Yogaraj Bhat: 'ಗರಡಿ' ಮನೆಯಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್

By Suvarna News  |  First Published Dec 6, 2021, 11:51 PM IST

ಸ್ಯಾಂಡಲ್‌ವುಡ್‌ನ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, ಸಿನಿರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದೀಗ ವಿಕಟಕವಿ ಯೋಗರಾಜ್‌ ಭಟ್‌ ಅವರ 'ಗರಡಿ' ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 


ಸ್ಯಾಂಡಲ್‌ವುಡ್‌ನ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ (Rachita Ram) ಕೈಯಲ್ಲಿ ಸಾಲು ಸಾಲು ಚಿತ್ರಗಳಿದ್ದು, ಸಿನಿರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದೀಗ ವಿಕಟಕವಿ ಯೋಗರಾಜ್‌ ಭಟ್‌ (Yogaraj Bhat) ಅವರ 'ಗರಡಿ' ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು! ಯೋಗ​ರಾಜ್‌ ಭಟ್‌ ನಿರ್ದೇ​ಶಿಸಿರುವ  'ಗಾಳಿ​ಪಟ 2' (Galipata 2) ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ ಯೋಗರಾಜ್‌ ಭಟ್‌ 'ಗರಡಿ' (Garadi) ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಸೌಮ್ಯ ಫಿಲಂಸ್ ಬ್ಯಾನರಿನಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಕೃಷಿ ಸಚಿವ, ನಟ ಬಿ.ಸಿ. ಪಾಟೀಲ್ (B.C.Patil) ಅವರ ಪತ್ನಿ ವನಜಾ ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ಬಂಡವಾಳ ಹೂಡಲಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಯುವ ನಟ ಯಶಸ್ ಸೂರ್ಯ (Yashas Surya) ನಟಿಸುತ್ತಿದ್ಡು, ಇವರಿಗೆ ಜೋಡಿಯಾಗಿ ರಚಿತಾ ರಾಮ್‌ ಕಾಣಿಸಿಕೊಳ್ಳಲಿದ್ದಾರೆ.

'ಗರಡಿ' ಚಿತ್ರದಲ್ಲಿ ಬಿ.ಸಿ. ಪಾಟೀಲ್ ಬಹಳ ದಿನಗಳ ನಂತರ ಒಂದು ಪ್ರಮುಖ ಪಾತ್ರಕ್ಕಾಗಿ ಈ ಸಿನಿಮಾದ ಮೂಲಕ ಮತ್ತೆ ಬಣ್ಣ ಹಚ್ಚಲಿದ್ದಾರೆ. ರಚಿತಾ ರಾಮ್ ಅವರು ಇತ್ತೀಚೆಗೆ ಚಿತ್ರದ ನಿರ್ಮಾಪಕ ಮತ್ತು ರಾಜಕಾರಣಿ, ಬಿ.ಸಿ.ಪಾಟೀಲ್ ಮತ್ತು ಚಿತ್ರತಂಡವನ್ನು ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆ. ಹಾಗೂ ರಚಿತಾ ರಾಮ್ ಭೇಟಿ ಬಳಿಕ ಚಿತ್ರ ಕುರಿತು ಮಾಹಿತಿ ನೀಡಿದ ಬಿ.ಸಿ.ಪಾಟೀಲ್ ಅವರು, 'ಗರಡಿ' ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಲಿದ್ದು, ಜನವರಿ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಯೋಗರಾಜ್‌ ಭಟ್‌ ಅವರು ತಮ್ಮ ಫೇಸ್‌ಬುಕ್ (Facebook) ಖಾತೆಯಲ್ಲಿ 'ಗರಡಿ' ಮನೆಗೆ ಸ್ವಾಗತ ರಚಿತಾ ರಾಮ್ ಎಂದು ಪೋಸ್ಟ್‌ ಮಾಡಿದ್ದಾರೆ.

Tap to resize

Latest Videos

Love You Rachchu: ಡಿಸೆಂಬರ್ 16ರಂದು ಅಜಯ್-ರಚ್ಚು ಚಿತ್ರದ ಟ್ರೇಲರ್ ರಿಲೀಸ್

ಸದ್ಯ ರಚಿತಾ ರಾಮ್ 'ಏಕ್‌ ಲವ್‌ ಯಾ', 'ಲವ್‌ ಯೂ ರಚ್ಚು', 'ಮಾನ್ಸೂನ್‌ ರಾಗ', 'ಲವ್‌ ಮಿ ಆರ್‌ ಹೇಟ್‌ ಮಿ', 'ಶಬರಿ', 'ಕ್ರಾಂತಿ' ಸೇರಿದಂತೆ ಹಲವಾರು ಚಿತ್ರಗಳ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಖ್ಯವಾಗಿ ಸಾಕಷ್ಟು ಚಿತ್ರಗಳಲ್ಲಿ ನಾಯಕನಾಗಿ ನಟಿಸಿದರೂ ಗೆಲುವು ಕಾಣದ ನಟ ಯಶಸ್ ಸೂರ್ಯ ಅವರಿಗೆ 'ಗರಡಿ' ಚಿತ್ರದ ಮೂಲಕ ಯೋಗ​ರಾಜ್‌ ಭಟ್‌ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಯಶಸ್ ಸೂರ್ಯ ಈ ಚಿತ್ರದೊಂದಿಗೆ ಆ್ಯಕ್ಷನ್ ನಟನಾಗಿ ಹೊರ ಹೊಮ್ಮುವ ಸಾಧ್ಯತೆ ಇದೆ. 'ಗರಡಿ' ಚಿತ್ರಕ್ಕೆ ಬಿ ರೆಡಿ ಎನ್ನುವ ಟ್ಯಾಗ್‌ಲೈನ್ ಇದ್ದು, ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ (Poster) ಬಿಡುಗಡೆಯಾಗಿತ್ತು.



ಆ್ಯಕ್ಷನ್‌ ಡ್ರಾಮಾ 'ಗರಡಿ' ಚಿತ್ರದಲ್ಲಿ ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು ಮತ್ತು ಪೈಲ್ವಾನ್‌ಗಳ ಫಿಟ್‌ನೆಸ್‌ಗಳ ಬಗ್ಗೆ ಕಥೆಯಿರುತ್ತದೆ. ಉತ್ತರ ಕರ್ನಾಟಕದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯಲಿದೆ. ವಿಶೇಷವಾಗಿ ಯೋಗರಾಜ್ ಭಟ್ ಸಿನಿಮಾಗಳು ಬೇರೆ ರೀತಿ ಇರುತ್ತವೆ. ಹಾಗಾಗಿ ಯೋಗರಾಜ್ ಭಟ್ಟರ ಸಿನಿಮಾ ಅಂದರೆ ಅಲ್ಲಿ ಪ್ರೇಮ ಕತೆಯೇ ಪ್ರಧಾನವಾಗಿ ಇರುತ್ತದೆ. ಹಾಗಾಗಿ ಈ ಚಿತ್ರದಲ್ಲಿ ಆ್ಯಕ್ಷನ್ ಜೊತೆಗೆ ಸುಂದರ ಪ್ರೇಮ ಇರುವುದು ಮಿಸ್ ಆಗುವುದಿಲ್ಲ. ಚಿತ್ರಕ್ಕೆ ನಿರಂಜನ್ ಬಾಬು ಕ್ಯಾಮರಾ ಕೈಚಳಕ, ವಿಕಾಸ್ ಚಿತ್ರಕಥೆಯಿದೆ. ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು, ಜಯಂತ ಕಾಯ್ಕಿಣಿ ಹಾಗೂ ಯೋಗರಾಜ್ ಭಟ್ ಸಾಹಿತ್ಯ ರಚಿಸಲಿದ್ದಾರೆ. 

Yogaraj Bhat 'ಗರಡಿ' ಮನೆಗೆ ಎಂಟ್ರಿ ಕೊಟ್ಟ ಯಶಸ್ ಸೂರ್ಯ

ಇನ್ನು, ಯೋಗರಾಜ್ ಭಟ್ ನಿರ್ದೇಶನದ 'ಗಾಳಿ​ಪಟ 2' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. 'ಗಾಳಿಪಟ' ಚಿತ್ರದಲ್ಲಿ ನಟಿಸಿದ್ದ ರಾಜೇಶ್ ಕೃಷ್ಣನ್ ಬದಲು 'ಲೂಸಿಯ' ನಿರ್ದೇಶಕ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ. ಚಿತ್ರದ ನಾಯಕಿಯರಾಗಿ ವೈಭವಿ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಸಂತೋಷ್‌ ರೈ ಪಾತಾಜೆ ಸಿನಿಮಾಟೋಗ್ರಫಿ, ಮ್ಯಾಜಿಕಲ್ ಕಂಪೋಸರ್ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. 
 

click me!