ನಾಗಮಂಗಲ ಸರ್ಕಾರಿ ಆಸ್ಪತ್ರೆ: ಓಳ ರೋಗಿಗಳಿಗೆ ಕೊಡುವ ಮುದ್ದೆ ಸಾಂಬಾರಿಗೆ 92ರೂ , ದರ ಕೇಳಿ ಡಿಸಿ ಶಾಕ್!

By Kannadaprabha News  |  First Published Jul 11, 2023, 11:23 PM IST

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಒಂದು ಮುದ್ದೆ ಸಾಂಬರ್‌ ಅಥವಾ ಒಂದು ಪ್ಲೇಟ್‌ ಅನ್ನ ಸಾಂಬರ್‌ಗೆ 92 ರು. ಬಿಲ್‌ ಮಾಡುತ್ತಿರುವುದನ್ನು ಕಂಡು ಅಚ್ಚರಿಗೊಂಡ ಜಿಲ್ಲಾಧಿಕಾರಿ ಡಾ.ಕುಮಾರ್‌ ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.


ನಾಗಮಂಗಲ (ಜು.11) :  ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಒಂದು ಮುದ್ದೆ ಸಾಂಬರ್‌ ಅಥವಾ ಒಂದು ಪ್ಲೇಟ್‌ ಅನ್ನ ಸಾಂಬರ್‌ಗೆ 92 ರು. ಬಿಲ್‌ ಮಾಡುತ್ತಿರುವುದನ್ನು ಕಂಡು ಅಚ್ಚರಿಗೊಂಡ ಜಿಲ್ಲಾಧಿಕಾರಿ ಡಾ.ಕುಮಾರ್‌ ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್‌ ಭೇಟಿ ಕೊಟ್ಟಜಿಲ್ಲಾಧಿಕಾರಿಗಳು ಆಸ್ಪತ್ರೆಯ ಮೂಲಸೌಕರ್ಯ ಹಾಗೂ ಕುಂದು ಕೊರತೆಗಳ ಬಗ್ಗೆ ಹೊರರೋಗಿಗಳು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದ ವೇಳೆ ಆಸ್ಪತ್ರೆಯ ಒಳರೋಗಿಗಳಿಗೆ ನೀಡುತ್ತಿರುವ ಊಟದ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.

Latest Videos

undefined

ರೋಗಿಗಳಿಗೆ ಹೊರಗಿನಿಂದ ಔಷಧಿ ತರಲು ಚೀಟಿ ಕೊಡಬೇಡಿ, ಉಪಾಹಾರ, ಔಷಧಿ ಇಲ್ಲೇ ಕೊಡಬೇಕು: ಸಚಿವ ವೈದ್ಯ ಸೂಚನೆ

ಬಳಿಕ ಆಸ್ಪತ್ರೆಯ ವಾರ್ಡ್‌ಗಳಿಗೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ಒಳರೋಗಿಗಳ ಆರೋಗ್ಯ ವಿಚಾರಿಸಿದ ಡಿಸಿ, ಆಡಳಿತದ ಖರ್ಚುವೆಚ್ಚಗಳ ಕಡತ ಪರಿಶೀಲನೆ ನಡೆಸಲು ಮುಂದಾದ ವೇಳೆ ಒಳರೋಗಿಗಳಿಗೆ ನೀಡುವ ಒಂದು ಮುದ್ದೆ ಸಾಂಬರ್‌ ಅಥವಾ ಒಂದು ಪ್ಲೇಟ್‌ ಅನ್ನ ಸಾಂಬರ್‌ಗೆ 92 ರು. ಒಂದು ಬಾಳೆ ಹಣ್ಣಿಗೆ 8 ರು. ಹಾಗೂ ಒಂದು ಮೊಟ್ಟೆಗೆ 10ರು. ದುಬಾರಿ ವೆಚ್ಚದ ಬಿಲ್‌ಕಂಡು ಗರಂ ಆದರು.

ಹೋಟೆಲ್‌ಗಳಲ್ಲಿಯೇ ಕನಿಷ್ಠ 40 ರಿಂದ 60 ರು.ಗೆ ಮುದ್ದೆ, ಚಪಾತಿ, ಅನ್ನ ಸಾಂಬರ್‌ನ ಒಳ್ಳೆಯ ಊಟ ಸಿಗುತ್ತದೆ. ಆಸ್ಪತ್ರೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟಿನ್‌ನಲ್ಲಿ 10 ರು.ಗೆ ಅನ್ನ ಸಾಂಬರ್‌ ನೀಡಲಾಗುತ್ತಿದೆ. ಆದರೆ ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಅನ್ನ-ಸಾಂಬರ್‌ ಅಥವಾ ಒಂದು ಮುದ್ದೆ-ಸಾಂಬರ್‌ಗೆ 92ರು. ಏಕೆ ಕೊಡುತ್ತಿರುವಿರಿ. ನಾನೂ ಕೂಡ ಮುದ್ದೆ ತಿನ್ನುವವನೆ. ಒಂದು ಮುದ್ದೆ ತಯಾರಿಸಲು ಕನಿಷ್ಠ 10ರಿಂದ 15ರು. ಖರ್ಚಾಗುತ್ತದೆ. ಆದರೆ ಇಲ್ಲಿ 92 ರು. ನಿಗದಿಪಡಿಸಿರುವುದಾದರೂ ಏಕೆ? ಈ ಊಟದ ಟೆಂಡರ್‌ ಅನುಮೋದಿಸಿದವರು ಯಾರೆಂದು ಸ್ಥಳದಲ್ಲಿದ್ದ ಆಸ್ಪತ್ರೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಊಟದ ಟೆಂಡರ್‌ನ ಅವಧಿ ಮಾಚ್‌ರ್‍ಗೆ ಮುಕ್ತಾಯವಾಗಿದ್ದರೂ ಸಹ ಈವರೆಗೂ ಟೆಂಡರ್‌ ಕರೆದಿಲ್ಲವೇಕೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ವೇಳೆ ತಡಬಡಾಯಿಸಿದ ಗುಮಾಸ್ತ ಮೋಹನ್‌ ಇಲಾಖೆಯ ಮೇಲಾಧಿಕಾರಿಗಳಿಂದ ಅನುಮತಿ ಬಂದಿಲ್ಲ. ಹಾಗಾಗಿ ಟೆಂಡರ್‌ ಕರೆದಿಲ್ಲ ಎಂದು ಹಾರಿಕೆಯ ಉತ್ತರ ನೀಡಿದರು.

