ಅಪರ್ಣಾಳ ಕನ್ನಡ ಮಾತು ಕೇಳೋದು ಒಂದು ಖುಷಿಯಾಗಿತ್ತು. ಅವರು ಅದ್ಭುತ ಪ್ರತಿಭೆ ಹೊಂದಿದ್ದರು. ನನ್ನ ತಂದೆಯ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದರು. ಅಪರ್ಣಾ ಅಂತಿಮ ದರ್ಶನ ಬಳಿಕ ಭಾವುಕರಾದ ಇಂದ್ರಜಿತ್ ಲಂಕೇಶ್.
Aparna vastarey:ಕನ್ನಡನಾಡು ಕಂಡ ಖ್ಯಾತ ನಿರೂಪಕಿ, ಮನೆ ಮಗಳು ಅಪರ್ಣಾ ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾಗಿರುವುದು ಕನ್ನಡಿಗರು ದುಃಖದ ಕಡಲಲ್ಲಿ ಮುಳುಗಿದೆ. ಅಪರ್ಣಾ ಸಾವು ಯಾರೆಂದರೆ ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ಅಜಾತಶತ್ರುವಿನಂತಿದ್ದ ಅಪರ್ಣಾ ಎಲ್ಲರಿಗೂ ಅಚ್ಚುಮೆಚ್ಚು. ಅಪರ್ಣಾಳ ಸಾವು ಅನ್ಯಾಯದ ಸಾವು ಎಂದು ಕಲಾವಿದರು ಕಂಬನಿ ಮಿಡಿಯುತ್ತಿದ್ದಾರೆ. ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಗಣ್ಯರು, ಚಿತ್ರರಂಗ ಹಾಗೂ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಬನಿ ಮಿಡಿದಿದ್ದಾರೆ.
ಅಪರ್ಣಾ ನಿಧನಕ್ಕೆ ಇಂದ್ರಜಿತ್ ಲಂಕೇಶ್ ಕಂಬನಿ
ಅಪರ್ಣಾ ಸಾವಿಗೆ ಇಂದ್ರಜಿತ್ ಲಂಕೇಶ್ ಕಂಬನಿ ಮಿಡಿದಿದ್ದಾರೆ. ಆರು ವರ್ಷ ಕರ್ನಾಟಕವನ್ನು ಇಬ್ಬರು ನಗಿಸಿದ್ವಿ. ಆದರೀಗ ನಿಮ್ಮನ್ನು ಕಳೆದುಕೊಂಡು ತುಂಬಾ ನೋವಾಗ್ತಿದೆ. ಮಜಾ ಟಾಕೀಸ್ ನಲ್ಲಿ ವರಲಕ್ಷ್ಮಿ ಪಾತ್ರ ತುಂಬಾ ಖ್ಯಾತಿ ಪಡೆಯಿತು. ಹಳೇ ಮಾತುಗಳು ತುಂಬಾ ನೆನಪಾಗುತ್ತಿವೆ. ನಾನು ಹುಡುಗನಿದ್ದಾಗಿನಿಂದಲೂ ನೋಡುತ್ತಿದ್ದೇನೆ. ಅಪರ್ಣಾ ನನ್ನ ತಂದೆಯ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟಿದ್ರು. ಲಂಕೇಶ್ ಬಗ್ಗೆ ಅದ್ಭುತವಾಗಿ ತಿಳಿದುಕೊಂಡಿದ್ರು. ಅವರ ಮಾತಿನಲ್ಲಿ ಕನ್ನಡ ಕೇಳೋದೇ ಒಂದು ಖುಷಿ ಆಗಿತ್ತು. ತುಂಬಾ ನೋವಿನಿಂದ ಅವರನ್ನು ಬೀಳ್ಕೊಡುತ್ತಿದ್ದೇವೆ ಎಂದು ಅಪರ್ಣಾ ಅಂತಿಮ ದರ್ಶನ ಪಡೆದು ದುಃಖ ತಡೆಯಲಾಗದೆ ಕಣ್ಣೀರಾದ ಇಂದ್ರಜಿತ್ ಲಂಕೇಶ್.
ಗುರುವಾರ ರಾತ್ರಿ ಕನ್ನಡಿಗರ ಪಾಲಿಗೆ ಆಘಾತಕಾರಿಯಾಗಿದೆ. ತಮ್ಮ ಕಂಚಿನ ಕಂಠದಿಂದ ಮನೆಮಾತಾಗಿದ್ದ ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ (58) ವಿಧಿವಶರಾದರು. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.
'ಕನ್ನಡ ಅಂದ್ರೆ ಅಪರ್ಣಾ, ಅಪರ್ಣಾ ಅಂದ್ರೆ ಕನ್ನಡ. ಆಕೆಯ ಸಾವಿನಿಂದ ನನಗೆ ಗರ ಬಡಿದಂತಾಗಿದೆ: ಮಂಡ್ಯ ರಮೇಶ್ ಭಾವುಕ
ನಟನೆ, ನಿರೂಪಣೆ ಮೂಲಕ ಖ್ಯಾತಿ:
1984ರಲ್ಲಿ ತೆರೆಕಂಡ ಮಸಣದ ಹೂವು ಚಿತ್ರದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದ ಅಪರ್ಣಾ ಅವರು, 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಕಾರ್ಯಕ್ರಮಗಳ ನಿರೂಪಣೆ, ನಂತರದಲ್ಲಿಯು ರೇಡಿಯೋ ಮತ್ತು ಅನೇಕ ಖಾಸಗಿ ಟಿವಿ ಕಾರ್ಯಕ್ರಮಗಳ ನಿರೂಪಣೆಯನ್ನು ನಡೆಸಿಕೊಟ್ಟಿದ್ದರು. ಸಿನಿಮಾ, ಧಾರವಾಹಿಗಳಲ್ಲಿ ನಟನೆ, ಸಂಗೀತ, ನೃತ್ಯ ಸೇರಿದಂತೆ ವಿವಿಧ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು, ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುತ್ತಿದ್ದ ಅಪರ್ಣಾ ಅವರ ಸೌಮ್ಯವಾದ ಧ್ವನಿಯೇ ಆಕರ್ಷಣೆಯಾಗಿತ್ತು.
ಖ್ಯಾತ ನಿರೂಪಕಿ ಅಪರ್ಣಾ ಕೊನೆ ಆಸೆ ಹೇಳಿ ಭಾವುಕರಾದ ಪತಿ ನಾಗರಾಜ್ ವಸ್ತಾರೆ
ಬೆಂಗಳೂರು ಮೆಟ್ರೋ ರೈಲಿನಲ್ಲಿ ಘೋಷಣೆಗಳಿಗೆ ಹಾಗೂ ಹಲವಾರು ಬಸ್ ನಿಲ್ದಾಣಗಳಲ್ಲಿನ ಘೋಷಣೆಗಳಿಗೆ ಅಪರ್ಣಾ ಅವರು ಧ್ವನಿ ನೀಡಿದ್ದಾರೆ. ಕನ್ನಡದ ಕೆಲವು ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ಕಿರುತೆರೆಗಳಲ್ಲಿ ಮೂಡಲಮನೆ, ಮುಕ್ತ ಧಾರವಾಹಿಗಳಲ್ಲಿ ನಟಿಸಿ ರಾಜ್ಯದ ಮನೆ ಮಾತಾಗಿದ್ದರು. 1998ರಲ್ಲಿ ದೀಪಾವಳಿ ಕಾರ್ಯಕ್ರಮವೊಂದನ್ನು ಸತತವಾಗಿ 8 ತಾಸುಗಳ ಕಾಲ ನಿರೂಪಣೆ ಮಾಡುವ ಮೂಲಕ ವಿಶಿಷ್ಟ ದಾಖಲೆಯನ್ನು ಅಪರ್ಣಾ ನಿರ್ಮಿಸಿದ್ದರು.