
ವಿಧಾನ ಪರಿಷತ್ (ಜು.11) : ಕಳೆದ ಸಾಲಿನಲ್ಲಿ ಕೆಐಎಡಿಬಿ ಧಾರವಾಡ ಕಚೇರಿ ವ್ಯಾಪ್ತಿಯಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನುಗಳಿಗೆ ನಕಲಿ ದಾಕಲೆ ಸೃಷ್ಟಿಸಿ ಎರಡು ಬಾರಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡಿರುವ ಸಂಬಂಧ ಈಗಾಗಲೇ ನಾಲ್ವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.
ಜೆಡಿಎಸ್‌ನ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಜಮೀನಿನ ಮೂಲ ಮಾಲೀಕರು ಸುಮಾರು 23 ಲಕ್ಷ ರು. ಪರಿಹಾರ ಪಡೆದುಕೊಂಡಿದ್ದಾರೆ. ಇವರು ಎರಡನೇ ಬಾರಿ ಪರಿಹಾರ ಪಡೆದುಕೊಂಡಿಲ್ಲ. ಬದಲಾಗಿ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರು ಪರಿಹಾರ ಪಡೆದುಕೊಂಡಿದ್ದಾರೆ ಎಂದರು.
ಜೈನ ಮುನಿ ಹಂತಕರಿಗೆ ಕಠಿಣ ಶಿಕ್ಷೆಯಾಗಲಿ: ಸಚಿವ ಎಂ.ಬಿ.ಪಾಟೀಲ್
ಧಾರವಾಡದ ಕೆಲಗೇರಿ, ಮಮ್ಮಿಗಟ್ಟಿಮತ್ತು ಕೋಟೂರು ಗ್ರಾಮಗಳಲ್ಲಿ ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡ ಜಮೀನುಗಳ ಪೈಕಿ ಕೆಲವು ಜಮೀನುಗಳಿಗೆ 19,99,55,000 ರು. ಪರಿಹಾರದ ಹಣವನ್ನು ಎರಡು ಬಾರಿ ಅಕ್ರಮವಾಗಿ ಪಾವತಿಸಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ವಿಶೇಷ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತಂಡ ರಚಿಸಲಾಗಿತ್ತು. ಈ ತಂಡ ನೀಡಿದ ವರದಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಹಾರ ಪಾವತಿಸುವಲ್ಲಿ ಅಗತ್ಯ ನಿಯಮ ಪಾಲಿಸದೇ ವಂಚಿಸಿ ಆರ್ಥಿಕ ನಷ್ಟಉಂಟು ಮಾಡಿರುವುದಾಗಿ ತಿಳಿಸಲಾಗಿತ್ತು.
ಈ ವರದಿ ಅನ್ವಯ ಧಾರವಾಡ ಕೆಐಎಡಿಬಿ ವಲಯ ಕಚೇರಿಯ ವಿಶೇಷ ಭೂಸ್ವಾಧಿನಾಕಾರಿ (ನಿವೃತ್ತ) ವಿ.ಡಿ. ಸಜ್ಜನ್, ಧಾರವಾಡ ಕಚೇರಿಯ ವ್ಯವಸ್ಥಾಪಕ ಎಂ.ಕೆ. ಶಿಂಪಿ, ದಾವಣಗೆರೆ ವಲಯ ಕಚೇರಿಯ ಹಿರಿಯ ಸಹಾಯಕ ಶಂಕರ್ ವೈ. ತಳವಾರ್ ಹಾಗೂ ಧಾರವಾಡ ಕಚೇರಿಯ ನಿವೃತ್ತ ಶಿರಸ್ತೇದಾರ ಹೇಮಚಂದ್ರ ಬ. ಚಿಂತಾಮಣಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಪ್ರಸ್ತುತ ನಾಲ್ವರು ನ್ಯಾಯಾಂಗ ಬಂಧನದಲ್ಲಿದ್ದು, ಸಿಐಡಿ ತನಿಖೆ ನಡೆಯುತ್ತಿದೆ ಎಂದು ಸಚಿವರು ವಿವರಿಸಿದರು.
ಹೆಚ್‌ಡಿಕೆ ಪೆನ್‌ಡ್ರೈವ್ ಸತ್ಯಾಸತ್ಯತೆ ತನಿಖೆ ಮಾಡ್ತೇವೆ: ಸಚಿವ ಎಂ ಬಿ ಪಾಟೀಲ್
ಸುಮಾರು 20 ಕೋಟಿ ರು. ಪರಿಹಾರ ಪಾವತಿ ಮಾಡುವಂತೆ ಒಪ್ಪಿಗೆ ನೀಡಿದ ಆಡಿಟ್ ವಿಭಾಗದ ಅಧಿಕಾರಿಗಳು ಶಾಮೀಲು ಆಗಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಲಾಗುವುದು. ಒಂದು ವೇಳೆ ಶಾಮೀಲು ಆಗಿರುವುದು ಕಂಡು ಬಂದಲ್ಲಿ ಖಂಡಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