ಹುಟ್ಟು ಹಬ್ಬದಂದೇ ಪ್ರೀತಿಸಿದವಳ ಕೈಹಿಡಿದ ಶಂಕರ್ ನಾಗ್!

Suvarna News   | Asianet News
Published : Nov 09, 2020, 04:02 PM IST
ಹುಟ್ಟು ಹಬ್ಬದಂದೇ ಪ್ರೀತಿಸಿದವಳ ಕೈಹಿಡಿದ ಶಂಕರ್ ನಾಗ್!

ಸಾರಾಂಶ

'ಸಂತೋಷಕ್ಕೇ.. ಹಾಡು ಸಂತೋಷಕ್ಕೆ' ಎನ್ನುತ್ತಾ ಕನ್ನಡ ನಾಡಿನ ಜನರನ್ನೆಲ್ಲ ಸಂತೋಷದಲ್ಲಿಟ್ಟವರು ಶಂಕರ್ ನಾಗ್. ಇಂದು ಅವರ ಹ್ಯಾಪಿ ಬರ್ತ್ ಡೇ. ಈ ಅದಮ್ಯ ಸಾಹಸಿ ಹೀರೋನ ಪ್ರೇಮ್ ಕಹಾನಿ ಸಖತ್ ಇಂಟೆರೆಸ್ಟಿಂಗ್.  

ಹಾಗೆ ನೋಡಿದರೆ ಈ ಕಾಲದ ಎಷ್ಟೋ ಹುಡುಗರು ಶಂಕರ್ ನಾಗ್ ಅವರನ್ನು ನೋಡಿಲ್ಲ. ಅವರು ಹುಟ್ಟುವ ಮೊದಲೇ ಶಂಕರ್ ಇಹಲೋಕ ಯಾತ್ರೆ ಮುಗಿಸಿಬಿಟ್ಟಿದ್ದರು. ಆದರೆ ಅವರ ಅಟೋದಲ್ಲಿ ಅಟೋ ರಾಜ ಶಂಕರ್ ಫೋಟೋ ಇದೆ. ಆರಾಧ್ಯ ದೈವದಂತೆ ಅವರೆಲ್ಲ ಶಂಕರ್ ನಾಗ್ ಅವರನ್ನು ಕಾಣ್ತಾರೆ. ಗತಿಸಿ ೩೦ ವರ್ಷ ಕಳೆದ ಬಳಿಕವೂ ಇಂಥಾದ್ದೊಂದು ಗೌರವ, ಅಭಿಮಾನ ಉಳಿಸಿಕೊಳ್ಳುವುದು ಬಹುಶಃ ಶಂಕರ್ ಏನು ಅನ್ನೋದಕ್ಕೆ ಸಾಕ್ಷಿ ಅನಿಸುತ್ತೆ. ನಾಗರಕಟ್ಟೆ ಶಂಕರ ಮುಂದೆ ಶಂಕರ್ ನಾಗ್ ಆಗಿ ಬೆಳೆದು ಕನ್ನಡ ಚಿತ್ರರಂಗದ ಸಿಡಿಲ ಮರಿಯಾದದ್ದು ದೊಡ್ಡ ಕತೆ. ಈ ಕತೆ ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತು. ಆದರೆ ಗೊತ್ತಿಲ್ಲದ್ದು ಅವರ ಪ್ರೇಮ ಕಹಾನಿ.
 ಶಂಕರ್ ಆಗ ಮುಂಬೈನಲ್ಲಿದ್ದರು. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಚೂಟಿ ಚೂಟಿ ಮಾತಿನ ಉದ್ದ ಮೂಗಿನ ಮುದ್ದಾದ ಹುಡುಗಿಯೊಬ್ಬಳು ಅವರ ನಿದ್ರೆ ಕದ್ದು ಬಿಟ್ಟಿದ್ದಳು. ಅವಳೂ ರಂಗಭೂಮಿ ಕಲಾವಿದೆ. ಅಭಿನಯಕ್ಕೆ ನಿಂತರೆ ಶಂಕರ್ ಸಹ ಅವಕ್ಕಾಗುವಂತೆ ನಟಿಸುತ್ತಿದ್ದ ಅದ್ಭುತ ನಟಿ. ಸಣ್ಣಗೆ ಶುರುವಾದ ಸ್ನೇಹ ಕೆಲ ಸಮಯದಲ್ಲೇ ಗಾಢವಾಗಿ ಬೆಳೆಯಿತು. ಸ್ನೇಹಿತರಾಗಿ ಜೊತೆಗೇ ಸುತ್ತಾಟ, ಓಡಾಟ ಶುರುವಾಯ್ತು. ಇಬ್ಬರ ಇಂಟೆರೆಸ್ಟ್ ನಲ್ಲೂ ಹೆಚ್ಚಿನ ಭಿನ್ನತೆ ಇರಲಿಲ್ಲ. ರಂಗಭೂಮಿಯನ್ನು ಬಹಳ ಪ್ರೀತಿಸುತ್ತಿದ್ದ ಇಬ್ಬರೂ ಥಿಯೇಟರ್‌ಗಾಗಿ ಏನಾದರೂ ಮಾಡುವ ಕನಸು ಕಾಣುತ್ತಿದ್ದರು. ಸಿನಿಮಾ ಜಗತ್ತಿಗೆ ಎಂಟ್ರಿ ಕೊಡೋ ದೂರದ ಕನಸೂ ಇತ್ತು. ಆ ಹುಡುಗಿಯ ವಯಸ್ಸಾಗ ಹದಿನಾರು ದಾಟಿ ಹದಿನೇಳಕ್ಕೆ ಅಡಿಯಿಟ್ಟಿತ್ತು. ಹುಡುಗ ಶಂಕರ್ ಹತ್ತೊಂಬತ್ತರ ಎಳೇ ತರುಣ.

