Recruitment in Aided schools: ಅನುದಾನಿತ ಶಾಲೆಗಳ ನೇಮಕ ತಡೆ ತೆರವಿಗೆ ಶೀಘ್ರ ನಿರ್ಧಾರ: ಸಚಿವ ನಾಗೇಶ್‌

By Kannadaprabha News  |  First Published Dec 21, 2021, 5:50 AM IST

*ಜಾಹೀರಾತು ನೀಡದೇ ನೇಮಕ ಆಗಿದೆ: ನಾಗೇಶ್‌
*ಹೀಗಾಗಿ 234 ಹುದ್ದೆಗಳ ನೇಮಕ ತಡೆ ಹಿಡಿದಿದ್ದೇವೆ
*ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಆದಷ್ಟುಬೇಗ ನಿರ್ಧಾರ 
 


ವಿಧಾನ ಪರಿಷತ್‌ (ಡಿ. 21): ಸಹಾಯಧನಕ್ಕೆ ಒಳಪಟ್ಟಶಾಲೆಗಳ (Aided schools) ಆಡಳಿತ ಮಂಡಳಿಗಳು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಜಾಹೀರಾತು ನೀಡದೆ ನೇಮಕಾತಿ ಮಾಡಿಕೊಂಡಿರುವ ಹುದ್ದೆಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಅನುಮತಿ ನೀಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಆದಷ್ಟುಬೇಗ ನಿರ್ಧಾರ ತೆಗೆದುಕೊಳ್ಳುವುದಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ (B C Nagesh) ಭರವಸೆ ನೀಡಿದ್ದಾರೆ.

ಬಿಜೆಪಿ ಸದಸ್ಯ ಡಾ. ವೈ.ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹುದ್ದೆ ನೇಮಕ ಸಂಬಂಧ ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕೆಂಬ ಆದೇಶವನ್ನು ಈ ಹಿಂದೆಯೇ ಹೊರಡಿಸಲಾಗಿತ್ತು. ಜಾಹೀರಾತು ನೀಡದೆ ನೇಮಕಾತಿ ಮಾಡಿಕೊಂಡಿರುವ ಕಾರಣ ಅನುಮತಿ ನೀಡಿಲ್ಲ. ಸುಮಾರು 234 ಹುದ್ದೆಗಳಿಗೆ ಈ ರೀತಿ ತಡೆ ಹಿಡಿಯಲಾಗಿದೆ. ಈ ಹಿನ್ನೆಲೆಯಲ್ಲಿ ಸದಸ್ಯರ ಮನವಿ ಬಗ್ಗೆ ಶೀಘ್ರದಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತವಾಗಿ ತೀರ್ಮಾನಿಸುತ್ತೇನೆ ಎಂದು ಹೇಳಿದರು.

Tap to resize

Latest Videos

ಶಿಕ್ಷಕರನ್ನು ಯಾವ ಕಾಲ ಮಿತಿಯಲ್ಲಿ ನೇಮಕ ಮಾಡುತ್ತೀರಿ?

ಇದಕ್ಕೂ ಮುನ್ನ ಮಾತನಾಡಿದ ವೈ.ಎ. ನಾರಾಯಣಸ್ವಾಮಿ ಅವರು, ಅನುದಾನಿತ ಪ್ರೌಢಶಾಲೆಗಳಲ್ಲಿ ನಿಧನ, ನಿವೃತ್ತಿ, ರಾಜೀನಾಮೆ ಮತ್ತಿತರ ಕಾರಣಗಳಿಂದ ಖಾಲಿಯಾಗುವ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದ್ದರೂ ಅಧಿಕಾರಿಗಳು ರಾಜ್ಯ, ಜಿಲ್ಲಾ ಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿಲ್ಲ ಎಂದು ನೆಪ ಒಡ್ಡಿ ಅನುಮತಿ ನೀಡುತ್ತಿಲ್ಲ. ಶಿಕ್ಷಕರನ್ನು ಯಾವ ಕಾಲ ಮಿತಿಯಲ್ಲಿ ನೇಮಕ ಮಾಡುತ್ತೀರಿ ಎಂಬ ಬಗ್ಗೆ ಸರ್ಕಾರ ಸ್ಪಷ್ಟಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Belagavi Violence: ರಾಷ್ಟ್ರ ನಾಯಕರ ಅವಮಾನ ಸಹಿಸಲ್ಲ: ಪುಂಡರ ಮೇಲೆ ಗೂಂಡಾ ಕಾಯ್ದೆ, ದೇಶದ್ರೋಹ ಕೇಸ್:‌ ಸಿಎಂ

