ಸಿ ಮತ್ತು ಡಿ ಭೂಮಿ ಅರಣ್ಯವಾಗಿ ಪರಿವರ್ತಿಸಲು ಮುಂದಾದ ರಾಜ್ಯ ಸರ್ಕಾರ; ಹೊಲ, ತೋಟ ಮನೆ ಕಳೆದುಕೊಳ್ಳುವ ಕೊಡಗಿನ ರೈತರು!

By Suvarna News  |  First Published Oct 14, 2024, 10:58 PM IST

 ರಾಜ್ಯ ಸರ್ಕಾರ ಅರಣ್ಯ ಭೂಮಿಯ ಪ್ರಮಾಣ ಹೆಚ್ಚಿಸಬೇಕೆಂಬ ಒಂದೇ ಕಾರಣಕ್ಕೆ ಸಿ ಮತ್ತು ಡಿ ಭೂಮಿಯನ್ನು ನಿಯಮ 4 (1) ನ್ನು ಜಾರಿ ಮಾಡಿ ಅರಣ್ಯ ಭೂಮಿಯೆಂದು ಮಾಡಲು ಹೊರಟಿದೆ. ಈ ಎಡವಟ್ಟು ಕೊಡಗಿನ ಸಾವಿರಾರು ಕುಟುಂಬಗಳಿಗೆ ಬೀದಿಗೆ ಬೀಳುವಂತಹ ಆತಂಕ ತೊಂದೊಡ್ಡಿದೆ. 


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಅ.14) : ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ಇರುವ ಕೊಡಗು ಜಿಲ್ಲೆಯಲ್ಲಿ ಯಥೇಚ್ಛವಾಗಿ ಕಂದಾಯ ಇಲಾಖೆಯ ಸರ್ಕಾರಿ ಭೂಮಿ ಮತ್ತು ಅರಣ್ಯ ಭೂಮಿ ಇದೆ. ಈ ಸರ್ಕಾರಿ ಭೂಮಿಯಲ್ಲಿ ಸಾವಿರಾರು ಕುಟುಂಬಗಳು ಮನೆ ನಿರ್ಮಿಸಿಕೊಂಡು, ವ್ಯವಸಾಯ ಮಾಡುತ್ತಾ ತಮ್ಮ ಬದುಕು ಕಟ್ಟಿಕೊಂಡಿವೆ. ಆದರೆ ರಾಜ್ಯ ಸರ್ಕಾರ ಅರಣ್ಯ ಭೂಮಿಯ ಪ್ರಮಾಣ ಹೆಚ್ಚಿಸಬೇಕೆಂಬ ಒಂದೇ ಕಾರಣಕ್ಕೆ ಸಿ ಮತ್ತು ಡಿ ಭೂಮಿಯನ್ನು ನಿಯಮ 4 (1) ನ್ನು ಜಾರಿ ಮಾಡಿ ಅರಣ್ಯ ಭೂಮಿಯೆಂದು ಮಾಡಲು ಹೊರಟಿದೆ. ಈ ಎಡವಟ್ಟು ಕೊಡಗಿನ ಸಾವಿರಾರು ಕುಟುಂಬಗಳಿಗೆ ಬೀದಿಗೆ ಬೀಳುವಂತಹ ಆತಂಕ ತೊಂದೊಡ್ಡಿದೆ. 

