
ಬೆಂಗಳೂರು (ಮು.11) : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ’ ಯೋಜನೆಯಡಿ ಐದು ಕೆ.ಜಿ. ಆಹಾರ ಧಾನ್ಯಗಳ ಬದಲಿಗೆ ಫಲಾನುಭವಿಗಳಿಗೆ ನಗದು ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಚಾಲನೆ ನೀಡಿದರು.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಸಾಂಕೇತಿಕವಾಗಿ ಮೊದಲು ಮೈಸೂರು ಮತ್ತು ಕೋಲಾರ ಜಿಲ್ಲೆಗಳ ಫಲಾನುಭವಿಗಳಿಗೆ ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ ಹಣ ಸಂದಾಯ ಮಾಡಿದರು. ಮಂಗಳವಾರದಿಂದ ಪ್ರತಿ ದಿನ ನಾಲ್ಕು ಜಿಲ್ಲೆಗಳಂತೆ ಮುಂದಿನ 10 ದಿನಗಳಲ್ಲಿ ಎಲ್ಲ ಫಲಾನುಭವಿಗಳಿಗೆ ಹಣ ಸಂದಾಯವಾಗಲಿದೆ.
5 ಕೆಜಿ ಅಕ್ಕಿ ಬದಲು ಹಣಭಾಗ್ಯ: 3ನೇ ಗ್ಯಾರಂಟಿ ಇಂದು ಆರಂಭ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿರುವ 1.28 ಕೋಟಿ ಅಂತ್ಯೋದಯ ಮತ್ತು 4.42 ಕೋಟಿ ಬಿಪಿಎಲ್ ಕುಟುಂಬಗಳ ಫಲಾನುಭವಿಗಳಿಗೆ ಈಗ ತಲಾ 170 ರು.ನಂತೆ ನೇರವಾಗಿ ಅವರ ಖಾತೆಗೆ ವರ್ಗಾವಣೆ ಆಗುತ್ತಿದೆ. ಬಡವರು-ಮಧ್ಯಮ ವರ್ಗದವರು ಎರಡು ಹೊತ್ತು ತಿಂದರೆ ಬಿಜೆಪಿಗೆ ಏನು ಹೊಟ್ಟೆಯುರಿ? ನಿಮ್ಮ ಖಾತೆಗೆ ಬರುವ ಹಣವನ್ನು ಊಟ, ಆಹಾರಕ್ಕಾಗಿ ಖರ್ಚು ಮಾಡಿ ನೆಮ್ಮದಿಯ ಬದುಕು ನಿರ್ವಹಿಸಿ ಎಂದು ಸಲಹೆ ನೀಡಿದರು.
ಆಹಾರದ ಹಕ್ಕು, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು ಮತ್ತು ಉದ್ಯೋಗದ ಹಕ್ಕನ್ನು ಮೊದಲು ಜಾರಿಗೆ ತಂದಿದ್ದು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ. 2013ರಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ಬಂತು. ಕೇಂದ್ರದಿಂದ 3 ರು.ಗಳಿಗೆ ಅಕ್ಕಿ ಕೊಡುತ್ತಿದ್ದರು. ಮೊದಲು 5 ಕೆ.ಜಿ. ಅಕ್ಕಿಯನ್ನು 1 ರು.ನಂತೆ ಫಲಾನುಭವಿಗಳಿಗೆ ಕೊಡಲು ತೀರ್ಮಾನ ಮಾಡಿದ್ದೆ. ಆ ನಂತರ ಉಚಿತವಾಗಿ ಕೊಡಬೇಕೆಂದು ನಿರ್ಧರಿಸಿ 7 ಕೆ.ಜಿ. ಅಕ್ಕಿಯನ್ನು ಕೊಡಲು ಆರಂಭಿಸಲಾಯಿತು ಎಂದರು.
ಈ ಬಾರಿಯ ಚುನಾವಣೆ ಸಂದರ್ಭದಲ್ಲಿ ಕೊಟ್ಟಐದು ಗ್ಯಾರಂಟಿಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಅನುಮೋದನೆ ಮಾಡಿದ್ದೇವೆ. ಜುಲೈ 1ಕ್ಕೆ ಅನ್ನಭಾಗ್ಯ ಯೋಜನೆ ಜಾರಿಗೆ ತರಬೇಕೆಂದು ತೀರ್ಮಾನ ಕೈಗೊಂಡಿದ್ದೆವು. ಆದರೆ, ಸಮರ್ಪಕವಾಗಿ ಅಕ್ಕಿ ಲಭ್ಯವಾಗದ ಹಿನ್ನೆಲೆಯಲ್ಲಿ ಹಣ ಕೊಡಲು ನಿರ್ಧರಿಸಿ, ನುಡಿದಂತೆ ಜುಲೈ 10ರಿಂದಲೇ ಫಲಾನುಭವಿಗಳಿಗೆ 5 ಕೆ.ಜಿ. ಅಕ್ಕಿ ಬದಲಿಗೆ ಪ್ರತಿ P.æಜಿ.ಗೆ 34 ರು.ನಂತೆ ಪ್ರತಿ ಫಲಾನುಭವಿಗೆ 170 ರು. ಹಣ ಪಾವತಿ ಮಾಡುತ್ತಿದ್ದೇವೆ. ಅಕ್ಕಿ ಸಿಕ್ಕಿದ ಬಳಿಕ ಹಣ ಕೊಡುವುದನ್ನು ನಿಲ್ಲಿಸಿ, ಅಕ್ಕಿ ವಿತರಣೆ ಮಾಡುತ್ತೇವೆ ಎಂದು ತಿಳಿಸಿದರು.