ಕಡತಗಳ ಪರಿಶೀಲನೆ ನಡೆಸಿದ ಬಳಿಕ ಒಳರೋಗಿಗಳ ಊಟದ ದುಬಾರಿ ವೆಚ್ಚದ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಿ ಶೀಘ್ರದಲ್ಲಿ ವರದಿ ನೀಡುವಂತೆ ಸ್ಥಳದಲ್ಲಿದ್ದ ತಹಸೀಲ್ದಾರ್‌ ನಯೀಂಉನ್ನೀಸಾ ಅವರಿಗೆ ತಾಕೀತು ಮಾಡಿದರು. ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ, ವೈದ್ಯೆ ಡಾ.ಜ್ಯೋತಿಲಕ್ಷ್ಮಿ ಇದ್ದರು.

ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಊಟದ ಟೆಂಡರ್‌ ವಿಚಾರದಲ್ಲಿ ಆಸ್ಪತ್ರೆಯ ಗುಮಾಸ್ತ ಮೋಹನ್‌ ಅವರ ಕೈವಾಡವಿದೆ. ಕಳೆದ ಹತ್ತಾರು ವರ್ಷಗಳಿಂದ ತಮ್ಮ ಸಂಬಂಧಿಕರೊಬ್ಬರಿಗೆ ಊಟದ ಟೆಂಡರ್‌ ಕೊಡಿಸುತ್ತಿರುವ ಮೋಹನ್‌ ಈ ಟೆಂಡರ್‌ ಬೇರೆಯವರಿಗೆ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಒಳರೋಗಿಗಳಿಗೆ ನೀಡುವ ಊಟದ ಗುಣಮಟ್ಟವೂ ಸಹ ಹೇಳಿಕೊಳ್ಳುವಂತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಇಷ್ಟವಿದ್ದರೆ ಊಟ ಮಾಡಿ ಕಷ್ಟವಾದರೆ ಬಿಡಿ. ನಾವು ಕೊಡುವುದೇ ಹೀಗೆ ಎಂದು ಊಟ ಪೂರೈಸುವ ವ್ಯಕ್ತಿ ಧಮಕಿ ಹಾಕುತ್ತಾನೆಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಮೊಟ್ಟೆಗೆ 10 ರು., ಬಾಳೆಹಣ್ಣಿಗೆ 8 ರು.

ಅಂಗನವಾಡಿಗೆ ಪೂರೈಸುವ ಒಂದು ಮೊಟ್ಟೆಗೆ ನಾವು 6 ರು. ಕೊಡುತ್ತಿದ್ದೇವೆ. 40 ರು.ಗೆ ಒಂದು ಕೆ.ಜಿ.ಬಾಳೆಹಣ್ಣು ಸಿಗುತ್ತದೆ. ಆದರೆ ಇಲ್ಲಿ ರೋಗಿಗಳಿಗೆ ನೀಡುವ ಒಂದು ಮೊಟ್ಟೆಗೆ 10 ರು. ಮತ್ತು ಒಂದು ಬಾಳೆ ಹಣ್ಣಿಗೆ 8 ರು. ನಿಗದಿಪಡಿಸಲಾಗಿದೆ ಎಂದರೆ ಏನರ್ಥ. 12ಲಕ್ಷ ರು.ಗಳ ಕೊಟೇಷನ್‌ ಏಕೆ. ಇ-ಟೆಂಡರ್‌ ಏಕೆ ಮಾಡಿಲ್ಲ. ಇದು ತಪ್ಪು ಲೆಕ್ಕಾಚಾರವಾಗಿದೆ ಎಂದು ಜಿಲ್ಲಾಧಿಕಾರಿಗಳು ಗರಂ ಆದರು.

ಕಲಬುರಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ ಕ್ಯಾನ್ಸರ್‌ ರೋಗಿ ಸಾವು?

ನಾಗಮಂಗಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ನೀಡುವ ಊಟದ ದುಬಾರಿ ವೆಚ್ಚದ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಿ ಸೂಕ್ತ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಬುಧವಾರದಿಂದ ದಾಖಲಾತಿಗಳ ಪರಿಶೀಲನೆ ನಡೆಸಲಾಗುವುದು. ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ತನಿಖೆ ನಡೆಸಲು ಕನಿಷ್ಠ ಮೂರು ದಿನಗಳು ಬೇಕಾಗುತ್ತದೆ. ಶೀಘ್ರದಲ್ಲಿಯೇ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು.

- ನಯೀಂಉನ್ನೀಸಾ, ತಹಶೀಲ್ದಾರ್‌, ನಾಗಮಂಗಲ.

click me!