Tap to resize

Latest Videos

undefined

ಜಿಲ್ಲೆಯಲ್ಲಿ 13 ಸಾವಿರ ಹೆಕ್ಟೇರ್ ಭೂಮಿಯನ್ನು ಅರಣ್ಯ ಭೂಮಿಯೆಂದು ಮಾಡಲು ಸುಪ್ರೀಂಕೋರ್ಟ್ ಆದೇಶದಂತೆ ಮೂರು ತಿಂಗಳ ಹಿಂದೆಯೇ ಅರಣ್ಯ ಇಲಾಖೆ ನೋಟಿಫಿಕೇಷನ್ ಹೊರಟಿಸಿದೆ. ಆದರೆ ಅದು ಜನಸಾಮಾನ್ಯರಿಗೆ ಗೊತ್ತೇ ಆಗಿಲ್ಲ. ಈ ನೋಟಿಫಿಕೇಷನ್ಗೆ ಆಕ್ಷೇಪಣೆ ಸಲ್ಲಿಸಲು ಅಕ್ಟೋಬರ್ 4 ಕೊನೆಯ ದಿನವಾಗಿತ್ತು. ಇದೀಗ ಅದೂ ಕೂಡ ಮುಗಿದು ಹೋಗಿದ್ದು, ನಿಮ್ಮದೇ ಭೂಮಿ ಅಥವಾ ಮನೆ ಎಂಬುದನ್ನು ಸಾಬೀತುಪಡಿಸಲು ಅಗತ್ಯವಾದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಇದು ಜನರಿಗೆ ಆತಂಕದ ಜೊತೆಗೆ ಸಿಟ್ಟಿಗೇಳುವಂತೆ ಮಾಡಿದೆ. ಮೂರು ತಿಂಗಳ ಹಿಂದೆಯೇ ಅರಣ್ಯ ಇಲಾಖೆ ಪಂಚಾಯಿತಿಗಳಿಗೆ ನೊಟೀಸ್ ನೀಡಿದೆ. ಆದರೆ ಪಂಚಾಯಿತಿಗಳಿಂದ ನಮಗೆ ಯಾವುದೇ ಮಾಹಿತಿಯನ್ನೇ ನೀಡಿಲ್ಲ. ಆಕ್ಷೇಪಣೆ ಸಲ್ಲಿಸಲು ನಮಗೆ ಸಮಯಾವಕಾಶವೂ ಇಲ್ಲ ಎಂದು ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಅಸಮಾಧಾನ ಹೊರಹಾಕಿದ್ದಾರೆ. 

ಮೈಸೂರು ಲೋಕಸಭೆ ಸೋಲಿಗೆ ಕ್ಯಾಂಡಿಡೇಟ್ ಸರಿ ಇಲ್ಲದ್ದೇ ಕಾರಣ: ಶಾಸಕ ಹರೀಶ್ ಗೌಡ

ಒಂದೊಂದು ಸರ್ವೇ ನಂಬರಿನಲ್ಲೂ ನೂರಾರು ಹೆಕ್ಟೇರ್ ಸಿ ಮತ್ತು ಡಿ ದರ್ಜೆಯ ಭೂಮಿ ಇದ್ದು ಅದನ್ನು ಅರಣ್ಯ ಭೂಮಿಯನ್ನಾಗಿ ಪರಿವರ್ತಿಸಲು ಹೊರಟಿದೆ. ತಮ್ಮ ಜಮೀನುಗಳ ಪಹಣಿಗಳಲ್ಲಿ ಅರಣ್ಯ ಎಂದು ನಮೂದಾಗಿದ್ದು ತಾವು ಸಾಗುವಳಿ ಮಾಡುತ್ತಿದ್ದರೆ, ಅಥವಾ ದರಕಾಸ್ತು ಆಗಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಅದನ್ನು ಅರಣ್ಯವನ್ನಾಗಿಯೇ ಪರಿವರ್ತಿಸಲಾಗುವುದು ಎಂದು ನೂರಾರು ಕುಟುಂಬಗಳಿಗೆ ನೊಟೀಸ್ ನೀಡಲಾಗಿದೆ. ಇದರಿಂದ ತಮ್ಮ ಜಮೀನು, ತೋಟಗಳ ಜತೆಗೆ ತಮ್ಮ ಮನೆಗಳನ್ನೂ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ. 

