ಸ್ತ​ಗೊಂಡಿ​ತ್ತು. ಹಳ್ಳ​ದಲ್ಲಿ ನೀರಿನ ರಭಸ ಹೆಚ್ಚಾದ ಕಾರಣ ಈ ಘಟನೆ ನಡೆ​ದಿ​ದೆ.

ಕರಾ​ವ​ಳಿ​ಯಲ್ಲಿ ಅಬ್ಬ​ರದ ಮಳೆ:

ಕರಾ​ವಳಿ ಜಿಲ್ಲೆ​ಗ​ಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನ​ಡ​ದಲ್ಲಿ ಭರ್ಜರಿ ಮಳೆ​ಯಾ​ಗಿ​ದೆ. ಗುರು​ವಾರ ಮಳೆಯ ತೀವ್ರತೆ ಕಡಿಮೆ ಇತ್ತಾ​ದರೂ ಬುಧ​ವಾರ ರಾತ್ರಿ​ಯಿಂದ ಬಿರು​ಸಿನ ಮಳೆ ಸುರಿ​ದ ಕಾರಣ ಪ್ರವಾ​ಹದ ಆತಂಕ ಸೃಷ್ಟಿ​ಸಿದೆ. ಕೊಡಗಿನ​ಲ್ಲೂ ಉತ್ತಮ ಮಳೆ​ಯಾ​ಗು​ತ್ತಿ​ದ್ದು, ಚಿಕ್ಲಿಹೊಳೆ ಜಲಾಶಯ ತುಂಬಿ ಹರಿಯಲಾರಂಭಿಸಿದೆ. ಮಳೆಯಿಂದಾಗಿ ಮಡಿಕೇರಿ-ಚೆಟ್ಟಳ್ಳಿ ರಸ್ತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿಯಲಾರಂಭಿಸಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.

ದಾವ​ಣ​ಗೆ​ರೆ​ಯಲ್ಲಿ 2 ಸಾವಿರ ಎಕ​ರೆಗೂ ಹೆಚ್ಚು ಬೆಳೆ ಹಾನಿ​ಯಾ​ಗಿದೆ. ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದ ಯುವ ರೈತ ನಾಗರಾಜ (28 ವರ್ಷ) ನೀರಿ​ನಲ್ಲಿ ಮುಳು​ಗಿದ್ದ ಪಂಪ್‌ಸೆಟ್‌ ತೆರವು ಮಾಡಲು ಹೋಗಿದ್ದಾಗ ವಿದ್ಯುತ್‌ ತಗುಲಿ ಮೃತಪಟ್ಟಿದ್ದಾರೆ.

ಬೀದರ್‌, ಯಾದ​ಗಿ​ರಿಯಲ್ಲಿ ಮಳೆ​ಯ​ಬ್ಬರ ಕಡಿಮೆ ಇದ್ದರೂ ಸಿಡಿಲು-ಗಾಳಿಯಬ್ಬ​ರಕ್ಕೆ ಹಲವು ಮನೆ​ಗಳ ಚಾವಣಿಗೆ ಹಾನಿ​ಯಾ​ಗಿದೆ. ಸಿಡಿಲು ಬಡಿದು ಯಾದ​ಗಿ​ರಿ​ಯ ಹುಣ​ಸಗಿ ತಾಲೂ​ಕಿನ ವರ​ಹಟ್ಟಿಗ್ರಾಮ​ದಲ್ಲಿ ಭೀಮಪ್ಪ, ಬೀದ​ರ್‌​ನಲ್ಲಿ ಚಿಮಕೋಡ ಗ್ರಾಮದ ವಿದ್ಯಾವತಿ ಟೊಳ್ಳೆ (52) ಮೃತ​ಪ​ಟ್ಟಿ​ದ್ದಾ​ರೆ.

ಶಾಲೆಗೆ ನುಗ್ಗಿದ ನೀರು:

ಕೊಪ್ಪ​ಳ​ದ ಹಿರೇಸಿಂದೋಗಿ ಗ್ರಾಮದ ಚನ್ನಳ್ಳ ತುಂಬಿ ಕಾಟ್ರಳ್ಳಿ ಶಾಲೆಗೆ ನೀರು ನುಗ್ಗಿದ್ದರಿಂದ ಮುನ್ನೆ​ಚ್ಚ​ರಿಕಾ ಕ್ರಮ​ವಾಗಿ ಮಕ್ಕ​ಳನ್ನು ಮನೆಗೆ ಕಳು​ಹಿ​ಸ​ಲಾ​ಗಿದೆ. ಅದೇ ರೀತಿ ಚಿತ್ರದುರ್ಗ ಹೊರವಲಯದ ಮಲ್ಲಾಪುರ ಕೆರೆ ಭರ್ತಿಯಾಗಿ ಕೋಡಿ ಬಿದ್ದ ಕಾರಣ ಸಮೀ​ಪದ ಸರ್ಕಾರಿ ಶಾಲೆಗೆ ನೀರು ನುಗ್ಗಿ ಸಮಸ್ಯೆ ಸೃಷ್ಟಿ​ಸಿ​ದ್ದು, 2 ದಿನ ಶಾಲೆಗೆ ರಜೆ ಘೋಷಿ​ಸ​ಲಾ​ಗಿ​ದೆ.

