ಬೆಂಗಳೂರು (ಮೇ.25): ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ರಾಜ್ಯದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು 1,763 ವೈದ್ಯರು ಮತ್ತು ಕರ್ತವ್ಯ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸೋಮವಾರ ಸಂಜೆ ವಿಧಾನಸೌಧದಲ್ಲಿ ಕೋವಿಡ್, ಬ್ಲ್ಯಾಕ್ ಫಂಗಸ್ ಸ್ಥಿತಿಗತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯರ ನೇರ ನೇಮಕಾತಿ ಮಾಡುವ ಪ್ರಕ್ರಿಯೆ ಮುಗಿದು ಅಧಿಸೂಚನೆ ಹೊರಡಿಸಲಾಗಿದೆ. 715 ತಜ್ಞರು, 75 ಜನರಲ್ ಮೆಡಿಸನ್, 57 ಜನರಲ್ ಸರ್ಜನ್, 145 ಗೈನಕಾಲಜಿಸ್ಟ್, 40 ಇಎನ್‌ಟಿ, 35 ಚರ್ಮರೋಗ ತಜ್ಞರು, 142 ಅರಿವಳಿಕೆ ತಜ್ಞರು, 153 ಮಕ್ಕಳ ತಜ್ಞರು, 17 ರೇಡಿಯಾಲಜಿಸ್ಟ್‌ಗಳನ್ನು ನೇಮಿಸಲಾಗುತ್ತಿದೆ. ಜತೆಗೆ 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದರಿಂದ ಆರೋಗ್ಯ ವ್ಯವಸ್ಥೆ ಬಲವಾಗಲಿದೆ ಎಂದು ತಿಳಿಸಿದರು.
undefined
ಸ್ವಂತ ಹಣದಿಂದ ಆಕ್ಸಿಜನ್ ಪೈಪ್‌ಲೈನ್ ಅಳವಡಿಸಿದ ವೈದ್ಯ..! ...
ಉತ್ತರ ಕರ್ನಾಟಕ ಭಾಗದ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹೆಚ್ಚಿದ್ದು, ಈಗ ಸಮಸ್ಯೆ ನೀಗಲಿದೆ. ಗದಗ, ಹುಬ್ಬಳ್ಳಿ, ಬೆಳಗಾವಿ, ರಾಯಚೂರು ಸೇರಿ ಇತರೆ ಜಿಲ್ಲೆಗಳಿಗೆ ಮೊದಲ ಪ್ರಾಶಸ್ತ್ಯ ನೀಡಿ ಅಲ್ಲಿಗೆ ನೇಮಕ ಮಾಡಬೇಕು ಎಂದು ಸೂಚಿಸಲಾಗಿದೆ. ನೇಮಕವಾಗಿರುವ ವೈದ್ಯರಿಗೆ ಶೀಘ್ರದಲ್ಲಿಯೇ ಸ್ಥಳ ನಿಯೋಜನೆ ಮಾಡಲಾಗುವುದು ಎಂದ ಅವರು, ರಾಜ್ಯಕ್ಕೆ 230 ಟನ್‌ನಿಂದ ಆರಂಭಿಸಿ 1,015 ಟನ್ ಆಕ್ಸಿಜನ್ ಅನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ. ಈಗ ಮತ್ತಷ್ಟುಏರಿಕೆ ಮಾಡಿ, 1200 ಟನ್ ಆಕ್ಸಿಜನ್ ಹಂಚಿಕೆ ಮಾಡಲಾಗಿದೆ. ಅಲ್ಲದೇ, ಎಲ್ಲಾ ಕೋವಿಡ್ ಆಸ್ಪತ್ರೆಗಳಲ್ಲಿ ಸಿಸಿಟೀವಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಇದರಿಂದ ಸಂಬಂಧಿಕರು ಆರೈಕೆ ಬಗ್ಗೆ ಗಮನಿಸಬಹುದು. ಪ್ರತಿ ಜಿಲ್ಲೆಯ ಆಸ್ಪತ್ರೆಗಳ ಕಾರ್ಯನಿರ್ವಹಣೆಯನ್ನು ಒಂದೇ ಕಡೆ ವೀಕ್ಷಿಸಲು ವ್ಯವಸ್ಥೆ ಮಾಡಲು ನಿರ್ದೇಶನ ನೀಡಲಾಗಿದೆ ಎಂದರು.
ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ 10 ಸಾವಿರ ರು., ನರ್ಸಿಂಗ್ ಸಿಬ್ಬಂದಿಗೆ 8 ಸಾವಿರ ರು., ಗ್ರೂಪ್ ಡಿ ಸಿಬ್ಬಂದಿಗೆ 10 ಸಾವಿರ ರು. ರಿಸ್ಕ್ ಭತ್ಯೆಯನ್ನು ಏ.1ರಿಂದ ನೀಡಲು ಆದೇಶಿಸಲಾಗಿದೆ. ಆಶಾ ಕಾರ್ಯಕರ್ತರಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿಯೇ ವೇತನ ಪಾವತಿಸುವ ವ್ಯವಸ್ಥೆ ತರಲಾಗಿದೆ. 17 ಜಿಲ್ಲೆಗಳಲ್ಲಿ ವೇತನ ಸಂಪೂರ್ಣ ಸಿಕ್ಕಿದೆ. ಎರಡು ದಿನದಲ್ಲಿ ಉಳಿದೆಡೆ ವೇತನ ಕೈ ಸೇರಲಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಬಡವರಿಗೆ ಉಚಿತ ಔಷಧ ಕೊಡುತ್ತೆ ಈ ವೈದ್ಯ ದಂಪತಿ, ಐಡಿಯಾ ಕೇಳಿದ್ರೆ ಭೇಷ್ ಅಂತೀರಾ! ...
ಈವರೆಗೆ ರಾಜ್ಯದಲ್ಲಿ 446 ಜನರು ಬ್ಲ್ಯಾಕ್ ಫಂಗಸ್ ಸೋಂಕಿಗೊಳಗಾಗಿದ್ದಾರೆ. 433 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 11 ಮಂದಿ ಮನೆಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿದೆ. 12 ರೋಗಿಗಳು ಮೃತಪಟ್ಟಿದ್ದಾರೆ. ಈ ಸೋಂಕು ನಿವಾರಣೆಗೆ ಒಂದು ಸಾವಿರ ಔಷಧಿ ವಯಲ್‌ಗಳು ಕೇಂದ್ರದಿಂದ ಲಭ್ಯವಾಗಲಿವೆ. ಕೇಂದ್ರದಿಂದ ರಾಜ್ಯಕ್ಕೆ 1.05 ಕೋಟಿ ಡೋಸ್ ಕೋವಿಶೀಲ್ಡ್ ಬಂದಿದ್ದು, 13.54 ಲಕ್ಷ ನೇರ ಖರೀದಿ ಮಾಡಲಾಗಿದೆ. 13.10 ಲಕ್ಷ ಡೋಸ್ ಕೋವ್ಯಾಕ್ಸಿನ್ ನೇರ ಖರೀದಿ ಮಾಡಲಾಗಿದೆ. ಈವರೆಗೆ 1.22 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಸದ್ಯ 11.46 ಲಕ್ಷ ಡೋಸ್ ದಾಸ್ತಾನು ಇದೆ. ಆದ್ಯತೆಯ ಮೇರೆಗೆ ಗುಂಪುಗಳನ್ನು ಮಾಡಿ ಲಸಿಕೆ ನೀಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.