ಗುಮ್ಮಟನಗರಿ ವಿಜಯಪುರದಲ್ಲಿ 'ಜೇಮ್ಸ್' ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ನಗರದ ಲಕ್ಷ್ಮೀ ಹಾಗೂ ಡ್ರೀಮ್‌ಲ್ಯಾಂಡ್ ಥಿಯೇಟರ್‌ಗಳಲ್ಲಿ ಬಹುನಿರೀಕ್ಷಿತ 'ಜೇಮ್ಸ್' ಸಿನಿಮಾ ಬಿಡುಗಡೆಯಾಗಿದೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್ ವಿಜಯಪುರ
ವಿಜಯಪುರ (ಮಾರ್ಚ್ 17): ಗುಮ್ಮಟನಗರಿ ವಿಜಯಪುರದಲ್ಲಿ (Vijayapura) 'ಜೇಮ್ಸ್' (James) ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ನಗರದ ಲಕ್ಷ್ಮೀ ಹಾಗೂ ಡ್ರೀಮ್‌ಲ್ಯಾಂಡ್ ಥಿಯೇಟರ್‌ಗಳಲ್ಲಿ ಬಹುನಿರೀಕ್ಷಿತ 'ಜೇಮ್ಸ್' ಸಿನಿಮಾ ಬಿಡುಗಡೆಯಾಗಿದೆ. ಒಂದೆಡೆ ಸಿನಿಮಾ ಮಂದಿಗಳಲ್ಲಿ 'ಜೇಮ್ಸ್' ಅಬ್ಬರಿಸುತ್ತಿದ್ದರೆ, ಇತ್ತ ಅಪ್ಪು ಅಭಿಮಾನಿ ಸಂಘಟನೆಗಳು ತಮ್ಮದೇ ರೀತಿಯಲ್ಲಿ ಸೇವೆಯಲ್ಲಿ ತೊಡಗಿವೆ. ಇನ್ನು ಪುನೀತ್ ರಾಜಕುಮಾರ್‌ರ ಅಪ್ಪಟ ಅಭಿಮಾನಿಗಳು (Fans) ತಮ್ಮದೆಯಾದ ರೀತಿಯಲ್ಲಿ ಸೇವೆ ಸಲ್ಲಿಸುವ ಮೂಲಕ ಅಪ್ಪು ಹಾದಿಯಲ್ಲೆ ಸಾಗ್ತಿದ್ದಾರೆ..
ಗುಮ್ಮಟನಗರಿಯಲ್ಲಿ ಅಪ್ಪು ಅಭಿಮಾನಿಗಳಿಂದ ರಕ್ತದಾನ, ನೇತ್ರದಾನ: ನಗರದ ಡ್ರೀಮ್‌ಲ್ಯಾಂಡ್ ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಚಿತ್ರ ಪ್ರೇಕ್ಷಕರು ಹರಿದು ಬರ್ತಿದ್ದಾರೆ. ಅತ್ತ ಚಿತ್ರ ಪ್ರೇಮಿಗಳು 'ಜೇಮ್ಸ್' ಫಸ್ಟ್ ಶೋ ನೋಡಲು ಮುಗಿಬಿದ್ದರೇ ಬಹುತೇಕ ಅಪ್ಪು ಅಭಿಮಾನಿಗಳು ರಕ್ತದಾನ ಮಾಡುತ್ತಿದ್ದಾರೆ. ಡ್ರೀಮ್‌ಲ್ಯಾಂಡ್ ಥಿಯೇಟರ್‌ನ ಆವರಣದಲ್ಲೆ ಅಪ್ಪು ಅಭಿಮಾನಿಗಳು ರಕ್ತದಾನದಲ್ಲಿ ತೊಡಗಿದ್ದಾರೆ. ಬಿಎಲ್ಡಿ ಆಸ್ಪತ್ರೆ ಸಹಕಾರದೊಂದಿಗೆ ಪುನೀತ್ ರಾಜಕುಮಾರ್ ಸೇನೆ, ಅಪ್ಪು ಅಭಿಮಾನಿಗಳ ಸಂಘಟನೆಯ ಕಾರ್ಯಕರ್ತರು ರಕ್ತದಾನ ಮಾಡ್ತಿದ್ದಾರೆ. ಇತ್ತ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅಭಿಮಾನಿ ಬಳಗದಿಂದ ನೇತೃತ್ವದಲ್ಲಿ ನಗರದ ಜೋರಾಪೂರ ಪೇಟದಲ್ಲಿ ರಕ್ತದಾನ, ನೇತ್ರದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಿನಿಮಾ ಬಿಡುಗಡೆಯಾದ 1 ಗಂಟೆಯಲ್ಲಿ 200 ಜನ ಅಭಿಮಾನಿಗಳು ನೇತ್ರದಾನ ಹಾಗೂ 70 ಯುವಕರು ರಕ್ತದಾನ ಮಾಡಿದ್ದಾರೆ. ಅಪ್ಪು ನೆನಪಿಗಾಗಿ 150 ಯುವಕರು ರಕ್ತದಾನದ ಪಣತೊಟ್ಟಿದ್ದಾರೆ..
#Happybirthday ಪುನೀತ್ ರಾಜ್‌ಕುಮಾರ್, ಸಿನಿ ಸ್ನೇಹಿತರ ವಿಶ್‌ಗಳಿದು!