Davanagere: ಅನ್ನದಾತರ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ ವರುಣ: ಮಳೆ ಹಾನಿ ಪ್ರದೇಶಕ್ಕೆ ಡಿಸಿ ಭೇಟಿ

ಮಳೆ​ಯಿಂದಾಗಿ ಮುನ್ನೆ​ಚ್ಚ​ರಿಕಾ ಕ್ರಮ​ವಾಗಿ ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ಶಿವ​ಮೊ​ಗ್ಗ​ದಲ್ಲಿ ಶಾಲೆ​ಗ​ಳಿಗೆ ಗುರುವಾರ ರಜೆ ಘೋಷಿ​ಸ​ಲಾ​ಗಿತ್ತು. ಉಡು​ಪಿ​ಯಲ್ಲಿ ಭಾರೀ ಮಳೆಯ ಮುನ್ಸೂ​ಚನೆ ಹಿನ್ನೆ​ಲೆ​ಯಲ್ಲಿ ಶುಕ್ರ​ವಾರ ಶಾಲೆ​ಗ​ಳಿಗೆ ರಜೆ ಘೋಷಿ​ಸ​ಲಾ​ಗಿ​ದೆ.

ರಸ್ತೆ ಮಧ್ಯೆ ಮಗುಚಿದ ಲಾರಿ:

ಕೊಡ​ಗಿ​ನಲ್ಲಿ ಭಾರೀ ಮಳೆ​ಯಾ​ಗು​ತ್ತಿ​ರುವ ಹಿನ್ನೆ​ಲೆ​ಯಲ್ಲಿ ಕಂಟೈ​ನರ್‌ ಲಾರಿ​ಯೊಂದು ಚಾಲ​ಕನ ನಿಯಂತ್ರಣ ತಪ್ಪಿ ರಸ್ತೆಗೆ ಅಡ್ಡ​ಲಾಗಿ ಉರು​ಳಿದ ಪರಿ​ಣಾ​ಮ ಮಡಿಕೇರಿ-ಕುಶಾಲನಗರ ಹೆದ್ದಾರಿಯ ಸಿಂಕೋನ ಬಳಿ ಕೆಲ​ಕಾಲ ವಾಹನ ಸಂಚಾರ ಅಸ್ತ​ವ್ಯ​ಸ್ತ​ಗೊಂಡಿ​ತ್ತು. ಒಂದು ಗಂಟೆಗಳ ಕಾಲ ರಸ್ತೆ ಬಂದ್‌ ಆಗಿದ್ದರಿಂದ ಕಿಲೋ​ಮೀ​ಟ​ರ್‌​ಗ​ಟ್ಟಲೆ ವಾಹ​ನ​ಗಳು ಸಾಲು ನಿಂತಿ​ದ್ದ​ವು.

635 ಹೆಕ್ಟೇರ್‌ ಬೆಳೆ ಹಾನಿ: ಅಶೋಕ್‌

ಪೂರ್ವ ಮುಂಗಾರು ಮಳೆಯಿಂದ ರಾಜ್ಯದಲ್ಲಿ 23 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, 9 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಈವರೆಗೆ ರಾಜ್ಯದಲ್ಲಿ 204 ಹೆಕ್ಟೇರ್‌ ಕೃಷಿ ಹಾಗೂ 431 ಹೆಕ್ಟೇರ್‌ ತೋಟಗಾರಿಕಾ ಬೆಳೆ ಹಾನಿಯಾಗಿದೆ. ಬೆಳೆ ಹಾನಿಗೆ ಶೀಘ್ರ ಪರಿಹಾರ ವಿತರಿಸಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಮಾಹಿತಿ ನೀಡಿದ್ದಾರೆ. ಅವರು ಮಳೆ ಅನಾಹುತದ ಬಗ್ಗೆ ಗುರುವಾರ ಅಧಿಕಾರಿಗಳ ಸಭೆ ನಡೆಸಿದರು.

ಎಲ್ಲಿ, ಏನು ಹಾನಿ?

- ಕೊಪ್ಪ​ಳ​ದಲ್ಲಿ ಸಂಗ​ನಾ​ಳ-ಕರ​ಮುಡಿ ಗ್ರಾಮದ ನಡು​ವಿ​ನ ಸೇತುವೆ ಕೊಚ್ಚಿಹೋಗಿ 4 ಗ್ರಾಮ​ಗಳ ಸಂಪರ್ಕ ಕಡಿ​ತ
- ಮಂಡ್ಯದಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ನಡುವೆ ಸೇತುವೆ ಕೊಚ್ಚಿಹೋಗಿ ವಾಹನ ಸಂಚಾರ ಅಸ್ತವ್ಯಸ್ತ
- ದಾವ​ಣ​ಗೆ​ರೆ​ಯಲ್ಲಿ 2 ಸಾವಿರ ಎಕ​ರೆಗೂ ಹೆಚ್ಚು ಬೆಳೆ ಹಾನಿ​; ಪಂಪ್‌ಸೆಟ್‌ ರಿಪೇರಿಗೆ ಹೋಗಿದ್ದ ಯುವಕ ಸಾವು
- ದಕ್ಷಿಣ ಕನ್ನಡ, ಮಂಡ್ಯ, ಮೈಸೂರು, ಶಿವ​ಮೊ​ಗ್ಗ​ ಶಾಲೆಗಳಿಗೆ ನಿನ್ನೆ, ಉಡುಪಿ ಶಾಲೆಗಳಿಗೆ ಇಂದು ರಜೆ ಘೋಷಣೆ
- ಚಿತ್ರದುರ್ಗದ ಮಲ್ಲಾಪುರ ಕೆರೆ ಭರ್ತಿಯಾಗಿ ಕೋಡಿ ಬಿದ್ದು ಸಮೀಪದ ಶಾಲೆಗೆ ನುಗ್ಗಿದ ನೀರು; ಶಾಲೆಗೆ 2 ದಿನ ರಜೆ
 

click me!