
'ಪ್ರೇಮದ ಊರಲಿ' ಹಾಡುಗಳ ಸಕ್ಸಸ್ ಹಿಂದಿನ ಸೀಕ್ರೆಟ್ ಇದೇನಾ? ಮಕ್ಕಳಿಂದ ಟೈಟಲ್ ಟ್ರ್ಯಾಕ್ ಹಾಡಿಸಿದ ಕಾರಣ ಬಿಚ್ಚಿಟ್ಟ ಸುನಾದ್ ಗೌತಮ್- Premada Oorali Moviue Title Track, Music Director Sunad Gowtham says the secret of Song Success.
ಒಂದು ಸಿನಿಮಾದ ಕಥೆ ಎಷ್ಟೇ ಚೆನ್ನಾಗಿದ್ದರೂ, ಅದರ ಹಾಡುಗಳು ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಪಡೆದುಕೊಂಡರೆ ಸಿನಿಮಾದ ಕ್ರೇಜ್ ಮತ್ತಷ್ಟು ಹೆಚ್ಚಾಗುತ್ತದೆ. ಕನ್ನಡ ಚಿತ್ರರಂಗದಲ್ಲೂ ‘ಹಾಡು ಹಿಟ್ ಆದರೆ ಸಿನಿಮಾ ಅರ್ಧ ಗೆದ್ದಂತೆ’ ಎಂಬ ಮಾತಿದೆ. ಇದೀಗ ಈ ಮಾತು ‘ಪ್ರೇಮದ ಊರಲಿ’ ಸಿನಿಮಾದ ವಿಚಾರದಲ್ಲಿ ಅಕ್ಷರಶಃ ನಿಜವಾಗುತ್ತಿದೆ. ಮನೋಜ್ ಕುಮಾರ್ ಹೆಣೆದ ಪ್ರೇಮಕಥೆಗೆ ಸಂಗೀತ ನಿರ್ದೇಶಕ ಸುನಾದ್ ಗೌತಮ್ ನೀಡಿರುವ ಸಂಗೀತ ಪ್ರೇಕ್ಷಕರ ಗಮನ ಸೆಳೆದಿದ್ದು, ಚಿತ್ರದ ಬಹುತೇಕ ಹಾಡುಗಳು ಹಿಟ್ ಆಗಿವೆ.
ವಿಶೇಷವಾಗಿ ‘ಪ್ರೇಮದ ಊರಲಿ’ ಚಿತ್ರದ ಟೈಟಲ್ ಟ್ರ್ಯಾಕ್ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಹಾಡನ್ನು ಜನಪ್ರಿಯ ಗಾಯಕ-ಗಾಯಕಿಯರಿಂದ ಹಾಡಿಸುವ ಬದಲು ಶಾಲಾ ಮಕ್ಕಳಿಂದ ಹಾಡಿಸಿರುವುದು ಸಿನಿಮಾದ ವಿಶೇಷತೆಗಳಲ್ಲಿ ಒಂದಾಗಿದೆ. ಅಷ್ಟಕ್ಕೂ ನಿರ್ದೇಶಕರು ಹಾಗೂ ಸಂಗೀತ ನಿರ್ದೇಶಕರು ಈ ನಿರ್ಧಾರಕ್ಕೆ ಬಂದಿದ್ದು ಯಾಕೆ? ಇದರ ಹಿಂದಿನ ಕಾರಣವನ್ನು ಸುನಾದ್ ಗೌತಮ್ ಇತ್ತೀಚಿನ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
‘ಜೊತೆ ಜೊತೆಯಲಿ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಿಗೆ ಸಂಗೀತ ನೀಡಿರುವ ಸುನಾದ್ ಗೌತಮ್, ಕಿರುತೆರೆಯಲ್ಲಿ ತಮ್ಮದೇ ಆದ ಗುರುತನ್ನು ಹೊಂದಿದ್ದಾರೆ. ಹಲವು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರೂ ಸಿನಿಮಾ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದ ದೊಡ್ಡ ಬ್ರೇಕ್ ಸಿಕ್ಕಿರಲಿಲ್ಲ. ಆದರೆ ‘ಪ್ರೇಮದ ಊರಲಿ’ ಸಿನಿಮಾ ಆ ಕೊರಗನ್ನು ನೀಗಿಸಿದೆ ಎನ್ನಬಹುದು. ಚಿತ್ರದ ಹಾಡುಗಳಿಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಸುನಾದ್ ಕೂಡ ಸಂತಸಗೊಂಡಿದ್ದಾರೆ.
