ಸಂಪೂರ್ಣವಾಗಿ ಹೊಸದಾಗಿ (ಗ್ರೀನ್‌ಫೀಲ್ಡ್) ಜಮೀನು ಖರೀದಿಸಿ ನಿರ್ಮಿಸಿರುವ ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕದಿಂದ ಆಂಧ್ರಪ್ರದೇಶ ಮಾರ್ಗವಾಗಿ ತಮಿಳುನಾಡು ಮೂಲಕ ಚೆನ್ನೈನ ಶ್ರೀಪೆರಂಬೂರಿನಲ್ಲಿ ಮುಕ್ತಾಯಗೊಳ್ಳಲಿದೆ. ಹಾಲಿ ಈ 2 ಮಹಾನಗರಗಳ ನಡುವಿನ ಅಂತರ 350 ಕಿ.ಮೀ ಇದೆ. ಎಕ್‌ಪ್ರೆಸ್‌ವೇ ನಿರ್ಮಾಣದಿಂದ 280 ಕಿ.ಮೀಗೆ ಇಳಿಕೆಯಾಗಲಿದೆ.
ಬೆಂಗಳೂರು(ಅ.15): ದಕ್ಷಿಣ ಭಾರತದ 2 ಮಹಾನಗರಗಳ ನಡುವಿನ ಪ್ರಯಾಣ ಸಮಯ ಮತ್ತು ದೂರವನ್ನು ಗಣನೀಯವಾಗಿ ಕಡಿತಗೊಳಿಸಲಿರುವ ಬಹುನಿರೀಕ್ಷೆಯ 'ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ' (ಬಿಸಿಇ) ಕರ್ನಾಟಕ ಭಾಗದ 71 ಕಿ.ಮೀ ಉದ್ದದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇನ್ನೊಂದು ತಿಂಗಳಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳಲಿದೆ.
ಹೊಸಕೋಟೆ ಸಮೀಪದ ದೇವಸ್ಥಾನವೊಂದನ್ನು ಸ್ಥಳಾಂತರ ಮಾಡಬೇಕಿದ್ದ ಕಾರಣ ಸುಮಾರು 400 ಮೀ. ಉದ್ದದ ಮಾರ್ಗದ ಕಾಮಗಾರಿ ಬಾಕಿ ಉಳಿದಿತ್ತು. ಇತ್ತೀಚೆಗೆ ಅದನ್ನೂ ಸ್ಥಳಾಂತರಗೊಳಿಸಿರುವುದರಿಂದ ಮುಂದಿನ 1 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕ ವಿಲಾಸ್ ಪಿ. ಬ್ರಹ್ಮಂಕಾರ್ 'ಕನ್ನಡಪ್ರಭ'ಕ್ಕೆ ತಿಳಿಸಿದರು.
6 ತಿಂಗಳಲ್ಲಿ 14 ಲೇನ್ ಬೆಂಗ್ಳೂರು-ಮುಂಬೈ ರಸ್ತೆ ಕೆಲಸ ಶುರು: ಕೇಂದ್ರ ಸಚಿವ ನಿತಿನ್ ಗಡ್ಕರಿ
ರಾಜ್ಯ ಭಾಗದ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ ಬೆಂಗಳೂರಿನಿಂದ ಮಾಲೂರು, ಬಂಗಾರಪೇಟೆ, ಕೆಜಿಎಫ್ ಕಡೆ ತೆರಳುವ ಪ್ರಯಾಣಿಕರು ಎಕ್ಸ್‌ಪ್ರೆಸ್‌ವೇ ಬಳಸಬಹುದು. ಈ ಮಾರ್ಗದ ಟೋಲ್ ದರ ಅಂತಿಮಗೊಂಡಿಲ್ಲ. ಆಂಧ್ರಪ್ರದೇಶ ಮತ್ತು ತಮಿಳುನಾಡು ಭಾಗದ ಕಾಮಗಾರಿಯು ಪೂರ್ಣಗೊಂಡರೆ ವಾಹನಗಳ ಸಂಚಾರ ಉತ್ತಮಗೊಳ್ಳುತ್ತದೆ. ಈ 2 ರಾಜ್ಯಗಳಲ್ಲಿ ಕಾಮಗಾರಿ 2025ರ ಏಪ್ರಿಲ್ ವೇಳೆಗೆ ಮುಗಿಯಬಹುದು ಎಂದು ಅಂದಾಜಿಸಲಾಗಿದೆ. ಪ್ರತಿ ಗಂಟೆಗೆ ಗರಿಷ್ಠ 120 ಕಿ.ಮೀ ವೇಗದಲ್ಲಿ ವಾಹನಗಳು ಸಂಚರಿಸುವಂತೆ ರಸ್ತೆಯನ್ನು ವಿನ್ಯಾಸಗೊಳಿಸಲಾಗಿದೆ. ಆದರೆ, 100 ಕಿ.ಮೀ ವೇಗದಲ್ಲಿ ವಾಹನ ಸಂಚಾರಕ್ಕೆ ಅನುಮತಿ ಸಿಗಬಹುದು. ಹೊಸಕೋಟೆ ಬಳಿಯ ಸ್ಯಾಟಲೈಟ್ ರಿಂಗ್ ರಸ್ತೆ ಸೇರುವ ಸ್ಥಳದಿಂದ ಎಕ್ಸ್‌ಪ್ರೆಸ್‌ವೇ ಪ್ರಾರಂಭವಾಗುತ್ತದೆ. ಬಂಗಾರಪೇಟೆ ಮಾಲೂರು ಮತ್ತು ಕೆಜಿಎಫ್ ಬಳಿ ಇಂಟರ್‌ಚೇಂಜ್ ಇರಲಿವೆ. ಹಾಲಿ ಇರುವ ಹೆದ್ದಾರಿಯಲ್ಲಿ ತೆರಳಿದರೆ ಈ ಮಾರ್ಗ ಕ್ರಮಿಸಲು ಒಂದೂವರೆ ತಾಸು ಬೇಕು. ಎಕ್ಸ್‌ಪ್ರೆಸ್‌ವೇನಲ್ಲಿ ಕೇವಲ ಮುಕ್ಕಾಲು ಗಂಟೆ ಸಾಕು.
