ಮಂಡ್ಯ: ಮೃತವ್ಯಕ್ತಿ ಹೆಸರಲ್ಲಿ ಆಧಾರ್‌ ಸೃಷ್ಟಿ, ಕೋಟ್ಯಂತರ ರೂ.ಮೌಲ್ಯದ ಸರ್ಕಾರಿ ಜಮೀನು ಪರಭಾರೆ!

By Kannadaprabha NewsFirst Published Jul 11, 2023, 11:45 PM IST
Highlights

ಮೃತ ವ್ಯಕ್ತಿಯ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿ ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿರುವ ಸರ್ವೆ ನಂ. 174/8ರಲ್ಲಿರುವ ಸರ್ಕಾರಿ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿರುವುದು ಇದೀಗ ತನಿಖೆಯಿಂದ ದೃಢಪಟ್ಟಿದೆ.

ಮಂಡ್ಯ (ಜು.11) ಮೃತ ವ್ಯಕ್ತಿಯ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿಸಿ ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿರುವ ಸರ್ವೆ ನಂ. 174/8ರಲ್ಲಿರುವ ಸರ್ಕಾರಿ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿರುವುದು ಇದೀಗ ತನಿಖೆಯಿಂದ ದೃಢಪಟ್ಟಿದೆ.

ಸಾಮಾಜಿಕ ಹೋರಾಟಗಾರ ಕೆ.ಆರ್‌.ರವೀಂದ್ರ ಅವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಮಂಡ್ಯ ಉಪವಿಭಾಗಾಧಿಕಾರಿ ಹೆಚ್‌.ಎಸ್‌.ಕೀರ್ತನಾ ಅವರು ತನಿಖೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ವರದಿಯಿಂದ ಬಹಿರಂಗಗೊಂಡಿದೆ.

ಮಂಡ್ಯದ ಸರ್ವೆ ನಂ. 174/8ರ 3 ಗುಂಟೆ ಜಮೀನು ಮಂಡ್ಯ ನಗರದ ವಿಸ್ತರಣೆಗಾಗಿ ಭೂಸ್ವಾಧಿನಗೊಂಡಿರುವ ಜಮೀನಾಗಿರುತ್ತದೆ. ನಗರಸಭೆ ವ್ಯಾಪ್ತಿಗೊಳಪಡುವ ಈ ಜಮೀನು ಸ್ವಾಧೀನಗೊಂಡ ನಂತರ ಕಾಲಮಿತಿಯೊಳಗೆ ಬದಲಾವಣೆಯಾಗದ ಪಹಣಿಯ ನಮೂದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಪಹಣಿಯಲ್ಲಿ ದಾಖಲಾಗಿರುವ ವ್ಯಕ್ತಿಯ ಹೆಸರಿನ ಬೇರೊಬ್ಬ ವ್ಯಕ್ತಿಯಿಂದ ಕ್ರಯ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ನಾಗಮಂಗಲ ಸರ್ಕಾರಿ ಆಸ್ಪತ್ರೆ: ಓಳ ರೋಗಿಗಳಿಗೆ ಕೊಡುವ ಮುದ್ದೆ ಸಾಂಬಾರಿಗೆ 92ರೂ , ದರ ಕೇಳಿ ಡಿಸಿ ಶಾಕ್!

ಹಿಂದೆ ಮಂಡ್ಯ ತಹಸೀಲ್ದಾರ್‌ ಆಗಿದ್ದ ಕುಂಞ ಅಹಮದ್‌ ಅವರು ನಗರದ ಹೃದಯ ಭಾಗದಲ್ಲಿರುವ ಬಂದೀಗೌಡ ಬಡಾವಣೆಯ ಕೋಟ್ಯಂತರ ರು. ಬೆಲೆಬಾಳುವ ಜಮೀನಿಗೆ ಸಂಬಂಧಿಸಿದಂತೆ ರಾಜಸ್ವ ನಿರೀಕ್ಷಕರ ವರದಿಯನ್ನು ನಿರ್ಲಕ್ಷಿಸಿ ಸ್ಥಳ ಹಾಗೂ ದಾಖಲೆಗಳನ್ನು ಪರಿಶೀಲಿಸದೆ ಮಾಡಿರುವ ಆದೇಶ ಕಾನೂನುಬಾಹೀರವಾಗಿರುತ್ತದೆ ಎಂದು ಉಪವಿಭಾಗಾಧಿಕಾರಿ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಏನಾಗಿತ್ತು?:

