ಬೆಂಗ್ಳೂರಲ್ಲಿ ಮಳೆ ಕಡಿಮೆಯಾಯ್ತು, ಡೆಂಘೀ ಕಾಟ ಹೆಚ್ಚಾಯ್ತು..!

ಬೆಂಗಳೂರಿನ 55 ವಾರ್ಡ್‌ಗಳಲ್ಲಿ ಡೆಂಘೀ ಪ್ರಕರಣ ಉಲ್ಬಣ, ಮಳೆ ನಿಂತು, ಪ್ರವಾಹ ಕಡಿಮೆಯಾಗುತ್ತಿದಂತೆ ಹೆಚ್ಚಳ, ಕೇವಲ 15 ದಿನದಲ್ಲಿ 173 ಕೇಸ್‌

Dengue Cases Increase in Bengaluru grg

ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಸೆ.18):  
ಮಳೆ ನಿಂತು, ಪ್ರವಾಹ ಕಡಿಮೆಯಾಗುತ್ತಿದಂತೆ ಬೆಂಗಳೂರಿನ 55 ವಾರ್ಡ್‌ಗಳಲ್ಲಿ ಡೆಂಘೀ ಪ್ರಕರಣ ಉಲ್ಬಣಗೊಂಡಿದ್ದು, ಕೇವಲ 15 ದಿನದಲ್ಲಿ ಬರೋಬ್ಬರಿ 173 ಪ್ರಕರಣ ಪತ್ತೆಯಾಗುವ ಮೂಲಕ ಆತಂಕ ಹೆಚ್ಚಿಸಿದೆ. ಕಳೆದ 20 ದಿನಗಳಿಂದ ನಿರಂತವಾಗಿ ಸುರಿಯುತ್ತಿದ್ದ ಮಳೆ ಪ್ರಮಾಣ ಇದೀಗ ಕಡಿಮೆಯಾಗುತ್ತಿದೆ. ತಗ್ಗು ಪ್ರದೇಶ, ಕೊಳಗೇರಿ, ಕೆರೆ, ರಾಜಕಾಲುವೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣವಾಗಿದ್ದರಿಂದ ನಗರದಲ್ಲಿ ಡೆಂಘೀ ಪ್ರಕರಣ ಹೆಚ್ಚಾಗುತ್ತಿವೆ. ಅದರಲ್ಲೂ ಬಿಬಿಎಂಪಿಯ 243 ವಾರ್ಡ್‌ಗಳ ಪೈಕಿ 55 ವಾರ್ಡ್‌ಗಳು ಡೆಂಘೀ ಪ್ರಕರಣಗಳ ಹಾಟ್‌ಸ್ಪಾಟ್‌ ಆಗಿ ನಿರ್ಮಾಣಗೊಂಡಿವೆ.

ಪ್ರಮುಖವಾಗಿ ಕೋರಮಂಗಲ ಹಾಗೂ ಯಲಹಂಕ ಸ್ಯಾಟಲೈಟ್‌ ಟೌನ್‌ ವಾರ್ಡ್‌ನಲ್ಲಿ ತಲಾ ನಾಲ್ಕು ಪ್ರಕರಣ ಪ್ರತ್ತೆಯಾಗಿವೆ. ಆರ್‌ಟಿನಗರ, ಪಟ್ಟಾಭಿರಾಮನಗರ, ಜಕ್ಕೂರು, ಅಟ್ಟೂರು ವಾರ್ಡ್‌ನಲ್ಲಿ ತಲಾ 3 ಪ್ರಕರಣ, ನ್ಯೂತಿಪ್ಪಸಂದ್ರ, ಬಸವನಗುಡಿ, ಚೌಡೇಶ್ವರಿ ವಾರ್ಡ್‌, ಸಂಜಯನಗರ, ಬಿಟಿಎಂ ಲೇಔಟ್‌, ಬೇಗೂರು, ನಂದಿನಿ ಲೇಔಟ್‌, ರಾಜ್‌ಮಹಲ್‌ ಗುಟ್ಟಹಳ್ಳಿ, ಮಲ್ಲೇಶ್ವರ, ಸಿವಿರಾಮನ್‌ ನಗರ, ಜಯನಗರ ಪೂರ್ವ, ಪ್ರಕಾಶ್‌ನಗರ, ರಾಧಾಕೃಷ್ಣ ದೇವಸ್ಥಾನ ವಾರ್ಡ್‌, ಬಸವೇಶ್ವರ ನಗರ, ಕಾಡು ಮಲ್ಲೇಶ್ವರ, ಮತ್ತಿಕೆರೆ, ಬೆಳ್ಳಂದೂರು, ಬ್ಯಾಟರಾಯನಪುರ, ವಿದ್ಯಾರಣ್ಯಪುರ ಹಾಗೂ ಗಾಂಧಿನಗರದಲ್ಲಿ ತಲಾ 2 ಪ್ರಕರಣ ದೃಢಪಟ್ಟಿವೆ. ಕೆಂಪೇಗೌಡ ವಾರ್ಡ್‌, ಜಯನಗರ, ಗೊಟ್ಟಿಗೆರೆ, ಗಾಯತ್ರಿನಗರ ಸೇರಿದಂತೆ ಉಳಿದ ವಾರ್ಡ್‌ಗಳಲ್ಲಿ ತಲಾ 1 ಪ್ರಕರಣ ಪತ್ತೆಯಾಗಿವೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ದೃಢಪಡಿಸಿದೆ.

