ಕಾರ್ಪೊರೇಟ್ ಕೆಲಸ ಬಿಟ್ಟು ಸಿನಿಮಾ ಕನಸಿನ ಹಿಂದೆ ಓಡಿದ ತಾರುಷ್: 'ಜಾಲಿ' ಮೂಲಕ ಹೊಸ ಹೆಜ್ಜೆ

Published : Jul 31, 2026, 07:48 PM IST
Tarush

ಸಾರಾಂಶ

Jolly Kannada Movie: ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲ ಅತ್ಯಗತ್ಯ. ಒಂದು ಸಿನಿಮಾ ಯಶಸ್ಸು ಕಾಣಬೇಕೆಂದರೆ ಉತ್ತಮ ಕಥೆಯ ಜೊತೆಗೆ ಪ್ರೇಕ್ಷಕರ ಪ್ರೋತ್ಸಾಹವೂ ಬೇಕು.

ಕನ್ನಡ ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲ ಅತ್ಯಗತ್ಯ. ಒಂದು ಸಿನಿಮಾ ಯಶಸ್ಸು ಕಾಣಬೇಕೆಂದರೆ ಉತ್ತಮ ಕಥೆಯ ಜೊತೆಗೆ ಪ್ರೇಕ್ಷಕರ ಪ್ರೋತ್ಸಾಹವೂ ಬೇಕು. ಇದೇ ವಿಚಾರವನ್ನು 'ಜಾಲಿ' ಚಿತ್ರದ ಮೂಲಕ ನಿರ್ದೇಶಕರಾಗಿ ಹಾಗೂ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ತಾರುಷ್‌ ಹಂಚಿಕೊಂಡಿದ್ದಾರೆ. ಇತ್ತೀಚೆಗೆ 'ಜಾಲಿ' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ಮಾಪಕ ಉಮಾಪತಿ ಅವರು ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ್ದರು. ಅದಕ್ಕೆ ಸಹಮತ ವ್ಯಕ್ತಪಡಿಸಿರುವ ತಾರುಷ್‌, ಸಿನಿಮಾ ಮಾಡುವುದು ಒಂದು ಸವಾಲಾದರೆ, ಅದನ್ನು ಚಿತ್ರಮಂದಿರಕ್ಕೆ ತಲುಪಿಸುವುದು ಮತ್ತೊಂದು ದೊಡ್ಡ ಹೋರಾಟ ಎಂದು ಹೇಳಿದ್ದಾರೆ.

ಜುಲೈ 31ರಂದು ಬಿಡುಗಡೆಯಾಗುತ್ತಿರುವ 'ಜಾಲಿ' ಚಿತ್ರದ ಮೂಲಕ ತಾರುಷ್‌ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಶೇಷವೆಂದರೆ, ಅವರು ಸಿನಿಮಾದ ನಾಯಕನಾಗಿರುವುದರ ಜೊತೆಗೆ ಕಥೆ ಬರೆದಿದ್ದಾರೆ, ಸಂಕಲನ ಮಾಡಿದ್ದಾರೆ ಹಾಗೂ ಹಾಡಿನ ಸಾಹಿತ್ಯವನ್ನೂ ರಚಿಸಿದ್ದಾರೆ. ಈ ಬಗ್ಗೆ ಮಾತನಾಡಿದ ತಾರುಷ್‌, "ಈ ಎಲ್ಲ ಕೆಲಸಗಳನ್ನು ನಾನೇ ಮಾಡಬೇಕು ಎಂಬ ಉದ್ದೇಶ ಇರಲಿಲ್ಲ. ಪರಿಸ್ಥಿತಿ ಹಾಗೆ ಮಾಡಿಸಿತು. ಈ ಹಿಂದೆ ನಾನು ಭಾಗಿಯಾಗಿದ್ದ ಕೆಲವು ಸಿನಿಮಾಗಳು ಬಿಡುಗಡೆಯಾಗಲೇ ಇಲ್ಲ. ಆ ಅನುಭವದಿಂದಲೇ 'ಜಾಲಿ' ಹುಟ್ಟಿತು. ಸಿನಿಮಾ ಮಾಡುವುದು ಒಂದು ಯುದ್ಧವಾಗಿದ್ದರೆ, ಅದನ್ನು ಥಿಯೇಟರ್‌ಗೆ ತರುವುದು ಮತ್ತೊಂದು ಯುದ್ಧ. ಈಗ ಆ ಹಂತವನ್ನು ದಾಟಿದ್ದೇವೆ. ಸಿನಿಮಾ ಸಂಪೂರ್ಣವಾಗಿ ಪ್ರೇಕ್ಷಕರದ್ದು," ಎಂದಿದ್ದಾರೆ.

