Mangaluru: ಕುಕ್ಕರ್‌ ಬಾಂಬ್‌ ಸ್ಫೋಟಿಸಿದ್ದು ಗೋಡೆ ಬರಹದ ಆರೋಪಿ ಶಾರೀಕ್‌?

By Govindaraj S  |  First Published Nov 21, 2022, 8:49 AM IST

2020ರಲ್ಲಿ ಮಂಗಳೂರಿನಲ್ಲಿ ‘ಲಷ್ಕರ್‌ ಜಿಂದಾಬಾದ್‌’ ಎಂದು ಉಗ್ರ ಸಂಘಟನೆಗಳನ್ನು ಬೆಂಬಲಿಸಿ ಬರೆದಿದ್ದ ಗೋಡೆ ಬರಹ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.
 


ಮಂಗಳೂರು (ನ.21): 2020ರಲ್ಲಿ ಮಂಗಳೂರಿನಲ್ಲಿ ‘ಲಷ್ಕರ್‌ ಜಿಂದಾಬಾದ್‌’ ಎಂದು ಉಗ್ರ ಸಂಘಟನೆಗಳನ್ನು ಬೆಂಬಲಿಸಿ ಬರೆದಿದ್ದ ಗೋಡೆ ಬರಹ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ನಂತರ ಜಾಮೀನು ಮೇಲೆ ಬಿಡುಗಡೆಯಾಗಿದ್ದ ತೀರ್ಥಹಳ್ಳಿಯ ಶಂಕಿತ ಉಗ್ರ ಶಾರೀಕ್‌ನೇ ಮಂಗಳೂರಲ್ಲಿ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡ ಯುವಕನಾಗಿರಬಹುದೇ ಎಂಬ ಶಂಕೆ ಇದೀಗ ಮೂಡಿದೆ.

ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿ ಶಾರೀಕ್‌ ಮಂಗಳೂರಿನ ಗೋಡೆ ಬರಹ ಪ್ರಕರಣದಲ್ಲಿ ಬಂಧನಕ್ಕೀಡಾಗಿ 8 ತಿಂಗಳ ಬಳಿಕ 2021ರ ಫೆಬ್ರವರಿಯಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿದ್ದ. ಕೆಲ ಸಮಯದ ಹಿಂದೆ ಶಿವಮೊಗ್ಗದಲ್ಲಿ ಸಾವರ್ಕರ್‌ ಬ್ಯಾನರ್‌ ಗಲಾಟೆ ವೇಳೆ ಆಗಿದ್ದ ವ್ಯಕ್ತಿಯೊಬ್ಬರಿಗೆ ಚಾಕು ಇರಿತ ಪ್ರಕರಣದಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಘಟನೆ ಹಿಂದೆ ಶಂಕಿತ ಉಗ್ರರ ನಂಟಿರುವುದು ಬೆಳಕಿಗೆ ಬಂದಿತ್ತು. ಆರೋಪಿಗಳು ಐಸಿಸ್‌ನಿಂದ ಪ್ರೇರಣೆಯಾಗಿದ್ದಲ್ಲದೆ, ತುಂಗಾ ನದಿ ತೀರದಲ್ಲಿ ಬಾಂಬ್‌ ತಯಾರಿಸಲು ಟ್ರಯಲ್‌ ಬ್ಲಾಸ್ಟ್‌ ನಡೆಸಿರುವ ಮಾಹಿತಿ ಕೂಡ ಸಿಕ್ಕಿತ್ತು. 

Tap to resize

Latest Videos

ಟೆರರ್‌ ಲಿಂಕ್‌ ಬಗ್ಗೆ ಕೇಂದ್ರ ತಂಡದ ಜತೆ ತನಿಖೆ: ಸಚಿವ ಆರಗ ಜ್ಞಾನೇಂದ್ರ

ಈ ಪ್ರಕರಣದಲ್ಲಿ ಮಾಜ್‌ ಮುನೀರ್‌ ಮತ್ತು ಸೈಯದ್‌ ಯಾಸೀನ್‌ ಎಂಬವರನ್ನು ಬಂಧಿಸಿದ್ದರೂ, ಪ್ರಮುಖ ಆರೋಪಿಯಾಗಿದ್ದ ಶಾಕೀರ್‌ ತಲೆಮರೆಸಿಕೊಂಡಿದ್ದ. ಇದೀಗ ಅದೇ ಶಾರೀಕ್‌ ಮಂಗಳೂರಿನಲ್ಲಿ ಬಾಂಬ್‌ ಸ್ಫೋಟ ನಡೆಸಲು ಹೋಗಿ ಸಿಕ್ಕಿಬಿದ್ದಿದ್ದಾನೆಯೇ ಎಂಬ ಸಂಶಯ ಇದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ರಿಕ್ಷಾದಲ್ಲಿ ಬಾಂಬ್‌ ಹಿಡಿದುಕೊಂಡು ಬಂದಿದ್ದ ಯುವಕನಿಗೆ 20-22 ವಯಸ್ಸಾಗಿರಬಹುದು. ಶಾರೀಕ್‌ಗೂ ಹೆಚ್ಚು ಕಡಿಮೆ ಇದೇ ವಯಸ್ಸು ಮತ್ತು ಇದೇ ರೀತಿಯ ಚಹರೆ ಹೊಂದಿದ್ದ ಎನ್ನಲಾಗಿದೆ. ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆರೋಪಿಗೆ ಗಂಭೀರ ಸುಟ್ಟಗಾಯಗಳಾಗಿದ್ದು, ಆತ ಇನ್ನೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಪೊಲೀಸರು ಆರೋಪಿಯ ಗುರುತನ್ನು ಇನ್ನೂ ಬಹಿರಂಗಪಡಿಸಿಲ್ಲ.

