
- ಜೋಗಿ
ಒಂದು ಸರಳ ಜೀವನದ ವರ್ತಮಾನ. ಮತ್ತೊಂದು ಕರಾಳ ಬದುಕಿನ ಪೂರ್ವಾಶ್ರಮ. ವರ್ತಮಾನದಲ್ಲಿ ತಿಥಿ ಅಡುಗೆ ಭಟ್ಟ. ಪೂರ್ವಾಶ್ರಮದಲ್ಲಿ ವಿರೋಧಿಗಳ ತಿಥಿ ಮಾಡಿ ಕಟ್ಟುತ್ತಾನೆ ಚಟ್ಟ.
ಇವೆರಡನ್ನು ಬೆಸೆಯಲಿಕ್ಕೆ ಹಳೆಯ ದ್ವೇಷದ ಕತೆ, ದುರಂತ ಸನ್ನಿವೇಶ, ಮಾನವೀಯ ಮುಖ. ಪೂರ್ವಾಶ್ರಮದ ರೂಪವನ್ನು ಕಂಡುಬಲ್ಲ ಜೀವದ ಗೆಳೆಯ, ನೆನಪಿಸಲಿಕ್ಕೆ ಒಬ್ಬ ಪೊಲೀಸ್ ಅಧಿಕಾರಿ, ಮರೆಸಲಿಕ್ಕೆ ಪುಟ್ಟಕಂದನ ಮಮಕಾರ.
ನಿನ್ನ ನೋಡಿ ಸುಮ್ಮನೆಂಗ್ ಇರಲಿ'; ರಾಬರ್ಟ್ ಸಾಂಗ್ ಮೇಕಿಂಗ್ ವಿಡಿಯೋ ವೈರಲ್!...
ಈ ಫಾರ್ಮುಲಾ ಚಿತ್ರರಂಗಕ್ಕೆ ಹೊಸತಲ್ಲ. ಎನಕ್ಕು ಇನ್ನೊರು ಪೇರ್ ಇರುಕ್ಕು ಎಂಬುದು ಸಾರ್ವಕಾಲಿಕ ಸೂತ್ರ. ಅದನ್ನು ಕಾಲಕಾಲಕ್ಕೆ ಹೊಸದಾಗಿ ನೀಡುವುದು ನಿರ್ದೇಶಕನಿಗೆ ಸವಾಲು. ಆ ಅವತಾರ ಎತ್ತುವುದು ನಟನಿಗೂ ಚಾಲೆಂಜು. ಆ ಸವಾಲನ್ನು ತರುಣ್ ಸುಧೀರ್ ಹುಮ್ಮಸ್ಸಿನಿಂದ ಚಾಲೆಂಜಿಂಗ್ ಸ್ಟಾರ್ ವರ್ಚಸ್ಸಿನಿಂದ ಗೆದ್ದಿದ್ದಾರೆ. ರಾಮನವಮಿಯ ದಿವಸ ಪಾನಕ, ಪನಿವಾರ, ಕೋಸಂಬರಿಯ ಜೊತೆ ಲಂಕಾದಹನವೂ ಆಗುತ್ತದೆ. ರಾವಣ, ಕುಂಭಕರ್ಣರ ಸಂಹಾರವೂ ಆಗುತ್ತದೆ.
ಇಡೀ ಚಿತ್ರವನ್ನು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ವಿನ್ಯಾಸ ಮಾಡಿರುವ ರೀತಿ ಹೊಸದಾಗಿದೆ. ಮೊದಲ ಅರವತ್ತು ನಿಮಿಷ ಗಂಗಾನದಿಯಂತೆ ಸಾಗುವ ಕತೆಯಲ್ಲಿ ರಕ್ತಪಾತದ ಸುಳಿವೂ ಇಲ್ಲ. ಉಗ್ಗುವ ಮಗ, ಉಗ್ಗುವ ತಂದೆ, ಸ್ಟಾಮರಿಂಗ್ ವಂಶಪಾರಂಪರ್ಯ ಎಂದು ಮಗನನ್ನು ಒಪ್ಪಿಸಿ ಅವನಲ್ಲಿ ಆತ್ಮವಿಶ್ವಾಸ ತುಂಬುವ ಮಾತು, ದ್ವೇಷ ಬೇಡ, ಸಹನೆ ಇರಲಿ ಎಂಬ ಹಿತೋಪದೇಶ, ನಾಯಕಿ ಸಿಟ್ಟನ್ನೂ ತನ್ನ ಸಂಯಮದಿಂದಲೇ ತಗ್ಗಿಸುವ ನಾಜೂಕುತನ, ಸಸ್ಯಾಹಾರಿಯ ಮನೆಯಾದರೂ ದ್ವೇಷಕ್ಕಂಜಿ ದುಷ್ಟರಿಗೆ ಮಾಂಸಾಹಾರ ಬೇಯಿಸುವ ಸಜ್ಜನಿಕೆ- ಹೀಗೆ ದರ್ಶನ್ ಲವಲವಿಕೆಯಿಂದಲೇ ಚಿತ್ರವನ್ನು ಬೆನ್ನಮೇಲೆ ಹೊತ್ತು ಸಾಗುವುದನ್ನು ನೋಡಬಹುದು. ನೆನಪಿರಲಿ, ಇದು ದರ್ಶನ್ ಸಿನಿಮಾ. ಅವರೇ ಹೆಡ್‌ಕುಕ್. ಅವರೇ ರಾಘವ, ಅವರೇ ರಾಬರ್ಟ್.
'ರಾಬರ್ಟ್' ಚಿತ್ರದಲ್ಲಿರುವ ಆ ಪುಟ್ಟ ಬಾಲಕನ ಕೈಯಲ್ಲಿ 100 ಸಿನಿಮಾಗಳು, ಈತ ಸ್ಟಾರ್ ಬಾಲ ನಟ!.
ತರುಣ್ ಸುಧೀರ್ ಕತೆ ಹೇಳುವುದಕ್ಕೆ ವಿವಿಧ ಲೊಕೇಶನ್‌ಗಳನ್ನೂ ವಿಧವಿಧವಾದ ಪಾತ್ರಗಳನ್ನೂ ಬಳಸಿಕೊಂಡಿದ್ದಾರೆ. ದ್ವೇಷ ಉಕ್ಕಿಸಲಿಕ್ಕೆ ನಾಲ್ಕು ಪಾತ್ರ, ಪ್ರೀತಿ ಹೆಚ್ಚಿಸಲಿಕ್ಕೆ ಮೂರು, ಲಿಂಗ ಸಮಾನತೆಯನ್ನು ಹೇಳಲಿಕ್ಕೊಂದು ದೃಶ್ಯ, ತನ್ನ ನಿಜರೂಪ ಮುಚ್ಚಿಡುವುದಕ್ಕೆ ಒಂದೆರಡು ದೃಶ್ಯ, ಆಗೀಗ ರೌದ್ರಾವತಾರ- ಹೀಗೆ ಕತೆ ರೋಲರ್ ಕೋಸ್ಟರ್ ಸವಾರಿ ಮಾಡುತ್ತದೆ. ವಾರಣಾಸಿ, ಲಕ್ನೋ, ಬೆಂಗಳೂರುಗಳಲ್ಲಿ ಓಡಾಡುತ್ತದೆ. ಎಲ್ಲಾ ಭಾಷೆಯ ಸಿನಿಮಾ ನೋಡಿದವರಿಗೆ ಕೆಲವು ಚಿತ್ರಗಳ ನೆರಳು ಕಂಡರೂ ಕಂಡೀತು. ದೇವನೊಬ್ಬ ನಾಮ ಹಲವು!
