
ಏನೇ ಹೇಳಿ ಪದಗಳನ್ನೇ ಸರಸವಾಗಿಸಿ, ಪದದಲ್ಲೇ ಸರಸವಾಡುವ ಸರಸ ಪದಗಳ ಸರದಾರ ಹಂಸಲೇಖ. ಪ್ರೇಮ, ವಿರಹ, ಶೃಂಗಾರ, ಆಧ್ಯಾತ್ಮ, ಗಾದೆ, ವೇದಾಂತ, ಜಾನಪ ಎಲ್ಲವನ್ನೂ ದಂಡಿಸಿಕೊಂಡು ಸೊಗಸಾಗಿ ಹಾಡು ಕಟ್ಟಿದವರು ಹಂಸಲೇಖ. ಚೂರೇ ಚೂರು ಪೋಲಿತನ ಇಲ್ಲದೇ ಪದ ಪೋಣಿಸಿಯೇ ಇಲ್ಲ. ಅವರ ಸೊಗಸಾದ ರಸಿಕ ಹಾಡು ಇಂದಿಗೂ ಮದುವೆ ಮನೆಯ ಪ್ರಸ್ತದ ಕೋಣೆಯ ಖಾಯಂ ಹಾಡು. ರವಿಚಂದ್ರನ್- ಗೌತಮಿ ನಟನೆಯ ಚಿಕ್ಕೆಜಮಾನ್ರು ಚಿತ್ರದಲ್ಲಿ, ನಾಯಕಿ- ನಾಯಕಿ ಮದುವೆಯಾದ ಮೊದಲ ರಾತ್ರಿ. ನಿರ್ದೇಶಕ ಸೀನ್ ಹೇಳಿದ್ದೇ ತಡ, ಲಹರಿಗೆ ಬಿದ್ದವರಂತೆ, ಹಂಸಲೇಖ ಲೇಖನಿಯಲ್ಲಿ ದಂಪತಿಯ ಮೊದಲ ದಿನದ ಸರಸ ಹಾಡಾಗಿ ಹರಿದಿದೆ.
ಸೋಬಾನೆ ಎನ್ನಿರಮ್ಮಾ ಸೋಬಾನೆ
ಸೊ ಎನ್ನಿರೋ ಸೋಬಾನೆ ಎನ್ನಿರೋ..
ಮಲ್ಲಿಗೆ ಮನಸವಳೇ ಸೋಬಾನೆ...
ಗಂಧದ ಗುಣದವನೇ ಸೋಬಾನೆ..
ಸತಿ ಪತಿ ಮೊದಲ ಸತಿ ಕೂಡೋ...
ರಾತ್ರಿಗೆ.. ರಾತ್ರಿಗೆ.. ನಾಚಿಕೆ ಏತಕೆ ಬಾ...
ಸತಿ ಪತಿ ಮೊದಲ ಸತಿ ಹಾಡೋ...
ಹಾಡಿಗೆ.. ಹಾಡಿಗೆ.. ಆತುರ ಏತಕೆ ಬಾ...
--ಹೀಗೆ ಆಸೆಗೆ ಬಿದ್ದ ಪತಿರಾಯ, ಪತ್ನಿಯನ್ನು ರಮಿಸುತ್ತಾ ಮಂಚಕ್ಕೆ ಕರೆಯುತ್ತಿದ್ದರೆ, ಹಂಸಲೇಖ, ಗಂಡ-ಹೆಂಡಿರು ಸೇರುವ ಮೊದಲ ರಾತ್ರಿಗೆ ಆತುರ ಏತಕೆ ಎಂದು ತಪ್ಪಿಸಿಕೊಳ್ಳುವ ಚೂಟಿ.
ಹಾಲುಂಡರೂ ಖೀರುಂಡರೂ ಬಾಯಾರಿದೆ ಬಾರೆ..
ಹಣ್ಣು ಉಂಡರು ಹಲಸುಉಂಡರು ಹಸಿವಾಗಿದೆ ಬಾರೇ..
ಹೂಂ.. ಎಂದರೂ ಉಹೂಂ ಎಂದರೂ ನಾನೆಂದಿಗೂ ನಿಮಗೆ..
ಫಲಾಹಾರವೂ ಮೊದಲಾಗಲಿ ಸುಖ ಭೋಜನ ಕಡೆಗೆ..
ಕಾಯುವ ಕಾಯಕ ಬೇಸರ.. ಕಾವಲಿ ಕಾದರೆ ಚುರಚುರಾ..
