ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆ ಇಳಿಕೆಯಿಂದಾಗಿ ಹೊಸ ಪ್ರಕರಣಗಳು ಕೂಡಾ ಸತತ ಎರಡನೇ ದಿನ ಇಳಿಮುಖವಾಗಿವೆ. ಆದರೆ, ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.2.5ಕ್ಕೆ ಹೆಚ್ಚಿದೆ.
ಬೆಂಗಳೂರು (ಜೂ.14): ರಾಜ್ಯದಲ್ಲಿ ಕೊರೋನಾ ಸೋಂಕು ಪರೀಕ್ಷೆ ಇಳಿಕೆಯಿಂದಾಗಿ ಹೊಸ ಪ್ರಕರಣಗಳು ಕೂಡಾ ಸತತ ಎರಡನೇ ದಿನ ಇಳಿಮುಖವಾಗಿವೆ. ಆದರೆ, ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.2.5ಕ್ಕೆ ಹೆಚ್ಚಿದೆ. ಸೋಮವಾರ 415 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 378 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 3688 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 16 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ 2.56ರಷ್ಟು ದಾಖಲಾಗಿದೆ.
ಭಾನುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 5 ಸಾವಿರ ಕಡಿಮೆಯಾಗಿದೆ. ಹೀಗಾಗಿ, ಹೊಸ ಪ್ರಕರಣಗಳು ಕೂಡಾ 48 ಇಳಿಕೆಯಾಗಿವೆ. (ಭಾನುವಾರ 463 ಪ್ರಕರಣಗಳು, ಸಾವು ಶೂನ್ಯ). ಹೊಸ ಪ್ರಕರಣಗಳು ಬೆಂಗಳೂರಿನಲ್ಲಿ 400, ದಕ್ಷಿಣ ಕನ್ನಡ 5, ಕಲಬುರಗಿ 3, ಬಳ್ಳಾರಿ 2, ಬೆಳಗಾವಿ, ಧಾರವಾಡ, ಕೋಲಾರ, ಉತ್ತರ ಕನ್ನಡ ಹಾಗೂ ಶಿವಮೊಗ್ಗದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 21 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.
undefined
Covid Crisis: 5 ದಿನದ ಬಳಿಕ ಕೋವಿಡ್ ತುಸು ಇಳಿಕೆ: ಕರ್ನಾಟಕದಲ್ಲಿ 463 ಕೇಸು
ಸೋಂಕು ಪರೀಕ್ಷೆಗಳು 27 ಸಾವಿರದವರೆಗೆ ನಡೆಯುತ್ತಿದ್ದ ಕಾರಣ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿತ್ತು. ಆದರೆ ಕಳೆದ ಎರಡು ದಿನದಿಂದ ಪರೀಕ್ಷೆ ಕಡಿಮೆಯಾದ ಕಾರಣ ಸೋಂಕಿನ ಪ್ರಕರಣ ಸಹ ಇಳಿಕೆಯಾಗಿದೆ. ಕಳೆದ ಎಂಟು ದಿನಗಳಿಂದ ಸೋಂಕಿತರ ಸಾವು ವರದಿಯಾಗಿಲ್ಲ. ರಾಜ್ಯದಲ್ಲಿ ಈವರೆಗೆ 39.5 ಲಕ್ಷ ಮಂದಿಗೆ ಸೊಂಕು ತಗುಲಿದೆ. 39.1 ಲಕ್ಷ ಮಂದಿ ಗುಣಮುಖರಾಗಿದ್ದು, 40,066 ಮಂದಿ ಸಾವಿಗೀಡಾಗಿದ್ದಾರೆ.
ಮೂರನೇ ಡೋಸ್ ಪಡೆದುಕೊಳ್ಳಿ: ಮನೆ ಮನೆಗೆ ಹೋಗಿ ಲಸಿಕೆ ಹಾಕುವ ಯೋಜನೆ ಇದೆ. ಆದರೆ, ಲಸಿಕೆ ಕುರಿತು ಯಾರಿಗೂ ಒತ್ತಾಯ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಇದರಿಂದ ಲಸಿಕೆ ಅಭಿಯಾನ ತೀವ್ರಗೊಳಿಸಲು ಸಾಧ್ಯವಾಗುತ್ತಿಲ್ಲ. ಇತರೆ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರು ಲಸಿಕೆಯ ಮೂರನೇ ಡೋಸ್ ಪಡೆದುಕೊಳ್ಳಬೇಕು. ಅರ್ಹ ಮಕ್ಕಳು ಕೂಡ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ವಂಶವಾಹಿ ಪರೀಕ್ಷೆಗೆ ಪ್ರಯೋಗಾಲಯ ಆರಂಭ: ಕೊರೋನಾ ವೈರಸ್‌ನ ರೂಪಾಂತರಿಗಳ ಪತ್ತೆಗೆ ವಂಶವಾಹಿ ಪರೀಕ್ಷೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ವಂಶವಾಹಿ ಪರೀಕ್ಷೆ ಪ್ರಯೋಗಾಲಯ ಆರಂಭಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೊಸ ರೂಪಾಂತರಿ ತಳಿಗಳ ಪತ್ತೆಗೆ ಲ್ಯಾಬ್‌ನಿಂದ ಸಹಾಯವಾಗುತ್ತದೆ. ಉಳಿದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ ಎಂದು ಸುಧಾಕರ್ ವಿವರಿಸಿದರು.
Covid Crisis: ಬೆಂಗಳೂರಿನಲ್ಲಿ ಕೊರೋನಾ ಸ್ಫೋಟ: 500 ಗಡಿಗೆ ಸೋಂಕಿನ ಸಂಖ್ಯೆ
ನಮ್ಮ ಕ್ಲಿನಿಕ್ ಆರಂಭಿಸಲು ಸೂಚನೆ: ತಾಂತ್ರಿಕ ಸಮಿತಿ ಸಭೆ ಬಳಿಕ ಆರೋಗ್ಯ ಇಲಾಖೆಯ ಪರಿಶೀಲನಾ ಸಭೆ ನಡೆಸಿದ್ದು, ನಮ್ಮ ಕ್ಲಿನಿಕ್‌ಗಳ ಆರಂಭಕ್ಕೆ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿದ್ಧತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲು ಮಂಗಳವಾರ ಮೈಸೂರಿಗೆ ಭೇಟಿ ನೀಡುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.