ಜನವರಿಗೆ ಕಾಂಗ್ರೆಸ್‌ನಿಂದ ದಲಿತ ಸಮಾವೇಶ: ಪರಂಗೆ ಸಂಪೂರ್ಣ ಜವಾಬ್ದಾರಿ

By Govindaraj SFirst Published Nov 21, 2022, 9:29 AM IST
Highlights

ರಾಜ್ಯ ಕಾಂಗ್ರೆಸ್‌ ಪಕ್ಷವು ಚುನಾವಣೆ ದೃಷ್ಟಿಯಿಂದ ದಲಿತರ ಮತಗಳನ್ನು ಗಟ್ಟಿಗೊಳಿಸಿಕೊಳ್ಳಲು ಮುಂದಾಗಿದ್ದು, ಚಿತ್ರದುರ್ಗದಲ್ಲಿ ‘ಐಕ್ಯತಾ ಸಮಾವೇಶ’ ಹೆಸರಿನಲ್ಲಿ 2023ರ ಜನವರಿ ಮೊದಲ ವಾರ ಬೃಹತ್‌ ದಲಿತ ಸಮಾವೇಶ ನಡೆಸಲು ನಿರ್ಧಾರ ಮಾಡಿದೆ.

ಬೆಂಗಳೂರು (ನ.21): ರಾಜ್ಯ ಕಾಂಗ್ರೆಸ್‌ ಪಕ್ಷವು ಚುನಾವಣೆ ದೃಷ್ಟಿಯಿಂದ ದಲಿತರ ಮತಗಳನ್ನು ಗಟ್ಟಿಗೊಳಿಸಿಕೊಳ್ಳಲು ಮುಂದಾಗಿದ್ದು, ಚಿತ್ರದುರ್ಗದಲ್ಲಿ ‘ಐಕ್ಯತಾ ಸಮಾವೇಶ’ ಹೆಸರಿನಲ್ಲಿ 2023ರ ಜನವರಿ ಮೊದಲ ವಾರ ಬೃಹತ್‌ ದಲಿತ ಸಮಾವೇಶ ನಡೆಸಲು ನಿರ್ಧಾರ ಮಾಡಿದೆ. ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ನೇತೃತ್ವದಲ್ಲಿ ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆ’ ವೇಳೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಜತೆಗೆ, ಈ ಕುರಿತ ಸಂಪೂರ್ಣ ಜವಾಬ್ದಾರಿಯನ್ನು ಪರಮೇಶ್ವರ್‌ ಹೆಗಲಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳ ಸೇರಿದಂತೆ ಹಲವು ಕ್ರಮಗಳಿಂದ ಆಡಳಿತಾರೂಢ ಬಿಜೆಪಿಯು ದಲಿತ ಮತಗಳಿಗೆ ಆಪ್ತವಾಗುವ ಪ್ರಯತ್ನ ನಡೆಸುತ್ತಿದೆ. ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್‌ ಸಹ ದಲಿತ ಸಮಾವೇಶಗಳನ್ನು ನಡೆಸಿ ಹಿಂದಿನ ಸರ್ಕಾರದಲ್ಲಿ ದಲಿತ ವರ್ಗಕ್ಕೆ ನೀಡಿದ್ದ ಕಾರ್ಯಕ್ರಮಗಳನ್ನು ನೆನಪಿಸಬೇಕು ಎಂದು ಹೈಕಮಾಂಡ್‌ ಸೂಚನೆ ನೀಡಿದೆ. ಹೀಗಾಗಿ ಚಿತ್ರದುರ್ಗದಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಂಡು ದಲಿತರನ್ನು ಕಾಂಗ್ರೆಸ್‌ನತ್ತ ಸೆಳೆಯಲು ತೀರ್ಮಾನಿಸಲಾಗಿದೆ.

Congress Ticket: ಟಿಕೆಟ್‌ ಅರ್ಜಿಯಿಂದ ‘ಕಾಂಗ್ರೆಸ್‌’ಗೆ .18 ಕೋಟಿ ಕಲೆಕ್ಷನ್‌!

