ದಾವಣಗೆರೆ (ಅ.29) : ದೀಪಾವಳಿ ಹಬ್ಬದ ಬೆನ್ನಲ್ಲೇ ಬಂದ ದಿವಂಗತ ಪುನೀತ್ ರಾಜಕುಮಾರ್‌ರ ಗಂಧದ ಗುಡಿ ಸಿನಿಮಾಗೆ ನಗರ, ಜಿಲ್ಲಾದ್ಯಂತ ಯಾವ ಹಬ್ಬ, ಹರಿದಿನಕ್ಕೂ ಕಡಿಮೆ ಇಲ್ಲದಂತೆ ಅಭಿಮಾನಿಗಳು, ಪ್ರೇಕ್ಷಕರು, ಸಾರ್ವಜನಿಕರು ಸಡಗರ, ಸಂಭ್ರಮದಿಂದ ಬರ ಮಾಡಿಕೊಂಡರು.
ನಗರದ ವಸಂತ ಚಿತ್ರ ಮಂದಿರ ಹಾಗೂ ಎಸ್ಸೆಸ್ ಮಾಲ್‌ನ ಮೂವಿ ಟೈಂನಲ್ಲಿ ಶುಕ್ರವಾರ ಬೆಳಗ್ಗೆ 7ಕ್ಕೆ ಮೊದಲ ಪ್ರದರ್ಶನ ಶುರುವಾಗಲು ಕ್ಷಣಗಣನೆಯಾಗುತ್ತಿದ್ದಂತೆಯೇ ಅಪ್ಪು ಅಭಿಮಾನಿಗಳು ಗಂಧದ ಗುಡಿ ಬ್ಯಾನರ್‌ಗೆ ಹಾಲಿನ ಅಭಿಷೇಕ ಮಾಡಿದರೆ, ಮತ್ತಷ್ಟುಜನರು ಬಾಳೆ ಕಂಬ, ಮಾವಿನ ತೋರಣ ಕಟ್ಟುವ ಮೂಲಕ ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಗಂಧದ ಗುಡಿ ಬ್ಯಾನರ್ ಹಿಡಿದು ಆನೆಯ ಸೊಂಡಿಲು ಮುಟ್ಟಿರುವ ಪುನೀತ ರಾಜಕುಮಾರ, ಆನೆಯ ಪಕ್ಕ ಹೆಜ್ಜೆ ಹಾಕುತ್ತಿರುವ ಪುನೀತ್ ರ ಬ್ಯಾನರ್‌ಗಳನ್ನು ಹಿಡಿದು ಭಾವುಕರಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟ ಇಲ್ಲದಿದ್ದರೂ, ಆ ಮಹಾನ್ ನಟ ಒಬ್ಬ ನಟನಾಗಿದ್ದುದಕ್ಕಿಂತಲೂ ಒಬ್ಬ ಪರಿಸರ ಪ್ರೇಮಿಯಾಗಿ, ಪ್ರಕೃತಿಯ ಆರಾಧಕನಾಗಿ, ಪರಿಸರ ಪ್ರೇಮಿಯಾಗಿ ಕಾಡನ್ನು, ವನ್ಯ ಸಂಪತ್ತನ್ನು, ಸಕಲ ಜೀವರಾಶಿಯನ್ನು ಪ್ರೀತಿಸುವ ಗಂಧದ ಗುಡಿ ಭರ್ಜರಿ ಪ್ರದರ್ಶನ ಶುರು ಮಾಡಿದೆ.
ವಸಂತ ಚಿತ್ರ ಮಂದಿರದ ಮುಂದೆ ಹಂದರ ಹಾಕಿ ಸಿನಿಮಾಗೆ ಸ್ವಾಗತಿಸಲಾಯಿತು. ಪುನೀತ್ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿದ ಅಭಿಮಾನಿಗಳು ಜೈಕಾರ ಮೊಳಗಿಸಿದರು. ಕೇಕ್ ಕತ್ತರಿಸಿ, ಅಭಿಮಾನಿಗಳಿಗೆ ಹಂಚುವ ಮೂಲಕ ಸಂಭ್ರಮಿಸಿದರು. ಇದೇ ವೇಳೆ ಡಾ.ರಾಜಕುಮಾರ, ಡಾ.ಶಿವರಾಜಕುಮಾರ, ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘಗಳ ಒಕ್ಕೂಟದಿಂದ 5001 ಸಸಿಗಳನ್ನು ವಿತರಿಸಲಾಯಿತು.