ಮಂಡ್ಯದ ಬಂದೀಗೌಡ ಬಡಾವಣೆಯ ಸರ್ವೆ ನಂ.174/8ರಲ್ಲಿ 3 ಗುಂಟೆ ಜಮೀನಿದ್ದು, 1962-63ನೇ ಸಾಲಿನ ಫಸಲು ಪಹಣಿಯಂತೆ ಪಿ.ಶ್ರೀನಿವಾಸಯ್ಯ ಎಂಬುವರ ಹೆಸರಿನಲ್ಲಿದ್ದು, ಅವರ ಹೆಸರಿನಲ್ಲೇ ಸರ್ಕಾರಕ್ಕೆ ಭೂಸ್ವಾಧೀನವಾಗಿದೆ. ಅಲ್ಲದೆ, ಸರ್ವೆ ನಂ.174/3ರಲ್ಲಿ ಮಂಚ ಬಿನ್‌ ಅಜ್ಜಹಳ್ಳಿ ಹೆಸರಿನಲ್ಲಿ 14 ಗುಂಟೆ ಜಮೀನಿದ್ದು, ಅದೂ ಸರ್ಕಾರದ ಜಾಗವಾಗಿದೆ. ವಾಸ್ತವದಲ್ಲಿ ಸರ್ವೆ ನಂ.174ರ ಸಂಪೂರ್ಣ ಜಮೀನೆಲ್ಲವೂ ಸರ್ಕಾರಕ್ಕೆ ಸ್ವಾಧೀನವಾಗಿದೆ. ಈ ಭೂ ಸ್ವಾಧೀನವಾಗಿರುವ 174/9ರ 3 ಗುಂಟೆ ಜಮೀನು ಪಿ.ಶ್ರೀನಿವಾಸಯ್ಯನವರ ಹೆಸರಿನಲ್ಲಿದ್ದರೂ ಕೂಡ ಮಂಚ ಬಿನ್‌ ಅಜ್ಜಹಳ್ಳಿ ಹೆಸರಿಗೆ ಆರ್‌ಟಿಸಿ ತಿದ್ದಿರುವುದು, ಮಂಚ ಎಂಬಾತನ ಹೆಸರಿನಲ್ಲೇ ನಕಲಿ ಆಧಾರ್‌ ಸೃಷ್ಟಿಸಿರುವುದು ದಾಖಲೆಗಳಿಂದ ದೃಢಪಟ್ಟಿದೆ. 1938ರ ದಾಖಲೆಗಳಲ್ಲಿ ನಮೂದಾಗಿರುವ ಹೆಸರಿನ ವ್ಯಕ್ತಿ ಪ್ರಸ್ತುತ ಯಡವನಹಳ್ಳಿ ಪಿ.ಕೃಷ್ಣೇಗೌಡರ ಹೆಸರಿಗೆ ಕ್ರಯ ಮಾಡಿರುವುದು ಸಂಶಯಾಸ್ಪದವಾಗಿದ್ದು, ರಾಜಸ್ವ ನಿರೀಕ್ಷಕರ ಮ್ಯುಟೇಷನ್‌ ತಿರಸ್ಕಾರದ ಕ್ರಮ ಸರಿಯಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ಕಾರಿ ಜಾಗ ಅಕ್ರಮ ಖಾತೆ : ಎಸಿ ವರದಿಯಿಂದ ದೃಢ - ಕ್ರಯ ಪಡೆದವರಿಗೆ ಜಮೀನು ಎಲ್ಲಿದೆ ಎಂಬುದೇ ಗೊತ್ತಿಲ್ಲ

ಮಂಡ್ಯ:  ಮಂಡ್ಯ ತಾಲೂಕು ಕಸಬಾ ಹೋಬಳಿ ಮಂಡ್ಯದ ಬಂದೀಗೌಡ ಬಡಾವಣೆಯಲ್ಲಿರುವ ಸರ್ವೆ ನಂ. 174/14ರ 8 ಗುಂಟೆ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿರುವ ಮತ್ತೊಂದು ಪ್ರಕರಣವೂ ಮಂಡ್ಯ ಉಪವಿಭಾಗಾಧಿಕಾರಿ ನಡೆಸಿದ ತನಿಖೆಯಿಂದ ದೃಢಪಟ್ಟಿದೆ.