ಹಾಡಲ್ಲೇ ಗಂಡನ ಆಸೆ, ಹಸಿವಾಗಿದೆ ಬಾರೇ ಎಂದು ರಮಿಸುತ್ತಿದ್ದರೆ, ಮೊದಲು ಹಣ್ಣು, ಆಮೇಲೆ ಸುಖಾಸ್ರ ಭೋಜನ.. ಕಾವಲಿ ಕಾದರೆ ಸುಖಭೋಜನ.. ಎನ್ನುವ ಪತ್ನಿ.. ದಾಂಪತ್ಯ ಗೀತೆಯನ್ನು ಇಷ್ಟು ರಸವತ್ತಾಗಿ ಬರೆದು, ಹಾಡು ಕೇಳುವವರಿಗೂ ಮೂಡ್ ಬರಿಸಿಬಿಡುತ್ತಾರೆ ಹಂಸಲೇಖ.
ತುದಿಗಾಲಲ್ಲಿ ಹಠ ಮಾಡುತ ಕುಣಿದಾಡಿದೆ ಬಯಕೆ..
ನವಿರೇಳಿಸಿ ನಶೆಯೇರಿತು ಬಿಗಿಯಾಗಿದೆ ರವಿಕೆ...
ಆನಂದಕೆ ಮೊದಲ್ಯಾವುದು ಕೊನೆಯಾಗುವುದು ಈಗ..
ಹೊಸದಾದರೂ ಒಗಟಲ್ಲವೋ ಸೋಬಾನ ರಾಗ...
ಕಾಯುವ ಕಾಯಕ ಬೇಸರ.. ಕಾವಲಿ ಕಾದರೆ ಚುರಚುರಾ..
ಬಾಣದ ನೋಟದವನೇ ಸೋಬಾನೆ..
ರಂಭೆಯ ಮಾಟದವಳೆ ಸೋಬಾನೆ..
ಇದನ್ನೂ ಓದಿ: ಕಿಚ್ಚೆಬ್ಬಿಸಿದ ನಮ್ಮೂರ ಹಮ್ಮೀರ ಚಿತ್ರದ ಪೋಲಿ ಹಾಡು, ಅಶ್ಲೀಲದ ಸೋಂಕಿಲ್ಲ, ಶೃಂಗಾರಕ್ಕೆ ಕೊರತೆ ಇಲ್ಲ!
ಕೊನೆಗೂ ಪತ್ನಿಯನ್ನು ರಮಿಸಿ, ಭ್ರಮಿಸಿದ ಪತಿರಾಯ. ಅವರ ಮಾತಿಗೆ ಮರಳಾಗಿ, ಬಯಕೆ ತುದಿಗಾಲಲ್ಲಿ ಕುಣಿದಾಡುತ್ತಿದೆ, ರವಿಕೆ ಬಿಗಿಯಾಗುತ್ತಿದೆ..ಅನ್ನೋ ಗ್ರೀನ್ ಸಿಗ್ನಲ್..ಆನಂದಕ್ಕೆ ಮೊದಲ್ಯಾವುದು, ಕೊನೆಯಾವುದೂ ಇಲ್ಲ, ಹೊಸದಾದರೂ ಒಗಟಲ್ಲವೋ ಸೋಬಾನರಾಗ.. ಎನ್ನುತ್ತಾ ಜಾನಪದದಲ್ಲಿ ಪದ ಜೋಡಿಸಿ, ಮೊದಲ ರಾತ್ರಿಯ ಹಾಡನ್ನು ಸಂಪನ್ನ ಮಾಡಿಬಿಡುತ್ತಾರೆ.
ಪತಿ-ಪತ್ನಿಯ ನಡುವಿನ ಮೊದಲ ರಾತ್ರಿಯ ಸಂಭ್ರಮವನ್ನು ಮನಸ್ಸಲ್ಲಿಟ್ಟುಕೊಂಡು ಹಾಡಾಗಿ ಬರೆದವರು ಹಂಸಲೇಖ ಮತ್ತು ಅವರಷ್ಟೇ ಬರೆಯಬಲ್ಲರು. ಅಪ್ಪಟ ರಸಿಕ, ರಸಿಕತವನ್ನು ಹಾಡಿನಲ್ಲಿ ಕಟ್ಟಿಕೊಂಡು, ಒಂದಿಡೀ ಜನರೇಷನ್ ಮನಸ್ಸು ತಂಪುಗೊಳಿಸಿದವರು ಹಂಸಲೇಖ. ಇವತ್ತು ರಾತ್ರಿಗೆ ಈ ಹಾಡೂ ನಿಮ್ಮ ಮೈಮನಸ್ಸು ಅರಳಿಸುವುದು ಗ್ಯಾರಂಟಿ. ಮಲಗುವ ಮುನ್ನ ಹಾಡು ಕೇಳಿಬಿಡಿ.
ಇದನ್ನೂ ಓದಿ: ತಂಗಾಳಿ ತಡ್ಕೊಂಡು, ಬೆಳದಿಂಗಳಲ್ ಮಲಕೊಂಡು, ಹಾಡು ಕೇಳಿಯೇ ಸುಖದಿಂದ ನರಳುವಂತೆ ಮಾಡಿದ ನಾದಬ್ರಹ್ಮ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.