ತಮ್ಮ ನೆಚ್ಚಿನ ನಾಯಕ ನಟಕ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿ, ಕುಂಬಳ ಕಾಯಿ ಒಡೆಯುವ ಮೂಲಕ ಅಭಿಮಾನ ಮೆರೆದವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಯುವರಾಜಕುಮಾರ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರ ಮಾಡಿದರು.
ಒಂದು ಕಡೆ ಚಿತ್ರ ಪ್ರದರ್ಶನವಾಗುತ್ತಿದ್ದರೆ ಮತ್ತೊಂದು ಕಡೆ ರಕ್ತದಾನ ಮಾಡುವ ಕೆಲಸ ಸಾಗಿತ್ತು. ಇಡೀ ದಿನ ವಸಂತ ಚಿತ್ರ ಮಂದಿರ ಪುನೀತ್ ಅಭಿಮಾನಿಗಳ ಗಂಧಧ ಗುಡಿ ಸಿನಿಮಾದ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದೆತು. ದಿನವಿಡೀ ತುಂಬಿದ ಗೃಹದಲ್ಲಿ ಗಂಧದ ಗುಡಿ ಪ್ರದರ್ಶನ ಕಂಡಿತು.
ಅಖಿಲ ಕರ್ನಾಟಕ ಡಾ.ಶಿವಕುಮಾರ ಅಭಿಮಾನಿಗಳ ಸಂಘ, ರಾಜರತ್ನ ಪುನೀತ್ ರಾಜಕುಮಾರ ಅಭಿಮಾನಿಗಳ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಯೋಗೇಶ ಮಾತನಾಡಿ, ಪುನೀತ್‌ರ ಬಹು ಆಸೆಯ ಗಂಧದ ಗುಡಿ ಸಿನಿಮಾ ನೋಡಿ ನಾವೂ ಸಹ ಭಾವುಕರಾಗಿದ್ದೇವೆ. ಬೆಳಗ್ಗೆಯೇ ವಸಂತ ಚಿತ್ರ ಮಂದಿರ ಎದುರು ಪುನೀತ್‌ರ ಕಟೌಟ್‌ಗೆ ಕ್ಷೀರಾಭಿಷೇಕ ಮಾಡಿದ್ದೇವೆ. ಚಿತ್ರ ಕನ್ನಡವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರ ರಂಗದಲ್ಲೇ ದೊಡ್ಡ ಮೈಲುಗಲ್ಲಾಗಲೆಂದು ದೇವರಲ್ಲಿ ಪ್ರಾರ್ಥಿಸಿ, ಕುಂಬಳಕಾಯಿ ಒಡೆದು, ಪ್ರಾರ್ಥನೆ ಮಾಡಿದ್ದೇವೆ ಎಂದರು.
Puneeth Parva ಎಲ್ಲಾ ಚಿತ್ರರಂಗದವರು ಅಪ್ಪುಗಾಗಿ ಒಂದಾಗಿರುವುದನ್ನು ನೋಡಲು ಖುಷಿಯಾಗುತ್ತಿದೆ: ಸೂರ್ಯ
ಬೆಳಿಗ್ಗೆ 6.30ರ ಪ್ರದರ್ಶನಕ್ಕೆ ನಾವು ಟಿಕೆಟ್ ಪಡೆದಿದ್ದೇವೆ. ಮೊದಲ ಪ್ರದರ್ಶನವನ್ನು ನಾವೆಲ್ಲಾ ಅಭಿಮಾನಿ ಬಳಗದವರು ವೀಕ್ಷಣೆ ಮಾಡಿದ್ದೇವೆ. ನಂತರ ಚಿತ್ರ ವೀಕ್ಷಣೆಗೆ ಬಂದ ವೀಕ್ಷಕರಿಗೆ ಒಟ್ಟು 5001 ಸಸಿ ವಿತರಿಸಿದ್ದೇವೆ. ನ.1ರಂದು ಪುನೀತ್ ರಾಜಕುಮಾರರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ನಮ್ಮೆಲ್ಲರಿಗೂ ಖುಷಿ ತಂದಿದೆ ಎಂದು ಯೋಗೇಶ್ ತಿಳಿಸಿದರು.