ಬಡವರಿಗೆ ಫ್ರೀ ಅಂಗಾಂಗ ಕಸಿ: ಸಚಿವ ಸುಧಾಕರ್‌

Published : Oct 16, 2022, 10:00 AM IST
ಬಡವರಿಗೆ ಫ್ರೀ ಅಂಗಾಂಗ ಕಸಿ: ಸಚಿವ ಸುಧಾಕರ್‌

ಸಾರಾಂಶ

5 ವರ್ಷಗಳಲ್ಲಿ ಮಹತ್ವದ ಮೈಲಿಗಲ್ಲು, ಪ್ರತಿ ವರ್ಷ 1 ಲಕ್ಷ ಔಷಧ ಖರ್ಚು ನೀಡಿಕೆ: ಸಚಿವ ಸುಧಾಕರ್‌

ಬೆಂಗಳೂರು(ಅ.16):  ರಾಜ್ಯ ಸರ್ಕಾರದ ಅಂಗಾಂಗ ಕಸಿ ಯೋಜನೆಯಡಿ ಬಡರೋಗಿಗಳಿಗೆ ನಡೆಸುವ ಉಚಿತ ಕಸಿ ಶಸ್ತ್ರಚಿಕಿತ್ಸೆಗಳ ಸಂಖ್ಯೆ 100ಕ್ಕೇರಿದೆ. ಈ ಪೈಕಿ 77 ಕಿಡ್ನಿ, 15 ಹೃದಯ ಹಾಗೂ 8 ಯಕೃತ್‌ ಕಸಿಯನ್ನು ಮಾಡಲಾಗಿದ್ದು, ರೋಗಿಗಳಿಗೆ ಪ್ರತಿ ವರ್ಷ ಒಂದು ಲಕ್ಷ ರು.ಗಳನ್ನು ಔಷಧ ವೆಚ್ಚಕ್ಕೆ ನೀಡಲಾಗುತ್ತಿದೆ.

ಶಸ್ತ್ರಚಿಕಿತ್ಸೆಗಳು 100 ತಲುಪಿದ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ‘ಡಿಸೆಂಬರ್‌ 2018ರಲ್ಲಿ ಆರಂಭವಾದ ಅಂಗಾಂಗ ಕಸಿ ಯೋಜನೆಯಡಿಯಲ್ಲಿ ಈವರೆಗೂ ರಾಜ್ಯದ 100 ಬಡ ಮತ್ತು ಬಿಪಿಎಲ್‌ ರೋಗಿಗಳಿಗೆ ಅಂಗಾಂಗ ಕಸಿ ಚಿಕಿತ್ಸೆ ನೀಡಲಾಗಿದೆ. ಬಡವರಿಗೆ ಗಗನ ಕುಸುಮವಾಗಿದ್ದ ಅಂಗಾಂಗ ಕಸಿ ಉಚಿತ ಚಿಕಿತ್ಸೆಯಿಂದ ಸದ್ಯ ಎಲ್ಲರಿಗೂ ಲಭ್ಯವಾಗುತ್ತಿದ್ದು, ಇದಕ್ಕೆ ಕಾರಣೀಭೂತರಾದ ಅಂಗಾಂಗ ದಾನಿಗಳು ಹಾಗೂ ಜೀವ ಸಾರ್ಥಕತೆ ತಂಡಕ್ಕೆ ಧನ್ಯವಾದಗಳು’ ಎಂದಿದ್ದಾರೆ.

ಉತ್ತರ ಕನ್ನಡದಲ್ಲಿ ಶೀಘ್ರವೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಸಚಿವ ಡಾ.ಕೆ.ಸುಧಾಕರ್

ಯಾವುದಕ್ಕೆ ಎಷ್ಟು ನೆರವು, ನೋಂದಣಿ ಎಲ್ಲಿ?:

ಕಸಿ ಶಸ್ತ್ರಚಿಕಿತ್ಸೆಗೆ ಪ್ರತಿ ರೋಗಿಗೆ ಹೃದಯಕ್ಕೆ 10 ಲಕ್ಷ ರು., ಲಿವರ್‌ಗೆ (ಯಕೃತ್‌) 11 ಲಕ್ಷ ರು., ಕಿಡ್ನಿಗೆ 2 ಲಕ್ಷ ರು. ನೀಡಲಾಗುತ್ತಿದ್ದು, ಬಳಿಕ ರೋಗಿ ಬದುಕಿರುವವರೆಗೂ ಔಷಧ ಖರ್ಚಿಗೆ ಪ್ರತಿ ವರ್ಷ ಒಂದು ಲಕ್ಷ ರು. ಕೊಡಲಾಗುತ್ತದೆ. ರಾಜ್ಯ ಸರ್ಕಾರ ಗುರುತಿಸಿರುವ ಆಸ್ಪತ್ರೆಗಳಲ್ಲಿ ಹೆಸರು ನೋಂದಾಯಿಸಬೇಕು. ಬಳಿಕ ಅಗತ್ಯ ಕಾನೂನು ನಿಯಮ ಪೂರ್ಣಗೊಳಿಸಿ ಆಸ್ಪತ್ರೆಯ ಅಂಗಾಂಗ ಕಸಿ ಸಮಿತಿ ಮೂಲಕ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಅರ್ಜಿ ಸಲ್ಲಿಸಿದರೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡಲಾಗುವುದು. ಶಸ್ತ್ರಚಿಕಿತ್ಸೆ ನಂತರ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಜೀವ ಉಳಿಸಲು ಅಂಗಾಂಗ ಕಸಿ ಒಂದೇ ಪರಿಹಾರವಾಗಿದ್ದು, ಈ ಕಸಿ ಶಸ್ತ್ರಚಿಕಿತ್ಸೆಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೆರಡರಲ್ಲೂ ದುಬಾರಿ ದರವಿದೆ. ಇದಲ್ಲದೆ ಕಸಿ ಶಸ್ತ್ರ ಚಿಕಿತ್ಸೆ ನಂತರ ನಿಯಮಿತ ತಪಾಸಣೆ ಮಾಡಿಸಬೇಕಾಗುತ್ತದೆ ಹಾಗೂ ಔಷಧಗಳನ್ನು ಸೇವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಡ ವರ್ಗದವರಿಗಾಗಿ ರಾಜ್ಯ ಸರ್ಕಾರ ಅಂಗಾಂಗ ಕಸಿ ಯೋಜನೆ ಆರಂಭಿಸಿ 30 ಕೋಟಿ ರು. ಅನುದಾನ ಮೀಸಲಿಟ್ಟಿತ್ತು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ (ಎಸ್‌ಎಎಸ್‌ಟಿ) ಈ ಯೋಜನೆಯನ್ನು ನಿರ್ವಹಣೆ ಮಾಡುತ್ತಿದೆ. ರಾಜ್ಯದ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳು ಈ ಯೋಜನೆಯಲ್ಲಿ ಉಚಿತವಾಗಿ ಹೃದಯ, ಕಿಡ್ನಿ ಮತ್ತು ಲಿವರ್‌ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬಹುದಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