ಜಾಗತಿಕ ಉಗ್ರ ಸಂಘಟನೆಗಳ ಜತೆ ಸಂಬಂಧ ಹಿನ್ನೆಲೆಯಲ್ಲಿ ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದ ಬೆನ್ನಲ್ಲೇ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆದಿರುವು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಂಗಳೂರು (ನ.21): ಜಾಗತಿಕ ಉಗ್ರ ಸಂಘಟನೆಗಳ ಜತೆ ಸಂಬಂಧ ಹಿನ್ನೆಲೆಯಲ್ಲಿ ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿದ ಬೆನ್ನಲ್ಲೇ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ನಡೆದಿರುವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಪಿಎಫ್‌ಐ ಬಲಿಷ್ಠವಾಗಿರುವುದೇ ದಕ್ಷಿಣ ಕನ್ನಡ ಭಾಗದಲ್ಲಿ. ಪಿಎಫ್‌ಐ ಬ್ಯಾನ್‌ಗೆ ಹಾಗೂ ಪಿಎಫ್‌ಐನ ಹಲವು ಮುಖಂಡರ ಬಂಧನಕ್ಕೆ ಪ್ರತೀಕಾರವಾಗಿ ಕರಾವಳಿ ಜಿಲ್ಲೆಯಲ್ಲಿ ಈ ರೀತಿ ದೊಡ್ಡಮಟ್ಟದ ದಾಳಿಗೆ ಉಗ್ರರು ಸಂಚು ನಡೆಸಿದ್ದರೇ ಎಂಬ ಸಂಶಯ ಇದೀಗ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಸುಮಾರು 15 ಪಿಎಫ್‌ಐ ಕಾರ್ಯಕರ್ತರು, ಮುಖಂಡರನ್ನು ಬಂಧಿಸಲಾಗಿತ್ತು.
ಇದು ಸಂಘಟನೆಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು. ಇದರ ಜತೆಗೇ ಪಿಎಫ್‌ಐ ನಿಷೇಧಿಸಿದ ಕೇಂದ್ರ ಸರ್ಕಾರ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಹಲವರನ್ನು ದ.ಕ.ಜಿಲ್ಲೆಯಲ್ಲಿ ಬಂಧಿಸಲಾಗಿತ್ತು. ಇದಕ್ಕೆ ಎಸ್‌ಡಿಪಿಐಯಿಂದ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. ಇದೇ ದ್ವೇಷದಿಂದ ಏನಾದರೂ ದುಷ್ಕೃತ್ಯ ಎಸಗಿರಬಹುದೇ ಎಂಬ ನಿಟ್ಟಿನಲ್ಲಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹಲವು ಮಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. ನಿಷೇಧಿತ ಸಂಘಟನೆಯ ಇನ್ನೂ ಹಲವರ ಲೋಕೇಶನ್ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದು, ಈ ಕೃತ್ಯದೊಂದಿಗೆ ಅವರ ಶಾಮೀಲಾಗಿದ್ದಾರೆಯೇ ಎಂಬ ಕುರಿತೂ ಪರಿಶೀಲನೆ ನಡೆಯುತ್ತಿದೆ.
ಮಂಗಳೂರು ಸ್ಫೋಟ ಪ್ರಕರಣ; ಸ್ಥಳದಲ್ಲಿ ರೈಲ್ವೇ ಇಲಾಖೆ ನೌಕರನ ಆಧಾರ್ ಕಾರ್ಡ್ ಪತ್ತೆ!
ನಿಷೇಧಿತ ಪಿಎಫ್‌ಐ ಮುಖಂಡ ಮಂಗಳೂರು ಏರ್‌ಪೋರ್ಟ್‌ನಲ್ಲಿ ವಶ: ಮಂಗಳೂರು ವಿಮಾನ ನಿಲ್ದಾಣದ ಮೂಲಕ ದುಬೈಗೆ ತೆರಳಲು ಯತ್ನಿಸಿದ್ದ ನಿಷೇಧಿತ ಸಂಘಟನೆ ಪಿಎಫ್‌ಐನ ದ.ಕ.ಜಿಲ್ಲಾಧ್ಯಕ್ಷನಾಗಿದ್ದ ಇಜಾಜ್ ಅಹ್ಮದ್‌ನನ್ನು ಎನ್‌ಐಎ ವಶಕ್ಕೆ ಪಡೆದಿದೆ. ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನಿವಾಸಿಯಾಗಿರುವ ಇಜಾಜ್ ಅಹ್ಮದ್‌ನನ್ನು ಪಿಎಫ್‌ಐ ಸಂಘಟನೆ ನಿಷೇಧದ ಬಳಿಕ ಅ.27ರಂದು ಬಂಧಿಸಲಾಗಿತ್ತು. ಅದಾಗಿ ಹತ್ತು ದಿನಗಳ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಈ ನಡುವೆ ಭಾನುವಾರ ದುಬೈಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಗುರುತು ಪತ್ತೆ ಹಚ್ಚಿದ ಎನ್‌ಐಎ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ಆಟೋ ರಿಕ್ಷಾ ಸ್ಫೋಟ ಉಗ್ರ ಕೃತ್ಯ: ಮಂಗಳೂರಿನ ಗರೋಡಿಯಲ್ಲಿ ಆಟೋರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಆಕಸ್ಮಿಕವಲ್ಲ. ಗಂಭೀರ ಹಾನಿಯುಂಟು ಮಾಡುವ ಉದ್ದೇಶದಿಂದ ನಡೆದ ಭಯೋತ್ಪಾದನಾ ಕೃತ್ಯವಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರು ಸ್ಫೋಟ ಪ್ರಕರಣದ ಜಾಲ ಭೇದಿಸುತ್ತೇವೆ: ಸಿಎಂ ಬೊಮ್ಮಾಯಿ
ಈ ಸಂಬಂಧ ಭಾನುವಾರ ಟ್ವೀಟ್ ಮಾಡಿರುವ ಅವರು, ಈ ಸ್ಫೋಟದ ಸಂಬಂಧ ರಾಜ್ಯ ಪೊಲೀಸರು ಕೇಂದ್ರದ ತನಿಖಾ ಸಂಸ್ಥೆಗಳ ಜತೆಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಸ್ಫೋಟ ಪ್ರಕರಣಕ್ಕೂ ಪ್ರೇಮರಾಜ್‌ಗೂ ಸಂಬಂಧವಿಲ್ಲ. ಪ್ರೇಮ್ ರಾಜ್ ದಾಖಲೆಗಳು ಕಳುವಾಗಿದ್ದವು. ಹೀಗಾಗಿ ಅವರಿಗೂ ಈ ಸ್ಫೋಟ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ಫೋಟದ ಸ್ಥಳದಲ್ಲಿ ಪ್ರೇಮರಾಜ್ ಹುಟಗಿ ಹೆಸರಿನ ಆಧಾರ್ ಕಾರ್ಡ್ ಪತ್ತೆಯಾಗಿದೆ ಎಂದು ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವೀಣ್ ಸೂದ್ ಸ್ಪಷ್ಟನೆ ನೀಡಿದ್ದಾರೆ.