ಕರ್ನಾಟಕದಲ್ಲಿ ಡೆಂಘೀ ಅಬ್ಬರ: ಎರಡೇ ವಾರದಲ್ಲಿ 250 ಜನಕ್ಕೆ ಜ್ವರ

Published : Oct 16, 2022, 10:23 AM IST
ಕರ್ನಾಟಕದಲ್ಲಿ ಡೆಂಘೀ ಅಬ್ಬರ: ಎರಡೇ ವಾರದಲ್ಲಿ 250 ಜನಕ್ಕೆ ಜ್ವರ

ಸಾರಾಂಶ

ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ 250ಕ್ಕೂ ಅಧಿಕ ಮಂದಿಯಲ್ಲಿ ಡೆಂಘೀ ಪತ್ತೆಯಾಗಿದೆ. ಇದರೊಂದಿಗೆ ಸೋಂಕು ಪ್ರಕರಣಗಳ ಸಂಖ್ಯೆ ಶನಿವಾರದ ಅಂತ್ಯಕ್ಕೆ 7024ಕ್ಕೆ ತಲುಪಿವೆ

ಬೆಂಗಳೂರು(ಅ.16):  ನಿರಂತರ ಮಳೆಯಿಂದಾಗಿ ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಳವಾಗಿದ್ದು, ಪ್ರಸಕ್ತ ವರ್ಷದ ಒಟ್ಟಾರೆ ಪ್ರಕರಣಗಳು ಏಳು ಸಾವಿರಕ್ಕೆ ಏರಿವೆ. ಅಲ್ಲದೆ, ಕಳೆದ ವರ್ಷಕ್ಕೆ ಹೋಲಿಸಿದರೆ ಎರಡೂವರೆ ತಿಂಗಳು ಮುಂಚೆಯೇ ಪ್ರಕರಣಗಳು ಏಳು ಸಾವಿರದ ಗಡಿ ದಾಟಿವೆ.

ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ 250ಕ್ಕೂ ಅಧಿಕ ಮಂದಿಯಲ್ಲಿ ಡೆಂಘೀ ಪತ್ತೆಯಾಗಿದೆ. ಇದರೊಂದಿಗೆ ಸೋಂಕು ಪ್ರಕರಣಗಳ ಸಂಖ್ಯೆ ಶನಿವಾರದ ಅಂತ್ಯಕ್ಕೆ 7024ಕ್ಕೆ ತಲುಪಿವೆ. ಬೆಂಗಳೂರು ನಗರ ಸೇರಿ 23 ಜಿಲ್ಲೆಗಳಲ್ಲಿ ಡೆಂಘೀ ಪ್ರಕರಣಗಳು ಏರಿಕೆ ಕಂಡಿವೆ. ಇನ್ನು ಕಳೆದ ವರ್ಷ ರಾಜ್ಯದಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ 7,189 ಪ್ರಕರಣಗಳು ವರದಿಯಾಗಿದ್ದು, ಐವರು ಮೃತಪಟ್ಟಿದ್ದರು. ಈ ವರ್ಷ ಜನವರಿಯಿಂದ ಈವರೆಗೂ (ಹತ್ತೂವರೆ ತಿಂಗಳು) ಪ್ರಕರಣಗಳ ಸಂಖ್ಯೆ ಏಳು ಸಾವಿರ ಗಡಿ ದಾಟಿದ್ದು, ನಾಲ್ಕು ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೆಂಘೀ ಹಾವಳಿ ಹೆಚ್ಚಿದೆ.

ಬೆಂಗ್ಳೂರಲ್ಲಿ ಮಳೆ ಕಡಿಮೆಯಾಯ್ತು, ಡೆಂಘೀ ಕಾಟ ಹೆಚ್ಚಾಯ್ತು..!

ಮಳೆಗಾಲದಲ್ಲಿ 5500 ಮಂದಿಗೆ ಡೆಂಘೀ:

ಮೇ ಅಂತ್ಯಕ್ಕೆ ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಒಂದೂವರೆ ಸಾವಿರ ಆಸುಪಾಸಿನಲ್ಲಿದ್ದವು. ಆ ಬಳಿಕ ಮುಂಗಾರು ಅಬ್ಬರಿಸಿದ್ದು, ಕಳೆದ ನಾಲ್ಕೂವರೆ ತಿಂಗಳಲ್ಲಿ ಐದೂವರೆ ಸಾವಿರ ಮಂದಿ ಡೆಂಘೀ ಜ್ವರಕ್ಕೀಡಾಗಿದ್ದಾರೆ. ಸೋಂಕಿನಿಂದ ನಾಲ್ವರು ಸಾವಿಗೀಡಾಗಿದ್ದಾರೆ.

ಜಿಲ್ಲಾವಾರು ಪ್ರಕರಣಗಳ ವಿವರ:

ಈ ವರ್ಷ ರಾಜ್ಯದಲ್ಲಿ ದೃಢಪಟ್ಟಿರುವ ಒಟ್ಟು ಡೆಂಘೀ ಪ್ರಕರಣಗಳಲ್ಲಿ ಶೇ. 40 ಬೆಂಗಳೂರಿನಲ್ಲಿ (1,227) ವರದಿಯಾಗಿವೆ. ಮೈಸೂರು 605, ಉಡುಪಿ 470, ಚಿತ್ರದುರ್ಗ 328, ದಕ್ಷಿಣ ಕನ್ನಡ 306, ವಿಜಯಪುರ, 305, ಕಲಬುರಗಿ 278, ಬೆಳಗಾವಿ 265, ಶಿವಮೊಗ್ಗ 263, ಮಂಡ್ಯ 249, ಚಿಕ್ಕಬಳ್ಳಾಪುರ 237, ಹಾಸನ 217, ಕೋಲಾರ 200, ಧಾರವಾಡ 199, ಚಾಮರಾಜನಗರ 197, ದಾವಣಗೆರೆ 194, ಕೊಪ್ಪಳ 162, ಬಳ್ಳಾರಿ 143, ತುಮಕೂರು 140, ಚಿಕ್ಕಮಗಳೂರು 138, ಬಾಗಲಕೋಟೆ 129, ರಾಮನಗರ 115 ಮತ್ತು ಗದಗ 106 ಅತೀ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿರುವ ಜಿಲ್ಲೆಗಳಾಗಿವೆ.

ಸಾರ್ವಜನಿಕರು ಎಚ್ಚರಿಕೆ ವಹಿಸಿ:

ಮಳೆ ಮುಂದುವರೆದಿದ್ದು, ಡೆಂಘೀ ಇನ್ನಷ್ಟುಅಧಿಕಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಜನರು ಮನೆ ಸುತ್ತಮುತ್ತಲೂ ನೀರು, ತ್ಯಾಜ್ಯ ಶೇಖರಣೆ ಆಗದಂತೆ ಎಚ್ಚರಿಕೆ ವಹಿಸಬೇಕು. ಈ ಕುರಿತು ಆರೋಗ್ಯ ಕಾರ್ಯಕರ್ತರ ಮೂಲಕ ಲಾರ್ವಾ ಪತ್ತೆ ಮತ್ತು ನಿರ್ಮೂಲನೆ ಮಾಡುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್