'ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ, ಇನ್ಸ್ಟಾದಲ್ಲಿ ತುಂಬಾ ರೀಲ್ಸಾಗುತ್ತೆ ' ಅಂತಲೇ ಶುರುವಾಗುವ ಯುಐ ಚಿತ್ರದ ಹಾಡು ಟ್ರೋಲ್‌ಗಳನ್ನೇ ಹಾಸಿಹೊದ್ದಿದೆ.
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನ ಹಾಗೂ ನಟನೆಯ ಯುಐ ಚಿತ್ರಕ್ಕಾಗಿ ಸಧ್ಯ ಎಲ್ಲ ಉಪ್ಪಿ ಫ್ಯಾನ್‌ಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಹಿಂದೆ 'ನಂದು ತುಂಬಾ ದೊಡ್ಡದು, ಅವನಿಗಿಂತ ನಿಂದು ಚಿಕ್ಕದು' ಎಂಬ ಗೀತೆಯ ಝಲಕ್ ಬಿಟ್ಟಿದ್ದರು. ಇಂದು ಅದೇ ಹಾಡು ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಂತೆ, ಎಲ್ಲರಿಗೂ ಸರ್ಪ್ರೈಸ್ ಆಗುವಂತೆ ಉಪ್ಪು ಟ್ರೋಲ್ ಸಾಂಗ್ ರಿಲೀಸ್ ಮಾಡಿದ್ದಾರೆ.
'ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ, ಇನ್ಸ್ಟಾದಲ್ಲಿ ತುಂಬಾ ರೀಲ್ಸಾಗುತ್ತೆ ' ಅಂತಲೇ ಶುರುವಾಗುವ ಹಾಡು ಟ್ರೋಲ್‌ಗಳನ್ನೇ ಹಾಸಿಹೊದ್ದಿದೆ. 'ಫೇಮಸ್ ಆದ್ರೆ ಟ್ರೋಲ್ ಆಗೋದ್ ಸಹಜ ಕಣೇ, ಇದು ಜಾಸ್ತಿ ಲೈಕ್ಸ್ ಆಗ್ಲಿ, ಅವನಿಗೂ ರೀಚ್ ಆಗ್ಲಿ ' ಅನ್ನೋ ಹಾಡಲ್ಲಿ ನಾಯಕಿ ಮತ್ತು ಆಕೆಯ ಗೆಳತಿಯನ್ನು ಕಾಣಬಹುದು.
ಏನಿಲ್ಲ, ಏನೇನಿಲ್ಲ?
ಈ ಟ್ರೋಲ್ ಸಾಂಗ್ ವಿಶೇಷತೆ ಎಂದರೆ ಇತ್ತೀಚೆಗೆ ಸೋಷ್ಯಲ್ ಮೀಡಿಯಾದಲ್ಲಿ ಟ್ರೋಲ್ ಆದ ಬಹುತೇಕ ಎಲ್ಲ ವಿಷಯಗಳೂ ಹಾಡಿನಲ್ಲಿವೆ. ಜೊತೆಗೆ ಹಳೆಯ ಜನಪ್ರಿಯ ಟ್ರೋಲ್‌ಗಳೂ ಸೇರಿವೆ. ಬೆಳ್ಳುಳ್ಳಿ ಕಬಾಬ್, ಕರಿಮಣಿ ಮಾಲೀಕ ನೀನಲ್ಲ, ನಾನು ನಂದಿನಿ ಬೆಂಗ್ಳೂರಿಗ್ ಬಂದೀನಿ, ಹೇ ತಗ್ಡು, ಹೆಂಗ್ ಪುಂಗ್ಲಿ, ಆಲ್ರೈಟ್ ಮುಂದಕ್ಕೋಗಣ, ಒನ್ ಮೋರ್ ಒನ್ ಮೋರ್, ಇದು ರಾಜ್ಯವೇ ಖುಷಿ ಪಡೋ ಸುದ್ದಿ, ಕಂಜಾಜುಲೇಶನ್ಸ್ ಬ್ರದರ್, ಡೋಲೋ 650, ಬಡವರ ಮಕ್ಳು.. ಹೀಗೆ ಇನ್ನೂ ಸಾಕಷ್ಟು ಟ್ರೋಲ್‌ಗಳನ್ನೇ ಸೇರಿಸಿ ಗೀತೆ ಮಾಡಲಾಗಿದೆ.
ಹಾಡು ಬರೆದೋರು ಯಾರು?
ಹಾಡನ್ನು ಕೇಳಿದವರು ಇದು ಉಪ್ಪಿದೇ ಕ್ರಿಯೇಟಿವಿಟಿ, ಉಪ್ಪಿಗೇ ಇಂಥ ಯೋಚನೆಗಳು ಬರೋಕೆ ಸಾಧ್ಯ ಅನ್ಬೋದು. ಆದ್ರೆ ಅಜನೀಶ್ ಲೋಕನಾಥ್ ಸಂಗೀತವಿರುವ ಹಾಡನ್ನು ಬರೆದವರು ಉಪ್ಪಿಯಲ್ಲ, ನರೇಶ್ ಕುಮಾರ್ ಎಚ್ ಎನ್ ಎಂಬವರು. ಕನ್ನಡ ಮಾತ್ರವಲ್ಲ, ಹಿಂದಿ, ತಮಿಳು, ತೆಲುಗು, ಮಲೆಯಾಳಂನಲ್ಲೂ ಹಾಡು ಬಿಡುಗಜೆಯಾಗಿದೆ.
ಯುಐ ಸಿನಿಮಾದ ಟೀಸರ್, ಟ್ರೇಲರ್, ಹಾಡು ಪ್ರತಿಯೊಂದರಲ್ಲೂ ಉಪ್ಪಿಯ 'ಡಿಫರೆಂಟ್' ಶೈಲಿ ವ್ಯಕ್ತವಾಗಿದ್ದು, ಅವರ ಅಭಿಮಾನಿಗಳಿಗೆ ಅವರು ಬಯಸುವುದೆಲ್ಲ ಈ ಚಿತ್ರದಲ್ಲಿ ಇರಲಿದೆ ಎಂಬ ನಂಬಿಕೆ ಗರಿಗೆದರಿದೆ.