1968-69ರ ಫಸಲು ಪಹಣಿಯಂತೆ ಸರ್ವೆ ನಂ. 174/14ರ 8 ಗುಂಟೆ ಜಮೀನು ಪಿ.ಶ್ರೀನಿವಾಸಯ್ಯ ಹೆಸರಿನಲ್ಲಿ ದಾಖಲಾಗಿದ್ದು, ನಂತರ ಪಿ.ಸಿ.ಶ್ರೀನಿವಾಸಯ್ಯ ಮತ್ತು ಬಿ.ಎಂ.ಸಿದ್ದೇಗೌಡರ ಹೆಸರಿನಲ್ಲಿ ಜಂಟಿಯಾಗಿ ದಾಖಲಿಸಲಾಗಿದೆ. 1976-77ರ ಕೈಬರರಹದ ಪಹಣಿಯಲ್ಲಿ ಸರ್ಕಾರಿ ಎಂದು ದಾಖಲಾಗಿರುತ್ತದೆ. 1990-91ರಲ್ಲಿ ಜಂಟಿ ಹೆಸರಿನಲ್ಲಿದ್ದ ಖಾತೆಯನ್ನು ಪಾಟೀಷನ್‌ ಮೇರೆಗೆ ಬಿ.ಎಂ.ಸಿದ್ದೇಗೌಡರ ಹೆಸರಿಗೆ ಖಾತೆ ಮಾಡಿದ್ದು ನಂತರದ ಕೈಬರಹದ ಪಹಣಿಯಲ್ಲಿ ಸರ್ಕಾರ ಎಂಬುದನ್ನು ತೆಗೆದುಹಾಕಿ ಬಿ.ಎಂ.ಸಿದ್ದೇಗೌಡರ ಹೆಸರಿನಲ್ಲಿ ದಾಖಲಿಸಲಾಗಿದೆ. ನಂತರದ ಕೈಬರಹದ ಪಹಣಿ, ಗಣಕೀಕೃತ ಪಹಣಿಗಳಲ್ಲಿ ಇದು ಮುಂದುವರೆದಿತ್ತು.

ಬಿ.ಎಂ.ಸಿದ್ದೇಗೌಡ ಮಕ್ಕಳು ಜಮೀನಿಗೆ ಸಂಬಂಧಿಸಿದಂತೆ ಪೌತಿ ಖಾತೆಗೆ ಸಲ್ಲಿಸಿದ್ದ ಅರ್ಜಿಯೂ ತಿರಸ್ಕೃತವಾಗಿತ್ತು. ಕೈಬರಹದ ಪಹಣಿಗಳಲ್ಲಿ ಸರ್ಕಾರ ಎಂದು ದಾಖಲಾಗಿದ್ದ ಕಾರಣಗಳ ಹಿನ್ನೆಲೆಯಲ್ಲಿ ಕ್ರಯಕ್ಕೆ ಒಳಪಟ್ಟಜಮೀನು ನಗರದ ಬಂದೀಗೌಡ ಬಡಾವಣೆಯಲ್ಲಿದ್ದು ಕೋಟ್ಯಂತರ ರು. ಮೌಲ್ಯದ್ದಾಗಿದೆ.