ಟೈಟಲ್ ಟ್ರ್ಯಾಕ್‌ಗಾಗಿ ಮಕ್ಕಳ ಧ್ವನಿಯನ್ನು ಆಯ್ಕೆ ಮಾಡಿದ್ದು ಕೂಡ ಒಂದು ವಿಭಿನ್ನ ಪ್ರಯತ್ನ. ಆರಂಭದಲ್ಲಿ ಸಿನಿಮಾದ ‘ಬಾನಲಿ ಜಾರಿದ’ ಹಾಡನ್ನು ಮಕ್ಕಳಿಂದ ಹಾಡಿಸುವ ಆಲೋಚನೆ ಇತ್ತಂತೆ. ಆದರೆ ನಂತರ ಅದೇ ಟ್ಯೂನ್ ಅನ್ನು ಟೈಟಲ್ ಟ್ರ್ಯಾಕ್‌ಗೆ ಬಳಸುವುದು ಬೇಡ ಎಂದು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಟೈಟಲ್ ಸಾಂಗ್‌ಗೂ ಮಕ್ಕಳ ಧ್ವನಿಯನ್ನೇ ಬಳಸಲು ಸುನಾದ್ ಮತ್ತು ನಿರ್ದೇಶಕರು ಒಟ್ಟಾಗಿ ತೀರ್ಮಾನಿಸಿದ್ದಾರೆ.
ಮಕ್ಕಳು ಹಾಡಿದರೆ ಹಾಡು ಎಲ್ಲರಿಗೂ ಇನ್ನಷ್ಟು ಸುಲಭವಾಗಿ ಕನೆಕ್ಟ್ ಆಗುತ್ತದೆ ಎಂಬುದು ಅವರ ಆಲೋಚನೆಯಾಗಿತ್ತು. ಹಾಡಲು ಸುಲಭವಾಗುವ ರೀತಿಯಲ್ಲಿಯೇ ಸಂಗೀತವನ್ನು ರೂಪಿಸಲಾಗಿದ್ದು, ಮಕ್ಕಳ ಧ್ವನಿಯಲ್ಲಿನ ಮುಗ್ಧತೆ ಹಾಡಿಗೆ ಮತ್ತೊಂದು ರೀತಿಯ ಮೆರುಗು ನೀಡಿದೆ.
ಈ ಹಾಡಿಗೆ ಧ್ವನಿ ನೀಡಿರುವುದು ಕಾರ್ಕಳದ ಜೆಸಿ ಶಾಲೆಯ ಮಕ್ಕಳು. ಈ ವಿಚಾರದಲ್ಲೂ ಸುನಾದ್ ಅವರ ಪ್ರಯತ್ನ ವಿಶೇಷವಾಗಿದೆ. ಶಾಲೆಯ ಶಿಕ್ಷಕಿ ವಂದನಾ ರೈ ಅವರನ್ನು ಸಂಪರ್ಕಿಸಿ, ಚೆನ್ನಾಗಿ ಹಾಡಬಲ್ಲ ಮಕ್ಕಳ ಅಗತ್ಯವಿದೆ ಎಂದು ತಿಳಿಸಿದ್ದರಂತೆ. ಬಳಿಕ ಸೂಕ್ತ ಮಕ್ಕಳನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡಲಾಗಿದ್ದು, ಅವರಿಂದಲೇ ಟೈಟಲ್ ಟ್ರ್ಯಾಕ್ ಹಾಡಿಸಲಾಗಿದೆ.
ಇನ್ನು ಸುನಾದ್ ಗೌತಮ್ ಅವರ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ. ಸದ್ಯ ಅವರು ಎರಡು ಸಿನಿಮಾಗಳಿಗೆ ಕಮಿಟ್ ಆಗಿದ್ದಾರೆ. ‘ರುಕ್ಮಿಣಿ ರಾಧಾಕೃಷ್ಣ’ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದು, ಸಿದ್ ಶ್ರೀರಾಮ್ ಹಾಡಿರುವ ಹಾಡೊಂದರ ಬಗ್ಗೆಯೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರ ಜೊತೆಗೆ ‘ಹೊಸ ಜೀವನ’ ಸಿನಿಮಾಗೆ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ.
ತಮ್ಮ ಬಳಿ ಸಾಕಷ್ಟು ಹೊಸ ಪ್ರಾಜೆಕ್ಟ್‌ಗಳು ಬರುತ್ತಿದ್ದರೂ, ಎಲ್ಲ ಸಿನಿಮಾಗಳನ್ನೂ ಒಪ್ಪಿಕೊಳ್ಳುವ ಬದಲು ಕಥೆ ಹಾಗೂ ಕೆಲಸದ ಗುಣಮಟ್ಟವನ್ನು ಅಳೆದು ತೂಗಿ ಆಯ್ಕೆ ಮಾಡುವ ನಿರ್ಧಾರದಲ್ಲಿದ್ದಾರೆ ಸುನಾದ್. ಒಟ್ಟಿನಲ್ಲಿ ‘ಪ್ರೇಮದ ಊರಲಿ’ ಮೂಲಕ ಹಾಡುಗಳ ಹಿಟ್‌ಗಿಂತಲೂ ವಿಭಿನ್ನ ಪ್ರಯೋಗದ ಮೂಲಕ ಗಮನ ಸೆಳೆದಿರುವ ಸುನಾದ್ ಗೌತಮ್, ಕನ್ನಡ ಚಿತ್ರರಂಗದಲ್ಲಿ ತಮ್ಮ ಸಂಗೀತ ಪಯಣಕ್ಕೆ ಮತ್ತೊಂದು ಹೊಸ ಅಧ್ಯಾಯ ಆರಂಭಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.