ನಾರಾಯಣಸ್ವಾಮಿ ಅವರ ಮಾತು ಬೆಂಬಲಿಸಿದ ಬಿಜೆಪಿಯ ತುಳಸಿ ಮುನಿರಾಜು ಗೌಡ, ಅರುಣ ಶಹಾಪುರ, ಶಶಿಲ್‌ ನಮೋಶಿ ಅವರು, ಹಿರಿಯ ಅಧಿಕಾರಿಗಳು ವಿನಾಕಾರಣ ಗೊಂದಲ ಉಂಟು ಮಾಡುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಿ ಎಂದು ಹೇಳಿದರೆ, ಶಶಿಲ್‌ ನಮೋಶಿ ಒಂದು ತಿಂಗಳೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದರು. ಸಭಾಪತಿ ಬಸವರಾಜ ಹೊರಟ್ಟಿಅವರು ಜಾಹೀರಾತು ನಿಯಮವನ್ನು ಒಂದು ಬಾರಿಗೆ ಅನ್ವಯವಾಗುವಂತೆ ಸಡಿಲಿಸಿ ನೇಮಕಾತಿಗೆ ಅನುಮೋದನೆ ನೀಡಬೇಕೆಂದು ಸಲಹೆ ನೀಡಿದರು.

ಒಂದು ವಾರ ಅಧಿವೇಶನ ವಿಸ್ತರಿಸಲು ಸಿಎಂ, ಸ್ಪೀಕರ್‌ಗೆ ಸಿದ್ದು ಪತ್ರ

ಪ್ರಸ್ತುತ ಡಿಸೆಂಬರ್‌ 24ರವರೆಗೆ ನಿಗದಿಯಾಗಿರುವ ರಾಜ್ಯ ವಿಧಾನ ಮಂಡಲ ಅಧಿವೇಶನವನ್ನು ಕನಿಷ್ಠ ಪಕ್ಷ ಇನ್ನೂ ಒಂದು ವಾರ ವಿಸ್ತರಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿರುವ ಅವರು, ಮೂರು ವರ್ಷಗಳ ಬಳಿಕ ಬೆಳಗಾವಿಯಲ್ಲಿ 10 ದಿನಗಳ ಕಾಲದ ಅಧಿವೇಶನ ನಡೆಯುತ್ತಿದೆ. 

ಇದನ್ನೂ ಓದಿ: karnataka leadership change ಸುವರ್ಣಸೌಧ ಕಾರಿಡಾರ್‌ನಲ್ಲೂ ಸಿಎಂ ಬದಲಾವಣೆ ಚರ್ಚೆ: ಸುಳಿವು ನೀಡಿದ ಕಾಂಗ್ರೆಸ್ ನಾಯಕ!

ಅಧಿವೇಶನದಲ್ಲಿ ಪ್ರವಾಹ, ಅತಿವೃಷ್ಟಿ, ಉತ್ತರ ಕರ್ನಾಟಕದ ನೀರಾವರಿ ವಿಷಯ, ಕೃಷಿ ಬಿಕ್ಕಟ್ಟು, ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದ ಸಮಸ್ಯೆಗಳು, ನಿರುದ್ಯೋಗ, ಪ್ರಾದೇಶಿಕ ಅಸಮಾನತೆ, ಭ್ರಷ್ಟಾಚಾರ ಮತ್ತಿತರ ಚರ್ಚಿಸಬೇಕಾಗಿದೆ. ಆದರೆ, ಅಧಿವೇಶನ ನಡೆಯುವ ಸಂದರ್ಭದಲ್ಲೇ ದುರುದ್ದೇಶಪೂರ್ವಕವಾಗಿ ಕೆಲವು ದುಷ್ಟಶಕ್ತಿಗಳು ಪ್ರತಿಮೆಗೆ ಹಾನಿ ಮಾಡುವ, ನಾಡ ಧ್ವಜ ಸುಡುವ ಮೂಲಕ ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿವೆ ಎಂದಿದ್ದಾರೆ.

ಜೊತೆಗೆ ಸರ್ಕಾರವು ಪ್ರತಿಪಕ್ಷಗಳ ನ್ಯಾಯಯುತ ಬೇಡಿಕೆಗಳನ್ನು ಪ್ರಜಾ ತಾಂತ್ರಿಕವಾಗಿ ಬಗೆಹರಿಸದೆ ಮೊಂಡು ಹಠಕ್ಕೆ ಬಿದ್ದಿದೆ. ಇದರಿಂದಾಗಿ ಚರ್ಚೆಗೆ ಬೇಕಾದಷ್ಟುಸಮಯ ಸಿಗುತ್ತಿಲ್ಲ. ಆದ್ದರಿಂದ ಈ ಎಲ್ಲಾ ವಿಷಯಗಳ ಚರ್ಚೆಗೆ ಅಧಿವೇಶನವನ್ನು ಕನಿಷ್ಠ ಒಂದು ವಾರ ಕಾಲ ವಿಸ್ತರಿಸಲು ಕ್ರಮ ವಹಿಸಬೇಕು ಎಂದು ಸಿದ್ದರಾಮಯ್ಯ ಕೋರಿದ್ದಾರೆ.

click me!