ಯಕ್ಷಗಾನ ವೇಷದಲ್ಲಿ ಮಿಂಚಿದ ರಮೇಶ್ ಅರವಿಂದ್!

By Vaishnavi ChandrashekarFirst Published Oct 12, 2022, 3:14 PM IST
Highlights

ಅಕ್ಟೋಬರ್ ಹತ್ತರಂದು ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ ನೀಡುವ ಹುಟ್ಟೂರ ಪ್ರಶಸ್ತಿಯನ್ನು ರಮೇಶ ಅರವಿಂದ್ ಅವರಿಗೆ ನೀಡಲಾಗಿತ್ತು. 

ಬಹುಭಾಷಾ ಚಿತ್ರನಟ ರಮೇಶ್ ಅರವಿಂದ್ ಬಡಗುಟ್ಟಿನ ಯಕ್ಷಗಾನ ವೇಷ ಧರಿಸಿ ಗಮನ ಸೆಳೆದಿದ್ದಾರೆ. ಪುಂಡು ವೇಷದ ಸೊಬಗಿನಲ್ಲಿ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಯಕ್ಷಗಾನದ ಲಾಲಿತ್ಯದ ಹೆಜ್ಜೆಗಳನ್ನು ಕಲಿತು ಪೋಸ್ ಕೊಟ್ಟಿದ್ದಾರೆ.

ಅಕ್ಟೋಬರ್ ಹತ್ತರಂದು ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ ನೀಡುವ ಹುಟ್ಟೂರ ಪ್ರಶಸ್ತಿಯನ್ನು ರಮೇಶ ಅರವಿಂದ್ ಅವರಿಗೆ ನೀಡಲಾಗಿತ್ತು. ಈ ಪ್ರಶಸ್ತಿ ಪಡೆದ ನಂತರ ರಮೇಶ್ ಅರವಿಂದ್ ಕರಾವಳಿಯ ಜೊತೆಗೆ ಹೊಸ ನಂಟು ಬೆಳೆಸಿಕೊಂಡಿದ್ದರು. ಈ ಹಿಂದೆ ಅನೇಕ ಬಾರಿ ಚಿತ್ರಿಕರಣಕ್ಕೆ ಉಡುಪಿ ಕುಂದಾಪುರ ಭಾಗಕ್ಕೆ ಬಂದಿದ್ದರೂ, ಕರಾವಳಿಯ ಬಗೆಗಿನ ಅವರ ಕುತೂಹಲ ತಣಿದಿರಲಿಲ್ಲ, ಕನಸೊಂದು ನನಸಾಗಿರಲಿಲ್ಲ. ಆದರೆ ಈ ಬಾರಿ ರಮೇಶ್ ತಮ್ಮ ಅಪರೂಪದ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ. ಶಿವರಾಮ ಕಾರಂತರ ನೆಚ್ಚಿನ ಕ್ಷೇತ್ರ ಯಕ್ಷಗಾನದ ವೇಷ ಧರಿಸಿ ಸಂತೋಷಪಟ್ಟಿದ್ದಾರೆ. 

ಉಡುಪಿಯ ಪ್ರವಾಸದಲ್ಲಿರುವ ರಮೇಶ್ ಅರವಿಂದ್ ಕೂದ್ರು ನೆಸ್ಟ್ ಗೆಸ್ಟ್ ಹೌಸಿಗೆ ಇತ್ತೀಚೆಗೆ ಭೇಟಿ ಕೊಟ್ಟಿದ್ದರು. ಅಲ್ಲಿನ ವಾತಾವರಣ ಕಂಡು ಮನಸೋತಿದ್ದರು. ಹಿರಿಯ ಛಾಯಾಗ್ರಾಹಕ ಫೋಕಸ್ ರಾಘು ಅವರಲ್ಲಿ ತನ್ನದೊಂದು ಫೋಟೋ ಶೂಟ್ ನಡೆಸುವಂತೆ ಕೇಳಿಕೊಂಡಿದ್ದರು . ಸೋಮವಾರ ಕಾರಂತ ಪ್ರಶಸ್ತಿ ಪಡೆಯಲು ರಮೇಶ್ ಅರವಿಂದ್ ಉಡುಪಿಗೆ ಆಗಮಿಸಿದ್ದರು. ಈ ಸಂದರ್ಭ ಬಹುಕಾಲದ ಕನಸಾಗಿದ್ದ ಯಕ್ಷಗಾನದ ವೇಷವನ್ನು ಹಾಕಿಸಿಕೊಂಡಿದ್ದಾರೆ.

ಸಾಂಪ್ರದಾಯಿಕ ಪುಂಡು ವೇಷ ಮತ್ತು ಬಣ್ಣಗಾರಿಕೆಯನ್ನು ಕಲಾವಿದ , ಯಕ್ಷಗುರು ಶೈಲೇಶ್ ವ್ಯವಸ್ಥೆ ಮಾಡಿದ್ದರು. ಅಂತರಾಷ್ಟ್ರೀಯ ಛಾಯಾಗ್ರಹಕ ಫೋಕಸ್ ರಾಘು , ರಮೇಶ್ ಅರವಿಂದ್ ಅವರ ಫೋಟೋ ಶೂಟ್ ಮಾಡಿಸಿದ್ದಾರೆ. 