ಸಂಬಂಧಗಳ ಕಥೆ ಹೇಳುವ 'ಜಾಲಿ'

ತಾರುಷ್‌ ನಿರ್ದೇಶನದ 'ಜಾಲಿ' ಚಿತ್ರವನ್ನು ಟಿಬಿವೈ ಕ್ರಿಯೇಷನ್ಸ್ ಮತ್ತು ಶ್ರೀ ಅಧಿಶಿವ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಬ್ರಿಜ್ ಯಾದವ್ ಹಾಗೂ ನಾಗವೇಣಿ ಎನ್ ನಿರ್ಮಿಸಿದ್ದಾರೆ. ಪ್ರೀತಿ, ಕಾಮಿಡಿ ಮತ್ತು ಆ್ಯಕ್ಷನ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವು ಸಂಬಂಧಗಳ ಕುರಿತಾದ ಕಥೆಯನ್ನು ಹೊಂದಿದೆ. ಚಿತ್ರದ ಬಗ್ಗೆ ಮಾತನಾಡಿದ ತಾರುಷ್‌, "ಇಂದಿನ ದಿನಗಳಲ್ಲಿ ಸಣ್ಣ ತಪ್ಪು ತಿಳುವಳಿಕೆಯೇ ಸಂಬಂಧಗಳಲ್ಲಿ ದೂರವನ್ನು ಸೃಷ್ಟಿಸುತ್ತದೆ. ಸ್ನೇಹಿತರಾಗಲಿ, ಕುಟುಂಬವಾಗಲಿ, ಪ್ರೀತಿಯ ಸಂಬಂಧವಾಗಲಿ-ತಾಳ್ಮೆ ಕಳೆದುಕೊಂಡಾಗ ನಾವು ನಮ್ಮವರನ್ನೇ ಕಳೆದುಕೊಳ್ಳುತ್ತೇವೆ. 'ಜಾಲಿ' ಕಥೆಯ ಮೂಲ ಇದೇ," ಎಂದು ಹೇಳಿದ್ದಾರೆ.

ರಂಗಭೂಮಿಯೇ ನನ್ನ ಮೊದಲ ಪಾಠಶಾಲೆ

ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡಿದ ತಾರುಷ್‌, ರಂಗಭೂಮಿ ತಮ್ಮ ಜೀವನದ ದೊಡ್ಡ ಪ್ರಭಾವ ಎಂದು ಹೇಳಿದ್ದಾರೆ. "ರಂಗಭೂಮಿಯೇ ನನ್ನ ಅಡಿಪಾಯ. ಅದು ಶಿಸ್ತು ಕಲಿಸುತ್ತದೆ. ಇರುವುದರಲ್ಲೇ ಉತ್ತಮ ಪ್ರದರ್ಶನ ನೀಡುವುದನ್ನು ಕಲಿಸುತ್ತದೆ. 'ಕಸದಿಂದ ರಸ' ಎಂಬುದೇ ರಂಗಭೂಮಿಯ ಶಕ್ತಿ. ಆದರೆ ರಂಗಭೂಮಿ ಮಾತ್ರ ಭವಿಷ್ಯ ಕಟ್ಟಲು ಸಾಕಾಗುವುದಿಲ್ಲ," ಎಂದಿದ್ದಾರೆ.