ಬೆಂಗಳೂರು-ಚೆನ್ನೈ ಕೇವಲ 4 ತಾಸು!
ಸಂಪೂರ್ಣವಾಗಿ ಹೊಸದಾಗಿ (ಗ್ರೀನ್‌ಫೀಲ್ಡ್) ಜಮೀನು ಖರೀದಿಸಿ ನಿರ್ಮಿಸಿರುವ ಈ ಎಕ್ಸ್‌ಪ್ರೆಸ್‌ವೇ ಕರ್ನಾಟಕದಿಂದ ಆಂಧ್ರಪ್ರದೇಶ ಮಾರ್ಗವಾಗಿ ತಮಿಳುನಾಡು ಮೂಲಕ ಚೆನ್ನೈನ ಶ್ರೀಪೆರಂಬೂರಿನಲ್ಲಿ ಮುಕ್ತಾಯಗೊಳ್ಳಲಿದೆ. ಹಾಲಿ ಈ 2 ಮಹಾನಗರಗಳ ನಡುವಿನ ಅಂತರ 350 ಕಿ.ಮೀ ಇದೆ. ಎಕ್‌ಪ್ರೆಸ್‌ವೇ ನಿರ್ಮಾಣದಿಂದ 280 ಕಿ.ಮೀಗೆ ಇಳಿಕೆಯಾಗಲಿದೆ.
ಹಾಲಿ ಇರುವ ಹೆದ್ದಾರಿಗಳಲ್ಲಿ 2 ನಗರ ನಡುವೆ ಕ್ರಮಿಸಲು ಐದೂವರೆ ತಾಸು ಬೇಕು. ಎಕ್ಸ್‌ಪ್ರೆಸ್‌ವೇನಲ್ಲಿ ಕೇವಲ ಮೂರುವರೆ, ನಾಲ್ಕು ತಾಸಲ್ಲಿ ತಲುಪಬಹುದಾಗಿದೆ. 2011ರಲ್ಲಿ ಯೋಜನೆ ಘೋಷಣೆಯಾಗಿತ್ತು. 2022ರಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. 2024ರ ಅಕ್ಟೋಬರ್‌ವೇಳೆಗೆ ಇಡೀ ಕಾಮಗಾರಿ ಪೂರ್ಣಗೊಳಿಸುವ ಗುರಿ ಇತ್ತು.
ಬೆಂಗ್ಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಅಪಘಾತದಿಂದ ಸಾವು ಇಳಿಮುಖ
ರಾಜ್ಯದ ವ್ಯಾಪ್ತಿಯ 71 8. ಕಿ.ಮೀ ಕಾಮಗಾರಿ ಬಹುತೇಕ ಮುಕ್ತಾಯವಾಗಿದೆ. ಇನ್ನೊಂದು ತಿಂಗಳಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಹೊಸಕೋಟೆಯಿಂದ ಕೆಜಿಎಫ್ ತಾಲೂಕಿನ ಆಂಧ್ರಪ್ರದೇಶ-ಕರ್ನಾಟಕ ಗಡಿಯನ್ನು ಕೇವಲ 45 ನಿಮಿಷಗಳಲ್ಲಿ ತಲುಪಬಹುದು. • ವಿಲಾಸ್ ಪಿ. ಬ್ರಹ್ಮಂಕರ್ ಪ್ರಾದೇಶಿಕ ಅಧಿಕಾರಿ, ಎಚ್‌ಎಚ್‌ಎಐ
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಗ್ರೀನ್ ಫೀಲ್ಡ್ ಯೋಜನೆಯ ವಿವರ
• ಒಟ್ಟು ಉದ್ದ- 280 ಕಿ.ಮೀ. ಉದ್ದದ ರಸ್ತೆ
• ರಾಜ್ಯದಲ್ಲಿ ಸಾಗುವ ಮಾರ್ಗ- 71 ಕಿ.ಮೀ
• ಎಕ್ಸ್‌ಪ್ರೆಸ್‌ವೇ ಆರಂಭ ಪಾಯಿಂಟ್- ಹೊಸಕೋಟೆ
• ರಾಜ್ಯದ ಇಂಟರ್ ಚೇಂಜ್‌ಗಳು ಮಾಲೂರು, ಬಂಗಾರಪೇಟೆ ಮತ್ತು ಕೆಜಿಎಫ್ ತಾಲೂಕಿನ ಸುಂದರಪಾಳ್ಯ
• 4 ಪಥಗಳ ಎಕ್ಸ್‌ಪ್ರೆಸ್ ವೇ. (ಭವಿಷ್ಯದಲ್ಲಿ 8 ಪಥಗಳಿಗೆ ವಿಸ್ತರಿಸಬಹುದಾದ ರೀತಿಯಲ್ಲಿ ನಿರ್ಮಾಣ)
• 2011ರಲ್ಲಿ ಘೋಷಣೆಯಾಗಿದ್ದ ಯೋಜನೆ, 2022ರಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿತ್ತು
# 2025ರ ಏಪ್ರಿಲ್ ವೇಳೆಗೆ ಸಂಪೂರ್ಣ 280 ಕಿ.ಮೀ ಕಾಮಗಾರಿ ಪೂರ್ಣವಾಗುವ ನಿರೀಕ್ಷೆ