
'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಕೆಲ ದಿನಗಳ ಹಿಂದೆ ಉಡುಪಿಯಲ್ಲಿ ಪೋಷಕರ ವಿವಾಹ ವಾರ್ಷಿಕೋತ್ಸವದ ವೇಳೆ ಮಾತ್ರ ಅಭಿಮಾನಿಗಳಿಗೆ ದರ್ಶನ ನೀಡಿದ್ದ ಅವರು, ಬಳಿಕ ಮತ್ತೆ ನಾಪತ್ತೆಯಾಗಿದ್ದಾರೆ. ಹೀಗಾಗಿ "ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ? 'ರಿಚರ್ಡ್ ಆಂಟನಿ' ಯಾವ ಹಂತದಲ್ಲಿದೆ?" ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಹೆಚ್ಚಾಗಿವೆ.
ಈ ಕುತೂಹಲಕ್ಕೆ ಈಗ ನಿರ್ದೇಶಕ ಹೇಮಂತ್ ರಾವ್ ಪರೋಕ್ಷವಾಗಿ ಉತ್ತರ ನೀಡಿದ್ದಾರೆ. ಹೌದು! ಕನ್ನಡ ಚಿತ್ರರಂಗದ ವಿಭಿನ್ನ ನಿರ್ದೇಶಕರಲ್ಲಿ ಒಬ್ಬರಾದ ಹೇಮಂತ್ ರಾವ್, 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಕವಲುದಾರಿ', 'ಸಪ್ತ ಸಾಗರದಾಚೆ ಎಲ್ಲೋ' ಹಾಗೂ 'ಅಜ್ಞಾತವಾಸಿ' ಸಿನಿಮಾಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿ, ವಿಭಿನ್ನ ಕಥೆ, ಭಾವನಾತ್ಮಕ ನಿರೂಪಣೆ ಮತ್ತು ಗುಣಮಟ್ಟದ ಮೇಕಿಂಗ್‌ಗೆ ಹೆಸರಾದವರು. ಜೊತೆಗೆ ರಕ್ಷಿತ್ ಶೆಟ್ಟಿಯ ಆತ್ಮೀಯ ಗೆಳೆಯನಾದ ಇವರು, ಇತ್ತೀಚಿನ ಪಾಡ್‌ಕಾಸ್ಟ್‌ವೊಂದರಲ್ಲಿ ರಕ್ಷಿತ್ ಶೆಟ್ಟಿ ಸದ್ಯ ತಮ್ಮ ಮುಂದಿನ ಸಿನಿಮಾದ ಸಿದ್ಧತೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
'ರಿಚರ್ಡ್ ಆಂಟನಿ'ಗೆ ಇದೇ ಬೆಸ್ಟ್ ಮಾರ್ಕೆಟಿಂಗ್!'
ರಕ್ಷಿತ್ ಬಗ್ಗೆ ಮಾತನಾಡಿದ ಹೇಮಂತ್ ರಾವ್, "ರಕ್ಷಿತ್ ಶೆಟ್ಟಿ ಅದ್ಭುತ ನಟ. ಸಿನಿಮಾವನ್ನು ಅವರು ನೋಡುವ ರೀತಿ, ಭಾವನೆಗಳನ್ನು ಕಟ್ಟಿಕೊಡುವ ಪ್ರಮಾಣವೇ ವಿಭಿನ್ನ. ಸದ್ಯ ಅವರು ಸಂಪೂರ್ಣವಾಗಿ ತಮ್ಮ ಮುಂದಿನ ಸಿನಿಮಾದ ತಯಾರಿಯಲ್ಲಿ ನಿರತರಾಗಿದ್ದಾರೆ. ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇರುವುದು 'ರಿಚರ್ಡ್ ಆಂಟನಿ' ಸಿನಿಮಾಕ್ಕೆ ಸಿಕ್ಕಿರುವ ಅತ್ಯುತ್ತಮ ಮಾರ್ಕೆಟಿಂಗ್. ಇಷ್ಟು ಜನ ಅವರಿಗಾಗಿ ಕಾಯುತ್ತಿದ್ದಾರೆ ಎಂದರೆ, ಚಿತ್ರದ ಮೇಲಿರುವ ನಿರೀಕ್ಷೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ" ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಕ್ಷಿತ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.
ಶೂಟಿಂಗ್‌ಗೆ ಸಜ್ಜಾಗಿದೆ 'ರಿಚರ್ಡ್ ಆಂಟನಿ'
ಇತ್ತೀಚೆಗೆ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಕೂಡ ಚಿತ್ರದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದರು. 'ರಿಚರ್ಡ್ ಆಂಟನಿ' ಸಿನಿಮಾ ನಿಂತಿದೆ ಎಂಬ ಮಾತುಗಳಲ್ಲಿ ಸತ್ಯವಿಲ್ಲ. ನಾನು ಸಿದ್ಧನಿದ್ದೇನೆ, ರಕ್ಷಿತ್ ಶೆಟ್ಟಿಯೂ ಸಿದ್ಧರಾಗಿದ್ದಾರೆ. ಇಡೀ ಚಿತ್ರತಂಡ ಶೂಟಿಂಗ್ ಆರಂಭಿಸಲು ತಯಾರಿ ನಡೆಸುತ್ತಿದೆ. ಅಭಿಮಾನಿಗಳು ಕಾಯುತ್ತಿರುವ ಕ್ಷಣ ಬಹಳ ದೂರದಲ್ಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ಇದರಿಂದ ಸಿನಿಮಾ ಸ್ಥಗಿತಗೊಂಡಿದೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.
ಪೋಷಕರ ವಿವಾಹ ವಾರ್ಷಿಕೋತ್ಸವದಲ್ಲಿ ಮಾತ್ರ ದರ್ಶನ
ಕೆಲ ದಿನಗಳ ಹಿಂದೆ ಉಡುಪಿಯ ದೇವಾಲಯದಲ್ಲಿ ನಡೆದ ತಮ್ಮ ಪೋಷಕರ ವಿವಾಹ ವಾರ್ಷಿಕೋತ್ಸವದಲ್ಲಿ ರಕ್ಷಿತ್ ಶೆಟ್ಟಿ ಪಂಚೆ-ಕುರ್ತಾ ಧರಿಸಿ ಭಾಗವಹಿಸಿದ್ದರು. ಆ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆದರೆ ಆ ಕಾರ್ಯಕ್ರಮದ ನಂತರ ಅವರು ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
'ಉಳಿದವರು ಕಂಡಂತೆ' ಚಿತ್ರದ ಜನಪ್ರಿಯ ಪಾತ್ರವನ್ನು ಆಧರಿಸಿ ನಿರ್ಮಾಣವಾಗುತ್ತಿರುವ 'ರಿಚರ್ಡ್ ಆಂಟನಿ' ಚಿತ್ರವನ್ನು ರಕ್ಷಿತ್ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿಯೂ ನಟಿಸುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸುತ್ತಿರುವ ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದ ಕುರಿತು ಈಗಾಗಲೇ ಭಾರೀ ನಿರೀಕ್ಷೆ ನಿರ್ಮಾಣವಾಗಿದ್ದು, ಶೂಟಿಂಗ್ ಆರಂಭದ ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.