ಅಜ್ಜ, ತಾತಂದಿರ ಕಾಲದಿಂದಲೂ ತೋಟ, ಗದ್ದೆಗಳನ್ನು ಮಾಡಿಕೊಂಡು ಕೃಷಿ ಮಾಡುತ್ತಿದ್ದೇವೆ. ನಮ್ಮ ಹಿರಿಯರು ನಿರ್ಮಾಣ ಮಾಡಿಕೊಂಡು ಬಾಳಿ ಬದುಕಿದ ಮನೆಗಳಿವೆ. ಅವುಗಳಿಗೆ ಸರ್ಕಾರ ಹಕ್ಕುಪತ್ರಗಳನ್ನು ನೀಡಿದೆ. ಆದರೂ ಸಿ ಮತ್ತು ಡಿ ಭೂಮಿ ಅರಣ್ಯ ಎಂದು ನಮೂದಿಸಿ ಅದನ್ನು ಅರಣ್ಯವನ್ನಾಗಿಯೇ ಪರಿವರ್ತಿಸಲು ಹೊರಟಿರುವುದು ಸರ್ಕಾರ ಜನರಿಗೆ ಮಾಡುತ್ತಿರುವ ದ್ರೋಹ ಎಂದು ಸುನೀತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಹಿಂದಿನ ಯಾವ ಸರ್ಕಾರಗಳು ಈ ರೀತಿ ಮಾಡಿರಲಿಲ್ಲ, ಈಗ ರಾಜ್ಯ ಸರ್ಕಾರ ಇದನ್ನು ಜಾರಿ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಮಡಿಕೇರಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರು ಸಿ ಮತ್ತು ಡಿ ಭೂಮಿ ಅದು ಕಂದಾಯ ಇಲಾಖೆಯ ಭೂಮಿಯೇ. ಇದನ್ನು ಭೂ ಬ್ಯಾಂಕಿಗೆ ನೀಡಿದ್ದೇವೆ. ಇದನ್ನು ಯಾವಾಗ ಬೇಕಾದರೂ ವಾಪಸ್ ಪಡೆಯಬಹುದು ಎಂಬ ನಿಯಮವಿದೆ. ಹೀಗಾಗಿಯೇ ಸಿ ಮತ್ತು ಡಿ ಭೂಮಿಯಲ್ಲಿ ತೋಟ, ಹೊಲಗಳನ್ನು ಮಾಡಿರುವವರಿಗೆ ಮತ್ತು ಮನೆ ನಿರ್ಮಿಸಿಕೊಂಡು ಜೀವನ ಮಾಡುತ್ತಿದ್ದವರಿಗೆ ಸರ್ಕಾರದ ಆದೇಶದ ಮೇರೆಗೆ ಹಕ್ಕುಪತ್ರಗಳನ್ನು ನೀಡಿದ್ದೇವೆ.

ಯಾರದ್ದೋ ಜಾಗ ಉಳಿಸಲು ಅಮಾಯಕರ ಮನೆಗಳ ಅರಣ್ಯಕ್ಕೆ ಸೇರಿಸಿದ ಆರೋಪ: ಮಡಿಕೇರಿಯ 17 ಕುಟುಂಬಗಳ ಸ್ಥಿತಿಯೇನು?

 ಸುಪ್ರೀಂ ಕೋರ್ಟ್ ಆದೇಶ ಮಾಡಿದರೆ ಅದಕ್ಕೆ ಸರ್ಕಾರ ಅಫಿಡೆವಿಟ್ ಹಾಕಿ ನಿಜಾಂಶವನ್ನು ತಿಳಿಸುವ ಕೆಲಸವನ್ನು ಮಾಡಬೇಕಾಗಿತ್ತು. ಆದನ್ನು ಬಿಟ್ಟು ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲ ಎಂದು ಸುಳ್ಳು ಹೇಳುತ್ತಿದೆ. ಇದರ ವಿರುದ್ಧ ಕೋರ್ಟ್ ಮೊರೆ ಹೋಗಲಾಗುವುದು ಎಂದು ಹೇಳಿದ್ದಾರೆ. ಏನೇ ಆಗಲಿ ಸಿ ಮತ್ತು ಡಿ ಭೂಮಿಯಲ್ಲಿ ಉಳುಮೆ ಮಾಡುತ್ತಿರುವವರ ಪಹಣಿಯಲ್ಲಿ ಅರಣ್ಯ ಭೂಮಿಯೆಂದು ನಮೂದಾಗಿದೆ ಎಂಬ ಕಾರಣಕ್ಕೆ ಇದೀಗ ಅವರ ಹೊಲ ತೋಟಗಳನ್ನೆಲ್ಲಾ ಅರಣ್ಯ ಮಾಡಲು ಹೊರಟಿರುವುದು ಜನರನ್ನು ಚಿಂತೆಗೆ ದೂಡಿದೆ.

click me!