ಮೊದಲಿಗೆ ವಿಜಯಪುರ ಹಾಗೂ ಚಾಮರಾಜನಗರಗಳಲ್ಲಿ ದಲಿತ ಸಮಾವೇಶಗಳನ್ನು ನಡೆಸಲು ಚಿಂತನೆ ನಡೆಸಲಾಗಿತ್ತು. ಆದರೆ, ಚಿತ್ರದುರ್ಗ ಭಾಗದಲ್ಲಿ ಪರಿಶಿಷ್ಟಜಾತಿ ಹಾಗೂ ಪಂಗಡದ ಮತಗಳು ಹೆಚ್ಚಾಗಿವೆ. ಜತೆಗೆ ಉತ್ತರ ಕರ್ನಾಟಕ ಭಾಗದ ಜನರು ಸುಲಭವಾಗಿ ಸಮಾವೇಶಕ್ಕೆ ತಲುಪಬಹುದು. ದಕ್ಷಿಣ ಮತ್ತು ಉತ್ತರ ಕರ್ನಾಟಕದ ಜನರನ್ನು ಸೇರಿಸಲು ಚಿತ್ರದುರ್ಗ ಉತ್ತಮ ಆಯ್ಕೆ ಎಂಬ ಕಾರಣಕ್ಕೆ ಚಿತ್ರದುರ್ಗದಲ್ಲಿ ಸಮಾವೇಶ ನಡೆಸಲು ಭಾನುವಾರದ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ತಿಳಿದುಬಂದಿದೆ.

ಬಸ್‌ ಯಾತ್ರೆ ಬಗ್ಗೆ ಚರ್ಚೆ: ಸಭೆಯಲ್ಲಿ ಕಾಂಗ್ರೆಸ್‌ ನಾಯಕರು ಬಸ್‌ ಯಾತ್ರೆ ಹೊರಡುವ ಬಗ್ಗೆಯೂ ಚರ್ಚೆ ನಡೆದಿದೆ. ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಬಸ್‌ ಯಾತ್ರೆ ಹೊರಡಬೇಕು ಎಂಬ ಕುರಿತು ಚರ್ಚಿಸಲಾಯಿತು. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅನುಪಸ್ಥಿತಿ ಹಿನ್ನೆಲೆಯಲ್ಲಿ ಎಷ್ಟುತಂಡಗಳಲ್ಲಿ ಯಾರಾರ‍ಯರ ನೇತೃತ್ವದಲ್ಲಿ ಬಸ್‌ ಯಾತ್ರೆ ಹಮ್ಮಿಕೊಳ್ಳಬೇಕು ಎಂಬ ಕುರಿತು ಪ್ರತ್ಯೇಕ ಸಭೆ ನಡೆಸಲು ನಿರ್ಧರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಸತೀಶ್‌ ಜಾರಕಿಹೊಳಿ ಗೈರು: ಹಿಂದೂ ಹೇಳಿಕೆ ವಿವಾದದ ಹಿನ್ನೆಲೆಯಲ್ಲಿ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರು ಭಾನುವಾರ ನಡೆದ ಎಸ್ಸಿ-ಎಸ್ಟಿಸಮಾವೇಶದ ಪೂರ್ವಭಾವಿ ಸಭೆಗೆ ಗೈರು ಹಾಜರಾಗಿದ್ದರು. ಸ್ವತಃ ಎಸ್ಟಿಸಮುದಾಯದ ಪ್ರಭಾವಿ ನಾಯಕರಾಗಿರುವ ಸತೀಶ್‌ ಜಾರಕಿಹೊಳಿ ಅನುಪಸ್ಥಿತಿ ಕುತೂಹಲ ಮೂಡಿಸಿದೆ.

ಚಿಲುಮೆ ಸಂಸ್ಥೆಯನ್ನು ನಾನು ಬಳಸಿಲ್ಲ: ಸಚಿವ ಅಶ್ವತ್ಥ್‌ ನಾರಾಯಣ

ಸಿದ್ದು ಕಾಲೆಳೆದ ಉಗ್ರಪ್ಪ: ಪೂರ್ವಭಾವಿ ಸಭೆಗೆ ಆಗಮಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ‘ಸಿದ್ದರಾಮಯ್ಯನವರೇ ನಿಮಗೆ ಈ ಸಭೆಗೆ ಆಹ್ವಾನ ಇರಲಿಲ್ಲ. ಆದರೂ ಯಾಕೆ ಬಂದ್ರಿ’ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಕಾಲೆಳೆದರು. ಇದಕ್ಕೆ ಸಿದ್ದರಾಮಯ್ಯ, ‘ನನಗೆ ಪರಮೇಶ್ವರ್‌ ಫೋನ್‌ ಮಾಡಿ ಕರೆದಿದ್ದರು. ನಿನಗೆ ಈ ರೀತಿ ಮಾತನಾಡಿಲ್ಲ ಎಂದರೆ ತಿಂದಿದ್ದು ಅರಗಲ್ವಾ’ ಎಂದು ನಗುತ್ತಲೇ ತಿರುಗೇಟು ನೀಡಿದರು.

click me!