ಕೊರೋನಾ ಜಯಿಸಿದ 107 ವರ್ಷದ ಅಜ್ಜಿ!

By Kannadaprabha NewsFirst Published May 25, 2021, 7:53 AM IST
Highlights

* ಕೊರೋನಾ ಜಯಿಸಿದ 107 ವರ್ಷದ ಅಜ್ಜಿ!

* ಸೋಂಕು ಗೆದ್ದ ರಾಜ್ಯದ 2ನೇ ಅತಿ ಹಿರಿಯ ವ್ಯಕ್ತಿ

* 10 ದಿನ ಐಸಿಯುನಲ್ಲಿದ್ದ ಚಿಕ್ಕಬಳ್ಳಾಪುರದ ವೃದ್ಧೆ

 ಬೆಂಗಳೂರು(ಮೇ.25): ವಿಶ್ವವನ್ನೇ ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕೊರೋನಾಗೆ ತುತ್ತಾಗಿದ್ದ ಚಿಕ್ಕಬಳ್ಳಾಪುರ ಮೂಲದ 107 ವರ್ಷದ ವೃದ್ಧೆಯೊಬ್ಬರು ಸೋಂಕಿನ ವಿರುದ್ಧ ಹೋರಾಡಿ ಸಂಪೂರ್ಣ ಗುಣಮುಖರಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟತಾಲೂಕಿನ ಯನ್ನೂರು ಗ್ರಾಮದ ಕಾಳಮ್ಮ (107) ಸೋಂಕು ಗೆದ್ದವರು. ಈ ಮೂಲಕ ರಾಜ್ಯದಲ್ಲಿ ಕೊರೋನಾ ಜಯಿಸಿದ ಎರಡನೇ ಹಿರಿಯ ವ್ಯಕ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಸೋಂಕು ಜಯಿಸಿದ್ದ ಚಿತ್ರದುರ್ಗ ಮೂಲದ ಸಿದ್ದಮ್ಮ (110) ಎಂಬುವವರು ರಾಜ್ಯದ ಅತಿ ಹಿರಿಯ ವ್ಯಕ್ತಿಯಾಗಿದ್ದಾರೆ.

ಸ್ಫುಟ್ನಿಕ್ ಲಸಿಕೆ ಪ್ರವಾಸ, ರಷ್ಯಾಗೆ ಹೋಗಿ ವ್ಯಾಕ್ಸಿನ್ ಹಾಕಿಸಿಕೊಂಡು ಬನ್ನಿ!

ನಗರದ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆಯಲ್ಲಿ ಶತಾಯುಷಿ ಕಾಳಮ್ಮ ಅವರಿಗೆ ಚಿಕಿತ್ಸೆ ನೀಡಿದ್ದು, ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ಸೋಮವಾರ ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಮಾಡಿ ಮನೆಗೆ ಕಳುಹಿಸಲಾಯಿತು. ವೈದ್ಯರ ಚಿಕಿತ್ಸೆ ಹಾಗೂ ಇಚ್ಛಾಶಕ್ತಿಯಿಂದ ಸೋಂಕಿನ ವಿರುದ್ಧ ಹೋರಾಡಿ ಗುಣಮುಖರಾಗಿರುವ ಕಾಳಮ್ಮ ಅವರು ಬಹಳ ಆತ್ಮವಿಶ್ವಾಸದಲ್ಲಿ ಊರಿನತ್ತ ತೆರಳಿದರು.