ಆರೋಪಿ ಗುರುತು ಪತ್ತೆಗೆ ಸಂಬಂಧಿಕರಿಗೆ ಬುಲಾವ್‌: ಮಂಗಳೂರಿನಲ್ಲಿ ಶನಿವಾರ ಆಟೋದಲ್ಲಿ ಸಂಭವಿಸಿದ ಸ್ಫೋಟದಿಂದ ಗಾಯಗೊಂಡಿರುವ ಆರೋಪಿ ಗುರುತಿಗಾಗಿ ಅವನ ಸಂಬಂಧಿಗಳನ್ನು ಕರೆಸಿದ್ದೇವೆ. ಭಾನುವಾರ ಮಧ್ಯರಾತ್ರಿ ಅವರು ಮಂಗಳೂರಿಗೆ ಬರಲಿದ್ದಾರೆ. ಸದ್ಯ ಆರೋಪಿಯ ಮುಖ ಸುಟ್ಟಗಾಯಗಳಿಂದ ಊದಿಕೊಂಡಿದ್ದು, ಮಾತನಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಆರೋಪಿಯ ಗುರುತು ಪತ್ತೆ ನಡೆಯಬೇಕಿದೆ. ಒಂದೋ ಡಿಎನ್‌ಎ ಅಥವಾ ಸಂಬಂಧಿಕರಿಂದ ಗುರುತು ಪತ್ತೆ ನಡೆಸಬೇಕಿದೆ. ಈ ಕಾರಣಕ್ಕಾಗಿ ಆತನ ಸಂಬಂಧಿಕರನ್ನು ಕರೆಸಲಾಗಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್‌ ತಿಳಿಸಿದ್ದಾರೆ.

ಘಟನೆ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಮಂಗಳೂರಿಗೆ ಆಗಮಿಸಿದ ಅವರು ಆಸ್ಪತ್ರೆ ಭೇಟಿ, ಸ್ಥಳ ಪರಿಶೀಲನೆ, ಸ್ಥಳೀಯರೊಂದಿಗೆ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಆರೋಪಿಯ ಗುರುತು ಖಚಿತಪಡಿಸಿದ ಬಳಿಕವೇ ಹೇಳುತ್ತೇವೆ. ಸೋಮವಾರ ಈ ಬಗ್ಗೆ ಸ್ಪಷ್ಟಮಾಹಿತಿ ನೀಡುವುದಾಗಿ ಹೇಳಿದರು.

ಮಂಗಳೂರು ಸ್ಫೋಟ ಪ್ರಕರಣದ ಜಾಲ ಭೇದಿಸುತ್ತೇವೆ: ಸಿಎಂ ಬೊಮ್ಮಾಯಿ

ಆರೋಪಿ ಎಂದು ಗುರುತಿಸಿಕೊಂಡಾತನಿಗೆ ಶೇ.45ರಷ್ಟು ಸುಟ್ಟ ಗಾಯಗಳಾಗಿವೆ. ಅವನು ಕೈ ಚಿಹ್ನೆಯ ಮೂಲಕ ಮಾತ್ರ ಪ್ರಶ್ನೆಗೆ ಉತ್ತರ ಹೇಳುತ್ತಿದ್ದಾನೆ. ಸದ್ಯದ ವಿಚಾರಣೆಯಿಂದ ಬಹಳಷ್ಟುಮಾಹಿತಿ ಸಿಕ್ಕಿದೆ. ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿ ಮಂಗಳೂರಿನಲ್ಲಿ ಎಲ್ಲೆಲ್ಲ ಹೋಗಿದ್ದಾನೆ, ಯಾರ ಜೊತೆ ಸಂಪರ್ಕದಲ್ಲಿದ್ದಾನೆ ಅನ್ನೋದನ್ನು ತನಿಖೆ ಮಾಡಬೇಕಿದೆ. ಘಟನೆಗೆ ಸಂಬಂಧಿಸಿದಂತೆ ಬೇರೆ ಬೇರೆ ಆಂಗಲ್‌ನಲ್ಲಿ ತನಿಖೆ ನಡೆಯಲಿದೆ. ಅದರ ಬಳಿಕವೇ ಖಚಿತವಾಗಿ ಆರೋಪಿಯ ರೋಲ್‌ ಬಗ್ಗೆ ತಿಳಿಯಲಿದೆ ಎಂದರು.

click me!