'ಶಂಕರ್ ನಾಗ್ ಇಡ್ಲಿ ಮಾರ್ತಿದ್ದರು' ಅಂದಿನ ಸತ್ಯ ಬಿಚ್ಚಿಟ್ಟ ಜೈಜಗದೀಶ್ ...

ಈ ಹುಡುಗ ಹುಡುಗಿ ಓಡಾಟ ಇದೇ ರೀತಿ ಆರು ವರ್ಷಗಳ ಕಾಲ ನಡೆಯಿತು. ಅರು ಅಂತ ಶಂಕರ್ ಕೈಯಲ್ಲಿ ಕರೆಸಿಕೊಳ್ಳುತ್ತಿದ್ದ ಅರುಂಧತಿ ರಾವ್ ಅನ್ನೋ ಆ ಹುಡುಗಿಯಂತೂ ಮದುವೆ ಸುದ್ದಿ ಎತ್ತಲಿಲ್ಲ. ಆದರೆ ಶಂಕರ್ ತಡೆಯಲಾರದೇ ಕೇಳಿಬಿಟ್ಟರು. 'ಇನ್ನೆಷ್ಟು ದಿನ ಹೀಗೆ ಓಡಾಡೋದು, ಮದ್ವೆ ಆಗಿ ಬಿಡೋಣ್ವಾ?' ಅಂತ. 'ನಾಡಿದ್ದು ನಿನ್ನ ಬರ್ತ್ ಡೇ. ಅದೇ ದಿನ ಮದ್ವೆಯಾಗೋಣ' ಅಂತ ಅರು ಹೇಳಿದಾಗ ಆದ ಶಾಕ್‌ನಲ್ಲಿ ಶಂಕರ್ ಮೂರ್ಛೆ ಹೋಗೋದೊಂದು ಬಾಕಿ. ನಲವತ್ತು ವರ್ಷ ಹಿಂದಿನ ಕಥೆ ಇದು. ಗುರು ಹಿರಿಯರಲ್ಲಿ ಮಾತಾಡದೇ, ಮನೆಯವರು ಚರ್ಚಿಸದೇ ಏಕಾಏಕಿ ನಾಳೆಯಲ್ಲ, ನಾಡಿದ್ದು ಮದ್ವೆ ಆಗೋಣ ಅಂದ್ರೆ!

ಮಂಡ್ಯದಲ್ಲಿ ನಟ ದರ್ಶನ್ ಶಂಕರ್‌ ನಾಗ್‌ರನ್ನು ನೆನಪಿಸಿಕೊಂಡಿದ್ದು ಹೀಗೆ! ...

