Rishab Shetty: ಪ್ರಶಸ್ತಿ ಬಂದಾಗಲೂ ಹೆಂಡತಿಯನ್ನು ಹಾಡಿ ಹೊಗಳಿದ ರಿಷಬ್ ಶೆಟ್ಟಿ‌, ಸಿಕ್ರೆ ಇಂಥಾ ಗಂಡ ಸಿಗ್ಬೇಕಂತೆ!

By Bhavani Bhat  |  First Published Aug 16, 2024, 8:25 PM IST

ರಾಷ್ಟ್ರಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ, ತಮ್ಮ ಯಶಸ್ಸಿನ ಹಿಂದೆ ಪತ್ನಿ ಪ್ರಗತಿ ಅವರ ಪಾತ್ರವನ್ನು ಕೊಂಡಾಡಿದ್ದಾರೆ. 'ಕಾಂತಾರ' ಸಿನಿಮಾದಲ್ಲಿ ನಟಿಸಲು ಪ್ರೇರೇಪಿಸಿದ್ದು ಅವರೇ ಎಂದು ರಿಷಬ್ ಭಾವುಕರಾಗಿ ನುಡಿದಿದ್ದಾರೆ.


ಸಿನಿಮಾದಲ್ಲಿ ಜನಪ್ರಿಯತೆ ಬಂದಾಕ್ಷಣ ಹೆಂಡತಿಯನ್ನು ಮರೆಯೋ ಎಷ್ಟೋ ನಟರು ನಮ್ಮ ನಡುವೆ ಇದ್ದಾರೆ. ಆದರೆ ರಿಷಬ್, ಯಶ್ ಮೊದಲಾದವರು ಇದಕ್ಕೆ ಅಪವಾದ. ಅವರು ತಮ್ಮ ಯಶಸ್ಸಿನ ಸಮಭಾಗವನ್ನು ಪತ್ನಿಗೆ ನೀಡುವುದರಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಸಿನಿಮಾ ಎಷ್ಟೇ ಎತ್ತರಕ್ಕೆ ಹೋದರೂ ಪತ್ನಿಯನ್ನು ಮೂಲೆ ಗುಂಪು ಮಾಡದೇ, ಹೋದಲ್ಲೆಲ್ಲ ಅವರ ಸಹಾಯವನ್ನು ಸ್ಮರಿಸುತ್ತಾರೆ. 'ಕಾಂತಾರ' ಸಿನಿಮಾ ಆರಂಭದಿಂದಲೂ ರಿಷಬ್‌ ತನ್ನ ಪತ್ನಿ ಮಾಡಿದ ಉಪಕಾರವನ್ನು ಸ್ಮರಿಸುತ್ತಲೇ ಇದ್ದಾರೆ. ಇದೀಗ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ನಟ ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದಲ್ಲಿನ ನಟನೆಗೆ ‘ಅತ್ಯುತ್ತಮ ನಟ’ ಪ್ರಶಸ್ತಿ ಸಿಕ್ಕಿದೆ. ‘ಕಾಂತಾರ’ ಸಿನಿಮಾದಲ್ಲಿ ಕೊನೆಯ 20 ನಿಮಿಷದಲ್ಲಿ ರಿಷಬ್ ಶೆಟ್ಟಿ ಅವರು ಅದ್ಭುತವಾಗಿ ನಟಿಸಿದ್ದರು. ಅಷ್ಟೇ ಅಲ್ಲದೆ ಅವರು ಈ ಚಿತ್ರಕ್ಕೆ ನಿರ್ದೇಶನ ಕೂಡ ಮಾಡಿದ್ದರು. ಈ ಸಿನಿಮಾಕ್ಕೆ 'ಅತ್ಯುತ್ತಮ ಮನರಂಜನಾ ಚಿತ್ರ' ಅವಾರ್ಡ್‌ ಕೂಡ ಸಿಕ್ಕಿದೆ. 

 ಈ ಸಿಹಿ ಸುದ್ದಿ ಘೋಷಣೆ ಬೆನ್ನಲ್ಲೇ ರಿಷಬ್‌ ಪ್ರೆಸ್‌ಮೀಟ್ ಕರೆದಿದ್ದರು. ಈ ವೇಳೆ ಅವರ ಪ್ರಾಮಾಣಿಕ ಮಾತು ಎಲ್ಲರಿಗೂ ಇಷ್ಟವಾಗಿದೆ. 'ನಾನು ನಟನಾಗಿರಬಹುದು, ನಿರ್ದೇಶಕನಾಗಿರಬಹುದು. ಆದರೆ ಈ ಯಶಸ್ಸು ನನ್ನ ತಂಡಕ್ಕೆ ಸೇರುತ್ತದೆ. ನಾನು ಈ ಹಿಂದೆಯೇ ಪುನೀತ್ ರಾಜ್‌ಕುಮಾರ್, ದೈವನರ್ತಕರಿಗೂ ಈ ಸಿನಿಮಾವನ್ನು ಅರ್ಪಿಸಿದ್ದೆ ಅಂತ ಹೇಳಿದ್ದೆ. ಈಗಲೂ ಅದೇ ಮಾತು ಹೇಳುವೆ. ಜನರು ಇಷ್ಟಪಟ್ಟು, ಮೆಚ್ಚಿಕೊಂಡರೆ ಅದೇ ದೊಡ್ಡದು. ಚಿತ್ರರಂಗದಲ್ಲಿ ಎಲ್ಲರಿಗೂ ಜನರು ಮೆಚ್ಚಬೇಕು. ಶಿವ ಪಾತ್ರ ಈ ರೇಂಜ್‌ಗೆ ಜನರಿಗೆ ತಲುಪತ್ತೆ ಅಂತ ನಾನು ಅಂದುಕೊಂಡಿರಲಿಲ್ಲ. ಎಲ್ಲರಿಂದ ಒಂದು ಸಿನಿಮಾ ಆಗತ್ತೆ. ಮೊದಲು ನನಗೆ ಶುಭಾಶಯ ತಿಳಿಸಿದ್ದೇ ನನ್ನ ಹೆಂಡ್ತಿ. ಯಶ್ ಅವರು ಕೂಡ ನನಗೆ ಶುಭಾಶಯ ತಿಳಿಸಿದ್ದಾರೆ. ಈ ಪ್ರಶಸ್ತಿ ದೈವಕ್ಕೆ ಸಲ್ಲಬೇಕು, ಎಲ್ಲವೂ ಅವರಿಗೆ ಸಲ್ಲಬೇಕು' ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

Tap to resize

Latest Videos

ಇನ್ನೊಂದು ವಿಶೇಷತೆ ಅಂದರೆ ಅತ್ಯುತ್ತಮ ನಟ ಪ್ರಶಸ್ತಿಗೆ ರಿಷಬ್ ಹಾಗೂ ಮಲೆಯಾಳಂ ಸಿನಿಮಾ ರಂಗದ ದಂತಕಥೆ ಮುಮ್ಮುಟ್ಟಿ ನಡುವೆ ತೀವ್ರ ಹಣಾಹಣಿ ಇತ್ತು. ಆ ದೈತ್ಯ ನಟನ ಎದುರು ರಿಷಬ್ ಪ್ರಶಸ್ತಿ ಪಡೆದದ್ದು ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ. ಆದರೆ ರಿಷಬ್ ವಿನಯದಿಂದ, 'ಅಂಥವರ ಮುಂದೆ ನಿಲ್ಲುವಷ್ಟು ದೊಡ್ಡವರು ನಾವಲ್ಲ. ಪಾತ್ರ ನೋಡಿ ಪ್ರಶಸ್ತಿ ಕೊಟ್ಟಿರ್ತಾರೆ' ಅಂದಿದ್ದಾರೆ. 

ಕಾಂತಾರಕ್ಕೆ ರಾಷ್ಟ್ರ ಪ್ರಶಸ್ತಿ: 23 ವರ್ಷಗಳ ಬರ ನೀಗಿಸಿದ ರಿಷಭ್ ಶೆಟ್ಟಿ
ಆದರೆ ಇವೆಲ್ಲಕ್ಕಿಂತ ಹೆಚ್ಚು ಗಮನಸೆಳೆದದ್ದು ಅವರು ಪತ್ನಿಯನ್ನು ಕೊಂಡಾಡಿದ್ದು. 'ಆಕೆ ಹೇಳದಿದ್ದರೆ ನಾನು ಈ ಸಿನಿಮಾದಲ್ಲಿ ನಟಿಸುತ್ತಲೇ ಇರಲಿಲ್ಲ. ಈ ಸಿನಿಮಾ ಮಾಡಬೇಕು ಎಂದುಕೊಂಡಾಗ ನಾನು ಬೇರೆಯವರು ನಟಿಸಲಿ, ನಾನು ನಿರ್ದೇಶನ ಮಾಡ್ತೀನಿ ಅಂತ ಹೇಳಿದ್ದೆ. ಆದರೆ ನನ್ನ ಪತ್ನಿ ಪ್ರಗತಿ, ಇಲ್ಲ, ಇದರಲ್ಲಿ ನೀನೇ ನಟಿಸಬೇಕು ಎಂದು ಪಟ್ಟು ಹಿಡಿದು ನಟಿಸುವಂತೆ ಮಾಡಿದಳು. ಆ ವೇಳೆ ನನ್ನ ಮಗಳು ಅವಳ ಹೊಟ್ಟೆಯಲ್ಲಿದ್ದಳು. ಅವಳೇ ಈ ಸಿನಿಮಾಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದಾಳೆ' ಎಂದಿದ್ದಾರೆ. ಜತೆಗೆ ಮಗಳು ಮನೆಗೆ ಬಂದಮೇಲೆ ಅದೃಷ್ಟ ಲಕ್ಷ್ಮಿ ಮನೆಗೆ ಬಂದ ಹಾಗಾಗಿದೆ ಎನ್ನೋ ಮಾತನ್ನೂ ಹೇಳಿದ್ದಾರೆ. 

ಎಂಥಾ ಜನಪ್ರಿಯತೆಯ ನಡುವೆಯೂ ಪತ್ನಿಯ ಸಹಾಯವನ್ನು ಮರೆಯದೇ ಸಾರ್ವಜನಿಕವಾಗಿ ಶ್ಲಾಘಿಸುವ ರಿಷಬ್‌ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕನ್ನಡ ಚಿತ್ರರಂಗಕ್ಕೆ ಫಲಿಸಿತೇ ಪೂಜಾಫಲ, ಕಾಂತಾರ, ಕೆಜಿಎಫ್‌ಗೆ ಎರಡೆರಡು ರಾಷ್ಟ್ರೀಯ ಪ್ರಶಸ್ತಿ!
 

click me!