ಶತಾಯುಷಿ ಕಾಳಮ್ಮ ಅವರಿಗೆ ಅಪೋಲೋ ಆಸ್ಪತ್ರೆಯ ಹಿರಿಯ ವೈದ್ಯ ಡಾ.ವಿ.ಶಂಕರ್‌ ಸೇರಿದಂತೆ ಎಂಟು ಮಕ್ಕಳು. ಯನ್ನೂರಿನಲ್ಲಿ ನೆಲೆಸಿರುವ ಕಾಳಮ್ಮ ಅವರಿಗೆ ಏ.23ರಂದು ಜ್ವರ ಕಾಣಿಸಿಕೊಂಡಿತ್ತು. ಈ ವೇಳೆ ಪುತ್ರ ಡಾ.ವಿ.ಶಂಕರ್‌ ಸೂಚನೆ ಮೇರೆಗೆ ಕುಟುಂಬದ ಸದಸ್ಯರು ಡೋಲೋ ಮಾತ್ರೆ ನೀಡಿದ್ದಾರೆ. ಜ್ವರದ ನಡುವೆಯೂ ಐದಾರು ದಿನ ಲವಲವಿಕೆಯಿಂದ ಇದ್ದ ಕಾಳಮ್ಮ ಅವರಿಗೆ ಬಳಿಕ ಆಕ್ಸಿಜನ್‌ ಸ್ಯಾಚುರೇಶನ್‌ 72ಕ್ಕೆ ಇಳಿಕೆಯಾಗಿದೆ. ತಕ್ಷಣ ಅವರನ್ನು ಯನ್ನೂರಿನಿಂದ ಪುತ್ರ ಕಾರ್ಯ ನಿರ್ವಹಿಸುವ ಅಪೋಲೋ ಆಸ್ಪತ್ರೆಗೆ ಕರೆತಂದಿದ್ದು, ಆಕ್ಸಿಜನ್‌ ಪೂರೈಸಲಾಗಿತ್ತು.

ಬಳಿಕ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾದ ಹಿನ್ನೆಲೆಯಲ್ಲಿ 10 ದಿನಗಳ ಕಾಲ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತು. ದಿನ ಕಳೆದಂತೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿತ್ತು. ಇದಾದ 10 ದಿನಗಳ ಬಳಿಕ ಕಾಳಮ್ಮ ಅವರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

ವಿಮಾನ ಬಾಡಿಗೆ ಪಡೆದು ಆಗಸದಲ್ಲಿ ಮದುವೆ; ಬೆಂಗಳೂರಲ್ಲಿ ಲ್ಯಾಂಡ್ ಆದಾಗ ಶಾಕ್!

ರೋಗ ನಿರೋಧಕ ಶಕ್ತಿ ಹೆಚ್ಚಿತ್ತು:

ಈ ವಯಸ್ಸಿನಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾಗುವುದು ಅಪರೂಪ. ಇಚ್ಛಾಶಕ್ತಿ ಹಾಗೂ ಸಕಾಲಕ್ಕೆ ದೊರೆತ ವೈದ್ಯಕೀಯ ಚಿಕಿತ್ಸೆಯಿಂದ ನಮ್ಮ ತಾಯಿ ಸೋಂಕು ಜಯಿಸಿದ್ದಾರೆ. ಮೊದಲಿನಿಂದಲೂ ಅವರು ಹಳ್ಳಿಯಲ್ಲೇ ಇದ್ದುದರಿಂದ ಆರೋಗ್ಯವಾಗಿದ್ದರು. ರೋಗನಿರೋಧಕ ಶಕ್ತಿ ಹೆಚ್ಚಿದ್ದರಿಂದ ಬೇಗ ಸೋಂಕಿನಿಂದ ಗುಣಮುಖರಾಗಿದ್ದಾರೆ. ನಮ್ಮ ತಾಯಿಗೆ ಎಂಟು ಮಕ್ಕಳು. ಮೊಮ್ಮಕ್ಕಳು, ಮರಿ ಮಕ್ಕಳು ಸೇರಿದಂತೆ ಒಟ್ಟು 38 ಸದಸ್ಯರ ಕುಟುಂಬ ನಮ್ಮದು. ತಾಯಿ ಸೋಂಕಿನಿಂದ ಗುಣಮುಖರಾಗಿದ್ದು ಇಡೀ ಕುಟುಂಬಕ್ಕೆ ಸಂತಸ ತಂದಿದೆ ಎಂದು ಅಪೋಲೋ ಆಸ್ಪತ್ರೆಯ ಸೀನಿಯರ್‌ ಫಿಜಿಶಿಯನ್‌ ಡಾ.ವಿ.ಶಂಕರ್‌ ಹೇಳಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!