ಅಪ್ಪು ನೆನಪಿಗಾಗಿ ಫ್ರೀ ಹೇರ್ ಕಟಿಂಗ್: ಇನ್ನು ಇತ್ತ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲವತವಾಡ ಪಟ್ಟಣದ ಅಪ್ಪು ಅಭಿಮಾನಿ ಪ್ರಕಾಶ ಶಹಾಪೂರ ಇಡೀ ದಿನ ಉಚಿತವಾಗಿ ಹೇರ್ ಕಟಿಂಗ್ ಸೇವೆ ನೀಡ್ತಿದ್ದಾರೆ. ಅಪ್ಪು ನಿಧನರಾದಾಗ ಪ್ರಕಾಶ ಶಹಾಪೂರ ಅಪ್ಪು ಮುಖ ದರ್ಶನ ಮಾಡಲಿಲ್ಲ. ಅಪ್ಪು ಅವರನ್ನ ಜೀವಂತವಾಗಿ ನೋಡಬೇಕು ಎನ್ನುವ ಅವರ ಕನಸು ಕನಸಾಗಿಯೇ ಉಳಿದಿತ್ತು. ಹೀಗಾಗಿ ಅಪ್ಪು ನೆನಪಿಗಾಗಿ ಪ್ರಕಾಶ ಶಹಾಪೂರ ತಮ್ಮ ಹೇರ್ ಕಟಿಂಗ್ ಸಲೂನ್‌ನಲ್ಲಿ ಫ್ರೀ ಹೆರ್ ಕಟ್ ಸೇವೆ ಮಾಡ್ತಿದ್ದಾರೆ. ಇನ್ನು ಉಚಿತ ಕಟಿಂಗ್ ಸೇವೆ ಪಡೆಯಲು ನಾಲವತವಾಡ ಪಟ್ಟಣದ ಯುವಕರು, ಮಕ್ಕಳು ಬೆಳಿಗ್ಗೆಯಿಂದಲೇ ಸಲೂನ್ ಎದುರು ಕ್ಯೂ ನಲ್ಲಿ ಕುಳಿತಿದ್ದು ಕಂಡು ಬಂತು..
ಅಪ್ಪು ಅಭಿಮಾನಿಗಳಿಂದಲೇ ಅಭಿಮಾನಿಗಳಿಗಾಗಿ ಮಜ್ಜಿಗೆ ಸೇವೆ: ಇತ್ತ ಪುನೀತ್ ರಾಜಕುಮಾರರ ಅಪ್ಪಟ ಅಭಿಮಾನಿಗಳು ಸಿನಿಮಾ ನೋಡಲು ಬರುವ ಅಭಿಮಾನಿಗಳು, ಪ್ರೇಕ್ಷಕರಿಗಾಗಿ ಮಜ್ಜಿಗೆ ಸೇವೆ ಸಲ್ಲಿಸಿದ್ದಾರೆ. ವಿಜಯಪುರದಲ್ಲಿ ಬಿಸಿಲು ಹೆಚ್ಚಾಗಿರೋ ಕಾರಣ ಸಿನಿಮಾ ನೋಡಲು ಬರುವ ಅಭಿಮಾನಿಗಳಿಗೆ ದಣಿವು ಆಗದಿರಲೆಂದು ವಿಜಯಪುರದ ಗಾನಯೋಗಿ ಮಹಾಸಂಘದ ಯುವಕರು ಡ್ರೀಮ್ ಲ್ಯಾಂಡ್ ಹಾಗೂ ಲಕ್ಷ್ಮೀ ಸಿನಿಮಾ ಮಂದಿರಗಳ ಎದುರು ಮಜ್ಜಿಗೆ ವಿತರಣೆ ಮಾಡಿದರು. ಬ್ಯಾರೇಲ್ ಗಟ್ಟಲೇ ಮಜ್ಜಿಗೆ ತುಂಬಿಸಿಕೊಂಡು ಟಂಟಂಗಳಲ್ಲಿ ತಂದ ಗಾನಯೋಗಿ ಮಹಾಸಂಘದ ಯುವಕರು 1500 ಜನರಿಗೆ ಮಜ್ಜಿಗೆ ವಿತರಿಸಿದರು. ಈ ಮೂಲಕ ಅಪ್ಪು ಅಭಿಮಾನಿಗಳ ಸೇವೆಗೆ ಸದಾಕಾಲವೂ ಸಿದ್ಧ ಎಂದರು.
Puneeth Rajkumar: ರಾಜ್ಯಾದ್ಯಂತ ಅಪ್ಪು ಹುಟ್ಟುಹಬ್ಬ: 'ಜೇಮ್ಸ್' ಬಿಡುಗಡೆಯ ಸಂಭ್ರಮ
ಇನ್ನು ಗುಮ್ಮಟನಗರಿಯಲ್ಲಿ ಇಂದು ಶುರುವಾಗಿರೋ 'ಜೇಮ್ಸ್' ಮೇನಿಯಾ ಎರೆಡು ಮೂರು ವಾರಗಳಿಗೆ ನಿಲ್ಲುವ ಲಕ್ಷಣಗಳು ಕಾಣಿಸ್ತಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಚಿತ್ರರಸಿಕರು ಸಿನಿಮಾ ಮಂದಿರಗಳತ್ತ ದೌಡಾಯಿಸುತ್ತಿರೋದು ಶತದಿನೋತ್ಸವ ಸೂಚನೆ ಕೊಡ್ತಿದೆ. ಇನ್ನು ರಾಜ್ಯದ ಪ್ರತಿ ಮೂಲೆಯಲ್ಲೂ ಈ ಸಿನಿಮಾ ಅಬ್ಬರಿಸುತ್ತಿದೆ. ಎಲ್ಲ ಕಡೆಗಳಲ್ಲೂ ‘ಜೇಮ್ಸ್’ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಪುನೀತ್ ರಾಜ್‌ಕುಮಾರ್ ಅವರನ್ನು ದೊಡ್ಡ ಪರದೆ ಮೇಲೆ ನೋಡಿದ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಕೆಲವರಂತೂ ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ.