ತೆರೆಗೆ ಅಪ್ಪಳಿಸಲಿರುವ 'ಶ್ಯಾಡೋ' ಮತ್ತು 'ರಾಮಾರ್ಜುನ';500 ಥಿಯೇಟರ್‌ಗಳಲ್ಲಿ 'ಇನ್ಸ್‌ಪೆಕ್ಟರ್‌ ವಿಕ್ರಂ'

By Kannadaprabha NewsFirst Published Jan 25, 2021, 9:12 AM IST
Highlights

ವಿನೋದ್‌ ಪ್ರಭಾಕರ್‌ ಅಭಿನಯದ ‘ಶ್ಯಾಡೋ’ ಸಿನಿಮಾ ಫೆ 5ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸುಮಾರು 250 ಥಿಯೇಟರ್‌ಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ಈ ಕುರಿತು ಮಾತನಾಡಿದ ವಿನೋದ್‌ ಪ್ರಭಾಕರ್‌, ‘ಇದು ಕ್ಲಾಸ್‌ನಲ್ಲಿ ಮಾಸ್‌ ಸಿನಿಮಾ. ಎಲ್ಲ ವರ್ಗದ ಪ್ರೇಕ್ಷಕರಿಗೂ ಹತ್ತಿರವಾಗುತ್ತೆ. ಎರಡೂವರೆ ವರ್ಷಗಳ ಕಾಲ ಈ ಸಿನಿಮಾಕ್ಕಾಗಿ ದುಡಿದಿದ್ದೇವೆ. ಜೀವ ಪಣಕ್ಕಿಟ್ಟು ಫೈಟ್‌ಗಳಲ್ಲಿ ಅಭಿನಯಿಸಿದ್ದೇವೆ. ಈಗ ಗಡಿಬಿಡಿಯಲ್ಲಿ ಚಿತ್ರ ರಿಲೀಸ್‌ ಮಾಡೋದಕ್ಕೆ ಬೇಸರವಿದೆ. ಆದರೂ ಸನ್ನಿವೇಶವೇ ಹಾಗಿರುವ ಕಾರಣ ಅನಿವಾರ್ಯವಾಗಿ ಬಿಡುಗಡೆಗೆ ಮುಂದಾಗಿದ್ದೇವೆ’ ಎಂದರು. ‘ಎರಡು ಹಾಡುಗಳ ಜೊತೆಗೆ ಆ್ಯಕ್ಷನ್‌, ಮನರಂಜನೆ ಇದೆ. ಸಿಂಗಲ್‌ ಸ್ಕ್ರೀನ್‌ ಹಾಗೂ ಮಾಲ್‌ಗಳಲ್ಲೂ ಚಿತ್ರ ಓಡುವ ಭರವಸೆ ಇದೆ. ಆದರೆ ಟಿಕೆಟ್‌ ದರವನ್ನು ದಯಮಾಡಿ ಹೆಚ್ಚಿಸಬೇಡಿ’ ಎಂದು ಮನವಿ ಮಾಡಿದರು.

ಚಿತ್ರಕ್ಕಾಗಿ ಗಂಟಲು ಆಪರೇಷನ್‌ ಮಾಡಿಸಿಕೊಂಡ್ರಾ ವಿನೋದ್‌ ಪ್ರಭಾಕರ್‌? 

ವಿತರಕ, ಧೀರಜ್‌ ಎಂಟರ್‌ಪ್ರೈಸಸ್‌ನ ಮೋಹನದಾಸ ಪೈ ಮಾತನಾಡಿ, ‘ಮರಿ ಟೈಗರ್‌ ಅವರ ಈ ಚಿತ್ರ ಗಲ್ಲಾಪೆಟ್ಟಿಗೆ ದೋಚೋದು ಖಚಿತ. ಹೀಗಾಗಿ ಕನ್ನಡ ಸಿನಿಮಾ ಥಿಯೇಟರ್‌ಗಳ ಜೊತೆಗೆ ತಮಿಳು, ತೆಲುಗು ಚಿತ್ರಗಳಿಗೆ ಮೀಸಲಾಗಿರುವ ಥಿಯೇಟರ್‌ಗಳಲ್ಲೂ ಈ ಚಿತ್ರ ಬಿಡುಗಡೆ ಮಾಡುತ್ತೇವೆ’ ಎಂದರು.

ರವಿ ಗೌಡ್ರು ನಿರ್ದೇಶನದ ಚಿತ್ರವನ್ನು ಚಕ್ರಿ ನಿರ್ಮಿಸಿದ್ದಾರೆ. ಶೋಭಿತಾ ರಾಣಾ ನಾಯಕಿ.

ಬೇರ್‌ ಬಾಡಿ ಮಾಡು ಅನ್ನದಿರಿ

‘8 ಪ್ಯಾಕ್‌ ಬೇರ್‌ ಬಾಡಿ ತೆರೆಯ ಮೇಲೆ ನೋಡಲು ಚೆನ್ನಾಗಿರುತ್ತದೆ. ಆದರೆ ಅದಕ್ಕಾಗಿ ವರ್ಷಗಟ್ಟಲೆ ಅನ್ನ, ನೀರು ಬಿಟ್ಟು ವಾಟರ್‌ ಕಟ್‌ ಮಾಡಿ ಬಾಡಿ ರೆಡಿ ಮಾಡಿಕೊಳ್ಳಬೇಕಾಗುತ್ತೆ. ಉಪ್ಪು, ಖಾರ ಬಿಟ್ಟು ಬದುಕಬೇಕಾಗುತ್ತೆ. ಇದರಿಂದ ಮೂಳೆ ಸಮಸ್ಯೆ, ನೋವು ಬಾಧಿಸಿ ಒದ್ದಾಡಿದ್ದೇನೆ. ಇನ್ನು ಮೇಲೆ ಬೇರ್‌ ಬಾಡಿ ಮಾಡಿ ಅನ್ನದಿರಿ’ ಎಂದು ವಿನೋದ್‌ ಪ್ರಭಾಕರ್‌ ಆದ್ರ್ರವಾಗಿ ವಿನಂತಿಸಿದರು. ಇನ್ನು ಮುಂದೆ ಫಿಟ್‌ನೆಸ್‌ ಬಗ್ಗೆ ಗಮನಹರಿಸುವುದಾಗಿ ಹೇಳಿದ ಅವರು ಬೇರ್‌ ಬಾಡಿ, ವಾಟರ್‌ ಕಟ್‌ ಮಾಡಲ್ಲ ಅಂದರು.

ಜ.29ಕ್ಕೆ ರಾಮಾರ್ಜುನ ಅಬ್ಬರ

ನಟ ಅನೀಶ್‌ ತೇಜಶ್ವರ್‌ ನಿರ್ದೇಶಿಸಿ, ಅಭಿನಯಿಸಿರುವ ‘ರಾಮಾರ್ಜುನ’ ಚಿತ್ರ ಜ.29ಕ್ಕೆ ತೆರೆ ಕಾಣಲಿದೆ. ರಾಜ್ಯಾದ್ಯಂತ ಕೆಆರ್‌ಜಿ ಸ್ಟುಡಿಯೋ ದೊಡ್ಡಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬರುತ್ತಿದ್ದು, ಎಲ್ಲ ವರ್ಗದ ಪ್ರೇಕ್ಷಕರನ್ನೂ ತಲುಪಲಿದೆ ಎಂಬುದು ಚಿತ್ರತಂಡದ ಭರವಸೆ.

ಅನೀಶ್‌ ತೇಜೇಶ್ವರ್‌ ಹೊಸ ಸಿನಿಮಾ ಎನ್‌ಆರ್‌ಐ 

ಈ ಚಿತ್ರದ ಟ್ರೇಲರ್‌ ಸಾಕಷ್ಟುಕುತೂಹಲದಿಂದ ಕೂಡಿದೆ. ರೈತರು, ಎಲ್‌ಐಸಿ ಪಾಲಿಸಿ, ಮೆಡಿಕಲ್‌ ಮಾಫಿಯಾ, ಸಾವು, ರಾಜಕೀಯ, ಸಾಮಾನ್ಯರ ಅಳಲು, ಅವರ ಬೆಂಬಲಕ್ಕೆ ನಿಲ್ಲುವ ಹೀರೋ... ಹೀಗೆ ಹಲವು ಅಂಶಗಳನ್ನು ಒಳಗೊಂಡು ಕುತೂಹಲಕಾರಿ ಮೂಡಿಸುವಂತಿದೆ. ಚಿತ್ರದ ನಿರ್ದೇಶನ ಹಾಗೂ ನಿರ್ಮಾಣ ಅನೀಶ್‌ ಅವರದು. ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿನಿರ್ಮಾಣದಲ್ಲಿ ಪಾಲುದಾರರಾಗಿದ್ದು ಚಿತ್ರ ಯಶಸ್ವಿಯಾಗುವ ಭರವಸೆ ಹೊಂದಿದ್ದಾರೆ. ನಿಶ್ವಿಕಾ ನಾಯ್ಡು ನಾಯಕಿ. ‘ಸದ್ಯ ಟ್ರೇಲರ್‌ ನೋಡಿದವರು ಖುಷಿಯಾಗಿದ್ದು, ಸಿನಿಮಾವೂ ಇಷ್ಟೇ ಆಸಕ್ತಿದಾಯಕವಾಗಿದೆ. ನಮ್ಮ ಶ್ರಮವನ್ನು ಗುರುತಿಸಿ ಜನ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಅನೀಶ್‌.

500 ಥಿಯೇಟರ್‌ಗಳಲ್ಲಿ ಇನ್ಸ್‌ಪೆಕ್ಟರ್‌ ವಿಕ್ರಂ

ಪ್ರಜ್ವಲ್‌ ದೇವರಾಜ್‌ ನಾಯಕನಾಗಿ ನಟಿಸಿರುವ ‘ಇನ್ಸ್‌ಪೆಕ್ಟರ್‌ ವಿಕ್ರಮ್‌’ ಚಿತ್ರ ಫೆ.5ಕ್ಕೆ ತೆರೆ ಮೇಲೆ ಮೂಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈಗ ಸಿನಿಮಾ ಹಲವು ಕಾರಣಗಳಿಗೆ ಸದ್ದು ಮಾಡುತ್ತಿದೆ. ‘ಈಗ ನನ್ನ ಡ್ಯೂಟಿ ಹೊಸ ಇನ್ಸ್‌ಪೆಕ್ಟರ್‌ಗೆ’ ಎನ್ನುವ ಡೈಲಾಗ್‌ ಹೇಳುವ ಮೂಲಕ ಶಿವರಾಜ್‌ಕುಮಾರ್‌ ವಾಯ್‌್ಸ ಓವರ್‌ ನೀಡಿದ್ದಾರೆ.

ನಗಿಸಿ ರಂಜಿಸಿ ಖುಷಿ ಪಡಿಸಿ ಆಚೆ ಕಳಿಸ್ತೀನಿ: ನರಸಿಂಹ 

ಭಗತ್‌ಸಿಂಗ್‌ ಪಾತ್ರದಲ್ಲಿ ದರ್ಶನ್‌ ನಟಿಸಿರುವ ಕಾರಣ ಅತ್ತ ಚಾಲೆಂಜಿಂಗ್‌ ಸ್ಟಾರ್‌ ಅಭಿಮಾನಿಗಳಲ್ಲೂ ಇನ್ಸ್‌ಪೆಕ್ಟರ್‌ ಕುತೂಹಲ ಮೂಡಿಸಿದ್ದಾನೆ. ಚಿತ್ರ 500 ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಬೆಂಗಳೂರಿನ 100 ಕಡೆ ಪ್ರಜ್ವಲ್‌ ದೇವರಾಜ್‌ ಹಾಗೂ ದರ್ಶನ್‌ ಕಾಂಬಿನೇಷನ್‌ನ ಕಟೌಟ್‌ಗಳು ರಾರಾಜಿಸಲಿವೆ. ಇದೊಂದು ಹೊಸ ರೀತಿಯ ಪ್ರಚಾರದ ಸಾಹಸ ಎನ್ನುತ್ತಾರೆ ನಿರ್ಮಾಪಕ ಎ ಆರ್‌ ವಿಖ್ಯಾತ್‌. ಶ್ರೀನರಸಿಂಹ ನಿರ್ದೇಶನದ ಈ ಚಿತ್ರಕ್ಕೆ ಜಾಕಿ ಭಾವನಾ ನಾಯಕಿ.

click me!