ಚಿಕ್ಕಂದಿನಿಂದಲೇ ನಟನೆಯ ಬಗ್ಗೆ ಆಸಕ್ತಿ ಹೊಂದಿದ್ದ ತಾರುಷ್‌, ಡಾ.ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡಿ ಅವರ ದೃಶ್ಯಗಳನ್ನು ಅನುಕರಿಸುತ್ತಿದ್ದುದನ್ನು ನೆನಪಿಸಿಕೊಂಡಿದ್ದಾರೆ. "ನಂತರ ಒಂದು ಕಾರ್ಯಕ್ರಮದಲ್ಲಿ ಉಪೇಂದ್ರ ಅವರ ಹಾಡಿಗೆ ಪ್ರದರ್ಶನ ನೀಡಿದ್ದೆ. ಆಗ ಸಿಕ್ಕ ಶಿಳ್ಳೆ, ಚಪ್ಪಾಳೆಗಳು ನನ್ನ ಮನಸ್ಸಿನಲ್ಲಿ ಉಳಿದುಕೊಂಡವು. ಒಬ್ಬ ಕಲಾವಿದನಿಗೆ ಅದಕ್ಕಿಂತ ದೊಡ್ಡ ಸಂತೋಷ ಇನ್ನೇನಿದೆ?" ಎಂದು ಹೇಳಿದ್ದಾರೆ.

ಕಾರ್ಪೊರೇಟ್ ಕೆಲಸ ಬಿಟ್ಟು ಸಿನಿಮಾದತ್ತ ಹೆಜ್ಜೆ

ಸಿನಿಮಾಗೆ ಬರುವ ಮುನ್ನ ತಾರುಷ್‌ ಕಾರ್ಪೊರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಮನಸ್ಸು ಮಾತ್ರ ಯಾವಾಗಲೂ ಸಿನಿಮಾದಲ್ಲೇ ಇತ್ತು ಎಂದು ಅವರು ಹೇಳಿದ್ದಾರೆ. "ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ನನ್ನ ಮನಸ್ಸು ಕಥೆ ಬರೆಯುತ್ತಿತ್ತು. ಸಿನಿಮಾ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ನನ್ನ ಕೆಲಸದ ಸಂಸ್ಥೆಗೆ ನ್ಯಾಯ ಮಾಡುತ್ತಿಲ್ಲ ಎಂಬ ಭಾವನೆ ಬಂತು. ಆಗ ಕೆಲಸ ಬಿಟ್ಟು ನಿರ್ದೇಶಕನಾಗುವ ಕನಸಿನ ಹಿಂದೆ ಹೋಗಲು ನಿರ್ಧರಿಸಿದೆ," ಎಂದಿದ್ದಾರೆ. ತಮ್ಮ ಕನಸಿಗೆ ತಾಯಿ ನೀಡಿದ ಬೆಂಬಲವೇ ದೊಡ್ಡ ಶಕ್ತಿ ಎಂದು ಹೇಳಿರುವ ತಾರುಷ್‌, ತಂದೆಯನ್ನು ಒಪ್ಪಿಸುವಲ್ಲಿಯೂ ತಾಯಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದ್ದಾರೆ.

