ಹುಬ್ಬಳ್ಳಿ (ಡಿ.08): ಶಾಲೆಗಳಲ್ಲಿ (School) ಮತ್ತು ಅಂಗನವಾಡಿಯಲ್ಲಿ ಮೊಟ್ಟೆಗೆ (Egg) ಬದಲಾಗಿ ಸತ್ವಯುತ - ಸರ್ವ ಸಮ್ಮತ ಸಸ್ಯಹಾರ ಪದಾರ್ಥ ನೀಡಲು ಅಥವಾ ರಾಜ್ಯಾದ್ಯಂತ ಸಸ್ಯಾಹಾರಿಗಳಿಗೆ ಪ್ರತ್ಯೇಕ ಶಾಲೆ ಹಾಗೂ ಅಂಗನವಾಡಿಗಳನ್ನು ತೆರೆಯಲು ಹಕ್ಕೋತ್ತಾಯಿಸಿ ಡಿ.20 ರಂದು ಬೆಳಿಗ್ಗೆ 10 ಕ್ಕೆ ಬೆಳಗಾವಿ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಸಂತ ಸಮಾವೇಶ ಮತ್ತು ವಿಧಾನಸೌಧ ಚಲೋ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಸಸ್ಯಹಾರಿ ಪ್ರಧಾನ ಸಂಚಾಲಕರಾದ ದಯಾನಂದ ಸ್ವಾಮೀಜಿ (Dayananda swamiji) ತಿಳಿಸಿದರು.
undefined
ಹುಬ್ಬಳ್ಳಿಯಲ್ಲಿ (Hubli) ಇಂದು ಮಾತನಾಡಿದ ಅವರು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ (School) ಮತ್ತು ಅಂಗನವಾಡಿಗಳಲ್ಲಿನ ಮಕ್ಕಳಿಗೆ - ವಿದ್ಯಾರ್ಥಿಗಳಿಗೆ (Students) ಪೌಷ್ಟಿಕಾಂಶದ ಹೆಸರಿನಲ್ಲಿ ಸರ್ಕಾರ ಮೊಟ್ಟೆ (Egg) ತಿನ್ನಿಸುತ್ತಿರುವುದನ್ನು ಕೈಬಿಟ್ಟು, ಮೊಟ್ಟೆಗಿಂತಲೂ ಅಧಿಕ ಬಹು ಪೋಷಕಾಂಶಗಳನ್ನೊಳಗೊಂಡ ಶುದ್ಧ ಸಸ್ಯಹಾರ ಪದಾರ್ಥಗಳನ್ನು ನೀಡಲು ಆಗ್ರಹಿಸಿದರು. ಮೊಟ್ಟೆ ಮುಕ್ತಗೊಳಿಸಲು ಸರ್ಕಾರಕ್ಕೆ ಸಾಧ್ಯ ಆಗದಿದ್ದರೇ ರಾಜ್ಯದ ಲಿಂಗಾಯತ ಧರ್ಮ, ಜೈನ ಧರ್ಮ ಮುಂತಾದ ಧರ್ಮಗಳ, ಬ್ರಾಹ್ಮಣ, ವೈಶ್ಯ ಸೇರಿದಂತೆ ಸಸ್ಯಾಹಾರಿ ಪರ ಜನತೆಯ ಲಕ್ಷಾಂತರ ಮಕ್ಕಳಿಗೆ ಪ್ರತ್ಯೇಕ ಪ್ರತ್ಯೇಕ ಸಸ್ಯಹಾರಿ ಶಾಲೆ ಮತ್ತು ಅಂಗನವಾಡಿಗಳನ್ನು ತೆರೆಯಬೇಕೆಂದು ಶ್ರೀಗಳು ಒತ್ತಾಯಿಸಿದರು.