ಭಾರತದಲ್ಲಿ ಮೊದಲ ಡೆಂಗ್ಯೂ ಲಸಿಕೆ; ಮೊದಲ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮೋದನೆ

ಮುಂಗಾರು ಬಳಿ ಸುಮಾರು ಸಾವಿರ ಪ್ರಕರಣ

ಕಳೆದ ಜನವರಿಯಿಂದ ಸೆ.15ರ ವರೆಗೆ ಒಟ್ಟು 1,419 ಡೆಂಘೀ ಪ್ರಕರಣ ಪತ್ತೆಯಾಗಿದ್ದು, ಅದರಲ್ಲೂ ಮುಂಗಾರು ಆರಂಭಗೊಂಡ ಜೂನ್‌ನಿಂದ ಈವರೆಗೆ 982 ಪ್ರಕರಣ ಪತ್ತೆಯಾಗಿದೆ. ಜೂನ್‌ ಮತ್ತು ಜುಲೈ ತಿಂಗಳಿನಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ. ಆಗಸ್ಟ್‌ ನಲ್ಲಿ 178 ಪ್ರಕರಣ ಪತ್ತೆಯಾದರೆ, ಸೆ.1 ರಿಂದ 15 ರ ಅವಧಿಯಲ್ಲಿ 173 ಪ್ರಕರಣ ದೃಢಪಟ್ಟಿರುವುದು ಆತಂಕಕ್ಕೀಡು ಮಾಡಿದೆ.

ಇನ್ನಷ್ಟು ಅಧಿಕವಾಗುವ ಭೀತಿ

ಮಳೆ ಪ್ರಮಾಣ ಕಡಿಮೆಯಾಗಿದ್ದು, ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವಾತಾವರಣವು ಸೊಳ್ಳೆಗಳ ಸಂತಾನೋತ್ಪತ್ತಿಗೆ ಸಹಕಾರಿ ಆಗಲಿದೆ. ಹೀಗಾಗಿ, ಪ್ರಕರಣಗಳ ಸಂಖ್ಯೆ ಇನ್ನಷ್ಟು ಅಧಿಕಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ಸಾರ್ವಜನಿಕರು ಜಾಗೃತರಾಗಿ ತಕ್ಷಣ ಮನೆ, ಆವರಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ಶೇಖರಣೆ ಆಗದಂತೆ ಎಚ್ಚರಿಕೆ ವಹಿಸಬೇಕಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡೆಂಘೀ 216, ಚಿಕನ್‌ ಗುನ್ಯಾ 14 ಕೇಸ್‌, ಹೆಚ್ಚಿದ ಆತಂಕ

ಮಳೆಯಾದ ಬಳಿಕ ಡೆಂಘೀ ಪ್ರಕರಣ ಹೆಚ್ಚಾಗುತ್ತಿವೆ. ನಿಯಂತ್ರಣಕ್ಕೆ ಈಗಾಗಲೇ ಬಿಬಿಎಂಪಿ ಆರೋಗ್ಯ ವಿಭಾಗದಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ನೆರೆ ಉಂಟಾದ ಸ್ಥಳದಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ನೀರು ನಿಲ್ಲದಂತೆ ಕ್ರಮ ವಹಿಸಲಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಲಾಗುತ್ತಿದೆ. ಆರೋಗ್ಯ ಕಾರ್ಯಕರ್ತೆಯರು ಮನೆ-ಮನೆ ಭೇಟಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಅಂತ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಬಾಲಸುಂದರ್‌ ತಿಳಿಸಿದ್ದಾರೆ.

ನಗರದಲ್ಲಿ ಡೆಂಘೀ ಪ್ರಕರಣ ವಿವರ: ವಲಯ ಜೂನ್‌ ಜುಲೈ ಆಗಸ್ಟ್‌ ಸೆಪ್ಟಂಬರ್‌ ಒಟ್ಟು ಪ್ರಕರಣ (ಜ.1-ಸೆ.15)

ಪೂರ್ವ 102 167 57 38 527
ಮಹದೇವಪುರ 45 92 40 16 285
ಪಶ್ಚಿಮ 18 52 19 38 177
ದಕ್ಷಿಣ 19 32 11 23 132
ಆರ್‌ಆರ್‌ನಗರ 13 31 20 12 104
ಯಲಹಂಕ 7 21 13 18 84
ಬೊಮ್ಮನಹಳ್ಳಿ 8 14 14 12 68
ದಾಸರಹಳ್ಳಿ 1 9 4 5 30
ಬೆಂ.ನಗರ ಜಿಲ್ಲೆ ವ್ಯಾಪ್ತಿ  11 11
ಒಟ್ಟು 213 418 178 173 1,419

ಹಿಂದಿನ ವರ್ಷಗಳಲ್ಲಿ ಪತ್ತೆಯಾದ ವಿವರ: ವರ್ಷ ಡೆಂಘೀ ಪ್ರಕರಣ

2018 1386
2019 9029
2020 2047
2021 1643
2022 1,419 (ಸೆ.15ರ ವರೆಗೆ)

Latest Videos
Follow Us:
Download App:
  • android
  • ios