ಅಕ್ಕಿ ಸಿಗುವವರೆಗೂ ಹಣ- ಡಿಕೆಶಿ:
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನಮ್ಮ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಅದರ ಜೊತೆಗೆ ರಾಜಕೀಯ ಕೂಡ ನಡೆಯುತ್ತಿದೆ. ಈ ಯೋಜನೆಗೆ ಅಗತ್ಯವಿರುವ ಅಕ್ಕಿಯನ್ನು ಕೊಡುವ ಮೂಲಕ ಕೇಂದ್ರ ಸರ್ಕಾರ ಹೃದಯ ಶ್ರೀಮಂತಿಕೆ ಮೆರೆಯಬಹುದಿತ್ತು. ಆದರೆ ಅವರು ಮಾಡಲಿಲ್ಲ. ಈಗ ನಾವು ಕೊಟ್ಟಮಾತಿನಂತೆ ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದೇವೆ. 10 ಕೆ.ಜಿ. ಅಕ್ಕಿ ನೀಡುವವರೆಗೂ ಹೆಚ್ಚುವರಿ ಐದು ಕೆಜಿ ಅಕ್ಕಿಯ ಹಣವನ್ನು ಜನರಿಗೆ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು.
ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಜುಲೈ 1ಕ್ಕೆ ಅಕ್ಕಿ ಕೊಡಲು ಎಲ್ಲ ತಯಾರಿ ಮಾಡಿಕೊಂಡಿದ್ದೆವು. ಆಹಾರ ನಿಗಮದಲ್ಲಿ ಅಕ್ಕಿ ದಾಸ್ತಾನು ಇತ್ತು. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಅಕ್ಕಿ ಕೊಡಲು ಬಿಡಲಿಲ್ಲ. ಬಡವರ ಜೀವನದಲ್ಲಿ ರಾಜಕೀಯ ಮಾಡುವ ಕೆಲಸ ಮಾಡಿದೆ. ಅಕ್ಕಿ ತಡವಾದರೂ ಫಲಾನುಭವಿಗಳ ಖಾತೆಗೆ ಹಣವನ್ನು ಕೊಡುವ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ಜಾರಿ ಮಾಡಿದ್ದೇವೆ. ಜುಲೈ 11ಕ್ಕೆ ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ಯಾದಗಿರಿ, ಧಾರವಾಡಕ್ಕೆ ಹಣ ಸಂದಾಯವಾಗಲಿದೆ. ಈ ರೀತಿ ಪ್ರತಿ ದಿನ ನಾಲ್ಕೈದು ಜಿಲ್ಲೆಗಳ ಫಲಾನುಭವಿಗಳಿಗೆ ಒಂದೊಂದು ದಿನ ಹಣ ಸಂದಾಯವಾಗಲಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಗೆ ಮತ್ತೆರಡು ಷರತ್ತುಗಳು ಅನ್ವಯ: ನೀವು ಹಣ ಪಡೆಯಲು ಅರ್ಹರೇ..
ಕಾರ್ಯಕ್ರಮದಲ್ಲಿ ಸಚಿವರಾದ ಸಚಿವ ರಾಮಲಿಂಗಾರೆಡ್ಡಿ, ಕೆ.ಜೆ.ಜಾಜ್‌ರ್, ಶಿವರಾಜ್ ತಂಗಡಗಿ, ಜಮೀರ್ ಅಹಮದ್, ಬೈರತಿ ಸುರೇಶ್, ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಲಾಂಛನ ಬಿಡುಗಡೆ:
ಅನ್ನಭಾಗ್ಯ ಯೋಜನೆ ಅಭಿಯಾನದ ವಿಡಿಯೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅನ್ನಭಾಗ್ಯದ ಲಾಂಛನ ಮತ್ತು ಯೋಜನೆಯ ಮಾಹಿತಿ ಪತ್ರವನ್ನು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರು ಬಿಡುಗಡೆ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