'ತುಂಬಾ ಬೇಗ ಆಯ್ತಲ್ಲಾ..' ಅಂದು ಶಂಕರ್ ಉಗುಳು ನುಂಗಿಕೊಂಡರು. 
'ಸರಿ ಹಾಗಾದ್ರೆ. ಮುಂದಿನ ಜುಲೈಯಲ್ಲಿ ನನ್ನ ಬರ್ತ್ ಡೇ ಇದೆ. ಅವತ್ತು ಮದ್ವೆ ಆಗೋಣ' ಅಂತ ಹುಡುಗಿ ಅಂದಾಗ ಮತ್ತೆ ಯೋಚನೆಗೆ ಬೀಳ್ತಾರೆ ಶಂಕರ್. ಯಾಕೋ ಆ ದಿನ ಬಹಳ ದೂರವಿದೆ ಅನಿಸಿರಬೇಕು.
'ಬೇಡ. ನಾಡಿದ್ದೇ ಆಗೋಣ' ಅಂದರಂತೆ ಶಂಕರ್. 
ಈ ವಿಷಯವನ್ನು ಹಿರಿಯರಿಗೆ ಹೇಳಿದ್ರೆ ಅವರು ಬಿದ್ದೂ ಬಿದ್ದೂ ನಕ್ಕರು. ಚಿಕ್ಕ ಹುಡುಗರ ಹುಡುಗಾಟ ಇದು ಅಂದುಕೊಂಡರು. ಆದರೆ ಈ ಹುಡುಗ್ರು ಈ ಬಾರಿ ಹುಡುಗಾಟ ಆಡಲಿಲ್ಲ. ಅಂದುಕೊಂಡ ಹಾಗೆ ಮದುವೆ ಆಗೋದೇ ಅಂತ ತೀರ್ಮಾನ ಮಾಡಿದ್ರು.
ಆ ಹೊತ್ತಿಗೆ ಶಂಕರ್‌ಗೆ ಗಿರೀಶ್ ಕಾರ್ನಾಡರ ಸಿನಿಮಾಕ್ಕೆ ಸಹಾಯಕ ನಿರ್ದೇಶಕನಾಗುವ ಆಸೆ ಇತ್ತು. ಈ ವಿಷಯ ಕಾರ್ನಾಡರ ಬಳಿ ಹೇಳಿದ್ರೆ ಅವರು, ನೀನು ನನ್ನ ಸಿನಿಮಾಕ್ಕೆ ಹೀರೋ ಅಂದು ಬಿಡಬೇಕೇ.. ಈ ಸಿನಿಮಾ ಒಪ್ಕೋ. ಮುಂದೆ ಬೇಕಿದ್ರೆ ಡೈರೆಕ್ಷನ್ ಕಲಿತರಾಯ್ತು ಅಂತ ಅರು ಹೇಳಿದ ಮೇಲೇ ಸಮಾಧಾನ. 


ಆರ್ಯ ಸಮಾಜದಲ್ಲಿ ಮದುವೆ. ಆದರೆ ಮದುವೆ ಗಂಡು ನಾಪತ್ತೆ. ಶಂಕರ್‌ ನಾಗ್‌ ಪತ್ರಿಕೆಯವರಿಗೆ ಇಂಟರ್‌ವ್ಯೂ ಕೊಡುತ್ತಾ ಕೂತಿದ್ರು. ನಡುವೆ ಇವತ್ತು ತನ್ನ ಮದುವೆ ಅಂತ ಗೊತ್ತಾಯ್ತು. ಆ ಪತ್ರಕರ್ತರನ್ನು ಪಕ್ಕಕ್ಕೆ ಕರೆದು ಶಂಕರ್ ಹೀಗನ್ನುತ್ತಾರೆ, ಸಾರ್ ಒಂದು ಸಣ್ಣ ಬ್ರೇಕ್ ತಗೊಳ್ಳೋಣ್ವಾ, ಪಕ್ಕದಲ್ಲೇ ಆರ್ಯ ಸಮಾಜದಲ್ಲಿ ನನ್ನ ಮದ್ವೆ ಇದೆ. ಹಿಂಗ್ ಹೋಗಿ ಹಂಗೆ ಬಂದು ಬಿಡ್ತೀನಿ.. ಆಮೇಲೆ ಮುಂದುವರಿಸೋಣ' 
ಆ ಪತ್ರಕರ್ತ ಕಣ್ಣು ಬಾಯಿ ಬಿಟ್ಟು ನೋಡುತ್ತಿರುವಾಗಲೇ ಶಂಕರ್ ಆರ್ಯ ಸಮಾಜದತ್ತ ಧಾವಿಸಿದ್ರು. ಆರು ವರ್ಷ ಮನಸಾರೆ ಪ್ರೀತಿಸಿದ ಹುಡುಗಿಯನ್ನು ವರಿಸಿದರು. 

ಶಂಕರ್ ನಾಗ್ ಪುತ್ರಿ ಈಗೇನು ಮಾಡ್ತಾ ಇದ್ದಾರೆ ಗೊತ್ತಾ? ತಂದೆಯಂತೆಯೇ ಮಗಳೂ ಅಚ್ಚರಿ ಮೂಡಿಸಿದ್ದಾಳೆ! ...

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್