ಉಡುಪಿ: ನಟ ರಮೇಶ್ ಅರವಿಂದ್‌ಗೆ ಕಾರಂತ ಹುಟ್ಟೂರ ಪ್ರಶಸ್ತಿ

ಯಕ್ಷಗಾನ ಕಲೆಯ ಬಗ್ಗೆ ರಮೇಶ್ ಅರವಿಂದ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಛಾಯಾಗ್ರಹಣದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ, ಉಡುಪಿ ಕೊಡಂಗಳದ ರಾಘವೇಂದ್ರ ಫೋಟೋ ಕ್ಲಿಕ್ ಮಾಡಿದ್ದಾರೆ. ಸುವರ್ಣಾ ನದಿ ತೀರದಲ್ಲಿರುವ ಕುದ್ರು ನೆಸ್ಟ್ ಎಂಬ ಹೋಮ್ ಸ್ಟೇಯಲ್ಲಿ ರಮೇಶ್ ಅರವಿಂದ್ ಸಾಂಪ್ರದಾಯಿಕವಾಗಿ ಬಣ್ಣಹಚ್ಚಿದ್ದಾರೆ.

ಈ ವೇಳೆ ಮಾತನಾಡಿದ ರಮೇಶ್ ಅರವಿಂದ್,ಯಕ್ಷಗಾನದ ಮೇಕಪ್ ಮಾಡುತ್ತಾ ನನಗೊಂದು ಬಹಳ ದಿವ್ಯವಾದ ಅನುಭವ, ಭಾವನೆ ಮೂಡಿ ಬಂತು. ವೇಷ ತೊಟ್ಟ ಮೇಲಂತೂ ಬಹಳ ಪವರ್ ಫುಲ್ ಫೀಲ್ ಆಯ್ತು. ವೇದಿಕೆಯಲ್ಲಿ ಯಕ್ಷಗಾನ ನೋಡುತ್ತಾ, ಯಾಕೆ ಕಲಾವಿದರು ಇಷ್ಟು ಪವರ್ ಫುಲ್ ಆಗಿ ಕುಣಿಯುತ್ತಾರೆ ಎಂದು ನನಗೆ ನಾನೇ ಪ್ರಶ್ನೆಯನ್ನು ಕೇಳಿಕೊಂಡಿದ್ದೆ. ವೇಷ ತೊಟ್ಟು ಕುಣಿಯುತ್ತಿರುವಾಗ ಅದರಲ್ಲಿ ಆಗುವ ಆನಂದ ಖುಷಿ ಏನು ಎಂಬುದು ಸ್ವತಃ ನನಗೆ ಅರಿವಾಯಿತು. 

‘ಪ್ರೀತಿಯಿಂದ ರಮೇಶ್‌’ ಬಿಡುಗಡೆ: ಕಾಲೇಜು ವಿದ್ಯಾರ್ಥಿಗಳು ಓದಲೇಬೇಕಾದ ಪುಸ್ತಕ!

ವೇಷ ಕಟ್ಟುವಾಗ 42 ಗಂಟುಗಳನ್ನು ಹಾಕುವುದಾಗಿ ಕಲಾವಿದರು ಹೇಳಿದರು. ಅವರೇ ಅದರ ಮಹತ್ವ ಏನು ಎಂದು ತಿಳಿಸಿಕೊಟ್ಟಿದ್ದಾರೆ. ಕಟ್ಟುಗಳು ವೇಷದ ಸಮತೋಲನ ಕಾಪಾಡುತ್ತದೆ. ಯಕ್ಷಗಾನದ ಎಲ್ಲಾ ಕಲಾವಿದರಿಗೆ ನನ್ನದು ದೊಡ್ಡ ನಮಸ್ಕಾರ. ಯಕ್ಷಗಾನ ಕ್ಷೇತ್ರಕ್ಕೆ ಡಾ. ಶಿವರಾಮ ಕಾರಂತರು ಕೊಟ್ಟ ಕೊಡುಗೆಗಳ ಬಗ್ಗೆ ನಾನು ಕಲಾವಿದರಿಂದ ವಿಮರ್ಶಕರಿಂದ ಕೇಳಿದ್ದೇನೆ. ಕಾರಂತರು ಯಕ್ಷಗಾನಕ್ಕೆ ಗೆಜ್ಜೆ ಕಟ್ಟಿದ್ದ ಫೋಟೋವನ್ನು ನಾನು ನೋಡಿದ್ದೆ. ನಾನು ಯಕ್ಷಗಾನ ವೇಷ ತೊಡುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆಧುನಿಕ ಛಾಯಾಗ್ರಹಕ ಫೋಕಸ್ ರಾಘು ಅವರ ಸಲಹೆಯಂತೆ ನಾನು ವೇಷ ತೊಟ್ಟಿದ್ದೇನೆ ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ.

ಯಕ್ಷಗಾನ ಎಂಬುದು ಒಂದು ಅದ್ಭುತವಾದ ಕಲೆ. ಒಂದು ಜಿಲ್ಲೆ ಅಥವಾ ಒಂದು ಭಾಗಕ್ಕೆ ಸೀಮಿತವಾಗಿ ಇರುವ ಕಲೆಯಲ್ಲ. ಇಡೀ ದೇಶ ವಿಶ್ವದಲ್ಲಿ ಬಣ್ಣಗಾರಿಕೆ , ವೇಷ ಭಾಗವತರ ಪದ್ಯ ಹೀಗೆ ಇಡೀ ಯಕ್ಷಗಾನ ಕ್ಷೇತ್ರಕ್ಕೆ ನನ್ನ ಸಾಷ್ಟಾಂಗ ನಮನಗಳನ್ನು ಸಲ್ಲಿಸುತ್ತೇನೆ ಎಂದು ರಮೇಶ್ ಹೇಳಿದ್ದಾರೆ.

 

click me!