ರಾಹುಲ್‌ ಗಾಂಧಿಯನ್ನು ಬಂಧಿಸಿದರೆ ಉಗ್ರ ಹೋರಾಟ: ಡಿ.ಕೆ.ಶಿವಕುಮಾರ್‌

By Govindaraj S  |  First Published Jun 14, 2022, 5:00 AM IST

ಇನ್ನು ಮುಂದೆಯೂ ಕಾಂಗ್ರೆಸ್‌ ನಾಯಕರಿಗೆ ಜಾರಿ ನಿರ್ದೇಶನಾಲಯ (ಇ.ಡಿ.)ದವರು ಸಾಕಷ್ಟು ತೊಂದರೆ ಕೊಡಲಿದ್ದಾರೆ. ಇದು ನಮಗೆ ಗೊತ್ತು ಹಾಗೂ ಅದನ್ನು ಎದುರಿಸಲು ಸಿದ್ಧರಿದ್ದೇವೆ. ಹಾಗಂತ ರಾಹುಲ್‌ ಗಾಂಧಿ ಅವರನ್ನು ಬಂಧಿಸಲು ಮುಂದಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ. 


ಬೆಂಗಳೂರು (ಜೂ.14): ಇನ್ನು ಮುಂದೆಯೂ ಕಾಂಗ್ರೆಸ್‌ ನಾಯಕರಿಗೆ ಜಾರಿ ನಿರ್ದೇಶನಾಲಯ (ಇ.ಡಿ.)ದವರು ಸಾಕಷ್ಟು ತೊಂದರೆ ಕೊಡಲಿದ್ದಾರೆ. ಇದು ನಮಗೆ ಗೊತ್ತು ಹಾಗೂ ಅದನ್ನು ಎದುರಿಸಲು ಸಿದ್ಧರಿದ್ದೇವೆ. ಹಾಗಂತ ರಾಹುಲ್‌ ಗಾಂಧಿ ಅವರನ್ನು ಬಂಧಿಸಲು ಮುಂದಾದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ. ಏಕೆಂದರೆ, ಕಾಂಗ್ರೆಸ್ಸಿಗರು ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಜಾರಿ ನಿರ್ದೇಶನಾಲಯದಿಂದ ಪಕ್ಷದ ರಾಷ್ಟ್ರೀಯ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ನೋಟಿಸ್‌ ನೀಡಿರುವುದನ್ನು ವಿರೋಧಿಸಿ ನಗರದಲ್ಲಿ ಸೋಮವಾರ ಕರೆ ನೀಡಿದ್ದ ಬೃಹತ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಅಣತಿಯಂತೆ ಇ.ಡಿ.ಯವರು ನಮ್ಮ ಪಕ್ಷದ ನಾಯಕರಿಗೆ ಸಾಕಷ್ಟುತೊಂದರೆ ಕೊಡುತ್ತಿದ್ದಾರೆ. ಮುಂದೆಯೂ ಕೊಡುತ್ತಾರೆ ಎಂಬುದರ ಅರಿವು ನಮಗಿದೆ. ಇದನ್ನೆಲ್ಲ ಎದುರಿಸಲು ನಾವು ಸಿದ್ಧರಿದ್ದೇವೆ ಎಂದರು.

Tap to resize

Latest Videos

Rajya Sabha Election: ನಾವು ಯಾರನ್ನೂ ಹೈಜಾಕ್‌ ಮಾಡಿಲ್ಲ: ಡಿಕೆಶಿ

ಸ್ವಾತಂತ್ರ್ಯ ಹೋರಾಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಪ್ರಾರಂಭಿಸಲಾಗಿತ್ತು. ಅದು ಹೋರಾಟದ ಧ್ವನಿಯಾಗಿ ಕೆಲಸ ಮಾಡಿತ್ತು. ಪತ್ರಿಕೆಯನ್ನು ಒಂದು ಸಂಸ್ಥೆ ಮುಂದುವರಿಸಿಕೊಂಡು ಬಂದಿದೆ. ಕಾಂಗ್ರೆಸ್‌ನಿಂದಲೇ 90 ಕೋಟಿ ರು. ದೇಣಿಗೆ ನೀಡಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ಸಂಸ್ಥೆಯ ಹಣಕಾಸು ವ್ಯವಹಾರ ಪರಿಶೀಲನೆ ಮಾಡಿದ್ದು ಸರಿ ಇದೆ ಎಂದು ಹೇಳಿದ್ದಾರೆ. ಆದರೂ ಇ.ಡಿ.ಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಬ್ದುಲ್‌ ಕಲಾಂ ಅವರು ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎಗೆ ಬಹುಮತ ಬಂದಿತ್ತು. ಆಗ ಸೋನಿಯಾ ಗಾಂಧಿ ಅವರು ಪ್ರಧಾನಿ ಆಗಬಹುದಿತ್ತು. ಆದರೆ ಆರ್ಥಿಕ ತಜ್ಞ ಮನಮೋಹನ್‌ ಸಿಂಗ್‌ ಅವರನ್ನು ಪ್ರಧಾನಿ ಮಾಡಿದರು. ರಾಹುಲ್‌ ಗಾಂಧಿಯವರೂ ಪ್ರಧಾನಿ, ಉಪ ಪ್ರಧಾನಿ, ಕೇಂದ್ರ ಸಚಿವರಾಗಬಹುದಿತ್ತು. ಆದರೂ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಇಂತಹ ವ್ಯಕ್ತಿಗಳಿಗೆ ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ಕಿರುಕುಳ ನೀಡುತ್ತಿದ್ದಾರ ಎಂದು ಆರೋಪಿಸಿದರು.

Rajya Sabha Election: ಜೆಡಿಎಸ್‌ ಜತೆ ಖರ್ಗೆ ರಾಜ್ಯಸಭೆ ಸಂಧಾನ ಚರ್ಚೆ ನಡೆಸಿಲ್ಲ: ಡಿಕೆಶಿ

ಬಿಜೆಪಿಯ ಈ ಕಿರುಕುಳದ ವಿರುದ್ಧ ಈಗ ನಡೆದಿರುವುದು ಐತಿಹಾಸಿಕ ಹೋರಾಟ. ಪೊಲೀಸರು ಅಡೆತಡೆಯನ್ನು ದಾಟಿ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಕಾರ್ಯಕರ್ತರು ಇಲ್ಲಿಗೆ ಆಗಮಿಸಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಇಡಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟ ನಮ್ಮನ್ನು ಬಂಧಿಸಲಾಗಿದೆ. ಇದು ಅನ್ಯಾಯ. ನಮ್ಮ ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸಲಾಗಿದೆ. ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವವರೆಗೂ ಹೋರಾಟ ಮುಂದುವರೆಸಲಾಗುವುದು ಎಂದು ತಿಳಿಸಿದರು.

click me!