ಹೊಸಬರ ಸಿನಿಮಾಗಳಿಗೂ ಅವಕಾಶ ನೀಡಿ

ಇತ್ತೀಚಿನ ದಿನಗಳಲ್ಲಿ ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂಬ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ತಾರುಷ್‌, ಪ್ರೇಕ್ಷಕರಲ್ಲಿ ವಿಶ್ವಾಸ ಮೂಡಿಸುವ ಮನವಿ ಮಾಡಿದ್ದಾರೆ. "ಮನೆಯಲ್ಲೇ ಪೂಜಾ ಕೋಣೆ ಇದ್ದರೂ ಜನ ದೇವಸ್ಥಾನಕ್ಕೆ ಹೋಗುತ್ತಾರೆ. ಅದೇ ರೀತಿ ಮನೆಯಲ್ಲೇ ಸಿನಿಮಾ ನೋಡಬಹುದಾದರೂ ಥಿಯೇಟರ್ ಅನುಭವಕ್ಕಾಗಿ ಜನ ಬರುತ್ತಾರೆ. ಒಂದು-ಎರಡು ಸಿನಿಮಾಗಳು ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ ಎಂದು ಚಿತ್ರಮಂದಿರಗಳ ಮೇಲಿನ ನಂಬಿಕೆ ಕಳೆದುಕೊಳ್ಳಬೇಡಿ," ಎಂದು ಹೇಳಿದ್ದಾರೆ.

'ಜಾಲಿ' ಚಿತ್ರದ ಮುಖ್ಯ ಉದ್ದೇಶ ಮನರಂಜನೆ ನೀಡುವುದು ಎಂದು ಹೇಳಿರುವ ತಾರುಷ್‌, "ನಾವು ಪ್ರೇಕ್ಷಕರಿಗೆ ಯಾವುದೇ ಸಂದೇಶ ಬೋಧಿಸಲು ಬಂದಿಲ್ಲ. ಪ್ರೀತಿ, ಸಂಬಂಧ ಮತ್ತು ಭಾವನೆಗಳ ಮೂಲಕ ಸಾಗುವ ಮನರಂಜನಾತ್ಮಕ ಕಥೆ ಇದು," ಎಂದಿದ್ದಾರೆ. ಚಿತ್ರದಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಅವರ ಸಿನಿಮಾವೊಂದರಿಂದ ಪ್ರೇರಣೆ ಪಡೆದ ಗೌರವ ಸಲ್ಲಿಸುವ ಅಂಶವೂ ಇದೆ ಎಂದು ತಾರುಷ್‌ ತಿಳಿಸಿದ್ದಾರೆ. ಕೊನೆಯಲ್ಲಿ ಪ್ರೇಕ್ಷಕರಿಗೆ ಮನವಿ ಮಾಡಿರುವ ಅವರು, "ಕೆಜಿಎಫ್, ಕಾಂತಾರ, ಸಪ್ತ ಸಾಗರದಾಚೆ ಎಲ್ಲೋ ರೀತಿಯ ಸಿನಿಮಾಗಳನ್ನು ಬೆಂಬಲಿಸಿದವರು ಹೊಸಬರ ಪ್ರಯತ್ನಗಳಿಗೂ ಅವಕಾಶ ನೀಡಿ. ಪ್ರತಿಯೊಬ್ಬ ನಿರ್ದೇಶಕನೂ ಎಲ್ಲೋ ಒಂದು ಕಡೆ ಆರಂಭಿಸುತ್ತಾನೆ. ಮೊದಲು ನಮ್ಮ ಸಿನಿಮಾ ನೋಡಿ, ನಂತರ ನಿಮ್ಮ ತೀರ್ಪು ನೀಡಿ," ಎಂದು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾವಣನಾಗಿ ಅಬ್ಬರಿಸಿರುವ ಯಶ್‌ಗೆ ರಿಯಲ್‌ ಲೈಫ್‌ನಲ್ಲಿ 'ಹಾರರ್' ಸಿನಿಮಾಗಳಂದ್ರೆ ಭಯವಂತೆ!
Toxic: ಕಂಪ್ಲೀಟ್ ಗುಟ್ಟು ಬಿಚ್ಚಿಟ್ಟ ಯಶ್.. 'ಟಾಕ್ಸಿಕ್'ನಲ್ಲಿ ರೊಮಾನ್ಸ್ ಮಾತ್ರವಲ್ಲ ಬೇರೇನೋ ಇದೆಯಂತೆ!