ಶಾಲೆಗಳಲ್ಲಿ ಏಕರೂಪತೆಪಡಿಕೊಳ್ಳಬೇಕಿದ್ದ ಸರ್ಕಾರ ಈ ರೀತಿ ಮಾಡಬಾರದು.ಮೌಲ್ಯ ಆಧಾರಿತ ಶಿಕ್ಷಣ ಕೊಡಿ, ಮೊಟ್ಟೆ ಅಲ್ಲ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಯಾಕೆ? ಎಲ್ಲರಿಗೂ ಒಂದೇ ತರವಾಗಿ ಸರ್ಕಾರ ನೋಡಬೇಕು. ಮೊಟ್ಟೆಯನ್ನ ಶಾಲೆಯಲ್ಲಿ ತರಲು ಹುನ್ನಾರ ಏನು..? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ (Congress), ಜೆಡಿಎಸ್ (JDS) ತೆಗೆದಿರುವ ಈ ಯೋಜನೆಯನ್ನ ಬಿಜೆಪಿ ಯಾಕೆ ತಂದಿದೆ. ಲಿಂಗಾಯತ, ಬ್ರಾಹ್ಮಣ, ಜೈನ ಧರ್ಮದ ಜನರಿಂದ ಮತ ಪಡೆದ ಬಿಜೆಪಿ ಈ ರೀತಿ ಯಾಕೆ ಮಾಡಿದೆ. ಸಾಮರಸ್ಯದ ಬಗ್ಗೆ ಸಾರಿ ಹೇಳುವ, ಆರ್ ಎಸ್ ಎಸ್ ಇದರ ಬಗ್ಗೆ ಯಾಕೆ ಮಾತಾಡುತ್ತಿಲ್ಲ. ಇದರ ಬಗ್ಗೆ ಆರ್ ಎಸ್ ಎಸ್ (RSS) ಮಾತನಾಡದಿದ್ದರೆ ನಾವು ಸಸ್ಯಾಹಾರಿಗಳು ಮುಂದೆಂದು ಅವರ ಮಾತು ಕೇಳೋದಿಲ್ಲ. ರಾಜ್ಯದ ನೂರಾರು ಶ್ರೀಗಳು ಸಿಎಂ ಗೆ ಮನವಿ ಮಾಡಿದ್ದಾರೆ. ಆದರೂ ಸರ್ಕಾರ ಸ್ವಾಮಿಗಳಿಂದಲೇ ಮೊಟ್ಟೆ ತಿನ್ನಿಸುವ ಹುನ್ನಾರ ಮಾಡುತ್ತಿದೆ. ಇನ್ನೇನಿದ್ದರೂ ನಾವು ಯಾರ ಜೊತೆ ಮತನಾಡುವುದು ಇಲ್ಲ. ಎಲ್ಲಾ ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಲಿಂಗಾಯತರಿಂದಲೇ (Lingayat) ಸರ್ಕಾರ ಪತನವಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಸವಧರ್ಮ ಪೀಠದ ಮಾತೆ ಗಂಗಾದೇವಿ, ಚನ್ನಬಸವನಂದ ಸ್ವಾಮೀಜಿ, ಭವರಲಾಲ್ ಜೈನ್, ರಮೇಶ ಕುಲಕರ್ಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಶಾಲೆಗಳಲ್ಲಿ ಮೊಟ್ಟೆ ವಿತರಣೆ ಮಾಡುತ್ತಿರುವುದೇಕೆ?
ಶಿಕ್ಷಣ ಇಲಾಖೆ ಅಪೌಷ್ಟಿಕತೆ, ರಕ್ತಹೀನತೆ ಹೊಂದಿರುವ ಶಾಲಾ (School) ಮಕ್ಕಳಿಗೆ ಮೊಟ್ಟೆ ನೀಡಲು ಮುಂದಾಗಿದ್ದು, ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿತ್ತು. 7 ಜಿಲ್ಲೆಗಳ ಶಾಲಾ ಮಕ್ಕಳಿಗೆ ಬೇಯಿಸಿದ ಮೊಟ್ಟೆ ವಿತರಣೆಗೆ ಮಾಡಲಾಗುತ್ತಿದ್ದು ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ವಿತರಣೆ ಮಾಡಲಾಗುತ್ತಿದೆ. ಆದರೆ ಇದಕ್ಕೆ ಹಲವು ಸಮುದಾಯಗಳು ವಿರೋಧ ವ್ಯಕ್ತಪಡಿಸಿವೆ.
ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ನೀಡುವ ಯೋಜನೆಗೆ ರಾಷ್ಟ್ರೀಯ ಲಿಂಗಾಯತ ಧರ್ಮ, ಮಹಾ ಸಭಾ ಬಸವ ಮಂಟಪದ ಜಗದ್ಗುರುಗಳು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಕೋಳಿ ಮೊಟ್ಟೆ ಸಂಪೂರ್ಣವಾಗಿ ಮಾಂಸಾಹಾರವಾಗಿದೆ. ಮೊಟ್ಟೆ ಕೊಡುವುದರಿಂದ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ಸರ್ವಸಮ್ಮತ ಆಹಾರವನ್ನು ನೀಡಬೇಕು. ಶಾಲೆಯಲ್ಲಿ ಮೊಟ್ಟೆ ಕೊಡುವುದರಿಂದ ಸಸ್ಯಹಾರಿ, ಮಾಂಸಹಾರಿ ಎಂಬ 2 ಗುಂಪು ರಚನೆಯಾಗತ್ತೆ. ಹೀಗಾಗಿ ಸರ್ಕಾರ ತಕ್ಷಣ ಈ ಆದೇಶವನ್ನು ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು.
ಯಾದಗಿರಿ (Yadgir) ಜಿಲ್ಲೆಯಲ್ಲಿ ಶೇಕಡಾ 74, ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 72.4, ಬಳ್ಳಾರಿ(BellarY) ಜಿಲ್ಲೆಯಲ್ಲಿ ಶೇಕಡಾ 72.3, ಕೊಪ್ಪಳ(Koppal) ಜಿಲ್ಲೆಯಲ್ಲಿ ಶೇಕಡಾ 70.7, ರಾಯಚೂರು(Raichur) ಜಿಲ್ಲೆಯಲ್ಲಿ ಶೇಕಡಾ 70.6, ಬೀದರ್(Bidar) ಜಿಲ್ಲೆಯಲ್ಲಿ ಶೇಕಡಾ 69.1, ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 68 ಮಕ್ಕಳಿಗೆ ಅಪೌಷ್ಟಿಕತೆ ಸಮಸ್ಯೆ ಕಂಡುಬಂದಿದೆ.
ಏಳು ಜಿಲ್ಲೆಗಳ 14 ಲಕ್ಷಕ್ಕೂ ಹೆಚ್ಚು ಮಕ್ಕಳು ರಕ್ತಹೀನತೆಯಿಂದಲೂ ಬಳಲುತ್ತಿರುವ ಬಗ್ಗೆ ತಿಳಿದುಬಂದಿದೆ. ಅಪೌಷ್ಟಿಕತೆ ರಕ್ತಹೀನತೆ ಬಳಲುವಿಕೆ ಹಿನ್ನೆಲೆಯಲ್ಲಿ ಡಿಸೆಂಬರ್ ನಿಂದ ಮೊಟ್ಟೆ ಬಾಳೆಹಣ್ಣು ವಿತರಿಸಲು ಸರ್ಕಾರದ ನಿರ್ಧಾರ ಕೈಗೊಳ್ಳಲಾಗಿದೆ.
6 ರಿಂದ 15ನೇ ವಯೋಮಾನವರೆಗಿನ ಒಟ್ಟು 14,44,322 ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದೊಂದಿಗೆ ಪ್ರತಿ ಮಾಹೆಗೆ 12 ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸಲು ಸುತ್ತೋಲೆ ಹೊರಡಿಸಿದ್ದು, ಒಂದು ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ವಿತರಿಸಲು ಕ್ರಮಕೈಗೊಳ್ಳುವಂತೆ ಸರ್ಕಾರ ತಿಳಿಸಿದೆ.