ಮೇರು ನಟ ಅಶ್ವತ್ಥ್ ಪುತ್ರ ಶಂಕರ್ ಅಶ್ವತ್ಥ್ ತಮ್ಮ ಮನೆಯಲ್ಲಿ ಭರತನಾಟ್ಯದ ಕೆಲ ಹೆಜ್ಜೆಗಳನ್ನು ಹಾಕಿದ್ದಾರೆ. ಇದನ್ನು ಅವರ ತಾಯಿ ಸಂತೋಷದಿಂದ ವೀಕ್ಷಿಸುತ್ತಿರುವ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
'ರಾಮಾಚಾರಿ'ಯ ತಂದೆ, ನಟ ಶಂಕರ್ ಅಶ್ವತ್ಥ್ ತಮ್ಮ ಮನೆಯಲ್ಲಿ ತಾಯಿಯ ಸಮ್ಮುಖದಲ್ಲಿ 'ವಂದೇ ಪಾರ್ವತಿ ಪರಮೇಶ್ವರಂ, ನಾದ ವಿನೋದ ನಿನಾದ' ಹಾಡಿಗೆ ಭರತನಾಟ್ಯದ ಹೆಜ್ಜೆಗಳನ್ನು ಹಾಕಿರುವ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಶಂಕರ್ ಅವರ ತಾಯಿ ಮೆಚ್ಚುಗೆಯಿಂದ ಮಗನನ್ನು ನೋಡುವುದು ನೆಟ್ಟಿಗರ ಮನ ತಣಿಸಿದೆ. ಅಲ್ಲದೆ, ಶಂಕರ್ ಕುಣಿವಾಗ ಎದುರಿಗೆ ಕೆಲ ಹಣ್ಣುಮಕ್ಕಳು ಸಂತೋಷದಿಂದ ನೋಡುತ್ತಿದ್ದಾರೆ.
ಈ ವಿಡಿಯೋ ಬಗ್ಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ನಟ, 'ನಮ್ಮನೆ PG ಯಲ್ಲಿ ಇರುವ ಇಂಜಿನಿಯರಿಂಗ್, ಸೈನ್ಸ್ ಹಾಗು ಆಯುರ್ವೇದಿಕ್ ಓದುತ್ತಿರುವ ಮಕ್ಕಳು ಕೆಲವರು ತಮ್ಮಲ್ಲಿರುವ ಪ್ರತಿಭೆ ತೋರಿಸಲು ನಾಚಿಕೆ, ಭಯ ಪಡುತ್ತಿದ್ದಾಗ ಅವರಿಗೆ ಆ ಚಳಿ ಬಿಡಿಸಲು' ನೃತ್ಯ ಮಾಡಿದ್ದಾಗಿ ಹೇಳಿದ್ದಾರೆ.
ತನಗೆ 67 ವರ್ಷವಾಗಿದ್ದು, ಸ್ಪೈನಲ್ ಕಾರ್ಡ್ ಆಪರೇಷನ್ ಆಗಿದೆ. ಹಾಗಿದ್ದೂ, ಪ್ರತಿಭೆ ತೋರುವ ಅವಕಾಶ ಸಿಕ್ಕಾಗ ಹಿಂಜರಿಯಬಾರದೆಂದು ಮಕ್ಕಳಿಗೆ ತಿಳಿಸಲು ಅವರ ಮುಂದೆ ಈ ರೀತಿ ನೃತ್ಯ ಮಾಡಿ ತೋರಿಸಿದೆ. ನಂತರದಲ್ಲಿ ಅವರೂ ಹಿಂಜರಿಕೆಯಿಂದ ಹೊರಬಂದು ಮ್ಮ ಪ್ರತಿಭೆಗಳನ್ನು ತೋರಿಸಿದರು ಎಂದಿದ್ದಾರೆ.
ಈ ಹಿಂದೆ ಶಂಕರ್ ಅಶ್ವತ್ಥ್ ಸಂಕಷ್ಟದಲ್ಲಿದ್ದು ಬದುಕಗಾಗಿ ಓಲಾ ಕ್ಯಾಬ್ ಡ್ರೈವರ್ ಆಗಿದ್ದಾರೆ ಎಂಬ ಸುದ್ದಿಗಳು ಸದ್ದು ಮಾಡಿದ್ದವು. ಪ್ರಸ್ತುತ ವಾಹಿನಿಯಲ್ಲಿ ಅಭಿನಯಿಸುತ್ತಿರುವ ಶಂಕರ್, ಮನೆಯಲ್ಲೇ ಪಿಜಿ ನಡೆಸುತ್ತಿರುವ ವಿಷಯವನ್ನೂ ಈಗ ಅಭಿಮಾನಿಗಳೊಂದಿಗೆ ಹಂಚಿಕೊಂಡಂತಾಗಿದೆ.
ಅಶ್ವತ್ಥ್ ವಿಡಿಯೋ ನೋಡಿದ ಸಾಮಾಜಿಕ ಜಾಲತಾಣ ಬಳಕೆದಾರರು, 'ಅಮ್ಮನ ಮುಂದೆ ನಿಮ್ಮ ನೃತ್ಯ ನಿಜಕ್ಕೂ ನಿಮ್ಮ ಸೌಭಾಗ್ಯ ಸರ್' ಎನ್ನುತ್ತಿದ್ದಾರೆ.
ಬಹಳಷ್ಟು ಮಂದಿ ಶಂಕರ್ ವಿಡಿಯೋ ನೋಡಿ ಅವರ ತಂದೆ ಮೇರು ನಟ ಅಶ್ವತ್ಥರನ್ನು ನೆನೆಸಿಕೊಂಡಿದ್ದಾರೆ. 'ನಟನೆ ನಿಮ್ಮ ಜೀನ್ಸ್‌ನಲ್ಲಿಯೇ ಇದೆ' ಎಂದಿದ್ದಾರೆ.
ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿ, 'ಸುದೀಪ್ ಸರ್ ಜೊತೆ ಮತ್ತೊಂದು ನಾಗರ ಹಾವು ಚಿತ್ರ ಮಾಡಿದ್ರೆ ಹೇಗಿರುತ್ತೆ? 2.0 ಚಾಮಯ್ಯ ಮೇಷ್ಟ್ರು ನೀವು' ಎಂದಿದ್ದಾರೆ. ಇನ್ನೂ ಬಹಳಷ್ಟು ಜನರು, ಕನ್ನಡ ಚಿತ್ರರಂಗವು ಶಂಕರ್ ಅಶ್ವತ್ಥರನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಂಕರ್ ಅವರ ಮನೆಯ ಹಾಲ್‌ನಲ್ಲಿ ತಂದೆಯ ಚಿತ್ರಗಳೇ ತುಂಬಿರುವುದು ಕೂಡಾ ಸಾಕಷ್ಟು ಜನರ ಗಮನ ಸೆಳೆದಿದೆ.