ಈ ಪ್ರಕರಣದ ಸಂಬಂಧ ಮಂಡ್ಯದಲ್ಲಿ ತಹಸೀಲ್ದಾರ್‌ ಆಗಿದ್ದ ಚಂದ್ರಶೇಖರ ಶಂಗಾಳಿ ಅವರು ಸ್ಥಳ ಪರಿಶೀಲನೆಗೆ ಆದೇಶಿಸಿ ದಿನಾಂಕಕ ನಿಗದಿಪಡಿಸಿ ಇಟಿಎಸ್‌ ಉಪಕರಣದ ಮೂಲಕ ಅಳತೆ ಕಾರ್ಯ ನಿರ್ವಹಿಸಿ ವರದಿ ಸಲ್ಲಿಸಲು ಆದೇಶಿಸಿದ್ದರು. ನಂತರ ತಹಸೀಲ್ದಾರ್‌ ಆಗಿ ನೇಮಕಗೊಂಡ ಕುಂಞ ಅಹಮದ್‌ ಅವರು ಪ್ರಕರಣದ ಸಂಬಂಧ ಸ್ಥಳ ಪರಿಶೀಲನೆಗೆ ಆದೇಶವಿದ್ದರೂ ಅದನ್ನು ನಿರ್ಲಕ್ಷಿಸಿ, ಸರ್ವೆ ನಂ.174/14ರ ಜಮೀನು ವಾಸ್ತವದಲ್ಲಿ ಯಾವುದು ಎನ್ನುವುದನ್ನು ಖಾತ್ರಿಪಡಿಸಿಕೊಳ್ಳದೆ ಖಾತೆಗೆ ಆದೇಶ ಮಾಡಿರುವುದು ಕರ್ತವ್ಯ ನಿರ್ಲಕ್ಷ್ಯವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ವರದಿಯಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಈ ಜಮೀನನ್ನು ಕ್ರಯ ಪಡೆದುಕೊಂಡ ಬಿ.ಮಂಜುನಾಥ್‌ ಬಿನ್‌ ಬಿ.ಬಸವೇಗೌಡ ಅವರಿಗೆ ತಾವು ಕ್ರಯ ಮಾಡಿಕೊಂಡಿರುವ ಜಮೀನು ಯಾವುದು ಎಂಬುದರ ಬಗ್ಗೆ ಸ್ಪಷ್ಟತೆಯೇ ಇಲ್ಲದಿರುವುದು ಹಾಗೂ ಚೆಕ್ಕುಬಂದಿಯನ್ನು ಬದಲಾಯಿಸಿ ದಾನಪತ್ರ ಮಾಡಿಕೊಂಡಿರುವುದರಿಂದ ತಿಳಿದುಬಂದಿರುತ್ತದೆ. ಮೇಲ್ನೋಟಕ್ಕೆ ಕ್ರಯ ಮತ್ತು ದಾನಕ್ಕೆ ಒಳಪಟ್ಟಜಮೀನು ಬಂದೀಗೌಡ ಬಡಾವಣೆಯ ಭಾಗವಾಗಿದ್ದು, ನಿವೇಶನವಾಗಿ ಖಾಸಗಿಯವರಿಗೆ ಹಂಚಿಕೆಯಾಗಿರುತ್ತದೆ. ಈ ಅಂಶಗಳನ್ನು ಸರಿಯಾಗಿ ಪರಿಶೀಲಿಸದೆ ಖಾತೆಗೆ ಆದೇಶ ಮಾಡಿರುವುದು ದಾಖಲೆಗಳ ಪರಿಶೀಲನೆಯಿಂದ ಕಂಡುಬಂದಿರುವುದಾಗಿ ತಿಳಿಸಿದ್ದಾರೆ.

ಪುತ್ತೂರಿನಲ್ಲಿ ನಕಲಿ ದಾಖಲೆ ಸೃಷ್ಟಿಯ ವಂಚನೆ ಜಾಲ ಪತ್ತೆ!

ಸುಳ್ಳು ದೂರು: ಪೊಲೀಸರಿಂದ ಬಿ-ರಿಪೋರ್ಟ್

ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ಆಗಿದ್ದ ಕುಂಞ ಅಹಮದ್‌ ಅವರು ಸಾಮಾಜಿಕ ಹೋರಾಟಗಾರ ಕೆ.ಆರ್‌.ರವೀಂದ್ರ ಸೇರಿದಂತೆ ಇತರರ ವಿರುದ್ಧ ಸುಳ್ಳು ದೂರು ದಾಖಲಿಸಿ ನಗರದ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗುವಂತೆ ಮಾಡಿದ್ದರು. ಹಲ್ಲೆ, ಬೆದರಿಕೆ ಹಾಕಿರುವುದಾಗಿಯೂ ದೂರಿನಲ್ಲಿ ತಿಳಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಪ್ರಕರಣದಲ್ಲಿ ಸತ್ಯಾಂಶವಿಲ್ಲವೆಂಬುದು ಕಂಡುಬಂದ ಹಿನ್ನೆಲೆಯಲ್ಲಿ ಬಿ-ರಿಪೋರ್ಚ್‌ ಹಾಕಿ ಮುಕ್ತಾಯಗೊಳಿಸಿದ್ದಾರೆ.

click me!