ಕತೆ ತೆಳುವಾದಾಗೆಲ್ಲ ತಾಂತ್ರಿಕತೆ ಕೈ ಹಿಡಿಯುತ್ತದೆ. ಇವೆರಡನ್ನೂ ಬೆಂಬಲಿಸಲಿಕ್ಕೆ ದೊಡ್ಡ ತಾರಾಗಣವಿದೆ. ಅಶೋಕ್, ದೇವರಾಜ್, ಅವಿನಾಶ್, ಜಗಪತಿಬಾಬು, ರವಿಶಂಕರ್, ಚಿಕ್ಕಣ್ಣ ಮುಂತಾದ ಹಿರಿಯ ನಟರಿದ್ದಾರೆ. ವಿನೋದ್ ಪ್ರಭಾಕರ್ ಕಾಡಿನ ರಾಜನಂತೆ ಅಬ್ಬರಿಸಿ ಬೊಬ್ಬಿರಿಯುತ್ತಾರೆ. ಇವೆಲ್ಲದರ ನಡುವೆ ಮೈನವಿರೇಳಿಸುವ ಸನ್ನಿವೇಶಗಳನ್ನು ಅಲ್ಲಲ್ಲಿ ಚಿಮುಕಿಸುತ್ತಾರೆ ತರುಣ್. ದರ್ಶನ್ ಇಂಟ್ರಡಕ್ಷನ್ ದೃಶ್ಯ ಅವುಗಳಲ್ಲೊಂದು. ಮಹಾಪ್ರಚಂಡ ರಾವಣನ ಸನ್ನಿವೇಶ ಮತ್ತೊಂದು. ಮೂರು ಮತ್ತು ನಾಲ್ಕನೆಯ ದೃಶ್ಯ ಯಾವುದೆನ್ನುವುದನ್ನು ಚಿತ್ರ ನೋಡಿದವರು ನಿರ್ಧರಿಸಿಕೊಳ್ಳಬಹುದು.
ಮೊದಲ ದಿನವೇ 2576 ಶೋಗಳಲ್ಲಿ ರಾಬರ್ಟ್ ದರ್ಶನ!
ನಾಯಕನಿಗೆ ಶಾದಿಭಾಗ್ಯ ಇಲ್ಲ. ಆದರೆ ಸ್ವಪ್ನಭಾಗ್ಯಕ್ಕೆ ಕೊರತೆಯಿಲ್ಲ. ನಾಯಕಿಯ ಜೊತೆ ಪ್ರೇಮಿಸಲಿಕ್ಕೆ ಮೂರು ಡ್ರೀಮ್‌ಸಾಂಗುಗಳಿವೆ. ಮಿಕ್ಕಂತೆ ಸ್ನೇಹಕ್ಕೊಂದು ಮೆಚ್ಚುಗೆಗೊಂದು ಹಾಡು. ಪ್ರತಿಯೊಂದು ದೃಶ್ಯದಲ್ಲೂ ಸಾವಿರಾರು ಸಹಕಲಾವಿದರು ತುಂಬಿಕೊಂಡು ತೆರೆಯನ್ನು ಹೌಸ್‌ಫುಲ್ ಮಾಡುವುದನ್ನು ನೋಡುವುದೇ ಚಂದ. ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆಯಂತೆ ಸಿನಿಮಾ ಪೂರ್ತಿ ಜನವೋ ಜನ.
ಸ್ಟಾರ್ ಸಿನಿಮಾ ಎಂದರೆ ಹಬ್ಬ. ತೆರೆಯ ಮೇಲೆ ಆಯುಧಪೂಜೆ, ಆಗೀಗ ದೀಪಾವಳಿ. ಅಬ್ಬರಿಸಿ ಬೊಬ್ಬಿರುವ ಸಂಭಾಷಣೆ, ಕಿಡಿಹಾರುವ ಕಣ್ಣೋಟ, ಶತ್ರುಸಂಹಾರ. ಇಲ್ಲಿ ಅವಕ್ಕೆ ಕಿಂಚಿತ್ತೂ ಕೊರತೆಯಿಲ್ಲ. ನಿರ್ಮಾಪಕ ಉಮಾಪತಿ ದೇವರ ರಥಕ್ಕೆ ಉತ್ತತ್ತಿಯನ್ನೂ ಚುರುಮುರಿಯನ್ನೂ ಹೂವನ್ನೂ ಎಸೆಯುವಂತೆ ಚಿತ್ರದ ಪ್ರತಿಯೊಂದು ಫ್ರೇಮಿಗೂ ಹಣ ಸುರಿದಿದ್ದಾರೆ. ಅಲ್ಲಿ ಅದ್ದೂರಿ ರಥೋತ್ಸವ ಸಂಪನ್ನ. ರಥಬೀದಿ ಧನ್ಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.